Light
Dark

ಆರೋಗ್ಯವಿಲ್ಲದಿದ್ದರೆ ಎಷ್ಟು ಕೋಟಿಗಳಿದ್ದರೇನು ‘ಬಿಗ್ ಬುಲ್’ಜುಂಜುನ್‌ವಾಲಾ?

ಪ್ರತೀದಿನ ಅವರು ೧೩.೬೯ ಲಕ್ಷ ರೂಪಾಯಿಯಂತೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳ ಯೋಜನೆಗಳಿಗೆ ಚಾರಿಟಿ ನೀಡಿದ್ದರು!
ಪಂಜು ಗಂಗೊಳ್ಳಿ

ಕೆಲವು ತಿಂಗಳ ಹಿಂದೆ, ಭಾರತದ ವಾರನ್ ಬಫೆಟ್ ಎಂದೇ ಖ್ಯಾತರಾದ ರಾಕೇಶ್ ಜುಂಜುನ್‌ವಾಲಾ ಮತ್ತು ಪ್ರಧಾನಿ ನರೇಂದ್ರ ಮೋದಿಯವರು ಜೊತೆಯಲ್ಲಿರುವ ಈ ಫೋಟೋ ವಿಪರೀತ ವೈರಲ್ ಆಗಿತ್ತು. ಫೋಟೋದಲ್ಲಿ ದೇಶದ ಪ್ರಧಾನಿ ನಿಂತುಕೊಂಡಿದ್ದರೆ, ರಾಕೇಶ್ ಜುಂಜುನ್‌ವಾಲಾ ಕುಳಿತುಕೊಂಡಿದ್ದರು. ಸಹಜವಾಗಿಯೇ ಈ ಫೋಟೋ ಕುರಿತು ನೆಟ್ಟಿಗರಿಂದ ಮತ್ತು ಇತರೇ ಸಾಮಾನ್ಯರಿಂದಲೂ ಅಸಂಖ್ಯ ಟೀಕೆಟಿಪ್ಪಣಿಗಳು ಬಂದಿದ್ದವು.

ಒಬ್ಬ ಹೂಡಿಕೆದಾರ ಆತ ಎಷ್ಟೇ ಖ್ಯಾತನೂ, ಶ್ರೀಮಂತನೂ ಆಗಿದ್ದರೂ ದೇಶದ ಪ್ರಧಾನಿ ಭೇಟಿಯಾಗಲು ಬಂದಾಗ ಕುಳಿತ ಆಸನದಿಂದ ಎದ್ದು ನಿಂತು ಸ್ವಾಗತಿಸುವುದು ಒಂದು ಕನಿಷ್ಠ ನಾಗರಿಕ ಕ್ರಮ. ಟೀಕೆಟಿಪ್ಪಣಿಗಳಲ್ಲಿ ಹೆಚ್ಚಿನವು, ‘ಪ್ರಧಾನ ಸೇವಕ ತನ್ನ ಮಾಲೀಕನನ್ನು ನೋಡಲು ಹೋದಾಗ ಆತ ಎದ್ದು ನಿಲ್ಲುತ್ತಾನೆಯೇ’ ಎಂಬಿತ್ಯಾದಿಯಾಗಿ ಯಥಾ ಪ್ರಕಾರ ನರೇಂದ್ರ ಮೋದಿಯವರನ್ನು ಗೇಲಿ ಮಾಡುವಂತಿದ್ದರೆ, ಕೆಲವು ರಾಕೇಶ್ ಜುಂಜುನ್‌ವಾಲಾರಿಗೆ ಧನದ ಅಹಂಕಾರ ಎಂಬಂತೆ ಟೀಕಿಸಿದ್ದವು.

ಆದರೆ, ನೈಜ ವಿಚಾರದ ಬಗ್ಗೆ ಬೆಳಕು ಚೆಲ್ಲಿದ ಟೀಕೆಗಳು ಕೆಲವೇ ಕೆಲವು ಮಾತ್ರ. ನೈಜ ವಿಚಾರವೇನೆಂದರೆ, ರಾಕೇಶ್ ಜುಂಜುನ್‌ವಾಲಾ ಆ ಸಮಯದಲ್ಲಿ ಎಷ್ಟು ಅಸೌಖ್ಯರಾಗಿದ್ದರು ಎಂದರೆ, ಅವರು ಕುರ್ಚಿ ಬಿಟ್ಟು ಎದ್ದು ನಿಲ್ಲುವುದಿರಲಿ, ಕುರ್ಚಿಯಲ್ಲಿ ತುಸು ಅಲುಗಾಡಲೂ ಅಸಮರ್ಥರಾಗಿದ್ದರು!

೧೯೬೦ರಲ್ಲಿ ಮುಂಬೈಯಲ್ಲಿ ಒಂದು ಸಾಧಾರಣ ಮಾರ್ವಾಡಿ ಕುಟುಂಬವೊಂದರಲ್ಲಿ ಜನಿಸಿದ ರಾಕೇಶ್ ಜುಂಜುನ್‌ವಾಲಾರ ತಂದೆ ಒಬ್ಬ ಆದಾಯ ತೆರಿಗೆ ಅಧಿಕಾರಿಯಾಗಿದ್ದರು. ಇವರ ಕುಟುಂಬದ ಮೂಲ ರಾಜಾಸ್ತಾನದ ಜುಂಜುನು ಎಂಬ ಗ್ರಾಮ. ರಾಧಾಕೃಷ್ಣ ಜುಂಜುನ್‌ವಾಲಾ ಮಗನಿಗೆ ಷೇರು ಮಾರುಕಟ್ಟೆಯ ಬಗ್ಗೆ ತಿಳಿವಳಿಕೆ ನೀಡುತ್ತಿದ್ದರೂ ಹೂಡಿಕೆ ಮಾಡಲು ಚಿಕ್ಕಾಸನ್ನೂ ಕೊಡುತ್ತಿರಲಿಲ್ಲ. ಮತ್ತು, ಸ್ನೇಹಿತರಿಂದ ಹಣ ಪಡೆಯಬಾರದು ಎಂದು ಕಟ್ಟಪ್ಪಣೆ ಮಾಡಿದ್ದರು.

೧೯೮೫ರಲ್ಲಿ ತಾನು ಉಳಿತಾಯ ಮಾಡಿ ಸಂಗ್ರಹಿಸಿದ ೫,೦೦೦ ರೂಪಾಯಿಗಳನ್ನು ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡಿದುದು ರಾಕೇಶ್ ಜುಂಜುನ್‌ವಾಲಾರ ಪ್ರಪ್ರಥಮ ಹೂಡಿಕೆ. ಆ ಹೂಡಿಕೆಯ ನಂತರ ರಾಕೇಶ್ ಜುಂಜುನ್‌ವಾಲಾ ಹಿಂತಿರುಗಿ ನೋಡಲೇ ಇಲ್ಲ. ಅಲ್ಲಿಂದ ಅವರ ಶ್ರೀಮಂತಿಕೆ ಬೆಳೆಯುತ್ತಲೇ ಹೋಗಿ, ೨೦೦೮ರಲ್ಲಿ ಭಾರತದ ಬಿಲಿಯಾಧೀಶರೊಲ್ಲಬ್ಬರಾಗುತ್ತಾರೆ. ಮುಂದೆ, ಫೋರ್ಬ್ಸ್ ಪತ್ರಿಕೆ ಇವರನ್ನು ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯಲ್ಲಿ ೪೩೮ನೇ ಸ್ಥಾನದಲ್ಲಿ ಸೇರಿಸುತ್ತದೆ. ಆಗ ಇವರ ತಂದೆ ರಾಧಾಕೃಷ್ಣ ಜುಂಜುನ್‌ವಾಲಾ ಇವರನ್ನು ಅಭಿನಂದಿಸಿದರಾದಾರೂ, ಅದೇ ಬಾಯಲ್ಲಿ ‘ನೀನು ಇಷ್ಟೆಲ್ಲ ಹಣ ಮಾಡಿಯೂ ದಾನಧರ್ಮ ಮಾಡದಿದ್ದರೆ ಯಾವುದಾದರೂ ನೀರಿನ ಹೊಂಡದಲ್ಲಿ ಬಿದ್ದು ಸಾಯಿ’ ಎಂದರಂತೆ!

ಅಂದಿನಿಂದ ರಾಕೇಶ್ ಜುಂಜುನ್‌ವಾಲಾರಿಗೆ ಹಣ ಹೂಡಿಕೆ ಮತ್ತು ಫಿಲಾಂತ್ರೋಫಿ ಎರಡೂ ತನ್ನ ಬದುಕಿನ ಭಾಗವಾಯಿತು.

ಮೊತ್ತ ಮೊದಲ ಬಾರಿಗೆ ಅವರು ಚಾರಿಟಿ ನೀಡಿದ್ದು ಕ್ಯಾನ್ಸರಿನಿಂದ ಬಳಲುತ್ತಿರುವ ನಿರ್ಗತಿಕ ಮಕ್ಕಳಿಗೆ ಆಶ್ರಯ ಒದಗಿಸುವ ‘ಸೇಂಟ್ ಜೂಡ್’ ಎಂಬ ಯೋಜನೆಗೆ. ವಿದ್ಯಾರ್ಥಿಗಳಿಗೆ ವೈಜ್ಞಾನಿಕ ಜ್ಞಾನ ನೀಡುವ ‘ಅಗಸ್ತ್ಯ’ ಅವರ ಅತ್ಯಂತ ದೊಡ್ಡ ಚಾರಿಟಿ-೫೦೦ ಮಿಲಿಯನ್ ರೂಪಾಯಿಗಳು!

ಕಳೆದ ವರ್ಷ ಅನಾರೋಗ್ಯ ತೀವ್ರಗೊಂಡು ಹಾಸಿಗೆ ಹಿಡಿದಾಗಲೂ ತನ್ನ ತಂದೆಯ ಹೆಸರಲ್ಲಿ ಮಹಾರಾಷ್ಟ್ರದ ಗ್ರಾಮೀಣ ಭಾಗದ ಬಡವರಿಗಾಗಿ ಒಂದು ಉಚಿತ ಕಣ್ಣಾಸ್ಪತ್ರೆಯನ್ನು ತೆರೆದರು. ಈ ಆಸ್ಪತ್ರೆಯಲ್ಲಿ ಪ್ರತೀ ೧೦ ಸರ್ಜರಿಗಳಲ್ಲಿ ಎರಡಕ್ಕೆ ಆರ್ಥಿಕವಾಗಿ ಅನುಕೂಲಸ್ಥರಿಂದ ರಿಯಾಯಿತಿ ದರ ಪಡೆದರೆ, ಉಳಿದ ಎಂಟು ಸರ್ಜರಿಗಳು ಸಂಪೂರ್ಣ ಉಚಿತ. ಕಳೆದ ವರ್ಷ ಅವರು ತನ್ನ ಆದಾಯದ ಶೇ.೨೫ರಷ್ಟನ್ನು ವಿವಿಧ ರೀತಿಯ ಚಾರಿಟಿಗಳಿಗೆ ನೀಡಿದ್ದರು. ಅಂದರೆ, ಪ್ರತೀದಿನ ಅವರು ೧೩.೬೯ ಲಕ್ಷ ರೂಪಾಯಿಯಂತೆ ವಿವಿಧ ಯೋಜನೆಗಳಿಗೆ ಚಾರಿಟಿ ನೀಡಿದ್ದರು! ಅದರಲ್ಲಿ ಬಹುಪಾಲನ್ನು ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ನೀಡಿದ್ದರು.

ರಾಕೇಶ್ ಜುಂಜುನ್‌ವಾಲಾ ತನ್ನ ಜೀವಿತಕಾಲದಲ್ಲಿ ಹೇಗೆ ಹಣ ಮಾಡಬಹುದು ಎಂದು ತೋರಿಸಿಕೊಟ್ಟ ರೀತಿಗಿಂತಲೂ ಹೆಚ್ಚಾಗಿ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಏಕೆ ನಿರ್ಲಕ್ಷಿಸಬಾರದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದ್ದರು. ಸಾಮಾನ್ಯವಾಗಿ ಭಾರತದ ಶ್ರೀಮಂತ ಜನಸಮುದಾಯಗಳಾದ ಮಾರ್ವಾಡಿಗಳು, ಜೈನರು, ಗುಜರಾತಿಗಳು ಮತ್ತು ಸಿಂಧೀಗಳು ಮಹಾ ತಿಂಡಿಪೋತರು. ಅಂತೆಯೇ ರಾಕೇಶ್ ಜುಂಜುನ್‌ವಾಲಾ. ತಿಂಡಿಪೋತತನದೊಂದಿಗೆ ಅವರಿಗೆ ಪಾನ್ ಜಗಿಯುವ ಚಟವೂ ಇತ್ತು. ಕುಡಿತ ಬೇರೆ. ದಿನಕ್ಕೆ ಕನಿಷ್ಠ ಆರು ಪೆಗ್ ವ್ಹಿಸ್ಕಿ. ಅದರ ಜೊತೆಗೆ ದಿನವೊಂದಕ್ಕೆ ೨೫ ಸಿಗರೇಟ್ ಸೇವನೆ.

ಇವೆಲ್ಲಕ್ಕೂ ಕಳಶವಿಟ್ಟಂತೆ ಯಾವುದೇ ರೀತಿಯ ದೈಹಿಕ ಚಟುವಟಿಕೆ ರಹಿತ ಜೀವನಕ್ರಮ. ಇವೆಲ್ಲದರ ಕಾರಣವಾಗಿ ಇತ್ತೀಚಿನ ವರ್ಷಗಳಲ್ಲಿ ಅವರು ತೀವ್ರ ಸ್ವರೂಪದ ಅನಾರೋಗ್ಯಕ್ಕೆ ಒಳಗಾಗಿದ್ದರು. ರಕ್ತದೊತ್ತಡ ಏರುಪೇರಾಗುವುದು ಸಾಮಾನ್ಯವಾಯಿತು. ಮೂತ್ರಕೋಶದ ಸಮಸ್ಯೆ ಕೊನೆಯ ಹಂತಕ್ಕೆ ಹೋಗಿ, ಹೀಮೋಡಯಾಲಿಸಿಸ್ ಮೇಲೆ ಬದುಕಬೇಕಾಯಿತು.

ಆಗಸ್ಟ್ ೧೪ರ ಬೆಳಿಗ್ಗೆ ಸಂಭವಿಸಿದ ಹೃದಯಾಘಾತ ಅವರ ಬದುಕಿಗೆ ಕೊನೆ ಹಾಡಿತು. ಆಗ ಅವರಿಗೆ ೬೨ ವರ್ಷ ಪ್ರಾಯವಾಗಿದ್ದು, ೪೬,೦೦೦ ಕೋಟಿ ರೂಪಾಯಿಗಳ ಒಡೆಯನಾಗಿದ್ದರು. ಎಷ್ಟು ಕೋಟಿಗಳ ಒಡೆಯನಾದರೂ ಆರೋಗ್ಯವೊಂದಿಲ್ಲದಿದ್ದರೆ ಯಾವ ಶ್ರೀಮಂತಿಕೆಗಾದರೂ ಏನು ಬೆಲೆ? ರಾಕೇಶ್ ಜುಂಜುನ್‌ವಾಲಾರೇ ಸಂದರ್ಶನವೊಂದರಲ್ಲಿ ಹೇಳಿಕೊಂಡಂತೆ, ‘ನನ್ನ ಅತ್ಯಂತ ಕೆಟ್ಟ ಇನ್ವೆಸ್ಟ್‌ಮೆಂಟ್ ಅಂದರೆ ನನ್ನ ಆರೋಗ್ಯ’.

ತನ್ನ ಜೀವಿತಕಾಲದಲ್ಲಿ ಹೇಗೆ ಹಣ ಮಾಡಬಹುದು ಎಂದು ತೋರಿಸಿಕೊಟ್ಟ ರೀತಿಗಿಂತಲೂ ಹೆಚ್ಚಾಗಿ ಒಬ್ಬ ವ್ಯಕ್ತಿ ತನ್ನ ಆರೋಗ್ಯವನ್ನು ಏಕೆ ನಿರ್ಲಕ್ಷಿಸಬಾರದು ಎಂಬುದಕ್ಕೆ ದೊಡ್ಡ ಉದಾಹರಣೆಯಾಗಿದ್ದರು. ಸಾಮಾನ್ಯವಾಗಿ ಭಾರತದ ಶ್ರೀಮಂತ ಜನಸಮುದಾಯಗಳಾದ ಮಾರ್ವಾಡಿಗಳು, ಜೈನರು, ಗುಜರಾತಿಗಳು ಮತ್ತು ಸಿಂಧೀಗಳು

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ