ಬೆಂಗಳೂರು : ಮೋಡ, ಕತ್ತಲೆ, ಮಳೆ… ಯಾವುದಕ್ಕೂ ಜಗ್ಗದ ಕಣ್ಣು ಹೊಂದಿರುವ ಭಾರತದ ಮೊದಲ ಖಾಸಗಿ ಉಪಗ್ರಹ ‘ದೃಷ್ಟಿ’ ಇಂದು ಕ್ಯಾಲಿಫೋರ್ನಿಯಾದಿಂದ ಆಗಸಕ್ಕೆ ಜಿಗಿದಿದೆ. ಐಐಟಿ ಮದ್ರಾಸ್ ಹಳೆ ವಿದ್ಯಾರ್ಥಿಗಳು ಸ್ಥಾಪಿಸಿದ ಬೆಂಗಳೂರು ಮೂಲದ ಸ್ಪೇಸ್ ಸ್ಟಾರ್ಟಪ್ ಗ್ಯಾಲಕ್ಸ್‌ಐನ ಈ ಉಪಗ್ರಹವನ್ನು ಸ್ಪೇಸ್‌ಎಕ್ಸ್‌ನ ಫಾಲ್ಕನ್-9 ರಾಕೆಟ್ ಮಧ್ಯಾಹ್ನ 12:29ಕ್ಕೆ ಯಶಸ್ವಿಯಾಗಿ ಕಕ್ಷೆಗೆ ಸೇರಿಸಿದೆ.
190 ಕೆ.ಜಿ ತೂಕದ ‘ದೃಷ್ಟಿ’ ಜಗತ್ತಿನ ಮೊದಲ ಆಪ್ಟೋಸಾರ್ ಉಪಗ್ರಹ. ಅಂದರೆ ಒಂದೇ ವೇದಿಕೆಯಲ್ಲಿ ಎಲೆಕ್ಟ್ರೋ-ಆಪ್ಟಿಕಲ್ ಕ್ಯಾಮೆರಾ ಮತ್ತು ಸಿಂಥೆಟಿಕ್ ಅಪರ್ಚರ್ ರೇಡಾರ್ ಇರುವ ಉಪಗ್ರಹ. ಆಪ್ಟಿಕಲ್ ಕ್ಯಾಮೆರಾ ಹಗಲಿನಲ್ಲಿ ಸ್ಪಷ್ಟ ಚಿತ್ರ ಕೊಟ್ಟರೆ, ಮೋಡ, ರಾತ್ರಿ, ಹೊಗೆ ಬಂದಾಗ ಕೈಚೆಲ್ಲುತ್ತದೆ. ರೇಡಾರ್ ಚಿತ್ರ ಮೋಡವನ್ನೂ ದಾಟಿ ಬರುತ್ತದೆ, ಆದರೆ ಎಕ್ಸ್-ರೇ ರೀತಿ ತಜ್ಞರಿಗಷ್ಟೇ ಅರ್ಥವಾಗುತ್ತದೆ. ‘ದೃಷ್ಟಿ’ ಎರಡನ್ನೂ ಒಂದೇ ಸಮಯದಲ್ಲಿ, ಒಂದೇ ಜಾಗದ ಚಿತ್ರ ತೆಗೆದು ‘ಸಿಂಕ್‌ಫ್ಯೂಸ್ಡ್’ ಮಾಡಿ ಸಾಮಾನ್ಯರಿಗೂ ಅರ್ಥವಾಗುವ ಸ್ಪಷ್ಟ ಚಿತ್ರ ಕೊಡುತ್ತದೆ.
1.5 ಮೀಟರ್ ರೆಸಲ್ಯೂಶನ್, 24×7 ಕಣ್ಗಾವಲು
ಈ ಉಪಗ್ರಹ 1.5 ಮೀಟರ್ ರೆಸಲ್ಯೂಶನ್‌ನ ಚಿತ್ರ ನೀಡಲಿದ್ದು, ಗಡಿ ಕಣ್ಗಾವಲು, ವಿಪತ್ತು ನಿರ್ವಹಣೆ, ಬೆಳೆ ಸಮೀಕ್ಷೆ, ಮೂಲಸೌಕರ್ಯ ಯೋಜನೆ, ವಿಮಾ ಹಕ್ಕು ಪರಿಶೀಲನೆಗೆ ಬಳಕೆಯಾಗಲಿದೆ. ‘ಭಾರತ ಉಷ್ಣವಲಯದಲ್ಲಿದೆ. ವರ್ಷದ ಬಹುಪಾಲು ಮೋಡ ಕವಿದಿರುತ್ತದೆ. ಆಗ ಆಪ್ಟಿಕಲ್ ಉಪಗ್ರಹಗಳು ಕುರುಡಾಗುತ್ತವೆ. ಅದಕ್ಕೇ ನಮಗೆ ರೇಡಾರ್+ಆಪ್ಟಿಕಲ್ ಕಾಂಬೋ ಬೇಕಿತ್ತು’ ಎನ್ನುತ್ತಾರೆ ಗ್ಯಾಲಕ್ಸ್‌ಐ ಸಂಸ್ಥಾಪಕ ಸುಯಾಶ್ ಸಿಂಗ್.
ಆಪರೇಷನ್ ಸಿಂಧೂರ್‌ನಲ್ಲಿ ಆಗಿದ್ದ ಕೊರತೆ ನೀಗಿಸಲಿದೆ
ಇತ್ತೀಚಿನ ಆಪರೇಷನ್ ಸಿಂಧೂರ್ ವೇಳೆ ಬಾಂಬ್ ಹಾನಿ ಮೌಲ್ಯಮಾಪನಕ್ಕೆ ಭಾರತ ಅಮೆರಿಕದ ವಾಣಿಜ್ಯ ಉಪಗ್ರಹಗಳನ್ನು ಅವಲಂಬಿಸಬೇಕಾಯಿತು. ಇಸ್ರೇಲ್-ಇರಾನ್ ಸಂಘರ್ಷದಲ್ಲೂ ಅಮೆರಿಕ ಚಿತ್ರ ಹಂಚಿಕೆಗೆ ನಿರ್ಬಂಧ ಹೇರಿತ್ತು. ‘ದೃಷ್ಟಿ’ಯಂಥ ಸ್ವದೇಶಿ ಕಣ್ಣುಗಳಿದ್ದರೆ ಇಂಥ ಸಂದರ್ಭದಲ್ಲಿ ಬೇರೆಯವರನ್ನು ನಂಬಬೇಕಿಲ್ಲ ಎಂದು ತಜ್ಞರು ಹೇಳಿದ್ದಾರೆ.
ಇಸ್ರೋ ಬೆಂಬಲ, ಖಾಸಗಿ ಬಾಹ್ಯಾಕಾಶಕ್ಕೆ ಬೂಸ್ಟ್
ಐಐಟಿ ಮದ್ರಾಸ್‌ನಲ್ಲಿ ಹುಟ್ಟಿ ಇಸ್ರೋ ಬೆಂಬಲ ಪಡೆದ ಗ್ಯಾಲಕ್ಸ್‌ಐ, ಭಾರತದ ಅತಿದೊಡ್ಡ ಖಾಸಗಿ ಭೂ ವೀಕ್ಷಣಾ ಉಪಗ್ರಹವನ್ನು ಉಡಾಯಿಸಿದ ಹೆಗ್ಗಳಿಕೆಗೆ ಪಾತ್ರವಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಉತ್ತಮ ರೆಸಲ್ಯೂಶನ್‌ನ ಉಪಗ್ರಹಗಳ ಸಮೂಹ ಉಡಾಯಿಸಲು ಕಂಪನಿ ಯೋಜಿಸಿದೆ.
‘ಮೋಡವಿದ್ದರೂ, ಕತ್ತಲಿದ್ದರೂ ಭಾರತವನ್ನು 24×7 ನೋಡುವ ಕಣ್ಣು ಈಗ ನಮ್ಮದಾಗಿದೆ. ಇದು ನ್ಯʼVision satelliteʼೂ ಇಂಡಿಯಾದ ನ್ಯೂ ಸ್ಪೇಸ್’ ಎಂದು ಗ್ಯಾಲಕ್ಸ್‌ಐ ತಂಡ ಟ್ವೀಟ್ ಮಾಡಿದೆ.
ಮಳೆಗಾಲದಲ್ಲಿ ನೆರೆ, ಭೂಕುಸಿತದ ನಿಖರ ಚಿತ್ರ ಸಿಗದೆ ಪರದಾಡುತ್ತಿದ್ದ ಭಾರತಕ್ಕೆ ‘ದೃಷ್ಟಿ’ ನಿಜಕ್ಕೂ ಹೊಸ ದೃಷ್ಟಿ ನೀಡಲಿದೆ.





