ಮೈಸೂರು: ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ 2023 ನೇ ಸಾಲಿನ ಪುಸ್ತಕ ಬಹುಮಾನಕ್ಕಾಗಿ ವಿವಿಧ ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಸಲ್ಲಿಸಲು ಅರ್ಜಿ ಆಹ್ವಾನಿಸಿದೆ.
ಬಹುಮಾನಕ್ಕೆ ಸಲ್ಲಿಸುವ ಕೃತಿಗಳು 2023 ರ ಜನವರಿ 01 ರಿಂದ 2023 ರ ಡಿಸೆಂಬರ್ 31 ರೊಳಗೆ ಪ್ರಥಮ ಆವೃತ್ತಿಯಾಗಿ ಪ್ರಕಟವಾಗಿರುವ ಕೃತಿಗಳಾಗಿದ್ದು, ಕೃತಿಯಲ್ಲಿ ಪ್ರಥಮ ಮುದ್ರಣ 2023 ಎಂದು ಮುದ್ರಿತವಾಗಿರಬೇಕು. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಕೃತಿಗೆ ಬಹುಮಾನ ನೀಡಲಾಗುವುದು.
ಕಾವ್ಯ, ನವ ಕವಿಗಳ ಪ್ರಥಮ ಕವನ ಸಂಕಲನ, ಕಾವ್ಯ ಹಸ್ತ ಪ್ರತಿ, ಕಾದಂಬರಿ, ಸಣ್ಣ ಕಥೆ, ನಾಟಕ, ಲಲಿತ ಪ್ರಬಂಧ, ಜೀವನ ಚರಿತ್ರೆ, ಸಾಹಿತ್ಯ ವಿಮರ್ಶೆ, ಗ್ರಂಥ ಸಂಪಾದನೆ, ಮಕ್ಕಳ ಸಾಹಿತ್ಯ, ವಿಜ್ಞಾನ ಸಾಹಿತ್ಯ, ಮಾನವಿಕ, ಸಂಶೋಧನೆ, ವೈಚಾರಿಕ / ಅಂಕಣ ಬರಹ, ಅನುವಾದ -1, ಅನುವಾದ-2, ಲೇಖಕರ ಮೊದಲ ಸ್ವಾತಂತ್ರ ಕೃತಿ, ಕನ್ನಡದಿಂದ ಇಂಗ್ಲೀಷ್‌ಗೆ ಅನುವಾದ, ದಾಸ ಸಾಹಿತ್ಯ, ಸಂಕೀರ್ಣ ಪ್ರಕಾರಗಳನ್ನು ಹೊಂದಿರುವ ಪುಸ್ತಕಗಳನ್ನು ಸಲ್ಲಿಸಬಹುದಾಗಿದೆ.
ಬೆಂಗಳೂರಿನ ಜೆ.ಸಿ ರಸ್ತೆಯ ಎರಡನೇ ಮಹಡಿಯಲ್ಲಿರುವ ಕನ್ನಡ ಭವನದ ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಅವರ ವಿಳಾಸಕ್ಕೆ ಪ್ರಕಟವಾದ ಪುಸ್ತಕಗಳ ತಲಾ ನಾಲ್ಕು ಪ್ರತಿಗಳನ್ನು ರಿಜಿಸ್ಟರ್ ಅಂಚೆ ಅಥವಾ ಕೊರಿಯರ್ ಮೂಲಕ ಅಥವಾ ಖುದ್ದಾಗಿ ಆಗಸ್ಟ್ 31 ರೊಳಗೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ ದೂ.ಸಂ: 080-22211730 ಅನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ರಿಜಿಸ್ಟ್ರಾರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.