ಅಜಾದ್‌ಗೆ ಮುಖ್ಯಮಂತ್ರಿಯಾಗುವ ಕನಸು
ಕಾಂಗ್ರೆಸ್ ಪಕ್ಷವನ್ನು ಇತ್ತೀಚೆಗೆ ತೊರೆದಿರುವ ಕಾಶ್ಮೀರದ ನಾಯಕ ಗುಲಾಂ ನಬಿ ಆಜಾದ್ ಜಮ್ಮುಕಾಶ್ಮೀರದ ಹೊಸ ಮುಖ್ಯಮಂತ್ರಿಯಾಗುವ ಕನುಸು ಕಾಣುತ್ತಿದ್ದಾರೆಯೇ? ಸದ್ಯದಲ್ಲೇ ಹೊಸ ರಾಜಕೀಯ ಪಕ್ಷ ಕಟ್ಟಲಿದ್ದಾರೆ. ಆ ಪಕ್ಷ ಬಹುತೇಕ ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಳ್ಳುವ ಸಾಧ್ಯತೆ ಇದೆ. ಅದಕ್ಕೆ ಪೂರಕವಾಗಿ ಎಂಬಂತೆ, ಜಮ್ಮು ಮತ್ತು ಕಾಶ್ಮೀರಕ್ಕೆ ಹೆಚ್ಚಿನ ಸ್ವಾಯತ್ತತೆಯನ್ನು ನೀಡಿದ್ದ ಸಂವಿಧಾನದ ೩೭೦ ನೇ ವಿಧಿಯನ್ನು ನರೇಂದ್ರಮೋದಿ ನೇತೃತ್ವದ ಕೇಂದ್ರ ಸರ್ಕಾರ ಮೂರು ವರ್ಷಗಳ ಹಿಂದೆ ಹಿಂತೆಗೆದುಕೊಂಡಿತು. ಅದನ್ನು ಮರುಸ್ಥಾಪಿಸಲು ಸಾಧ್ಯವೇ ಇಲ್ಲ ಎಂದು ಗುಲಾಂ ನಬಿ ಹೇಳಿದ್ದಾರೆ. ಆ ಮೂಲಕ ಬಿಜೆಪಿ ನಡೆಯನ್ನು ಪರೋಕ್ಷವಾಗಿ ಸಮರ್ಥಿಸಿದ್ದಾರೆ. ಉತ್ತರ ಕಾಶ್ಮೀರದ ಬಾರಾಮುಲ್ಲಾದಲ್ಲಿ ತಮ್ಮ ಮೊದಲ ಸಾರ್ವಜನಿಕ ಸಭೆಯಲ್ಲಿ ಪಾಲ್ಗೊಂಡಿದ್ದ ಆಜಾದ್ ೩೭೦ನೇ ವಿಧಿಯ ಮರುಸ್ಥಾಪನೆಗೆ ಒತ್ತಾಯಿಸುವುದಾಗಿ ಭರವಸೆ ನೀಡುವ ಮೂಲಕ ಕೆಲವು ಪಕ್ಷಗಳು ಜನರನ್ನು ದಾರಿ ತಪ್ಪಿಸುತ್ತಿವೆ ಎಂದು ಟೀಕಿಸಿದ್ದಾರೆ. ‘ಗುಲಾಂ ನಬಿ ಆಜಾದ್ ಯಾರನ್ನೂ ದಾರಿ ತಪ್ಪಿಸುವುದಿಲ್ಲ, ೩೭೦ನೇ ವಿಧಿಯನ್ನು ಅನ್ನು ಪುನಃಸ್ಥಾಪಿಸಲು ಸಾಧ್ಯವಿಲ್ಲ. ಇದಕ್ಕೆ ಸಂಸತ್ತಿನಲ್ಲಿ ಮೂರನೇ ಎರಡರಷ್ಟು ಬಹುಮತ ಬೇಕು’ ಆಜಾದ್ ಹೇಳಿದ್ದಾರೆ.
ಆಮ್ ಆದ್ಮಿಗೆ ತನಿಖಾ ಸರಣಿ ಕಾಟ!
ಅತ್ತ ಗುಜರಾತ್ ವಿಧಾನಸಭಾ ಚುನಾವಣೆಗೆ ಆಮ್ ಆದ್ಮಿ ಪಕ್ಷ ಸಿದ್ಧತೆ ನಡೆಸಿದ್ದರೆ, ಇತ್ತ ಆಡಳಿತಾರೂಢ ಬಿಜೆಪಿಯು ಆಪ್ ವಿರುದ್ಧ ತನಿಖಾ ಸರಣಿ ಮುಂದುವರೆಸಿದೆ. ಇದುವರೆಗೆ ಅಬ್ಕಾರಿ ನೀತಿಯಲ್ಲಿ ಅಕ್ರಮ ಎಸಗಲಾಗಿದೆ ಎಂದು ಇಡಿ, ಸಿಬಿಐ ದಾಳಿಗಳು ನಡೆದಿದ್ದವು. ಇದೀಗ ದೆಹಲಿಯ ಆಪ್ ಸರ್ಕಾರ ೧೦೦೦ ಬಸ್‌ಗಳ ಖರೀದಿಯಲ್ಲಿ ಅಕ್ರಮ ಎಸಗಿದೆ ಎಂದು ಆರೋಪಿಸಲಾಗಿದ್ದು, ತನಿಖೆಗೆ ದೆಹಲಿ ಲೆಫ್ಟಿನೆಂಟ್ ಗವರ್ನರ್ ವಿಕೆ ಸಕ್ಸೇನಾ ಅನುಮತಿ ನೀಡಿದ್ದಾರೆ. ಅತ್ತ ಗುಜರಾತಿನಲ್ಲಿ ಠಿಕಾಣಿ ಹೂಡಿ ಚುನಾವಣೆಗೆ ಸಿದ್ಧತೆ ನಡೆಸುವುದಕ್ಕೆ ಅಡ್ಡಿ ಮಾಡಲೆಂದೇ ಬಿಜೆಪಿ ತನಿಖಾ ಸರಣಿ ಮುಂದುವರೆಸುತ್ತಿದೆ ಎಂದು ರಾಜಕೀಯ ವಲಯದಲ್ಲಿ ವಿಶ್ಲೇಷಿಸಲಾಗುತ್ತಿದೆ. ಪಂಜಾಬ್ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ವಿಜಯ ಸಾಧಿಸಿದ ನಂತರ ಪ್ರಧಾನಿ ಮತ್ತು ಗೃಹ ಸಚಿವರ ತವರು ರಾಜ್ಯಕ್ಕೆ ಆಪ್ ಲಗ್ಗೆ ಇಡುತ್ತಿದೆ. ಬದಲಾವಣೆಯ ಗಾಳಿ ಬೀಸುತ್ತಿರುವ ಮುನ್ಸೂಚನೆಯನ್ನು ಅರಿತೇ ಆಪ್ ನಾಯಕರ ವಿರುದ್ಧ ತನಿಖಾಸ್ತ್ರ ಪ್ರಯೋಗಿಸಲಾಗುತ್ತಿದೆ ಎಂದು ಆಪ್ ವಕ್ತಾರ, ರಾಜ್ಯಸಭಾ ಸದ್ಯ ರಾಘವ್ ಚಡ್ಡಾ ಆರೋಪಿಸಿದ್ದಾರೆ.
ರಾಹುಲ್ ಗಾಂಧಿ ಟೀಶರ್ಟ್ ಮತ್ತು ಮದುವೆ!
‘ಭಾರತ್ ಜೋಡೋ’ ಯಾತ್ರೆ ನಡೆಸುತ್ತಿರುವ ರಾಹುಲ್ ಗಾಂಧಿ ವಿರುದ್ಧ ಆಡಳಿತಾರೂಢ ಬಿಜೆಪಿ ವ್ಯಾಪಕವಾಗಿ ಟೀಕೆ ಮಾಡುತ್ತಿದೆ. ರಾಹುಲ್ ಗಾಂಧಿ ೪೦ ಸಾವಿರ ರೂಪಾಯಿ ಬೆಲೆಯ ಟೀಶರ್ಟ್ ಧರಿಸಿದ್ದಾರೆ. ಅವರ ವಾಹನದಲ್ಲಿ ಐಷಾರಾಮಿ ಟಾಯ್‌ಲೆಟ್ ಇದೆ ಎಂಬ ಟೀಕೆಗಳು ಸೇರಿವೆ. ಆದರೆ, ತಮಿಳುನಾಡಿನ ಮಹಿಳೆಯರಿಗೆ ರಾಹುಲ್ ಗಾಂಧಿ ಅವರ ಮದುವೆಯದೇ ಚಿಂತೆ! ನೀವು ತಮಿಳು ನಾಡನ್ನು ಇಷ್ಟಪಡುತ್ತೀರಿ ಅಲ್ಲವೇ, ನಿಮಗೆ ತಮಿಳುನಾಡಿನ ಹುಡುಗಿಯನ್ನೇ ಹುಡುಕಿ ಮುದುವೆ ಮಾಡುತ್ತೇವೆ ಎಂದು ಮನ್‌ರೆಗಾ ಕಾರ್ಮಿಕ ಮಹಿಳೆಯೊಬ್ಬರು ಹೇಳಿದ್ದಾರೆ. ಈ ಮಾತು ಕೇಳಿ ರಾಹುಲ್ ಗಾಂಧಿ ನಾಚಿಕೊಂಡರಂತೆ! ಇದು ಕಾಂಗ್ರೆಸ್ ನಾಯಕ ಜೈರಾಮ್ ರಮೇಶ್ ಅವರು ಮಾಡಿರುವ ಟ್ವೀಟ್ ಮತ್ತು ಈ ಕುರಿತ ವರದಿಗಳ ಸಾರಂಶ. ೧೫೦ ದಿನಗಳ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಅವರು ದೇಶ ಎದುರಿಸುತ್ತಿರುವ ಬೆಲೆ ಏರಿಕೆ, ನಿರುದ್ಯೋಗ ಮತ್ತಿತರ ಸಮಸ್ಯೆಗಳನ್ನು ಜನರ ಮುಂದಿಡಲಿದ್ದಾರೆ. ಕಾಂಗ್ರೆಸ್ ಪಕ್ಷ ಎದುರಿಸುತ್ತಿರುವ ಆಂತರಿಕ ಸಮಸ್ಯೆಯನ್ನು ಮೊದಲು ಬಗೆಹರಿಸಿಕೊಳ್ಳಿ ಎಂಬುದು ರಾಹುಲ್ ಹಿತೈಷಿಗಳ ಉಚಿತ ಸಲಹೆ!
ಗಣೇಶೋತ್ಸವದಲ್ಲಿ ಶಿವಸೈನಿಕರ ಗಲಾಟೆ!
ಏಕನಾಥ ಶಿಂಧೆ ಅವರು ಮಹಾರಾಷ್ಟ್ರ ಮುಖ್ಯಮಂತ್ರಿಯಾದ ನಂತರ ಶಿವಸೇನೆ ಮೇಲೆ ಹಿಡಿತ ಸಾಧಿಸಲು ಉದ್ಧವ್ ಮತ್ತು ಏಕನಾಥ್ ನಡುವೆ ಶೀಥಲ ಸಮರ ನಡೆದಿದೆ. ಆದರೆ, ಉಭಯ ನಾಯಕರ ಬೆಂಬಲಿಗರು ಮಾತ್ರ ಬೀದಿಯಲ್ಲೇ ಸಮರ ನಡೆಸುತ್ತಿದ್ದಾರೆ. ಗಣೇಶ ಉತ್ಸವದಲ್ಲಿ ಶಿವಸೈನಿಕರ ನಡುವೆಯೇ ಹೊಡೆದಾಟ ನಡೆದಿದೆ. ಗಣೇಶೋತ್ಸವ ಶಿವಸೇನೆಗೆ ಪ್ರಮುಖ ಹಬ್ಬ. ಹಿಂದೆಲ್ಲ ಬಾಳಾಸಾಹೇಬ್ ಠಾಕ್ರೆ ಮುಂದಾಳತ್ವದಲ್ಲಿ ಗಣೇಶೋತ್ಸವ ನಡೆಯುತ್ತಿತ್ತು. ಅವರ ನಿಧನದ ನಂತರ ಉದ್ಧವ್ ಠಾಕ್ರೆ ನೇತೃತ್ವದಲ್ಲಿ ನಡೆಯುತ್ತಿತ್ತು. ಈ ವರ್ಷ, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆ ಮುಖ್ಯಮಂತ್ರಿಯಾಗಿದ್ದಾರೆ. ತಮ್ಮ ನೇತೃತ್ವದಲ್ಲಿ ಗಣೇಶೋತ್ಸವ ನಡೆಯಬೇಕೆಂಬ ಇರಾದೆ ಅವರದು. ಅದಕ್ಕೆ ಉದ್ಧವ್ ಬೆಂಬಲಿಗರು ಒಪ್ಪಿಲ್ಲ. ಹೀಗಾಗಿ ಉಭಯ ನಾಯಕರ ಬೆಂಬಲಿಗರ ನಡುವೆ ಹೊಡೆದಾಟ. ಗಣೇಶೋತ್ಸವದ ಮುಂದಾಳತ್ವ ವಹಿಸುವುದು ಎಂದರೆ ಶಿವಸೇನೆ ಪಕ್ಷದ ಮುಂದಾಳತ್ವ ವಹಿಸಿದಂತೆ. ಪಕ್ಷ ಯಾರಿಗೆ ಸೇರಬೇಕು ಎಂಬ ತಗಾದೆ ಈಗ ಸುಪ್ರೀಂ ಕೋರ್ಟ್ ಅಂಗಳದಲ್ಲಿದೆ. ಹೀಗಾಗಿ ಶಿವಸೈನಿಕರು ಬೀದಿಗಿಳಿದು ಹೊಡೆದಾಡುತ್ತಿದ್ದಾರೆ.