ಟಿ.ಕೆ.ಹರೀಶ್
ಸಮುದಾಯಗಳಿಗೆ ಸೂರು, ಶಿಕ್ಷಣ ಒದಗಿಸುವುದು ಅತ್ಯಗತ್ಯ
ಭಾರತೀಯ ಅಲೆಮಾರಿ ಜನಾಂಗಗಳು ಕೇವಲ ಸಂಚಾರಿಗಳಲ್ಲ; ಅವರು ನಮ್ಮ ಶ್ರೀಮಂತ ಸಾಂಸ್ಕೃತಿಕ ಪರಂಪರೆಯ ಜೀವಂತ ಕೊಂಡಿಗಳು. ಇತಿಹಾಸದುದ್ದಕ್ಕೂ ಕಲೆ, ಕರಕುಶಲತೆ, ಜಾನಪದ ಹಾಡುಗಳು ಮತ್ತು ಪ್ರಕೃತಿಯೊಂದಿಗಿನ ಸಾಮರಸ್ಯವನ್ನು ಪೀಳಿಗೆಯಿಂದ ಪೀಳಿಗೆಗೆ ರಕ್ಷಿಸಿಕೊಂಡು ಬರುತ್ತಿರುವ ಇವರ ಕೊಡುಗೆ ಭಾರತೀಯ ಸಮಾಜಕ್ಕೆ ಅಪಾರವಾದದ್ದು.
ಅಲೆಮಾರಿಗಳು ಮಾನವ ನಾಗರಿಕತೆಯ ವಿಕಾಸದಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಇವರುವ್ಯಾಪಾರ ಮಾರ್ಗಗಳನ್ನು ಬೆಳೆಸುವಲ್ಲಿ, ಕರಕುಶಲ ವಸ್ತುಗಳನ್ನು ದೂರದ ಊರುಗಳಿಗೆ ತಲುಪಿಸುವಲ್ಲಿ ಮತ್ತು ಸಾಂಸ್ಕೃತಿಕ ವಿನಿಮಯದಲ್ಲಿ ಪ್ರಮುಖ ಕೊಂಡಿಯಾಗಿದ್ದರು. ಇವರ ಜಾನಪದ ಕಲೆ, ಮೌಖಿಕ ಸಾಹಿತ್ಯ ಮತ್ತು ಸಾಂಪ್ರದಾಯಿಕ ಜ್ಞಾನವು ನಮ್ಮ ಪರಂಪರೆಯ ಶ್ರೀಮಂತಿಕೆಯನ್ನು ಹೆಚ್ಚಿಸಿದೆ. ಇವರು ಪ್ರಾದೇಶಿಕ ಜಾನಪದ ಕಲೆಗಳು, ಸಾಂಪ್ರದಾಯಿಕ ಆಚರಣೆಗಳು ಮತ್ತು ಮೌಖಿಕ ಇತಿಹಾಸವನ್ನು ಜೀವಂತವಾಗಿರಿಸಿದ್ದಾರೆ.
ಹಳ್ಳಿ-ಹಳ್ಳಿಗಳಿಗೆ ಅಲೆದಾಡುವುದರಿಂದ ಸಂಸ್ಕೃತಿ, ಭಾಷೆ ಮತ್ತು ಆಲೋಚನೆಗಳ ವಿನಿಮಯಕ್ಕೆ ಇವರು ಪ್ರಮುಖ ಮಾಧ್ಯಮವಾಗಿದ್ದಾರೆ. ಅಲೆಮಾರಿ ಜನಾಂಗಗಳು (Nomadic Tribes) ತಮ್ಮ ಜೀವನೋಪಾಯಕ್ಕಾಗಿ ಅಥವಾ ಸಾಂಪ್ರದಾಯಿಕ ಕಾರಣಗಳಿಗಾಗಿ ಒಂದೆಡೆ ನೆಲೆಸದೆ, ನಿರಂತರವಾಗಿ ಸ್ಥಳಾಂತರಗೊಳ್ಳುವ ವಿಶಿಷ್ಟ ಸಮುದಾಯಗಳಾಗಿವೆ. ಮಾನವನ ನಾಗರಿಕತೆಯ ಆರಂಭಿಕ ದಿನಗಳಲ್ಲಿ ಬೇಟೆಯಾಡುವುದು ಮತ್ತು ಕಾಡಿನ ಉತ್ಪನ್ನಗಳನ್ನು ಸಂಗ್ರಹಿಸುವುದು ಅನಿವಾರ್ಯವಾಗಿತ್ತು. ಕಾಲಕ್ರಮೇಣ ನಾಗರಿಕತೆ ಬೆಳೆದಂತೆ ಜನರು ಒಂದೆಡೆ ನೆಲೆನಿಂತರೆ, ಅಲೆಮಾರಿಗಳು ತಮ್ಮ ಸಂಪ್ರದಾಯವನ್ನು ಮುಂದುವರಿಸಿದರು.
ವಾಸ್ತವವಾಗಿ ಅಲೆಮಾರಿ ಸಮುದಾಯಗಳು ನಮ್ಮ ದೇಶದ ಸಾಂಸ್ಕ ತಿಕ ಪರಂಪರೆಯನ್ನು ಜೀವಂತವಾಗಿರಿಸಿವೆ. ಪ್ರಾಣಿ ಪಕ್ಷಿಗಳ ಅನುಕರಣೆ ಮಾಡುವುದು, ಕಥೆ ಹೇಳುವುದು, ಸರ್ಕಸ್ ಮತ್ತು ಜಾನಪದ ಕಲೆಗಳ ಮೂಲಕ ಈ ಸಮುದಾಯದವರು ಮನರಂಜನೆ ನೀಡುತ್ತಾ ಬಂದಿದ್ದಾರೆ. ಇವರು ಪ್ರಕೃತಿಯ ಜೊತೆಗೆ ಅತ್ಯಂತ ನಿಕಟ ಬಾಂಧವ್ಯ ಹೊಂದಿರುತ್ತಾರೆ. ಜೀವನೋಪಾಯಕ್ಕಾಗಿ ಒಂದೆಡೆಯಿಂದ ಮತ್ತೊಂದೆಡೆಗೆ ನಿರಂತರವಾಗಿ ಸಂಚರಿಸುವ ಜನರನ್ನು ಅಲೆಮಾರಿಗಳು ಎಂದು ಕರೆಯಲಾಗುತ್ತದೆ. ಇವರು ತಮ್ಮದೇ ಆದ ವಿಶಿಷ್ಟ ಸಂಸ್ಕೃತಿ, ಕಲೆ, ಮತ್ತು ಜೀವನಶೈಲಿಯನ್ನು ಹೊಂದಿದ್ದು, ಪ್ರಮುಖವಾಗಿ ಕೃಷಿ, ಪಶುಪಾಲನೆ, ಕರಕುಶಲ ವಸ್ತುಗಳ ಮಾರಾಟ, ಭವಿಷ್ಯ ನುಡಿಯುವುದು ಮತ್ತು ಮನರಂಜನೆಯನ್ನು ನಂಬಿ ಬದುಕುತ್ತಾರೆ.
ಬ್ರಿಟಿಷರು ೧೮೭೧ ರಲ್ಲಿ ಜಾರಿಗೆ ತಂದ ಅಪರಾಧಿ ಬುಡಕಟ್ಟು ಕಾಯ್ದೆಯ (Criminal Tribes Act) ಕ್ರೂರ ಪ್ರಭಾವದಿಂದಾಗಿ, ಇಂದಿಗೂ ಅನೇಕ ಅಲೆಮಾರಿ ಮತ್ತು ಅರೆ-ಅಲೆಮಾರಿ ಸಮುದಾಯಗಳನ್ನು ಸಮಾಜವು ಅಪರಾಧಿಗಳಂತೆ ನೋಡುವ ಕಳಂಕ (Stigma) ಮುಂದುವರಿದಿದೆ.
ಸ್ವಾತಂತ್ರ್ಯದ ನಂತರ ಈ ಕಾಯ್ದೆಯನ್ನು ರದ್ದುಗೊಳಿಸಿ, ೧೯೫೨ ರಲ್ಲಿ ವಿಮುಕ್ತ, (de- notified) ಅಪರಾಧ ಕಳಂಕಿತ ಹಿನ್ನೆಲೆಯುಳ್ಳ (ಕಳಂಕಿತ) ಅಲೆಮಾರಿ ಬುಡಕಟ್ಟು ಸಮುದಾಯಗಳು ಎಂದು ಘೋಷಿಸಲಾಯಿತಾದರೂ, ವ್ಯವಸ್ಥೆಯಲ್ಲಿನ ಬದಲಾವಣೆ ಮತ್ತು ಸಾಮಾಜಿಕ ಗ್ರಹಿಕೆಗಳು ಇನ್ನೂ ಸಂಪೂರ್ಣವಾಗಿ ಬದಲಾಗಿಲ್ಲ. ಜಾತಿ ಪ್ರಮಾಣಪತ್ರ ಮತ್ತು ಮೂಲಸೌಲಭ್ಯಗಳನ್ನು ಪಡೆಯಲು ಅಲೆಮಾರಿ ಸಮುದಾಯಗಳು ನಿರಂತರ ಹೋರಾಟ ನಡೆಸಬೇಕಾಗಿದೆ. ಖಾಯಂ ವಾಸ ಸ್ಥಳವಿಲ್ಲದಿರುವುದು ಇವರ ದೊಡ್ಡ ಸಮಸ್ಯೆಯಾಗಿದೆ. ಇದರಿಂದಾಗಿ ಪಡಿತರ ಚೀಟಿ, ಆಧಾರ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ ಪಡೆಯಲು ಪರದಾಡಬೇಕಾಗಿದೆ. ನಿರಂತರ ಅಲೆದಾಟದ ಕಾರಣದಿಂದಾಗಿ ಇವರ ಮಕ್ಕಳಿಗೆ ಶಿಕ್ಷಣ ಸಿಗುವುದು ಕಷ್ಟಕರವಾಗಿದೆ.
ಸಮಾಜ ಕಲ್ಯಾಣ ಇಲಾಖೆ ಮತ್ತು ಕರ್ನಾಟಕ ರಾಜ್ಯ ಬುಡಕಟ್ಟು ಸಂಶೋಧನಾ ಸಂಸ್ಥೆ ಮೂಲಕ ವಿಶೇಷ ಅಭಿವೃದ್ಧಿ ಯೋಜನೆಗಳನ್ನು ರೂಪಿಸಿದರೆ ಅವರನ್ನು ಮುಖ್ಯವಾಹಿನಿಗೆ ತರಬಹುದು. ಅಲೆಮಾರಿಗಳಿಗೆ ಖಾಯಂ ನಿವೇಶನ, ಉದ್ಯೋಗಾವಕಾಶಗಳು ಮತ್ತು ಕೌಶಲ ತರಬೇತಿಯನ್ನು ನೀಡುವುದು. ಅವರ ಸಾಂಪ್ರದಾಯಿಕ ಕಲೆ, ಕಸುಬುಗಳಿಗೆ ಮಾರುಕಟ್ಟೆ ಒದಗಿಸುವ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡುವುದು.
ರಾಜ್ಯ ಸರ್ಕಾರ ಇವರಿಗಾಗಿ ಅಲೆಮಾರಿ ಅಭಿವೃದ್ಧಿ ನಿಗಮವನ್ನು ಸ್ಥಾಪಿಸಿದ್ದು, ಉಚಿತ ವಸತಿ ಶಾಲೆ ಹಾಗೂ ಸಾಲ ಸೌಲಭ್ಯಗಳನ್ನು ನೀಡುತ್ತಿದೆ. ಆದರೆ, ಇವರನ್ನು ಸಮಾಜದ ಮುಖ್ಯವಾಹಿನಿಗೆ ತರಲು ಇವರಿಗೆ ಶಾಶ್ವತ ವಸತಿ, ಭೂಮಿ ಮತ್ತು ಗೌರವಯುತವಾದ ಉದ್ಯೋಗದ ನೆರವು ನೀಡುವುದು ಇಂದಿನ ಅಗತ್ಯವಾಗಿದೆ. ಅಲೆಮಾರಿ ಜನಾಂಗದವರು ಕೇವಲ ಅಲೆದಾಡುವವರಲ್ಲ, ಅವರು ಭಾರತೀಯ ಸಂಸ್ಕೃತಿಯ ಜೀವಂತಿಕೆ. ಅವರ ಕಲೆ ಮತ್ತು ಜ್ಞಾನ ಭಂಡಾರವನ್ನು ಸಂರಕ್ಷಿಸಿ, ಅವರಿಗೆ ಸೂಕ್ತ ಸೂರು ಮತ್ತು ಶಿಕ್ಷಣ ಒದಗಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ.
(ಲೇಖಕರು, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯ ನಿರ್ದೇಶಕರು)
ಅಲೆಮಾರಿ ಮತ್ತು ಅರೆ ಅಲೆಮಾರಿ ಸಮುದಾಯಗಳ ಕುಲ ಕಸುಬುಗಳನ್ನು ಗುರುತಿಸಿ, ಅವುಗಳನ್ನು ಉಳಿಸಲು ಮತ್ತು ಬೆಳೆಸಲು – ಸರ್ಕಾರ ಹಲವು ಪ್ರಮುಖ ಯೋಜನೆಗಳನ್ನು ಜಾರಿಗೆ ತಂದಿದೆ.
* ಅಲೆಮಾರಿ ಮಕ್ಕಳ ಶಿಕ್ಷಣಕ್ಕಾಗಿ ಉಚಿತ ಊಟ, ವಸತಿಯುಕ್ತ ಶಾಲೆ
* ಮಕ್ಕಳನ್ನು ಶಾಲೆಗೆ ಕಳುಹಿಸಲು ಪೋಷಕರಿಗೆ ಪ್ರೋತ್ಸಾಹಧನ
* ಸ್ವಯಂ ಉದ್ಯೋಗ ನೇರ ಸಾಲಯೋಜನೆ
* ಉದ್ಯಮಶೀಲತಾ ಅಭಿವೃದ್ಧಿ ಯೋಜನೆ
* ಸ್ವಾವಲಂಬಿ ಸಾರಥಿ ಯೋಜನೆ
* ಮೈಕ್ರೋ ಕ್ರೆಡಿಟ್ (ಪ್ರೇರಣಾ) ಯೋಜನೆ
* ಭೂ ಒಡೆತನ ಯೋಜನೆ
* ಸಮಗ್ರ ಗಂಗಾ ಕಲ್ಯಾಣ ಯೋಜನೆ (ವೈಯಕ್ತಿಕ ನೀರಾವರಿ ಕೊಳವೆ ಬಾವಿ)



