Light
Dark

ಆಂದೋಲನ ನಾಲ್ಕು ದಿಕ್ಕಿನಿಂದ : 05 ಸೋಮವಾರ 2022

ಮೋದಿ ಮಿತ್ರ ಈಗ ವಿಶ್ವದ ಮೂರನೇ ಶ್ರೀಮಂತ!

ಕಳೆದ ವಾರವಿಡೀ ಅತಿಯಾದ ಸಾಲ ಮಾಡಿದ ಕಾರಣದಿಂದ ಸುದ್ದಿಯಲ್ಲಿದ್ದ ಪ್ರಧಾನಿ ನರೇಂದ್ರ ಮೋದಿ ಅವರ ಆಪ್ತರಾದ ಗೌತಮ್ ಅದಾನಿ ಈಗ ಮತ್ತೆ ಸುದ್ದಿಯಾಗಿದ್ದಾರೆ. ಅವರೀಗ ವಿಶ್ವದ ಮೂರನೇ ಅತಿ ಶ್ರೀಮಂತ ವ್ಯಕ್ತಿ. ಎಲಾನ್ ಮಸ್ಕ್, ಜೆಫ್ ಬಿಜೋಸ್ ನಂತರದ ಸ್ಥಾನಕ್ಕೇರಿದ್ದಾರೆ. ವರ್ಷದ ಹಿಂದಷ್ಟೇ ಅವರು ಹತ್ತನೇ ಸ್ಥಾನದಲ್ಲಿದ್ದರು. ಕಳೆದ ವಾರ ನಾಲ್ಕನೇ ಸ್ಥಾನದಲ್ಲಿದ್ದರು. ಅದಾನಿ ಸಮೂಹದ ಕಂಪನಿಗಳ ಷೇರುಗಳ ಬೆಲೆ ನಿರೀಕ್ಷೆ ಮೀರಿ ಜಿಗಿಯುತ್ತಿರುವುದರಿಂದಾಗಿ ಗೌತಮ್ ಅದಾನಿ ಸಂಪತ್ತು ದಿನೇ ದಿನೇ ಶತಕೋಟಿಗಳ ಲೆಕ್ಕದಲ್ಲಿ ಹಿಗ್ಗುತ್ತಿದೆ. ಅವರ ಸಂಪತ್ತೀಗ ೧೪೧ ಬಿಲಿಯನ್ ಡಾಲರ್‌ಗಳು (೧೧,೨೮,೦೦೦ ಕೋಟಿ ರೂಪಾಯಿ). ೨೦೨೨ನೇ ಸಾಲಿನಲ್ಲಿ ಅವರ ಸಂಪತ್ತು ೬೪.೮ ಬಿಲಿಯನ್ ಡಾಲರ್ (೫,೧೮,೪೦೦ ಕೋಟಿ ರೂಪಾಯಿ) ವೃದ್ಧಿಸಿದೆ. ಷೇರುಪೇಟೆಯಲ್ಲಿ ಅದಾನಿ ಕಂಪನಿ ಷೇರುಗಳು ಜಿಗಿಯುತ್ತಿರುವ ವೇಗ ನೋಡಿದರೆ ಶೀಘ್ರದಲ್ಲೇ ಗೌತಮ್ ಅದಾನಿ ವಿಶ್ವದ ಎರಡನೇ ಅತಿಶ್ರೀಮಂತ ಸ್ಥಾನಕ್ಕೆ ಏರಲಿದ್ದಾರೆ.


ಪ್ರಧಾನಿ ಉಮೇದುವಾರಿಕೆಗೆ ನಿತೀಶ್ ತಯಾರಿ!

ಇತ್ತೀಚೆಗೆ ಮಿತ್ರ ಪಕ್ಷ ಬಿಜೆಪಿಯ ಸಂಗವನ್ನು ತೊರೆದ ಜೆಡಿಯು ನಾಯಕ ನಿತೀಶ್ ಕುಮಾರ್ ಅವರ ರಾಷ್ಟ್ರೀಯನಾಯಕನಾಗುವ ಕನಸುಗಳೀಗ ರೆಕ್ಕೆ ಬಿಚ್ಚಿವೆ. ಸೆಪ್ಟೆಂಬಂರ್ ೫ರಂದು ದೆಹಲಿ ಭೇಟಿ ನೀಡಲಿರುವ ನಿತೀಶ್ ಅಲ್ಲಿ ಆಮ್ ಆದ್ಮಿ ಪಕ್ಷದ ನಾಯಕ ಅರವಿಂದ್ ಕೇಜ್ರೀವಾಲ್, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಸೇರಿದಂತೆ ವಿವಿಧ ಪಕ್ಷಗಳ ಮುಖಂಡರನ್ನು ಭೇಟಿ ಮಾಡಲಿದ್ದಾರೆ. ೨೦೨೪ರ ಸಾರ್ವತ್ರಿಕ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಬಲ ಪ್ರತಿಸ್ಪರ್ಧಿಯೊಬ್ಬರ ಹುಡುಕಾಟದಲ್ಲಿ ಬಿಜೆಪಿಯೇತರ ಪಕ್ಷಗಳಿವೆ. ಅಧಿಕೃತ ವಿರೋಧ ಪಕ್ಷವಾಗಿದ್ದರೂ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರಿಗೆ ಪ್ರಧಾನಿ ಉಮೇದುವಾರಿಕೆ ಬಗ್ಗೆ ಆಸಕ್ತಿ ಇದ್ದಂತಿಲ್ಲ. ಈಗ ಆ ಆಸಕ್ತಿ ಮತ್ತು ಶಕ್ತಿ ಇರೋದು ಟಿಆರ್‌ಎಸ್ ನಾಯಕ, ತೆಲಂಗಾಣ ಮುಖ್ಯಮಂತ್ರಿ ಚಂದ್ರಶೇಖರ ರಾವ್ ಮತ್ತು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಅವರಿಗೆ. ಈ ಇಬ್ಬರೊಂದಿಗೂ ನಿತೀಶ್ ಅನೌಪಚಾರಿಕ ಮಾತುಕತೆ ನಡೆಸಿದ್ದಾರೆ. ಇನ್ನೇನಿದ್ದರೂ ಔಪಚಾರಿಕ ಮಾತುಕತೆ ನಡೆಸುವುದಷ್ಟೇ ಬಾಕಿ ಇದೆ. ಅದಾದ ನಂತರ ೨೦೨೪ರ ಜಿದ್ದಾಜಿದ್ದಿ ಯಾರ ನಡುವೆ ಎಂಬುದು ಸ್ಪಷ್ಟವಾಗಲಿದೆ.


ಧ್ವಜ ಬೀಸದ ಜಯ್ ಷಾ ವಿವಾದ

ದುಬೈನಲ್ಲಿ ನಡೆದ ಏಷಿಯಾ ಕಪ್ ಕ್ರಿಕೆಟ್ ಪಂದ್ಯಾವಳಿಯಲ್ಲಿ ಭಾರತ ತಂಡ ಪಾಕಿಸ್ತಾನ ತಂಡವನ್ನು ನಿರ್ಣಾಯಕವಾಗಿ ಮಣಿಸಿದಾಗ ಇಡೀ ದೇಶದಲ್ಲೆಡೆ ಸಂಭ್ರಮವೋ ಸಂಭ್ರಮ! ಕ್ರೀಡಾಂಗಣದಲ್ಲಿದ್ದವರಂತೂ ಹುಚ್ಚೆದ್ದು ಕುಣಿದಿದ್ದರು. ಬಿಸಿಸಿಐ ಕಾರ್ಯದರ್ಶಿ ಆಗಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಪುತ್ರ ಜಯ್ ಷಾ ಕೂಡ ಆ ಸಂದರ್ಭದಲ್ಲಿ ಇದ್ದರು. ಭಾರತ ಗೆಲವು ದಾಖಲಿಸಿದ ಕ್ಷಣದಲ್ಲಿ ಎಲ್ಲರೊಂದಿಗೆ ಸಂಭ್ರಮದಲ್ಲಿದ್ದ ಜಯ್ ಷಾ ಅವರಿಗೆ ಭಾರತದ ತ್ರಿವರ್ಣ ಧ್ವಜವನ್ನು ನೀಡಲು ವ್ಯಕ್ತಿಯೊಬ್ಬರು ಮುಂದಾದರು. ಜಯ್ ಷಾ ಧ್ವಜ ಸ್ವೀಕರಿಸಲು ನಿರಾಕರಿಸಿದರು. ಈ ವಿಡಿಯೋ ವೈರಲ್ ಆಗಿದೆ. ಜಯ್ ಷಾ ನಡವಳಿಕೆ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಮನೆ ಮನೆಗಳಲ್ಲಿ ದ್ವಜ ಹಾರಿಸುವಂತೆ ಪ್ರೇರೇಪಿಸುವ ಪಕ್ಷದ ನಾಯಕರ ಪುತ್ರರಾಗಿ ಜಯ್ ಷಾ ಅವರು ಭಾರತವು ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಗೆದ್ದ ಸಂಭ್ರಮದ ಸಮಯದಲ್ಲೂ ಧ್ವಜ ಬೀಸಲು ನಿರಾಕರಿಸಿದ್ದು ಮತ್ತಷ್ಟು ಆಕ್ರೋಶಕ್ಕೆ ಕಾರಣವಾಗಿದೆ. ನಾಲ್ಕೈದು ದಿನ ಕಳೆದರೂ ನೆಟ್ಟಿಗರಿಗೆ ಸಮಾಧಾನವೇ ಆಗಿಲ್ಲ! ಆ ವಿವಾದವೀಗ ಜಯ್ ಶಾ ಬದಲು ಬಿಜೆಪಿ ನಾಯಕರ ದೇಶಪ್ರೇಮದ ಚರ್ಚೆಯ ವಸ್ತುವಾಗಿ ಪರಿವರ್ತನೆಯಾಗಿದೆ.


ಪ್ರಧಾನಿ ಮೋದಿ ತವರಿನಲ್ಲಿ ಕೇಜ್ರೀವಾಲ್ ಹವಾ!

ವರ್ಷಾಂತ್ಯಕ್ಕೆ ಗುಜರಾತ್ ವಿಧಾನಸಭೆಗೆ ಚುನಾವಣೆ ನಡೆಯಲಿದೆ. ಆಮ್ ಆದ್ಮಿ ಪಕ್ಷ ಗುಜರಾತ್ ಚುನಾವಣಾ ಕಣಕ್ಕೆ ಇಳಿದಿರುವುದು ಬಿಜೆಪಿ ನಿದ್ದೆಗೆಡಿಸಿದೆ. ಬಿಜೆಪಿಗೀಗ ಕಾಂಗ್ರೆಸ್ ಗಿಂತ ಆಮ್ ಆದ್ಮಿ ಪಕ್ಷವೇ ಪ್ರಬಲ ಸ್ಪರ್ಧಿಯಾದಂತಿದೆ. ಅರವಿಂದ್ ಕೇಜ್ರಿವಾಲ್ ತಂಡವೀಗ ಗುಜರಾತಿನಲ್ಲೇ ಬೀಡುಬಿಟ್ಟು ಚುನಾವಣಾ ತಂತ್ರ ಹೆಣೆಯುತ್ತಿದೆ. ಇತ್ತೀಚೆಗಷ್ಟೇ ಪಂಜಾಬ್ ರಾಜ್ಯದಲ್ಲಿ ವಿಜಯ ಪತಾಕೆ ಹಾರಿಸಿರುವ ಕೇಜ್ರಿವಾಲ್ ತಂಡ ಆತ್ಮ ವಿಶ್ವಾಸ ಕಂಡು ಬಿಜೆಪಿ ನಾಯಕರು ಮತ್ತಷ್ಟು ಎಚ್ಚರಿಕೆಯಿಂದಿದ್ದಾರೆ. ಆಮ್ ಆದ್ಮಿ ಪಕ್ಷ ನೀಡುವ ಉಚಿತ ಶಿಕ್ಷಣ, ನೀರು, ವಿದ್ಯುತ್, ಆರೋಗ್ಯ ಯೋಜನೆಗಳಿಗೆ ಜನರು ಮನಸೋತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಇದನ್ನೇ ಪರೋಕ್ಷವಾಗಿ ರಾಜಕೀಯ ಪಕ್ಷಗಳ ರೇವಡಿ(ಎಳ್ಳುಂಡೆ) ಸಂಸ್ಕೃತಿ ದೇಶಕ್ಕೆ ಮಾರಕ ಎಂದಿದ್ದರು. ಅದಕ್ಕೆ ವ್ಯಾಪಕವಾದ ಟೀಕೆಯೂ ವ್ಯಕ್ತವಾಗಿತ್ತು. ದೆಹಲಿಯ ಸರ್ಕಾರಿ ಶಾಲೆಗಳ ಗುಣಮಟ್ಟದ ಬಗ್ಗೆ ವಿಶ್ವವ್ಯಾಪಿ ಚರ್ಚೆಯಾಗುತ್ತಿದೆ. ಈಗ ಗುಜರಾತಿನಲ್ಲಿ ತಮ್ಮ ಪಕ್ಷ ಅಧಿಕಾರಕ್ಕೆ ಬಂದರೆ ಗ್ರಾಮ ಸರ್ಪಂಚರಿಗೆ ಮಾಸಿಕ ೧೦,೦೦೦ ರೂ. ವೇತನ ನೀಡುವ ಜತೆಗೆ ಪ್ರತಿ ಗ್ರಾಮದ ಅಭಿವೃದ್ಧಿಗೆ ೧೦ ಲಕ್ಷ ರೂ.ಗಳನ್ನು ನೇರವಾಗಿ ಪಾವತಿಸುವ ಭರವಸೆ ನೀಡಿದ್ದಾರೆ ಕೇಜ್ರೀವಾಲ್!

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ