ನವೀನ್ ಡಿಸೋಜ
೪ ತಿಂಗಳಿನಿಂದ ಬಂದ್ ಆಗಿದ್ದ ಮುಗಿಲುಪೇಟೆ ಖ್ಯಾತಿಯ ಪ್ರವಾಸಿ ತಾಣ ಅಭಿವೃದ್ಧಿ
ಕಾಮಗಾರಿ ಪೂರ್ಣಗೊಂಡ ಹಿನ್ನೆಲೆಯಲ್ಲಿ ಪ್ರವಾಸಿಗರಿಗೆ ಅವಕಾಶ
ಮಡಿಕೇರಿ: ರಸ್ತೆ ಅಭಿವೃದ್ಧಿ ಹಿನ್ನೆಲೆಯಲ್ಲಿ ಕೆಲವು ತಿಂಗಳಿಂದ ಪ್ರವಾಸಿ ತಾಣ ಮಾಂದಲ್‌ಪಟ್ಟಿಗೆ ಪ್ರವಾಸಿಗರಿಗೆ ವಿಧಿಸಿದ್ದ ನಿರ್ಬಂಧವನ್ನು ತೆರವುಗೊಳಿಸಲಾಗಿದ್ದು, ಪ್ರಕೃತಿ ರಮಣೀಯ ತಾಣ ಮುಗಿಲುಪೇಟೆ ಪ್ರವಾಸಿಗರಿಗೆ ಮುಕ್ತವಾಗಿದೆ.
ಮಡಿಕೇರಿಯ ನೈಸರ್ಗಿಕ ತಾಣ ಮಾಂದಲ್‌ಪಟ್ಟಿ ಮತ್ತೆ ಪ್ರವಾಸಿಗರ ವೀಕ್ಷಣೆಗೆ ತೆರೆದುಕೊಂಡಿದೆ. ಮಾಂದಲ್‌ಪಟ್ಟಿ ಗೇಟ್‌ನಿಂದ ಒಳಭಾಗದಲ್ಲಿ ಸಂಪೂರ್ಣ ಹದಗೆಟ್ಟಿದ್ದ ಕಚ್ಚಾ ರಸ್ತೆಯ ದುರಸ್ತಿಗಾಗಿ ಕಳೆದ ಫೆಬ್ರವರಿ ತಿಂಗಳಿನಿಂದ ಮಾಂದಲ್ ಪಟ್ಟಿಗೆ ಪ್ರವಾಸಿಗರ ಪ್ರವೇಶವನ್ನು ಸಂಪೂರ್ಣ ನಿಷೇಧಿಸಲಾಗಿತ್ತು.
ಇದೀಗ ರಸ್ತೆಯಲ್ಲಿ ಅಲ್ಲಲ್ಲಿ ಕಲ್ಲು ಹಾಸು ಅಳವಡಿಕೆ, ಉಬ್ಬು ತಗ್ಗುಗಳ ಸರಿಪಡಿಸುವ ಕಾಮಗಾರಿ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಪ್ರವಾಸಿಗರ ಭೇಟಿಗೆ ಅವಕಾಶ ಕಲ್ಪಿಸಲಾಗಿದೆ. ಫೆಬ್ರವರಿ ತಿಂಗಳಲ್ಲಿ ಪ್ರವಾಸಿಗರೊಬ್ಬರಿಂದ ಜೀಪ್ ಚಾಲಕ ಹೆಚ್ಚಿನ ಹಣ ಪಡೆದ ವಿಚಾರ ದೊಡ್ಡ ಮಟ್ಟದ ಚರ್ಚೆಗೆ ಕಾರಣವಾಗಿತ್ತು. ಪೊಲೀಸ್ ಇಲಾಖೆ ಜೀಪ್ ಚಾಲಕರ ಸಭೆ ಕರೆದು ಎಚ್ಚರಿಕೆ ನೀಡಿತ್ತು. ಇದಾದ ಬಳಿಕ ಅರಣ್ಯ ಇಲಾಖೆ ಅಲ್ಲಿನ ರಸ್ತೆ ದುರಸ್ತಿಗಾಗಿ ಮಾಂದಲ್‌ಪಟ್ಟಿ ಪ್ರವೇಶವನ್ನು ನಿರ್ಬಂಧಿಸಿತ್ತು. ಆರಂಭದಲ್ಲಿ ೧೫ ದಿನಗಳ ಬಳಿಕ ಮತ್ತೆ ತೆರೆಯುವುದಾಗಿ ಹೇಳಲಾಗಿತ್ತಾದರೂ ಕಾಮಗಾರಿ ಪೂರ್ಣವಾಗದ ಹಿನ್ನೆಲೆಯಲ್ಲಿ ನಿರ್ಬಂಧ ಮುಂದುವರಿದಿತ್ತು. ಇದೀಗ ಹೆಚ್ಚುಕಮ್ಮಿ ನಾಲ್ಕು ತಿಂಗಳ ಬಳಿಕ ಪ್ರವಾಸಿತಾಣ ಮತ್ತೆ ಓಪನ್ ಆಗಿದೆ.
ಬೆಳಗಿನ ವೇಳೆ ಜೀಪುಗಳ ರಭಸದ ಸಂಚಾರದಿಂದ ಇಲ್ಲಿನ ಸ್ಥಳೀಯರ ವಾಹನ ಗಳು, ಬಸ್‌ಗಳ ಸಂಚಾರಕ್ಕೆ ಸಮಸ್ಯೆ ಯಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಬೆಳಿಗ್ಗೆ ಸಮಯ ಬದಲಾವಣೆ ಮಾಡಲು ಪೊಲೀಸ್ ಇಲಾಖೆ ಕೋರಿಕೊಂಡಿತ್ತು. ಆದರೆ ಇತ್ತೀಚೆಗೆ ಅರಣ್ಯ ಇಲಾಖೆ ಅಧಿಕಾರಿಗಳ ಸಮ್ಮುಖದಲ್ಲಿ ಜೀಪ್ ಚಾಲಕರು ಹಾಗೂ ಸ್ಥಳೀಯ ಅಲ್ಲಿನ ಗ್ರಾಮ ಸ್ಥರನ್ನು ಕರೆಸಿ ಮಡಿಕೇರಿ ಶಾಸಕ ಡಾ.ಮಂಥರ್ ಗೌಡ ಸಭೆ ನಡೆಸಿದ್ದರು. ಈ ಸಭೆಯಲ್ಲಿ ಜೀಪ್ ಚಾಲಕರಿಗೆ ಹಲವು ಸಲಹೆ, ಎಚ್ಚರಿಕೆಗಳನ್ನು ನೀಡಲಾಗಿದ್ದು, ಬೆಳಿಗ್ಗೆ ೬ ಗಂಟೆಗೆ ಮಾಂದಲ್‌ಪಟ್ಟಿ ತೆರೆಯಲು ಅರಣ್ಯ ಇಲಾಖೆಗೆ ಸೂಚಿಸಲಾಗಿದೆ. ಪ್ರವಾಸಿಗರು, ಗ್ರಾಮಸ್ಥರೊಂದಿಗೆ ಸೌಜನ್ಯದಿಂದ ವರ್ತಿಸುವುದು, ಅಪಾಯಕಾರಿ ಚಾಲನೆ ಮಾಡದಂತೆ ಜೀಪು ಚಾಲಕರಿಗೆ ತಿಳಿ ಹೇಳಲಾಗಿದ್ದು, ಅವರು ಒಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಸೀಜನ್ ಕಳೆದುಕೊಂಡ ಜೀಪ್ ಚಾಲಕರು…” ೧೫ ದಿನಗಳ ಕೆಲಸವೆಂದು ಮುಚ್ಚಲ್ಪಟ್ಟ ಮಾಂದಲ್‌ಪಟ್ಟಿ ಗೇಟ್ ತೆರೆಯಲು ಬರೋಬ್ಬರಿ ೪ ತಿಂಗಳು ಹಿಡಿದಿದೆ. ಈ ೪ ತಿಂಗಳ ಕಾಲ ಬೇಸಿಗೆ ಪ್ರವಾಸೋದ್ಯಮದ ದುಡಿಮೆಯೇ ನೂರಾರು ಜೀಪ್ ಚಾಲಕರಿಗೆ ಇಲ್ಲವಾಗಿದೆ. ಹೀಗಾಗಿ ಮುಂದಿನ ದಿನಗಳಲ್ಲಿ ಪ್ರವಾಸಿತಾಣಗಳಲ್ಲಿ ಅಭಿವೃದ್ಧಿ ಕಾರ್ಯ ಕೈಗೊಂಡರೂ ಪ್ರವಾಸಿಗರು ಹೆಚ್ಚಿರುವ ಸಂದರ್ಭದಲ್ಲಿ ನಿರ್ಬಂಧ ಹೇರಬಾರದು, ಪರ್ಯಾಯ ಮಾರ್ಗ ವ್ಯವಸ್ಥೆ ಮಾಡಬೇಕು ಎಂಬ ಬೇಡಿಕೆ ಜೀಪು ಚಾಲಕರದ್ದಾಗಿದೆ.
ಜೀಪು ಚಾಲಕರ ವರ್ತನೆ ಬದಲಾಗಲಿ…:
ಮಾಂದಲ್‌ಪಟ್ಟಿ ಬಂದ್ ಆಗಲು ರಸ್ತೆ ದುರಸ್ತಿ ನೆಪವಾದರೂ, ಚಾಲಕನೋರ್ವ ಪ್ರವಾಸಿಗರಿಂದ ಹೆಚ್ಚಿನ ಹಣ ಪಡೆದ ವಿಚಾರವೂ ಕಾರಣವಾಗಿದೆ. ಈ ಹಿಂದೆಯೂ ಅಲ್ಲಿ ಪ್ರವಾಸಿಗರೊಂದಿಗೆ ಗಲಾಟೆ, ಜೀಪ್ ಚಾಲಕರ ಮಧ್ಯೆಯೇ ಬಡಿದಾಟ, ಗ್ರಾಮಸ್ಥರೊಂದಿಗೆ ಚಕಮಕಿಯಂತಹ ಘಟನೆಗಳು ನಡೆದಿವೆ. ಎಲ್ಲ ಕಾರಣಗಳಿಂದ ಹಲವು ಚಾಲಕರು ಬೇಸಿಗೆ ದುಡಿಮೆಯನ್ನೇ ಕಳೆದುಕೊಂಡಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಾದರೂ ಪ್ರವಾಸಿಗರೊಂದಿಗೆ ಸೌಜನ್ಯದಿಂದ ವರ್ತಿಸುವಂತಾಗಲಿ. ಯಾವುದೇ ಸಮಸ್ಯೆ ಮಾಡಿಕೊಳ್ಳದೆ ದುಡಿಮೆ ಮುಂದುವರಿಸಲಿ ಎಂಬುದು ಸ್ಥಳೀಯರು, ಪ್ರವಾಸೋದ್ಯಮಿಗಳ ಸಲಹೆಯಾಗಿದೆ.
” ಮಾಂದಲ್‌ಪಟ್ಟಿ ಗೇಟ್‌ನಿಂದ ಒಳಭಾಗದಲ್ಲಿನ ರಸ್ತೆಯಲ್ಲಿ ದಿಣ್ಣೆಗಳನ್ನು ಸಮತಟ್ಟುಗೊಳಿಸುವುದು, ಅಗತ್ಯವಿದ್ದ ಕಡೆ ಕಲ್ಲು ಹಾಸು ಅಳವಡಿಸುವ ಕೆಲಸ ಮಾಡಬೇಕಾಗಿತ್ತು. ಹಾಗಾಗಿ ಪ್ರವಾಸಿತಾಣವನ್ನು ಬಂದ್‌ಮಾಡಲಾಗಿತ್ತು. ಇದೀಗ ಕಾಮಗಾರಿ ಮುಗಿದಿದ್ದು, ಪ್ರವಾಸಿಗರಿಗೆ ಇದ್ದ ನಿರ್ಬಂಧವನ್ನು ತೆರವುಗೊಳಿಸಿದ್ದೇವೆ. ಶಾಸಕರ ಸೂಚನೆಯಂತೆ ಬೆಳಿಗ್ಗೆ ೬ ಗಂಟೆಯಿಂದಲೇ ಗೇಟ್ ತೆರೆಯಲಿದೆ.”
-ಅಭಿಷೇಕ್, ಉಪ ಅರಣ್ಯ ಸಂರಕ್ಷಣಾಕಾರಿ, ಮಡಿಕೇರಿ




