ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ!
ವಿಶ್ವದಲ್ಲೇ ಶ್ರೇಷ್ಠ ಮಟ್ಟದ ಶ್ರೀಗಂಧ ಬೆಳೆಯುವ ರೈತರ ಪಟ್ಟಿಯಲ್ಲಿ ನಮ್ಮ ಕರುನಾಡಿನ ಹಲವು ರೈತರ ಹೆಸರುಗಳಿವೆ. ಹಾಸನ ಜಿಲ್ಲೆ ಅರಕಲಗೂಡು ತಾಲ್ಲೂಕು ದೊಡ್ಡಮಗ್ಗೆಯ ರಂಗಸ್ವಾಮಿ ಅವರ ದ್ದು ತೋಟ ಎಂದರೆ ಅದು ಅತ್ಯುತ್ತಮ ದರ್ಜೆ ಶ್ರೀಗಂಧ ಎಂದು ನಿಖರವಾಗಿ ಹೇಳುವಷ್ಟರ ಮಟ್ಟಿಗೆ ಅವರು ಬೆಳೆಯುತ್ತಾರೆ. ಕೊಳ್ಳೇಗಾಲ ಸಮೀಪ ಗೌತಮ್ ಕದಂ ಅವರು ಬೆಳೆಯುವ ಶ್ರೀಗಂಧಕ್ಕೆ ಮನಸೋಲದವರೇ ಇಲ್ಲ. ವಿಜಯಪುರ ಜಿಲ್ಲೆಯ ಕೃಷ್ಣಾ ನದಿ ತೀರದ ಕೊಲ್ಹಾರಕ್ಕೆ ಹೊಂಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ! ದಿಕೊಂಡಂತೆ ಸಿದ್ದುಬಾಲಗೊಂಡ ಅವರು ೧೦ ಎಕರೆಯಲ್ಲೇ ಮಾದರಿ ಎನ್ನುವಂತೆ ರೂಪಿಸಿರುವ ಶ್ರೀಗಂಧ ತೋಟ ಹತ್ತಾರು ರೈತರಿಗೆ ಪ್ರೇರಣೆ ನೀಡಿದೆ. ಈ ರೈತರು ಶ್ರೀಗಂಧ ಬೆಳೆದು ಲಕ್ಷ/ ಕೋಟಿಗಟ್ಟಲೇ ಆದಾಯವನ್ನೂ ಪಡೆದು ಆಗಾಗ ಯಶಸ್ಸಿನ ಕಥನಗಳನ್ನು ರೈತರ ಮುಂದೆ ಇಡುತ್ತಾರೆ. ಈ ಯಶಸ್ಸಿನ ಕಥೆಗಳನ್ನೆಲ್ಲಾ ಕೇಳಿದಾಗ ಖುಷಿಯೇನೂ ಅನ್ನಿಸುತ್ತದೆ. ಈ ರೈತರು ವಿಶ್ವದ ನಾನಾ ಮೂಲೆಗಳಲ್ಲಿ ಕರುನಾಡಿನ ಶ್ರೀಗಂಧದ ವಾಸನೆಯನ್ನು ಪಸರಿಸಿದರೂ ಆತಂಕದ ಪರಿಧಿಯಿಂದ ಹೊರ ಬರಲು ಮಾತ್ರ ಆಗುತ್ತಲೇ ಇಲ್ಲ. ಸರ್ಕಾರ ರೈತರಿಗಾಗಿ ರೂಪಿಸುವ ನೀತಿಗಳು ಹಾಗೂ ಕಾಲಕಾಲಕ್ಕೆ ಮಾಡುವ ಬದಲಾವಣೆಗಳು ಆತಂಕದ ಪ್ರಮಾಣವನ್ನೂ ಹೆಚ್ಚಿಸುತ್ತಲೇ ಇವೆ. ವಾರದ ಹಿಂದೆ ಕರ್ನಾಟಕ ಸರ್ಕಾರ ಶ್ರೀಗಂಧ ನೀತಿ ೨೦೦೨ಕ್ಕೆ ಬದಲಾವಣೆ ಮಾಡಿ ಕರ್ನಾಟಕ ರಾಜ್ಯ ಶ್ರೀಗಂಧ ನೀತಿ ೨೦೨೨ ಅನ್ನು ಪ್ರಕಟಿಸಿತು.
ಹೆಚ್ಚುತ್ತಿರುವ ಬೇಡಿಕೆಯನ್ನು ಪೂರೈಸಲು, ಹೆಚ್ಚಿನ ರೈತರನ್ನು ಶ್ರೀಗಂಧವನ್ನು ಬೆಳೆಯಲು ಪ್ರೋತ್ಸಾಹಿಸಲು ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುವುದು ಹೊಸ ನೀತಿಯ ಪ್ರಮುಖಾಂಶ. ಶ್ರೀಗಂಧವನ್ನು ಬೆಳೆಯಲು, ರೈತರು ವ್ಯಾಪ್ತಿಯ ಅರಣ್ಯ ಕಚೇರಿಗಳಲ್ಲಿ ನೋಂದಾಯಿಸಿಕೊಳ್ಳಬೇಕು. ರೈತರು ತಾವು ನೆಡಲು ಉದ್ದೇಶಿಸಿರುವ ಸಸಿಗಳ ಸಂಖ್ಯೆಯ ವಿವರಗಳನ್ನು ನೀಡಬೇಕು ಮತ್ತು ಮರಗಳನ್ನು ಕಡಿಯಲು ಇಲಾಖೆಯಿಂದ ಅನುಮತಿ ಪಡೆಯಬೇಕು. ಅರಣ್ಯ ಇಲಾಖೆ ನಡೆಸುವ ಡಿಪೋಗಳಲ್ಲಿ ಮಾತ್ರ ಶ್ರೀಗಂಧದ ಮರದ ದಿಮ್ಮಿಗಳನ್ನು ಮಾರಾಟ ಮಾಡಲು ರೈತರಿಗೆ ಅವಕಾಶ ನೀಡಲಾಗಿದೆ. ಈ ನೀತಿಯು ಶ್ರೀಗಂಧ ಬೆಳೆಯಲು ಇರುವ ಎಲ್ಲಾ ನಿರ್ಬಂಧಗಳನ್ನು ತೆಗೆದುಹಾಕುತ್ತದೆ. ಜೊತೆಗೆ ಜನರು ಖಾಸಗಿ ಭೂಮಿಯಲ್ಲಿ ಶ್ರೀಗಂಧವನ್ನು ಬೆಳೆದು ಮುಕ್ತ ಮಾರುಕಟ್ಟೆಯಲ್ಲಿ ಮಾರಾಟ ಮಾಡಲು ಅನುವು ಮಾಡಿಕೊಡುತ್ತದೆ ಎಂದು ಹೊಸ ನೀತಿ ಹೇಳುತ್ತದೆ. ಜತೆಯಲ್ಲಿ ಹೊಸ ನೀತಿಯ ಪ್ರಕಾರ ಶ್ರೀಗಂಧದ ಮರಗಳು ಕಳ್ಳತನವಾಗುವುದನ್ನು ತಡೆಯಲು ಅರಣ್ಯ ಇಲಾಖೆ ರಕ್ಷಣೆ ನೀಡಲಿದೆ. ಮರಗಳಲ್ಲಿ ಮೈಕ್ರೊಚಿಪ್ ಅಳವಡಿಸಿ ಕಳ್ಳತನವಾದರೂ ಪತ್ತೆ ಹಚ್ಚಲು ನೆರವಾಗಲಿದೆ ಎನ್ನುವುದು ಸರ್ಕಾರ ನೀಡಿದ ಹೊಸ ನೀತಿಯ ವಿವರ.
ಮುಕ್ತ ಮಾರುಕಟ್ಟೆ ವಾತಾವರಣ ಜಗತ್ತಿನೆಲ್ಲೆಡೆ ಇರುವಾಗ ಅನಿವಾರ್ಯವಾಗಿ ರೈತಾಪಿ ವಲಯವೂ ಅದಕ್ಕೆ ತೆರೆದುಕೊಂಡರೆ ಲಾಭದ ಪ್ರಮಾಣ ಹೆಚ್ಚು ಪಡೆಯಬಹುದು ಎನ್ನುವ ನಿರೀಕ್ಷೆಗಳು ನಿಜವಾದರೂ ಭಾರತದ ಮಟ್ಟಿಗೆ ಆ ರೈತನನ್ನು ಶೈಕ್ಷಣಿಕ, ಆರ್ಥಿಕ ಅಂಶಗಳನ್ನಾಧರಿಸಿ ಸುಸ್ಥಿರಗೊಳಿಸದೇ ಇದ್ದರೆ ಅದು ಮಧ್ಯವರ್ತಿಗಳ ಪಾಲಾಗಲಿದೆ ಎನ್ನುವುದೂ ನಮ್ಮ ಇತಿಹಾಸದ ಪುಟಗಳನ್ನು ತಿರುವಿ ಹಾಕಿದರೆ ಗೊತ್ತಾಗುತ್ತದೆ. ಏಕೆಂದರೆ ಶ್ರೀಗಂಧಕ್ಕೆ ಬೇಡಿಕೆ ಹೆಚ್ಚಿದಂತೆ ಶ್ರೀಗಂಧ ಖರೀದಿಸುವ ವ್ಯಾಪಾರಿಗಳ ಪ್ರಮಾಣವೂ ಹೆಚ್ಚಿದೆ. ಮೈಸೂರು ಹಾಗೂ ಬೆಂಗಳೂರಿನಲ್ಲಿರುವ ಶ್ರೀಗಂಧದ ಕಾರ್ಖಾನೆಯಲ್ಲದೇ ಕೇರಳದ ಕಾರ್ಖಾನೆಗಳಿಗೂ ಹೋಗುತ್ತಿತ್ತು. ಈಗ ಮಧ್ಯಪ್ರದೇಶದ ಉಜ್ಜಯಿನಿ, ಗುಜರಾತಿನ ಕೆಲ ಕಡೆ ಹೊಸ ಉದ್ಯಮಗಳು ಬೆಳೆದು ಹೊಸ ಲಾಬಿ ತಾಣಗಳು ಹುಟ್ಟಿಕೊಂಡಿವೆ. ಖರೀದಿಸುವವರ ಪ್ರಮಾಣ ಹೆಚ್ಚಿದರೂ ಮುಕ್ತ ವಾತಾವರಣ ಸೃಷ್ಟಿಸಿ ರೈತರಿಂದ ಬೇಕಾಬಿಟ್ಟಿ ದರಕ್ಕೆ ಖರೀದಿಸುವುದು ನಡೆದಿದೆ. ಮತ್ತೊಂದು ಕಡೆ ಗ್ಯಾಂಗಸ್ಟರ್ ತಂಡಗಳಿಂದ ಶ್ರೀಗಂಧದ ಕಳ್ಳತನ ಪ್ರಕರಣಗಳೂ ಹೆಚ್ಚಾಗಿವೆ. ಇದಕ್ಕೆ ಪರಿಹಾರವನ್ನು ಸರ್ಕಾರವೇ ನೀಡುವಂತೆ ರೈತರು ಕೇಳುತ್ತಿದ್ದಾರೆ. ಮುಖ್ಯವಾಗಿ ಚಿಪ್ ಕೂಡ ಒಂದು.
ಶ್ರೀಗಂಧ ಬೆಳೆಗಾರರಲ್ಲಿ ಆತ್ಮವಿಶ್ವಾಸ ತುಂಬಲು ಬೆಂಗಳೂರಿನಲ್ಲಿರುವ ಮರ ವಿಜ್ಞಾನ ಮತ್ತು ತಂತ್ರಜ್ಞಾನ ಸಂಸ್ಥೆ ೧೩ ವರ್ಷಗಳಿಂದ ಶ್ರೀಗಂಧ ಸಹಿತ ಪ್ರಮುಖ ಮರಗಳ ಕಳ್ಳತನ ತಪ್ಪಿಸಲು ರೂಪಿಸುತ್ತಿರುವ ಚಿಪ್ ಯೋಜನೆ ಪೂರ್ಣಗೊಳ್ಳುತ್ತಿಲ್ಲ. ಆ ಸಂಸ್ಥೆಯ ಮಹಾನಿರ್ದೇಶಕರು ಐದು ವರ್ಷಗಳ ಹಿಂದೆಯೇ ಮರದಲ್ಲಿ ಅಳವಡಿಸಿ ಕಳ್ಳತನಕ್ಕೂ ಮುನ್ನ ಅಲರಂ ನೀಡುವ ಚಿಪ್ ಸಿದ್ಧ ಎನ್ನುವ ಘೋಷಣೆ ಮಾಡಿದ್ದರು. ಆನಂತರವೂ ಸಂಶೋಧನೆ ಮಾತ್ರ ಅಂತಿಮಗೊಂಡೇ ಇಲ್ಲ. ರೈತರು ಮಾತ್ರ ಪ್ರತಿ ವರ್ಷ ಸಂಸ್ಥೆ ಆಯೋಜಿಸುವ ಕಾರ್ಯಕ್ರಮ ಅಥವಾ ಕಾರ್ಯಾಗಾರಗಳಲ್ಲಿ ಚಿಪ್ ಸಂಶೋಧನೆಯ ಮಾಹಿತಿ ಪಡೆಯುವುದನ್ನು ಬಿಟ್ಟರೆ ಅದನ್ನು ಅಳವಡಿಸುವ ಕನಸನ್ನು ಕಾಣುತ್ತಲೇ ಇದ್ದಾರೆ. ಅಷ್ಟೇ ಅಲ್ಲ ಶ್ರೀಗಂಧ ಕಳ್ಳಸಾಗಣೆ ಕೋರರಿಂದ ತಪ್ಪಿಸಿಕೊಳ್ಳುವುದು ಹೇಗೆ ಎನ್ನುವ ಭಯದಲ್ಲಿಯೇ ಇದ್ದಾರೆ.
ಮೂರು ದಶಕಗಳಿಂದ ಶ್ರೀಗಂಧ ಬೆಳೆಯುತ್ತಿರುವ ದೊಡ್ಡಮಗ್ಗೆ ರಂಗಸ್ವಾಮಿ ಅವರ ಬೆಳೆ ಈಗ ೫೦೦ ಎಕರೆಗೆ ವಿಸ್ತರಣೆಗೊಂಡಿದೆ. ಅದರಲ್ಲೂ ಅವರ ೨೦೦ ಎಕರೆ ಶ್ರೀಗಂಧದ ತೋಟ ನೋಡಿದರೆ ದೇಶದ ಯಾವುದೇ ಗಡಿ ಭಾಗದಲ್ಲಿ ಭದ್ರತೆಗೆ ಸಿಬ್ಬಂದಿ ಕಾಯುವ ರೀತಿಯೇ ಕಾಣುತ್ತದೆ. ಅಂದರೆ ಅಷ್ಟರ ಮಟ್ಟಿಗೆ ಅವರು ಸುರಕ್ಷತೆಗೆ ಒತ್ತು ನೀಡುತ್ತಾರೆ. ತಿಂಗಳಲ್ಲಿ ಒಂದೆರಡು ಬಾರಿಯಾದರೂ ಪೊಲೀಸ್ ಠಾಣೆ ಮೆಟ್ಟಿಲೇರುವ ಸನ್ನಿವೇಶ ಅವರದ್ದು. ಏಕೆಂದರೆ ಕರ್ನಾಟಕ ಸರ್ಕಾರ ರೂಪಿಸಿರುವ ಶ್ರೀಗಂಧ ನೀತಿಯಲ್ಲಿ ರಕ್ಷಣೆಗೆ ಅಗತ್ಯ ಒತ್ತು ನೀಡದಿರುವುದು ಅವರ ಆತಂಕದ ಮೂಲ. ಗನ್ ಲೈಸೆನ್ಸ್ ಕೊಟ್ಟಿದ್ದರೂ ಶ್ರೀಗಂಧ ಕದಿಯಲು ಬರುವ ಕಳ್ಳರ ತೊಡೆಯಿಂದ ಕೆಳ ಭಾಗಕ್ಕೆ ಹಾರಿಸುವ ಅಧಿಕಾರವನ್ನು ಕೊಡಿ ಎನ್ನುವ ಬೇಡಿಕೆಗೆ ಸ್ಪಂದನೆ ಸಿಕ್ಕಿಲ್ಲ. ಕಳ್ಳರನ್ನು ಹಿಡಿದುಕೊಟ್ಟರು ಮೂರೇ ದಿನಗಳಲ್ಲಿ ಅವರು ಮತ್ತೆ ಕಳ್ಳತನಕ್ಕೆ ಬರುವಷ್ಟು ಅರಣ್ಯ ಹಾಗೂ ಪೊಲೀಸ್ ಇಲಾಖೆ ಸಹೃದಯತೆಯನ್ನು ತೋರುತ್ತಾರೆ. ಮರ ರಕ್ಷಣೆಗೆ ಚಿಪ್ ತಯಾರಿಸುತ್ತಿದ್ದೇವೆ ಎಂದು ಕೇಳಿದ್ದಷ್ಟೇ ಬಂತೇ ಹೊರತು ಈವರೆಗೂ ಬಳಸುವ ಅವಕಾಶವೇ ಬರಲಿಲ್ಲ ಎಂದು ಬೇಸರದಿಂದಲೇ ಹೇಳುತ್ತಾರೆ ದೊಡ್ಡಮಗ್ಗೆ ರಂಗಸ್ವಾಮಿ.
ವಿಶ್ವದಲ್ಲೇ ಶ್ರೀಗಂಧ ಬೆಳೆಯುವ ಹಲವು ದೇಶಗಳಿವೆ. ಭಾರತದಲ್ಲೂ ಹತ್ತಾರು ರಾಜ್ಯಗಳಲ್ಲಿ ಶ್ರೀಗಂಧ ಬೆಳೆಯುತ್ತಾರೆ. ಇತ್ತೀಚಿನ ದಶಕಗಳಲ್ಲಿ ಶ್ರೀಗಂಧಕ್ಕೆ ಇನ್ನಿಲ್ಲದ ಬೇಡಿಕೆ ಬರುತ್ತಿರುವ ಕಾರಣದಿಂದಲೋ, ಸರ್ಕಾರಗಳೂ ನೀತಿಗಳನ್ನು ಸಡಿಲ ಮಾಡುತ್ತಿರುವ ಉದ್ದೇಶದಿಂದಲೋ ಶ್ರೀಗಂಧ ಬೆಳೆಯುವವರ ಪ್ರಮಾಣ ಗಣನೀಯವಾಗಿ ಏರಿಕೆಯಾಗಿದೆ. ಮಹಾರಾಷ್ಟ್ರ, ತಮಿಳುನಾಡು, ಆಂಧ್ರಪ್ರದೇಶದಂತಹ ರಾಜ್ಯಗಳಲ್ಲಿ ಅಧಿಕವಾಗಿ ಶ್ರೀಗಂಧ ಬೆಳೆಯಲಾಗುತ್ತಿದೆ. ಹೀಗಿದ್ದರೂ ಕರ್ನಾಟಕದ ಶ್ರೀಗಂಧಕ್ಕೆ ಇರುವ ಮಹತ್ವ ಮಾತ್ರ ಒಂದಿನಿತೂ ಕಡಿಮೆಯಾಗಿಲ್ಲ. ಏಕೆಂದರೆ ಕರ್ನಾಟಕದ ಹವಾಗುಣ, ಇಲ್ಲಿನ ಮಣ್ಣಿನ ಸತ್ವ, ರೈತರು ತೋರುವ ಕಾಳಜಿ ಹಾಗೂ ಪರಿಶ್ರಮಗಳಿಂದ ಶ್ರೀಗಂಧ ಶ್ರೇಷ್ಠ ದರ್ಜೆಯನ್ನು ಉಳಿಸಿಕೊಂಡಿದೆ. ಈ ಕಾರಣದಿಂದಲೇ ಹೊರ ದೇಶಗಳಲ್ಲಿ ಹೆಚ್ಚು ಎಣ್ಣೆ ಅಂಶ ಹೊಂದಿರುವ ಕರ್ನಾಟಕದ ಶ್ರೀಗಂಧಕ್ಕೆ ಬೇಡಿಕೆಯಿದೆ. ದರವೂ ದಶಕದ ಹಿಂದೆ ಕೆಜಿಗೆ ೪ ಸಾವಿರ ರೂ. ಇದ್ದುದು ಈಗ ಕೆಜಿಗೆ ೨೦ ಸಾವಿರ ರೂ. ತಲುಪಿದೆ. ೧೦ ಎಕರೆ ಶ್ರೀಗಂಧ ಬೆಳೆದ ರೈತರೂ ಕೋಟ್ಯಾಧಿಪತಿಗಳಾಗುವ ಅವಕಾಶವನ್ನೂ ಈ ತಳಿ ಕಲ್ಪಿಸಿದೆ.
ರೈತರೂ ಶ್ರೀಮಂತರಾಗಬೇಕು ಎಂದು ಕರ್ನಾಟಕದಲ್ಲಿ ಕನಸು ಬಿತ್ತಿ ವನತೋಟಗಾರಿಕೆಗೆ ಜೀವ ತುಂಬಿ ನಾಲ್ಕೈದು ದಶಕಗಳಿಂದ ಹೋರಾಟ ಮಾಡುತ್ತಿರುವವರು ಮೈಸೂರಿನವರೇ ಆದ ಅರಣ್ಯ ಇಲಾಖೆ ನಿವೃತ್ತ ಕಾರ್ಯದರ್ಶಿ ಎ.ಸಿ.ಲಕ್ಷ್ಮಣ. ಶ್ರೀಗಂಧ ಬೆಳೆಯುವ ರೈತರ ಪ್ರಮಾಣ ಹೆಚ್ಚಾಗಬೇಕು. ಆ ರೈತರು ಆದಾಯವನ್ನು ಹೆಚ್ಚೆಚ್ಚು ಗಳಿಸುವ ಜತೆಯಲ್ಲಿಯೇ ಹೆಚ್ಚಿನ ರಕ್ಷಣೆ ಸಿಗಬೇಕು ಎಂದು ೮೪ರ ಇಳಿ ವಯಸ್ಸಿನಲ್ಲೂ ಲಕ್ಷ್ಮಣ ಅವರ ಮನಸ್ಸು ರೈತರ ಪ್ರಗತಿಯ ಕಡೆಯೇ ಯೋಚಿಸುತ್ತದೆ. ಇದಕ್ಕಾಗಿಯೇ ಅವರು ತಮಗೆ ಬರುವ ಪಿಂಚಣಿಯ ಬಹುಭಾಗವನ್ನೂ ಈಗಲೂ ವನತೋಟಗಾರಿಕೆ, ರೈತರು ಹಾಗೂ ಅವರ ಪರವಾದ ಸಂಶೋಧನಾ ಚಟುವಟಿಕೆ, ಬೆಳೆದ ಬೆಳೆಗಳಿಗೆ ಉತ್ತಮ ಮಾರುಕಟ್ಟೆ ಕಲ್ಪಿಸಲು ವ್ಯಯಿಸುತ್ತಾರೆ. ಕರುನಾಡ ಶ್ರೀಗಂಧಕ್ಕೆ ಬೆಲೆ ಸಿಗುವ ಹಿಂದೆ, ಅದಕ್ಕೊಂದು ಉತ್ತಮ ನೀತಿ ಜಾರಿಯಾಗ ಬೇಕೆಂಬ ಉತ್ಕಟ ಉದ್ದೇಶದ ಹಿಂದೆ ಇದ್ದುದು ಅವರ ಕಾಳಜಿ. ೨೦೦೨ರಲ್ಲಿ ಕರ್ನಾಟಕವು ದೇಶದಲ್ಲೇ ಅತ್ಯುತ್ತಮ ಎನ್ನುವ ಶ್ರೀಗಂಧ ನೀತಿ ಯನ್ನು ಅಂದಿನ ಸಿಎಂ ಎಸ್.ಎಂ.ಕೃಷ್ಣ ಅವರು ಹಾಗೂ ಅರಣ್ಯ ಸಚಿವರಾಗಿದ್ದ ಕೆ.ಎಚ್.ರಂಗನಾಥ್ ಅವರು ಜಾರಿಗೊಳಿಸಿದ್ದರ ಹಿಂದೆ ಇದ್ದುದು ಲಕ್ಷ್ಮಣ ಅವರ ನಿಖರ ನಿಲುವು ಹಾಗೂ ದೂರದೃಷ್ಟಿತ್ವ. ಸಾಕಷ್ಟು ಅಡೆತಡೆಗಳ ನಡುವೆಯೂ ಅಂದು ಜಾರಿಗೊಂಡ ನೀತಿಯಿಂದ ಶ್ರೀಗಂಧ ಬೆಳೆಯುವವರ ಸಂಖ್ಯೆ ಕರ್ನಾಟಕದಲ್ಲಿ ಹತ್ತು ಪಟ್ಟು ಹೆಚ್ಚಿದೆ. ಇಡೀ ವಿಶ್ವವೇ ಕರ್ನಾಟಕದ ಕಡೆಗೆ ನೋಡುವಂತೆ ಮಾಡಿದೆ. ಆದರೆ ರಕ್ಷಣೆಗೆ ಒತ್ತು ನೀಡುವಲ್ಲಿ ಇತ್ತೀಚಿನ ಸರ್ಕಾರಗಳು ಆಸ್ಥೆ ವಹಿಸದ ಬಗ್ಗೆ ಲಕ್ಷ್ಮಣ ಅವರಿಗೆ ಬೇಸರವಿದೆ. ಬೇಡಿಕೆ ಹೆಚ್ಚಿ ರೈತರಿಗೂ ಬೆಲೆ ತಂದಿರುವ ಶ್ರೀಗಂಧ ಹಾಗೂ ರೈತರನ್ನು ರಕ್ಷಿಸಲು ಸರ್ಕಾರ ಗಮನ ನೀಡಲೇಬೇಕು ಎಂದು ಅವರು ಸಿಎಂಗಳು, ಸಚಿವರು ಹಾಗೂ ಐಎಎಸ್ ಹಾಗೂ ಐಎಫ್‌ಎಸ್ ಅಧಿಕಾರಿಗಳನ್ನು ಎಚ್ಚರಿಸುತ್ತಲೇ ಬಂದಿದ್ದಾರೆ. ಶ್ರೀಗಂಧ ರಕ್ಷಣೆಗೆ ಚಿಪ್ ಸಂಶೋಧನೆ ಆಗಬೇಕು ಎಂದು ಒತ್ತಾಯಿಸಿ ೧ ಲಕ್ಷ ರೂ. ಬಹುಮಾನವನ್ನೂ ಘೋಷಿಸಿದವರು ಲಕ್ಷ್ಮಣ. ಅಲ್ಲದೇ ಕರ್ನಾಟಕದ ಯೋಜನಾ ಆಯೋಗದ ಸದಸ್ಯರೂ ಆಗಿರುವ ಲಕ್ಷ್ಮಣ ಅವರು ೪೦ ಲಕ್ಷ ರೂ. ಬಹುಮಾನವನ್ನು ಚಿಪ್ ರೂಪಿಸುವವರಿಗೆ ನೀಡಬೇಕು ಎನ್ನುವ ಸಲಹೆಯನ್ನೂ ನೀಡಿದ್ದರು. ಅವರ ಆಶಯ ಅರ್ಧಭಾಗದಲ್ಲೇ ನಿಂತು ಹೋದರೆ, ಶ್ರೀಗಂಧ ಬೆಳೆಯುವ ರೈತರ ಆತಂಕವೂ ಕಡಿಮೆಯಾಗಿಲ್ಲ.
ಮುಕ್ತ ನೀತಿಗಳು ಮೇಲ್ನೋಟಕ್ಕೆ ಲಾಭದಾಯಕ ಎನ್ನಿಸಿದರೂ ಒಳಹೊಕ್ಕರೆ ಇದರಿಂದ ಆಗುವ ಅನಾಹುತಗಳು ಅಸಂಘಟಿತ ರೈತ ವಲಯವನ್ನು ಇನ್ನಷ್ಟು ಶೋಷಣೆಗೆ ತಳ್ಳುವ ಅಪಾಯ ಅಷ್ಟಿಷ್ಟಲ್ಲ. ಕೃಷಿ ನೀತಿಗಳು ಕೈಗಾರಿಕಾ ನೀತಿಗಳ ಸ್ವರೂಪ ಪಡೆದುಕೊಂಡು ಬಿಡುತ್ತವೆ.ಕರ್ನಾಟಕದ ಶ್ರೀಗಂಧ ಹೊಸ ನೀತಿಯೂ ಇದರ ಮುಂದುವರಿದ ಭಾಗವಷ್ಟೇ. ಕರ್ನಾಟಕ ಐಟಿ ಹಾಗೂ ಬಿಟಿಯಲ್ಲಿ ಮುಂಚೂಣಿಯಲ್ಲಿರುವ ರಾಜ್ಯ. ನಮ್ಮ ನಾಡಿನ ಶ್ರೀಗಂಧ ಉಳಿಸಿಕೊಳ್ಳಲು ಚಿಪ್ ತಯಾರಿಸುವುದಕ್ಕೆ ಅರಣ್ಯ ಇಲಾಖೆಗೆ ಸಹಕಾರ ನೀಡಬಹುದು. ರೈತ ಸ್ನೇಹಿ ಪೊಲೀಸ್ ವ್ಯವಸ್ಥೆಯೂ ಬೇಕೇ ಬೇಕು. ಇಲ್ಲದೇ ಇದ್ದರೆ ಶತಮಾನಗಳ ಹಿಂದೆ ಶ್ರೀಗಂಧ ಉಳಿಸಿಕೊಳ್ಳಲು ಹೈದರಾಲಿ ಹಾಗೂ ಟಿಪ್ಪು ಸುಲ್ತಾನ್ , ಮೈಸೂರು ಸಂಸ್ಥಾನದವರು ಜಾರಿಗೊಳಿಸಿದ್ದ, ರೂಪಿಸಿದ ಆ ನೀತಿಗಳೇ ಬೆಳಗಾರಿಗೆ ಉತ್ತಮ ಅನ್ನಿಸುವುದಿಲ್ಲವೇ?