Mysore
27
overcast clouds

Social Media

ಭಾನುವಾರ, 14 ಜೂನ್ 2026
Light
Dark

‘ಬಿಡದಿ ಟೌನ್‌ಶಿಪ್ ವಿರುದ್ಧ ಕಾನೂನು ಹೋರಾಟ’: ಕೇಂದ್ರ ಬೃಹತ್ ಕೈಗಾರಿಕಾ ಖಾತೆ ಸಚಿವ ಎಚ್‌ಡಿಕೆ ಘೋಷಣೆ

ಬೆಂಗಳೂರು: ರೈತರ ತೀವ್ರ ವಿರೋಧದ ನಡುವೆ ಅಂತಿಮ ಅಧಿಸೂಚನೆ ಹೊರಡಿಸಿ ಬಿಡದಿ ಟೌನ್‌ಶಿಪ್ ಮಾಡಲು ಹೊರಟಿರುವ ರಾಜ್ಯ ಸರ್ಕಾರದ ವಿರುದ್ಧ ಕಾನೂನು ರೀತಿ ಹೋರಾಟ ನಡೆಸಲಾಗುವುದು ಎಂದು ಕೇಂದ್ರದ ಬೃಹತ್ ಕೈಗಾರಿಕೆ ಹಾಗೂ ಉಕ್ಕು ಖಾತೆ ಸಚಿವ ಹೆಚ್.ಡಿ.ಕುಮಾರಸ್ವಾಮಿ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಈ ಯೋಜನೆ ವಿರೋಧಿಸಿ ರೈತರು ನಿರಂತರ ಹೋರಾಟ ಮಾಡುತ್ತಿದ್ದಾರೆ. ರೈತರ ಪರವಾಗಿ ನ್ಯಾಯಾಲಯದಲ್ಲಿ ಹೋರಾಟ ನಡೆಸಲಾಗುವುದು. ಈ ಯೋಜನೆಯಲ್ಲಿ ನಾಡಿನ ಹಿತಾಸಕ್ತಿಗಿಂತ ರಿಯಲ್ ಎಸ್ಟೇಟ್‌ಗೆ ಅನುಕೂಲ ಮಾಡಿಕೊಟ್ಟು, ದುಡ್ಡು ಹೊಡೆಯುವ ಉದ್ದೇಶ ಅಡಗಿದೆ ಎಂದು ಆರೋಪಿಸಿದರು.

ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರು, ಬೆಂಗಳೂರಿನ ಒತ್ತಡ ಕಡಿಮೆ ಮಾಡಲು ಟೌನ್‌ಶಿಪ್ ಯೋಜನೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಕಳೆದ ಮೂರು ವರ್ಷಗಳಿಂದ ಬೆಂಗಳೂರಿನ ಸಮಸ್ಯೆ ಬಗೆಹರಿಸುವ ದಿಕ್ಕಿನಲ್ಲಿ ಸ್ಪಷ್ಟ ಕಾರ್ಯಕ್ರಮ ಅನುಷ್ಠಾನಗೊಳಿಸಿಲ್ಲ. ಬಿಡದಿ ಟೌನ್‌ಶಿಪ್ ಕುಮಾರಸ್ವಾಮಿ ಅವರ ಕೂಸು ಎನ್ನುತ್ತಾರೆ. ೨೦೦೬ರಲ್ಲಿ ಐದು ಟೌನ್‌ಶಿಪ್ ಮಾಡಲು ಹೊರಟಾಗ ಕಾಂಗ್ರೆಸ್‌ನವರು ತೀವ್ರ ವಿರೋಧ ವ್ಯಕ್ತಪಡಿಸಿ ರೈತರನ್ನು ಒಕ್ಕಲೆಬ್ಬಿಸುತ್ತಿದ್ದಾರೆ ಎಂದು ಆರೋಪಿಸಿದ್ದರು. ಈಗ ಏಕೆ ಅನುಷ್ಠಾನಗೊಳಿಸುತ್ತಿದ್ದಾರೆ ಎಂದು ಅವರು ಪ್ರಶ್ನಿಸಿದರು.

ಅರ್ಕಾವತಿ ಬಡಾವಣೆ ವಿಚಾರದಲ್ಲಿ ಏನಾಗಿದೆ ಎಂಬುದು ಎಲ್ಲರಿಗೂ ಗೊತ್ತಿದೆ. ೨೦ ವರ್ಷಗಳ ಹಿಂದಿನ ಯೋಜನೆ ಈಗ ಅನುಷ್ಠಾನಗೊಳಿಸುವ ಅಗತ್ಯವೇನು? ತೆಂಗು, ಬಾಳೆ, ಅಡಿಕೆ ಬೆಳೆಗಳಲ್ಲದೆ, ಆರು ಲಕ್ಷ ಲೀಟರ್ ನಿತ್ಯ ಹಾಲು ಉತ್ಪಾದನೆ ಆಗುತ್ತಿದೆ. ರೈತರನ್ನು ಒಕ್ಕಲೆಬ್ಬಿಸಿ ಇಂತಹ ಕಡೆ ಟೌನ್‌ಶಿಪ್ ಮಾಡುತ್ತಿರುವುದು ಸರಿಯಲ್ಲ. ಇದನ್ನು ಯಾರೂ ಮೆಚ್ಚುವುದಿಲ್ಲ. ಗುಜರಾತಿನಲ್ಲಿ ಭೂ ಕಂಪನವಾದ ನಂತರ ಬೆಳೆ ಬೆಳೆಯಲಾಗದ ಬರಡು ಭೂಮಿಯಲ್ಲಿ ಟೌನ್‌ಶಿಪ್ ಮಾಡಲಾಗಿದೆ. ಆದರೆ, ಇಲ್ಲಿ ಫಲವತ್ತಾದ ಭೂಮಿ ಇದೆ ಎಂದು ಅವರು ಹೇಳಿದರು.

ಈಗಿನ ಮುಖ್ಯಮಂತ್ರಿ ಬಿಎಂಐಸಿಪಿ ಅಧ್ಯಕ್ಷರಾಗಿದ್ದ ಅವಧಿಯಲ್ಲಿ ಒಂದು ಲಕ್ಷ ಎಕರೆ ಸ್ವಾಧೀನ ಮಾಡಲಾಗಿದೆ. ಅದರಿಂದ ರೈತರಿಗಾಗಿರುವ ತೊಂದರೆ ಗೊತ್ತಿಲ್ಲವೆ? ಈಗಲೂ ಅವರೇ ಜಿಬಿಎ ಅಧ್ಯಕ್ಷರು ಎಂದು ಅವರು ಟೀಕಿಸಿದರು.

 

Tags:
error: Content is protected !!