ಈಗಾಗಲೇ ಹಲವು ಬಾರಿ ಇದರ ಪ್ರಸ್ತಾಪ ಆಗಿದೆ. ಆಗ ಬೆಂಗಳೂರಿನ ಹೊರವಲಯದಲ್ಲಿದ್ದ ಹೆಸರಘಟ್ಟದಲ್ಲಿ ಚಿತ್ರನಗರಿಗಾಗಿ ಜಾಗ ಮೀಸಲು, ಅಲ್ಲಿ ಅಡಿಗಲ್ಲು ಹಾಕಿದ್ದೇ ಮೊದಲಾದ ಸುದ್ದಿ ಹಳೆಯದು. ಹಾಗಂತ ನೀವು ಭಾರತದಲ್ಲಿರುವ ಪ್ರಮುಖ ಚಿತ್ರನಗರಿಗಳು ಯಾವುವು ಅಂತ ಗೂಗಲನ್ನು ಕೇಳಿ ನೋಡಿ. ಬೆಂಗಳೂರಿನಲ್ಲೂ ಒಂದು ಚಿತ್ರನಗರಿ ಸಿಗುತ್ತದೆ. ದೇಶದಲ್ಲಿರುವ ಐದು ಪ್ರಮುಖ ಚಿತ್ರನಗರಿಗಳನ್ನು ಬಹತೇಕ ಜಾಲತಾಣಗಳು ಗುರುತಿಸಿ ಹೇಳುತ್ತವೆ.
ಆಂಧ್ರಪ್ರದೇಶದ ಹೈದರಾಬಾದಿನಲ್ಲಿರುವ ರಾಮೋಜಿ ಚಿತ್ರನಗರಿ, ಮಹಾ ರಾಷ್ಟ್ರದಲ್ಲಿರುವ ಮುಂಬೈ ಚಿತ್ರನಗರಿ, ಕರ್ನಾಟಕದ ಬೆಂಗಳೂರಿನ ಇನ್ನೋವೇ ಟಿವ್ ಚಿತ್ರನಗರಿ, ನೋಯ್ಡಾ ಚಿತ್ರನಗರಿ, ಹಾಗೂ ತಮಿಳುನಾಡಿನ ಚೆನ್ನೈನಲ್ಲಿ ರುವ ಎಂಜಿಆರ್ ಚಿತ್ರನಗರಿ ಈ ಐದು ಹೆಸರುಗಳು ಈಗಲೂ ಇವೆ. ಆದರೆ ಬೆಂಗಳೂರಿನ ಬಿಡದಿಯಲ್ಲಿರುವ ಇನ್ನೊವೇಟಿವ್ ಚಿತ್ರನಗರಿ ಬಾಗಿಲು ಮುಚ್ಚಿದ ವಿಷಯ ಬಹಳಷ್ಟು ಮಂದಿಗೆ ಗೊತ್ತಿಲ್ಲ.
ಆರ್ಥಿಕವಾಗಿ ನಷ್ಟವಾದ ಕಾರಣ ಈ ಸಂಸ್ಥೆಯ ಮಾಲೀಕರು ಮೂರ‍್ನಾಲ್ಕು ವರ್ಷಗಳ ಹಿಂದೆ ದಿವಾಳಿ ಘೋಷಿಸಿಕೊಂಡರು. ಸಾಮಾನ್ಯವಾಗಿ ಇಂತಹ ಸಂದರ್ಭಗಳಲ್ಲಿ ಸರ್ಕಾರ ಮಧ್ಯವರ್ತಿಗಳನ್ನು ನೇಮಿಸುತ್ತದೆ. ಇಲ್ಲೂ ಹಾಗಾಗಿತ್ತು. ಸಾಲದ ಮರುಪಾವತಿಗಾಗಿ ಅಲ್ಲಿನ ಸ್ಥಿರ–ಚರ ಸೊತ್ತುಗಳನ್ನು ಮಾರುವಂತೆ ನ್ಯಾಯಾಲಯ ಆದೇಶಿಸಿತ್ತು ಎನ್ನಲಾಗಿದ್ದು, ಈ ಆಸ್ತಿಯನ್ನು ತಮಿಳುನಾಡಿನ ವೇಲ್ಸ್ ಗ್ರೂಪ್‌ನ ಸಂಸ್ಥಾಪಕ ಐಶರಿ ಕೆ.ಗಣೇಶ್ ಕೊಂಡುಕೊಂಡು ಜಾಲಿವುಡ್ ಸ್ಟುಡಿಯೋಸ್ ಮತ್ತು ಅಡ್ವೆಂಚರ್ಸ್ ಆಗಿ ಬದಲಾಯಿಸಿದರು. ಅದನ್ನು ತಮ್ಮ ಸುಪರ್ದಿಗೆ ತೆಗೆದುಕೊಂಡ ಗಣೇಶ್ ಅದನ್ನು ಚಿತ್ರೀಕರಣದ ಅನುಕೂಲಗಳ ಜೊತೆಗೆ ಮನರಂಜನಾ ತಾಣವಾಗಿ ಬದಲಾಯಿಸಿದ್ದನ್ನು ಮೊನ್ನೆ ಅದರ ಉದ್ಘಾಟನಾ ಸಮಾರಂಭದಲ್ಲಿ ಪ್ರಸ್ತಾಪಿಸಿದ್ದು ಹೀಗೆ: ಬಹಳ ವರ್ಷಗಳ ಕನಸು ಇಂದು ನನಸಾಗಿದೆ. ಕಳೆದ 30 ವರ್ಷಗಳಿಂದ ಶಿಕ್ಷಣ, ಆರೋಗ್ಯ, ಸಿನಿಮಾ ಮತ್ತು ಕ್ರೀಡಾ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದೇವೆ. ಮನೆ ಮಂದಿಯಲ್ಲಾ ಒಟ್ಟಿಗೆ ಸಮಯ ಕಳೆಯುವಂತಹ ಒಂದು ಥೀಮ್ ಪಾರ್ಕ್ ಮಾಡಬೇಕು ಎಂಬ ಆಸೆ ಇತ್ತು. ಹೀಗಿರುವಾಗಲೇ, ಇನ್ನೋವೇಟೀವ್ ಫಿಲಂ ಸಿಟಿಯನ್ನು ಟೇಕ್ ಓವರ್ ಮಾಡುವ ಆಫರ್ ಬಂತು. ಕಳೆದ ಎರಡು ವರ್ಷಗಳಿಂದ ಪ್ರಕ್ರಿಯೆ ನಡೆಯುತ್ತಲೇ ಇತ್ತು. ಫಿಲಂಸಿಟಿಯನ್ನು ನವೀಕರಿಸಿರುವುದಷ್ಟೇ ಅಲ್ಲ, ಹಲವು ಮನರಂಜನೆ ಆಟಗಳನ್ನು ಹೊಸದಾಗಿ ಪ್ರಾರಂಭಿಸಿದ್ದೇವೆ.
ಭಾರತೀಯ ಚಿತ್ರರಂಗಕ್ಕೆ ಇದನ್ನು ಸಮರ್ಪಿಸುತ್ತಿದ್ದೇವೆ.
ಈ ಪಾರ್ಕ್‌ನಲ್ಲಿ 33 ಮುಖ್ಯ ಆಕರ್ಷಣೆಗಳಿವೆ. ವಾಟರ್ ರೈಡ್ಗಳಲ್ಲದ್ದೆ, ಡೈನೋ ಪಾರ್ಕ್, 5 ರೆಸ್ಟೋರೆಂಟ್ಗಳು, ಎರಡು ರೆಸ್ಟೋ ಪಬ್‌ಗಳು ಹೀಗೆ ಮನೆಮಂದಿಯಲ್ಲಾ ಒಟ್ಟಾಗಿ ಕಾಲ ಕಳೆಯುವ ಸ್ಥಳವಿದು. ಈ ಜಾಲಿವುಡ್‌ನಲ್ಲಿ ಮನರಂಜನೆ ಖಚಿತ.
ಗಮನಿಸಿ, ಇನ್ನೋವೇಟಿವ್ ಫಿಲಂ ಸಿಟಿ ಜಾಲಿವುಡ್ ಆಗಿದೆ. ಹಾಲಿವುಡ್ನ ಪ್ರಭಾವ ಎಷ್ಟೆಂದರೆ, ಸಿನಿಮಾ ಮಂದಿಗೆ ಈ‘ವುಡ್’ ರಹಿತ ಹೆಸರುಗಳ ಅಪಥ್ಯವೇನೋ ಎನ್ನುವಂತಿರುತ್ತದೆ! ಬಾಲಿವುಡ್, ಕಾಲಿವುಡ್, ಟಾಲಿವುಡ್, ಮಾಲಿವುಡ್ ಹೀಗೆ.. ಅಷ್ಟೇ ಏಕೆ, ಸ್ಯಾಂಡಲ್ವುಡ್. ಕನ್ನಡ ಚಿತ್ರರಂಗಕ್ಕೆ ಹೆಸರು. ಇದೀಗ ಜಾಲಿವುಡ್. ಇದು ಅವರ ಪ್ರಕಾರ, ಸಿನಿಮಾ ಹಿನ್ನೆಲೆಯ ಪಾರ್ಕ್. ಇಡೀ ಕುಟುಂಬದ ವಾರಾಂತ್ಯದ ಮನರಂಜನೆಗೆ ಇದು ಸೂಕ್ತ ಸ್ಥಳ ಎನ್ನುವುದನ್ನು ಗಣೇಶ್ ಹೇಳುತ್ತಾರೆ. ಇದರ ಜೊತೆಯಲ್ಲಿ ಚಿತ್ರೋದ್ಯಮದ ಚಿತ್ರೀಕರಣದ ಅಗತ್ಯಗಳನ್ನು ಪೂರೈಸಲು ಬೇಕಾದ ಸೌಲಭ್ಯಗಳು ಅತ್ಯಾಧುನಿಕ ತಂತ್ರಜ್ಞಾನ ಮತ್ತು ವಿಶಾಲವಾದ ಪರಿಸರಗಳೊಂದಿಗೆ ಸುಸಜ್ಜಿತವಾಗಿವೆ. ನಮ್ಮ ಮೂರು ವಿಸ್ತಾರವಾದ ಸ್ಟುಡಿಯೋಗಳು ವಿಭಿನ್ನ ಶ್ರೇಣಿಯ ಉತ್ಪಾದನಾ ಅಗತ್ಯಗಳನ್ನು ಪೂರೈಸಲು ನಿಖರವಾಗಿ ವಿನ್ಯಾಸಗೊಳಿಸಲಾಗಿದೆ, ನಿಮ್ಮ ಸಿನಿಮೀಯ ದೃಷ್ಟಿಯನ್ನು ವಾಸ್ತವಕ್ಕೆ ಪರಿವರ್ತಿಸಲು ಸೂಕ್ತವಾದ ವಾತಾವರಣವನ್ನು ಖಾತ್ರಿಪಡಿಸುತ್ತದೆ ಎನ್ನುತ್ತಾರೆ.
ವಿವಿಧ ವಿಸ್ತೀರ್ಣದ ಮೂರು ಚಿತ್ರೀಕರಣ ಅಂಗಣಗಳು ಅತ್ಯಾಧುನಿಕ ವ್ಯವಸ್ಥೆಗಳೊಂದಿಗೆ ಇಲ್ಲಿವೆ, ಮೊದಲನೆಯ ಅಂಗಣದ ವಿಸ್ತಾರ 25,000 ಚದರ ಅಡಿ ಇದ್ದರೆ, ಎರಡನೆಯದು 12,000 ಚದರ ಅಡಿ ಇದೆ. ಇಲ್ಲಿ ಬೇಕಾದಂತೆ ಸೆಟ್‌ಗಳನ್ನು ಹಾಕಬಹುದು ಎನ್ನುತ್ತಾರವರು. ಸಣ್ಣಪುಟ್ಟ ಚಿತ್ರೀಕರಣಗಳ ಅನುಕೂಲಕ್ಕಾಗಿ 6500 ಚದರ ಅಡಿಯ ಇನ್ನೊಂದು ಅಂಗಣವಿದೆ. ಚಿತ್ರೀಕರಣ ಸೌಲಭ್ಯಗಳ ಕುರಿತಂತೆ ಪ್ರಸ್ತಾಪಿಸಿರುವ ಅವರ ಜಾಲತಾಣ ಚಿತ್ರೀಕರಣೋತ್ತರ ಸೌಲಭ್ಯಗಳ ಕುರಿತಂತೆ ಮೌನವಾಗಿದೆ.
ಮೊನ್ನೆ ಅದರ ಉದ್ಘಾಟನೆಗೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ನಟ ಶಿವರಾಜ್‌ಕುಮಾರ್, ಸಂಸದ ಡಿ.ಕೆ.ಸುರೇಶ್, ಸ್ಥಳೀಯ ಶಾಸಕ ಹೆಚ್. ಸಿ.ಬಾಲಕೃಷ್ಣ ಅವರುಗಳಿದ್ದರು. ‘ನಾನು ನಾಲ್ಕು ವರ್ಷಗಳಿಂದ ಯಾವುದೇ ಖಾಸಗಿ ಕಾರ್ಯಕ್ರಮಗಳ ಉದ್ಘಾಟನೆಗೆ ಕಾರ್ಯದೊತ್ತಡದಿಂದ ಹೋಗಿರಲಿಲ್ಲ. ಇದೇ ಮೊದಲು ಬಂದಿರುವುದು. ‘ಜಾಲಿವುಡ್’ ಚೆನ್ನಾಗಿದೆ. ಒಳ್ಳೆಯದಾಗಲಿ. ಇಡೀ ಬೆಂಗಳೂರಿನವರು ಹಾಗೂ ಬೇರೆ ಊರಿನವರು ಬಂದು ಇದನ್ನು ವೀಕ್ಷಿಸಲಿ’ ಎಂದು ಹಾರೈಸಿದರು.
ಹಿಂದೆ ಇನ್ನೋವೇಟಿವ್ ಫಿಲಂ ಸಿಟಿ ಇದ್ದಾಗ ತಾವು ಬಂದು ಅಲ್ಲಿ ಹಾಡುಗಳ ಚಿತ್ರೀಕರಣಗಳಲ್ಲಿ ಪಾಲ್ಗೊಂಡ ನೆನಪನ್ನು ಶಿವರಾಜ್‌ಕುಮಾರ್ ಮೆಲುಕು ಹಾಕಿ, ಹೊಸ ತಂಡಕ್ಕೆ ಶುಭಕೋರಿದರು ಶಿವರಾಜ್‌ಕುಮಾರ್.
ಹಿಂದೆ ಇನ್ನೋವೇಟಿವ್ ಫಿಲಂ ಸಿಟಿ ಇದ್ದಾಗ, ಅದು ಮನರಂಜನಾ ತಾಣ, ಚಿತ್ರೀಕರಣ ತಾಣ ಮಾತ್ರವಲ್ಲದೆ, ಇನ್ನೋವೇಟಿವ್ ಫಿಲಂ ಅಕಾಡೆಮಿ ಮೂಲಕ ಚಲನಚಿತ್ರ ಶಿಕ್ಷಣ ವ್ಯವಸ್ಥೆಯೂ ಇತ್ತು. ಬೆಂಗಳೂರು ವಿವಿ ಇದಕ್ಕೆ ಮಾನ್ಯತೆ ನೀಡಿತ್ತು. ಈ ತರಗತಿಗಳು ಈಗ ಇನ್ನೋವೇಟಿವ್ ಮಲ್ಟಿಪ್ಲೆಕ್ಸ್ ಇರುವ ಜಾಗದಲ್ಲಿ ನಡೆಯುತ್ತಿದೆ ಎನ್ನಲಾಗಿದೆ.
ಸಿನಿಮಾ ತರಬೇತಿ ಸಂಸ್ಥೆಗಳಲ್ಲಿ ಖಾಸಗಿಯಾಗಿ ನಡೆಯುತ್ತಿದ್ದ ಆದರ್ಶ ತರಬೇತಿ ಸಂಸ್ಥೆ ಮುಚ್ಚಿದೆ. ಸಾಕಷ್ಟು ಮಂದಿ ಅಲ್ಲಿ ತರಬೇತಿ ಪಡೆದವರು ಕನ್ನಡ ಚಿತ್ರರಂಗದಲ್ಲಿ ಹೆಸರಾಗಿದ್ದಾರೆ. ಸರ್ಕಾರದ ಅನುದಾನವೂ ಅದಕ್ಕೆ ದೊರೆಯುತ್ತಿತ್ತು. ಆ ಕಾರಣದಿಂದಲೇ ಅದಕ್ಕೆ ಹೆಸರಘಟ್ಟದಲ್ಲಿ ಹತ್ತು ಎಕರೆ ಜಾಗವನ್ನೂ ನೀಡಲಾಗಿತ್ತು. ಈಗ ಈ ಜಾಗ, ಸಂಸ್ಥೆಗಳ ಕುರಿತಂತೆ ಮಾತನಾಡುವವರು ಯಾರೂ ಇದ್ದಂತಿಲ್ಲ. ಅದರ ಸ್ಥಾಪಕರಲ್ಲಿ ಒಬ್ಬರಾದ ಬಿಆರ್‌ಪಿ ಸ್ವಾಮಿ ಅವರು ಈಗಿಲ್ಲ. ಅವರ ಮಗ ಸಂಸ್ಥೆಯ ಮೇಲುಸ್ತುವಾರಿ ನೋಡಿಕೊಳ್ಳುತ್ತಿದ್ದರು. ಅವರಿಂದ ಆಡಳಿತವನ್ನು ಪಡೆದು, ಅವರನ್ನೇ ಹೊರಹಾಕಿದ ಪ್ರಸಂಗವೂ ನಡೆಯಿತು ಎನ್ನುವ ಮಾತೂ ಇತ್ತು. 48 ವರ್ಷಗಳ ಕಾಲ ನಡೆದ ಆದರ್ಶ ಚಲನಚಿತ್ರ ತರಬೇತಿ ಸಂಸ್ಥೆಯಲ್ಲಿ ಆರ್.ನಾಗೇಂದ್ರ ರಾವ್, ಬಿ.ವಿ. ಕಾರಂತ, ಗಿರೀಶ್ ಕಾಸರವಳ್ಳಿ, ಟಿ.ಎಸ್.ನಾಗಾಭರಣ, ಭಗವಾನ್, ಎಸ್. ನಾರಾಯಣ್ ಮೊದಲಾದವರು ಪ್ರಾಂಶುಪಾಲರಾಗಿದ್ದರು.
ಈಗ ಚಲನಚಿತ್ರ ತರಬೇತಿ ಸಂಸ್ಥೆಗಳ ಹೆಸರಲ್ಲಿ ಹತ್ತಾರು ಇವೆ. ಬೆರಳೆಣಿಕೆಯ ಕೆಲವನ್ನು ಹೊರತುಪಡಿಸಿದರೆ, ಉಳಿದವು ಕೇವಲ ಹೆಸರಿಗೆ ಮಾತ್ರ ಇರುವವುಗಳು. ರಾಜ್ಯ ಚಲನಚಿತ್ರ ಅಕಾಡೆಮಿ ಚಲನಚಿತ್ರ ಶಿಕ್ಷಣದ ಕುರಿತಂತೆ ಯೋಚಿಸುವ, ಯೋಜಿಸುವ ಕೆಲಸಗಳಾಗಬೇಕು. ಅದರ ಧ್ಯೇಯವಾಕ್ಯವಾದ ಚಲನಚಿತ್ರದಲ್ಲಿ ಶಿಕ್ಷಣ, ಶಿಕ್ಷಣದಲ್ಲಿ ಚಲನಚಿತ್ರ’ ಎನ್ನುವುದನ್ನು ಕಾರ್ಯಗತ ಮಾಡುವ ಕೆಲಸ ಆಗಬೇಕು.
ಮೈಸೂರಿನಲ್ಲಿ ಚಿತ್ರನಗರಿಯ ಸ್ಥಾಪನೆ ಕುರಿತಂತೆ ಈಗಾಗಲೇ ಸರ್ಕಾರ ಹೇಳಿದೆ. ಅಲ್ಲಿ ಮಾತ್ರವಲ್ಲ, ಬೆಂಗಳೂರಿನ ಕಂಠೀರವ ಸ್ಟುಡಿಯೊದಲ್ಲಿ, ಸರ್ಕಾರಕ್ಕೆ ಇಚ್ಛಾಶಕ್ತಿ ಇದ್ದರೆ, ಅತ್ಯಾಧುನಿಕ ಸ್ಟುಡಿಯೊ ಸಂಕೀರ್ಣವನ್ನು ಆಧುನಿಕ ತಂತ್ರಜ್ಞಾನಗಳೊಂದಿಗೆ ನಿರ್ಮಿಸಬಹುದು. ಆದರ್ಶ ಸಂಸ್ಥೆಗೆ ನೀಡಿದ ಜಾಗವನ್ನು ಚಿತ್ರರಂಗದ ಇನ್ಯಾವುದಾದರೂ ಸೌಲಭ್ಯ ಒದಗಿಸಲು ಬಳಸಬಹುದು. ಅಭಿಮಾನಿ ಸ್ಟುಡಿಯೊದಲ್ಲಿ ಕೂಡ.
ಆದರೆ ಈ ನಿಟ್ಟಿನಲ್ಲಿ ಮುಂದೆ ಹೆಜ್ಜೆ ಇಡಲು ಒತ್ತಾಯಿಸುವವರು ಯಾರು? ಚಲನಚಿತ್ರ ವಾಣಿಜ್ಯ ಮಂಡಳಿಗೆ ಇಂತಹ ವಿಷಯಗಳ ಕುರಿತಂತೆ ಆಸ್ಥೆ ಇದ್ದಂತಿಲ್ಲ. ಚಿತ್ರೋದ್ಯಮಕ್ಕೆ ಬೇಕಾದ ಮೂಲಸೌಲಭ್ಯ ಒದಗಿಸುವ ಯೋಚನೆ ಅದಕ್ಕೆ ಇಲ್ಲ. ಇರುತ್ತಿದ್ದರೆ, ಹಳೆಯ ಕಟ್ಟಡ ಒಡೆಯುವ ವೇಳೆ ಇದ್ದ ಸಂಕೇತ್ ಎಲೆಕ್ಟ್ರಾನಿಕ್ ಸಂಸ್ಥೆಗೆ ಹೊಸ ಕಟ್ಟಡದಲ್ಲಿ ಜಾಗ ನೀಡುತ್ತಿತ್ತು. ಅಂತಹ ಯೋಚನೆ ಬರಲೇ ಇಲ್ಲ.
ಈಗ ನಿರ್ಮಾಪಕರ ಸಂಘದ ಹೊಸ ಕಟ್ಟಡ ವಾಣಿಜ್ಯ ಮಂಡಳಿಯ ಕೂಗಳತೆಯ ದೂರದಲ್ಲಿ, ಗಾಂಧಿಭವನದ ಎದುರು ಸಿದ್ಧವಾಗುತ್ತಿದೆ. ಅಲ್ಲಿ ಕೂಡ ಚಿತ್ರೋದ್ಯಮಕ್ಕೆ ಬೇಕಾದ ಸೌಲಭ್ಯಗಳನ್ನು ಒದಗಿಸಬಹುದು. ಅಲ್ಲೊಂದು ಪೂರ್ವ ಪ್ರದರ್ಶನಗೃಹವನ್ನೋ, ಸಂಕಲನ, ಗ್ರಾಫಿಕ್ಸ್, ಅನಿಮೇಶನ್ಗಳ ಕೇಂದ್ರವನ್ನೋ ಸ್ಥಾಪಿಸಿ, ಚಿತ್ರೋದ್ಯಮಕ್ಕೆ ನೆರವಾಗಬಹುದು. ಆದರೆ ಆ ಸಾಧ್ಯತೆ ಕಡಿಮೆ ಎನ್ನಿ.