ಎಂಎ ಓದಲು ಊರಿಗೆ ಅರ್ಧತಾಸಿನ ಪಯಣದಷ್ಟು ಸನಿಹದಲ್ಲಿದ್ದ ಮೈಸೂರು ವಿಶ್ವವಿದ್ಯಾನಿಲಯದ ಪಿಜಿ ಸೆಂಟರಿಗೆ ಹೋಗಬೇಕೆಂದು ಆಲೋಚಿಸಿದ್ದೆ. ನನ್ನ ಗುರುಗಳು ನೀನು ಮೈಸೂರಿಗೇ ಹೋಗತಕ್ಕದ್ದು. ಹಾ.ಮಾ.ನಾಯಕ, ಪ್ರಭುಶಂಕರ, ಚನ್ನಯ್ಯ, ಜಿ.ಎಚ್.ನಾಯಕ ಮುಂತಾದವರಿದ್ದಾರೆ ಎಂದರು. ಅಪ್ಪನಿಗೆ ಮಗ ಲಕ್ಕವಳ್ಳಿಯಲ್ಲಿ ಓದುವುದು ಮರ್ಯಾದೆಗೆ ಕುಂದೆನಿಸಿರಬೇಕು. ‘ಎಷ್ಟು ಓದ್ತೀಯೊ ಓದು. ಎಲ್ಲಿಗೆ ಹೋಗ್ತಿಯೊ ಹೋಗು. ನಾನಿದೀನಿ’ ಎಂದ. ಮೈಸೂರಿಗೆ ಹೋದೆ. ವಿಶ್ವವಿದ್ಯಾನಿಲಯದ ಹಾಸ್ಟೆಲ್ ತಿಂಗಳಿಗೆ ರೂ.250. ಅದರ ಮುಂದೆ ಮುಸ್ಲಿಂ ಹಾಸ್ಟೆಲಿನ ರೂ.120 ಸೋವಿ ಅನಿಸಿತು. ವರ್ಷಂಪ್ರತಿ ರೂ. ಐನೂರಂತೆ ಸಬ್ಜೆಕ್ಟ್ ಸ್ಕಾಲರ್‌ಶಿಪ್ ಸಿಗುತ್ತದೆ. ಪುಸ್ತಕದ ಗೌರವ ಸಂಭಾವನೆಯಾಗಿ ಕನ್ನಡ ಸಾಹಿತ್ಯ ಪರಿಷತ್ತು ರೂ. 500 ಕೊಟ್ಟಿದೆ. ಅಪ್ಪ ತಿಂಗಳಾ ರೂ. ನೂರು ಕಳಿಸಿದರೆ ಸಾಕು. ನಿಭಾಯಿಸಬಲ್ಲೆ ಅನಿಸಿತು. ಈ ಲೆಕ್ಕಾಚಾರದಲ್ಲಿ ಕನ್ನಡ ಎಂಎಗೆ ಸೇರಿಕೊಂಡೆ. ಅಡ್ಮಿಶನ್ ರಶೀದಿ ಹಿಡಿದು ಮುಸ್ಲಿಂ ಹಾಸ್ಟೆಲಿಗೆ ಹೋದೆ. ಕಚೇರಿಯಲ್ಲಿ ವಾರ್ಡನ್ ಇರಲಿಲ್ಲ. ಗುಮಾಸ್ತರಿಗೆ ಕೇಳಲು ಕ್ಯಾಂಪಸ್ಸಿನ ವಿಶಾಲ ಮೈದಾನದಲ್ಲಿ ವಾಕಿಂಗ್‌ಸ್ಟಿಕ್ ಹಿಡಿದು ವಿಹಾರ ಮಾಡುತ್ತಿದ್ದ ಒಬ್ಬ ವೃದ್ಧರನ್ನು ತೋರಿಸಿದರು. ಅವರನ್ನು ಹೋಗಿ ಅಡ್ಡಗಟ್ಟಿ ನಮಸ್ಕರಿಸಿದೆ:
“ಸಲಾಂ ಅಲೈಕುಂ“
“ವಾಲೇಕುಂ ಸಲಾಂ, ಕೋನ್ ಬ ತೂ? ಕ್ಯಾನಾಮ್? ಕಹಾಸಿ ಆಯಾ?”
“ಸರ್. ತರೀಕೆರೆ ಸೆ ಆಯಾ ಹ್ಞೂಂ. ಎಂಎ ಕೋರ್ಸು“
“ತರೀಕೆರೆ?” ಹುಬ್ಬು ಗಂಟಿಕ್ಕಿತು. ನಮ್ಮೂರಿನ ಕೆಲವು ವಿದ್ಯಾರ್ಥಿಗಳು ತಲೆನೋವಾಗಿದ್ದರು ಎಂದು ನಂತರ ಗೊತ್ತಾಯಿತು.
“ಕ್ಯಾಬಾ ಸಬೆಕ್ಟ್?”
“ಕನಡಾ ಸಾರ್“
‘ಕನಡಾ! ಕಾಂಟ್ ಬಿಲೀವ್? ತು ಮುಸಲ್ಮಾನ್ ಕ್ಯಾಬಾ?’
ಎಸೆಸೆಲ್ಸಿ ಮಾರ್ಕ್‌ಕಾರ್ಡು ತೋರಿಸಿದೆ. ಆದರೂ ನಂಬಿಕೆ ಹುಟ್ಟಲಿಲ್ಲ. ‘ಕಂಹಾ, ಸೂರಾ ಏ ಫಾತೆಹಾ ಪಡ್’ ಎಂದರು. ಇದು ಕುರಾನಿನ ಮೊದಲನೇ ಮಂತ್ರ. ನನ್ನಮ್ಮ ಕುರಾನು ಶಿಕ್ಷಕಿಯಾಗಿದ್ದರಿಂದಲೂ, ಸಂಜೆ ಕಲ್ಮಾ ಸೂರಗಳನ್ನು ಮುಗಿಸದ ಹೊರತು ಊಟ ಬೀಳುತ್ತಿರಲಿಲ್ಲವಾದ್ದರಿಂದಲೂ, ತಾರುಣ್ಯದಲ್ಲಿ ಧರ್ಮಭೀರುವಾಗಿದ್ದರಿಂದಲೂ, ಕುರಾನಿನ ಸೂರಾಗಳು ಜನಗಣಮನದಷ್ಟೆ ಕಂಠಸ್ಥವಾಗಿದ್ದವು. ಮಕ್ಕಳು ಮಗ್ಗಿ ಹೇಳುವಾಗಿನಂತೆ ಕೈಕಟ್ಟಿಕೊಂಡು ‘ಅಲಹಮ್ದು ಲಿಲ್ಲಾಹಿ ರಬಿಲ್ ಆಲಮೀನ್’ ಶುರು ಮಾಡಿ ಕುರಾನಿನ ಆಯತುಗಳಿಗೆ ವಿಶಿಷ್ಟವಾದ ರಾಗಲಯ ಏರಿಳಿತಗಳ ಸಮೇತ ಪಠಿಸಿದೆ. ಅಷ್ಟುಹೊತ್ತಿಗೆ ಅನೇಕ ಹುಡುಗರು ಸುತ್ತಿಕೊಂಡರು. ಮುಜುಗರವೂ ಹಾಸ್ಟೆಲ್ ಸೀಟು ತಪ್ಪುವ ಆತಂಕವೂ ಆಗುತ್ತಿತ್ತು. ವಾರ್ಡನರ ಮುಖದಲ್ಲಿ ನಂಬಿಕೆ ಕಂಡಿತು. ಅರ್ಜಿ ಮೇಲೆ ಸಹಿ ಮಾಡಿ ನಾಲ್ಕನೇ ನಂಬರಿನ ರೂಮನ್ನು ಅಲಾಟ್ ಮಾಡಿದರು. ‘ನೀನು ಹಾಸ್ಟೆಲಿನ ಚರಿತ್ರೆಯಲ್ಲೇ ಕನ್ನಡ ಎಂಎ ಓದೋಕೆ ಬಂದಿರೋ ವ್ಯಕ್ತಿ. ಚೆನ್ನಾಗಿ ಓದಬೇಕು’ ಎಂದರು.
ಹಾಸ್ಟೆಲ್, ಆಯಕಟ್ಟಿನ ಜಾಗೆಯಲ್ಲಿತ್ತು. ಎದುರಿಗೆ ಗಂಟೆಗಂಟೆಗೂ ಬೆಲ್ ಬಾರಿಸುತ್ತಿದ್ದ ಅಗ್ನಿಶಾಮಕ ದಳದ ಠಾಣೆ. ಅದರ ಬದಿಗೆ ಕುವೆಂಪು ಸಹಪಾಠಿಗಳಾದ ಅನಂತರಂಗಾಚಾರ್ಯರ ಮನೆ. ಅದರ ಹಿಂದಿನ ಮೇನುಗಳಲ್ಲಿ ಸಾರ್ವಜನಿಕ ಲೈಬ್ರರಿ. ಸಮತೆಂತೋ ತೆಂಗಿನತೋಟದಲ್ಲಿ ನಡೆವ ನಾಟಕಗಳು. ವಿಶ್ವವಿದ್ಯಾನಿಲಯದ ಈಜುಕೊಳ. ಹಿಂಬದಿ ದಿಬ್ಬದ ಮೇಲೆ ಮೈಸೂರು–ಚಾಮರಾಜನಗರ ರೈಲು ಹಳಿ. ಅದಕ್ಕೂ ಹಿಂದೆ ಮಹಾರಾಜ ಕಾಲೇಜು. ಬಲಪಕ್ಕಕ್ಕೆ ಎಸ್.ರಾಧಾಕೃಷ್ಣನ್ ಮೊದಲಾದ ಪ್ರಾಧ್ಯಾಪಕರು ವಾಸವಾಗಿದ್ದ ವಿಶಾಲ ಬಂಗಲೆಗಳು. ಅವನ್ನು ದಾಟಿದರೆ ಕುಕ್ಕರಹಳ್ಳಿ ಕೆರೆ; ಎಡಪಕ್ಕಕ್ಕೆ ಕನ್ನೇಗೌಡರ ಕೊಪ್ಪಲು. ಸರಸ್ವತಿ ಥಿಯೇಟರು. ರುಚಿಕರ ಚಹ ಕೊಡುತ್ತಿದ್ದ ಮಲೆಯಾಳಿ ಕ್ಯಾಂಟೀನು. ಪರಿಮಳ ಹಬ್ಬಿಸುತ್ತಿದ್ದ ಬಜ್ಜಿ, ವಡೆ ಹಾಕುವ ತಳ್ಳುಗಾಡಿ ಅಂಗಡಿ. ಜಟಕಾದಲ್ಲಿ ಕೂತು ರೈಲು ಹಿಡಿಯಲು ಶೂಟಿಂಗಿಗೆಂದು ಮದರಾಸಿಗೊ ಬೆಂಗಳೂರಿಗೊ ಹಾಸ್ಟೆಲಿನ ಮುಂದಿನಿಂದಲೇ ಹೋಗುತ್ತಿದ್ದ ಯಾವ ಪ್ರಭಾವಳಿಯೂ ಓಡಾಡುತ್ತಿದ್ದ ನಟ ಅಶ್ವತ್ಥರ ಮನೆ. ನಾವು ಅಗ್ನಿಶಾಮಕ ದಳದ ಕಾಂಪೌಂಡಿನ ಪಕ್ಕದಲ್ಲಿದ್ದ ಈಜುಕೊಳದ ರಸ್ತೆ ಹಿಡಿದು ಕುಕ್ಕರಹಳ್ಳಿಯನ್ನು ಹಾದು ಕ್ಯಾಂಪಸ್ಸಿಗೆ ಹೋಗುತ್ತಿದ್ದೆವು. ಕುಕ್ಕರಹಳ್ಳಿಯ ಬಳಿ ಕೈಲೊಂದು ಲೆದರ್ ಸೂಟ್‌ಕೇಸು ಹಿಡಿದು ತುಸುವೇ ಕುಂಟುತ್ತ ಬರುತ್ತಿದ್ದ ಪ್ರೊ.ಚೆನ್ನಯ್ಯನವರು ಸಿಗುತ್ತಿದ್ದರು.
ಹಳೇ ಮೈಸೂರು ಸೀಮೆಯಲ್ಲಿ ವೈದ್ಯಕೀಯ, ಇಂಜಿನಿಯರಿಂಗ್, ಎಂಎ, ಎಂಎಸ್ಸಿ, ಎಂಕಾಂ ಓದುವ ವಿದ್ಯಾರ್ಥಿಗಳೆಲ್ಲ ಸಾಮಾನ್ಯವಾಗಿ ಮುಸ್ಲಿಂ ಹಾಸ್ಟೆಲು ಸೇರುತ್ತಿದ್ದರು. ಹಾಸ್ಟೆಲಿನಲ್ಲಿ ಮೆಡಿಕಲ್, ಇಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಮೊದಲ ಆದ್ಯತೆ. ಅವರಿಗೆ ತಾರಸಿ ಹೊದಿಕೆಯ ಟೂ ಇನ್ ಒನ್ ಕೋಣೆಗಳು. ಬಳಿಕ ಮಾಸ್ಟರ‍್ಸ್ ಪದವಿಯವರಿಗೆ, ಹೆಂಚಿನ ಚಾವಣಿಯ ಫೋರ್ ಇನ್ ಒನ್ ಕೋಣೆಗಳು. ಸೀಟುಳಿದರೆ ಬಿಎ, ಬಿಕಾಂ, ಬಿಎಸ್ಸಿಗಳನ್ನು ಹೆಂಚಿನ ಕೋಣೆಗಳಲ್ಲಿ ಒಬ್ಬೊಬ್ಬರಂತೆ ಹಾಕುತ್ತಿದ್ದರು. ಕೇರಳ ಬ್ಲಾಕಿನಲ್ಲಿದ್ದ ವಯನಾಡು–ಕಲ್ಲಿಕೋಟೆಯ ಹುಡುಗರು ಪ್ಯಾರಾಮೆಡಿಕಲ್ ಮಾಡುತ್ತಿದ್ದರು. ಹಾಸ್ಟೆಲಿನಲ್ಲಿ ನಾಲ್ಕು ಅಂಗಿ ಎರಡು ಪ್ಯಾಂಟುಗಳಲ್ಲಿ ವರ್ಷ ದಾಟಿಸುವವರು ಸಾಕಷ್ಟಿದ್ದರು. ಇವರ ಜತೆ ಚಿಕ್ಕಮಗಳೂರು ಹಾಸನ ಸೀಮೆಯಿಂದ ಕಾಫಿ ಪ್ಲಾಂಟರುಗಳು ಜಮೀನುದಾರ ಕುಟುಂಬಗಳಿಂದ ಬಂದವರೂ ಇದ್ದರು. ಅವರನ್ನು ಹಾಸ್ಟೆಲಿಗೆ ಬಿಡಲು ಮನೆಯಿಂದ ಕಾರು ಬರುತ್ತಿದ್ದವು. ಸೇವಕರು ರೂಮಿನಲ್ಲಿ ಸಾಮಾನು ಜೋಡಿಸಿಡುತ್ತಿದ್ದರು. ಶೆಲ್ಛುಗಳನ್ನು ಒರೆಸಿ ಸ್ವಚ್ಛಗೊಳಿಸುತ್ತಿದ್ದರು. ಈ ಹುಡುಗರು ಚಂದದ ವಸ್ತ್ರಗಳನ್ನು ಧರಿಸುತ್ತಿದ್ದರು. ಮುಖಕ್ಕೆ, ಮೈಕೈಗೆ, ತಲೆಗೂದಲನ್ನು ಒಪ್ಪವಾಗಿ ಕೂರಿಸಲು, ಅಲಾಯಿದ ಕ್ರೀಮುಗಳು. ಮಲಗುವಾಗ ರಾತ್ರಿಯುಡುಪು. ಐದಾರು ಜತೆ ಶೂ. ತಿಂಗಳಿಡೀ ಪುನರುಕ್ತಿಯಾಗದಂತೆ ಉಡುವಷ್ಟು ಶರ್ಟು. ಸಂಜೆಯಾದೊಡನೆ ಇಸ್ತ್ರಿಬಟ್ಟೆ ಧರಿಸಿ ಸೆಂಟು ಪೂಸಿಕೊಂಡು ಸಯ್ಯಾಜಿರಾವ್ ರಸ್ತೆಯಲ್ಲಿ ಚೈನೀ ತಿರುಗಲು ತೆರಳುತ್ತಿದ್ದರು. ಕೆಲವರಿಗೆ ಪ್ರೇಮಿಗಳೂ ಇರುತ್ತಿದ್ದರು. ಉರ್ದು ಎಂಎಗೆ ಬಂದಿದ್ದ ಒಬ್ಬ ದಡ್ಡನಾಗಿದ್ದು, ಸಿನಿಮಾ ನಟನಂತಿದ್ದ. ಇವನಿಗೆ ಊರಲ್ಲೂ ವಿಭಾಗದಲ್ಲೂ ಪ್ರೇಮಿಗಳಿದ್ದರು. ಇವರು ಹಾಸ್ಟೆಲಿನ ಅಡುಗೆಯವರಿಗೆ ಭಕ್ಷೀಸು ಕೊಡುತ್ತಿದ್ದರಿಂದ, ಒಳ್ಳೆಯ ಮಾಂಸದ ಪೀಸು ಸಿಗುತ್ತಿದ್ದವು. ತಡವಾಗಿ ಬಂದರೂ ಊಟ ಕಾದಿರಿಸಲಾಗುತ್ತಿತ್ತು.
ಹಾಸ್ಟೆಲಿನಲ್ಲಿ ಟಿಪ್ಪು ಎಂಬ ಜಗಳಗಂಟ ಅಡುಗೆಯವನಿದ್ದನು. ಆತ ಸಿರಿವಂತ ಹುಡುಗರನ್ನು ಓಲೈಸುತ್ತಿದ್ದನು. ಅವನ ಕೈರುಚಿಗಾಗಿ ಅವನನ್ನು ಸಹಿಸಿಕೊಂಡಿದ್ದರು. ಹಾಸ್ಟೆಲಿನಲ್ಲಿ ದಿನಬಿಟ್ಟು ದಿನ ಮಾಂಸ ಮೊಟ್ಟೆ ಇರುತ್ತಿದ್ದವು. ತಿಂಡಿಗೆ ಬಿಸಿಕಾವಲಿಯ ಮೇಲಿಂದ ಗರಿಗರಿಯಾದ ಪದರಗಳ ಗೋಧಿ ಪರೋಟದ ಮೇಲೆ ಹಸಿಮೊಟ್ಟೆ ಹಾಕಿ ಬೇಯಿಸಿದ ಆಮ್ಲೆಟ್ ಮತ್ತು ಗಟ್ಟಿಬೇಳೆ. ಬೀಫ್ ಸುಕ್ಕಾ ತೆಗೆದುಕೊಂಡರೆ ಪ್ರತಿಪ್ಲೇಟಿಗೆ ನಾಲ್ಕಾಣೆಯಂತೆ ಪತ್ಯೇಕ ಛಾರ್ಜು. ಶುಕ್ರವಾರ ಮಧ್ಯಾಹ್ನ ಮಟನ್ ಖುರ್ಮ–ಪಲಾವು. ಪ್ರತಿ ಭಾನುವಾರ ಮಿನಿ ಡಿನ್ನರ್. ತಿಂಗಳ ಕೊನೆಯ ಭಾನುವಾರ ಗ್ರ್ಯಾಂಡ್ ಡಿನ್ನರ್. ಇದರಲ್ಲಿ ಬಿರಿಯಾನಿ, ಮೊಸರು ಪಚಡಿ, ಗೋಡಂಬಿ, ದ್ರಾಕ್ಷಿ ಖೋವಾ ಹಾಕಿದ ಪಾಯಸ, ಬೇಯಿಸಿದ ಮೊಟ್ಟೆ, ದಾಲ್, ಖುರ್ಮ, ಬೀಡಾ–ಬಾಳೆಹಣ್ಣು ಇರುತ್ತಿದ್ದವು. ಆ ದಿನ ಪ್ರತಿಯೊಬ್ಬರೂ ಶಕ್ತ್ಯನುಸಾರ ಗೆಳೆಯರನ್ನು ಕರೆದುಕೊಂಡು ಬರುತ್ತಿದ್ದರು. ಈ ಗೆಳೆಯರು ಎರಡು ವರ್ಷಕ್ಕೆ ಧರ್ಮಾಂತರ ಮಾಡಿಕೊಂಡು ಹಾಸ್ಟೆಲಿನ ಊಟ ಮಾಡಿಕೊಂಡಿರಬಹುದೇ ಎಂದು ಕೇಳುತ್ತಿದ್ದರು. ಈ ಮಹಾಭೋಜನದ ದಿನ ನಾವು ಮಧ್ಯಾಹ್ನ ಎರಡು ತುತ್ತು ತಿಂದು, ಹೊಟ್ಟೆ ಖಾಲಿ ಇರಿಸುತ್ತಿದ್ದೆವು. ಡಿನ್ನರ್ಗೆ ಹತ್ತು ನಿಮಿಷ ಮೊದಲೇ ಡೈನಿಂಗ್ ಹಾಲಿನ ಆಜುಬಾಜು ಸುಳಿದಾಡುತ್ತಿದ್ದೆವು. ಅಲ್ಯುಮಿನಿಯಮ್ಮಿನ ಶೀಟ್ ಹಾಸಿದ್ದ ಡೈನಿಂಗ್ ಟೇಬಲಿನ ಮೇಲೆ ಬೋಗುಣಿ ಇಡುವ ಸಪ್ಪಳ ಬಂದೊಡನೆ ಒಳನುಗ್ಗುತ್ತಿದ್ದೆವು.
ಹಾಸ್ಟೆಲಿನವರಿಗೆ ಕನ್ನಡದ ವಿದ್ಯಾರ್ಥಿಯೊಬ್ಬನ ಅಸ್ತಿತ್ವ ಗೊತ್ತಾಗಿದ್ದೇ, ನಾನು ಇಂಟರ್ ಹಾಸ್ಟೆಲ್ ಭಾಷಣ–ಪ್ರಬಂಧ ಸ್ಪರ್ಧೆಗಳಲ್ಲಿ ಗೆದ್ದು ಬಹುಮಾನ ತಂದ ಬಳಿಕ. ಚಾಮರಾಜ ಒಡೆಯರ್ ಕಾಲದ ಪ್ರಜಾಪ್ರತಿನಿಧಿ ಸಭೆಯ ಸದಸ್ಯರೂ ದಿವಾನ್ ರಂಗಾಚಾರ್ಲು ಸಮಕಾಲೀನರೂ ಆದ ವೆಂಕಟಕೃಷ್ಣಯ್ಯನವರ ಸ್ಮರಣೆಯಲ್ಲಿ ಕಟ್ಟಿದ ಒಂದು ಹಾಸ್ಟೆಲಿತ್ತು. ಅಲ್ಲಿ ನಡೆವ ಸ್ಪರ್ಧೆಗಳಲ್ಲಿ ನನಗೆ ಶೀಲ್ಡು ದೊರಕುತ್ತಿತ್ತು. ಅದನ್ನು ವಾರ್ಡನರು ಡೈನಿಂಗ್ ಹಾಲಿನಲ್ಲಿ ಎಲ್ಲರಿಗೂ ಕಾಣುವಂತೆ ಇಡುತ್ತಿದ್ದರು. ಎಂಎಯಲ್ಲಿ ರ‍್ಯಾಂಕನ್ನು ಪದಕಗಳನ್ನು ಪಡೆದಿದ್ದು ವಾರ್ಡನರಿಗೆ ತುಂಬ ಖುಷಿ ಕೊಟ್ಟಿತು. ಘಟಿಕೋತ್ಸವದ ಸುದ್ದಿಯನ್ನು ಪತ್ರಿಕೆಗಳೂ ದೊಡ್ಡದಾಗಿ ಹಾಕಿದ್ದವು. ಹಾಸ್ಟೆಲ್ ಡೇ ದಿನ ನನಗೆ ಮರ್ಯಾದೆ ಸಲ್ಲಿಕೆಯಿತ್ತು. ರ್ಯಾಂಕ್ ಗಳಿಸುವುದಕ್ಕೆ ಟೂ ಇನ್ ಒನ್ ರೂಮೇ ಬೇಕೆಂದು ಹಟಮಾಡುವ ವಿದ್ಯಾರ್ಥಿಗಳನ್ನು ಖಂಡಿಸುತ್ತ ವಾರ್ಡನರು ನನ್ನ ನಿದರ್ಶನ ನೀಡಿದರು. ಸನ್ಮಾನ ಸ್ವೀಕರಿಸಿ ಉರ್ದುವಿನಲ್ಲಿ ಮಾತು ಶುರುಮಾಡಿದೆ. ಅತಿಥಿಗಳಾಗಿದ್ದ ಮಂತ್ರಿ ಅಜೀಜ್ ಸೇಟರು ‘ಕನ್ನಡದಲ್ಲೇ ಮಾತಾಡು’ ಎಂದರು. ಆಶ್ರಯ ಕೊಟ್ಟ ಹಾಸ್ಟೆಲಿಗೆ ಕೃತಜ್ಞತೆ ಸಲ್ಲಿಸಿದೆ. ಪ್ರವೇಶ ಕಾಲಕ್ಕೆ ಕನ್ನಡ ವಿದ್ಯಾರ್ಥಿ ಎಂಬ ಕಾರಣಕ್ಕೆ ಧಾರ್ಮಿಕ ಪರೀಕ್ಷೆ ಮಾಡಿದ್ದು ತಪ್ಪು. ಕಲಿಯಲು ಬರುವ ವಿದ್ಯಾರ್ಥಿಗಳಿಗೆ ಧಾರ್ಮಿಕ ಪರೀಕ್ಷೆ ಮಾನದಂಡವಾಗಬಾರದು ಎಂದೆ. ಈ ಬಗ್ಗೆ ತಮ್ಮ ಪ್ರಸ್ತಾವನ ಭಾಷಣದಲ್ಲಿ ಪರಿತಾಪ ವ್ಯಕ್ತಪಡಿಸಿದ್ದ ವಾರ್ಡನ್ ಅವರಿಗೆ ನೋವಾಗಿರಬೇಕು. ವಿಷಾದಭಾವದಲ್ಲಿ ಕುಳಿತಿದ್ದರು. ನನಗೂ ಈ ಮಾತನ್ನು ನುಂಗಬೇಕಿತ್ತು ಅನಿಸಿತು. ಆದರೆ ಅದು ಎದೆಯಲ್ಲಿ ಮುರಿದ ಮುಳ್ಳಂತೆ ಖಟಕವಾಡುತ್ತಿತ್ತು. ಅದನ್ನು ತೆಗೆದು ನಿರಾಳವಾಗಿ ಉಸಿರಾಡಿದೆ.
ಈಚೆಗೆ ಮೈಸೂರಿಗೆ ಹೋದಾಗ ಹಾಸ್ಟೆಲಿಗೆ ಹೋದೆ. ನನ್ನ ಬಾಳನ್ನು ರೂಪಿಸಿದ ಕನ್ನಡ ಅಧ್ಯಯನ ಸಂಸ್ಥೆಯಷ್ಟೇ ಇದಕ್ಕೂ ಪವಿತ್ರ ಸ್ಥಾನವಿದೆ. ಸುತ್ತ ಶಾಪಿಂಗ್ ಮಾಲುಗಳನ್ನು ಕಟ್ಟಿ, ಅದರ ಗುರುತೇ ಸಿಗದಂತೆ ಚಹರೆ ಬದಲಾಗಿತ್ತು. ನಾವಿದ್ದ ಹೆಂಚಿನ ರೂಮುಗಳನ್ನು ಕೆಡವಿ ಬಹುಮಹಡಿ ಕಟ್ಟಡಗಳು ಬಂದಿವೆ. ಕಟ್ಟಡಗಳ ನಡುವಿನ ವಿಶಾಲ ಮೈದಾನವನ್ನು ಹಾಗೆಯೇ ಉಳಿಸಿಕೊಳ್ಳಲಾಗಿದೆ. ಅದರ ಹುಲ್ಲಹಾಸಿನೊಳಗೆ ಅಡ್ಡಾಡಿದೆ. ಹೇಳುವವರೂ ಕೇಳುವವರೂ ಯಾರೂ ಇಲ್ಲ. ಅಜ್ಞಾತನಾಗಿರುವ ಸುಖದುಃಖ ಅನುಭವಿಸಿದೆ.