ಕದಸಂಸ ಮುಖಂಡ ದೊಡ್ಡಿಂದುವಾಡಿ ಸಿದ್ದರಾಜು ಆಗ್ರಹ
ಚಾಮರಾಜನಗರ: ಪಟ್ಟಣದ ಬಿ.ಪಿ.ಎಲ್ ಪಡಿತರದಾರರಿಗೆ ಸೀಮೆಎಣ್ಣೆ ವಿತರಿಸಬೇಕು ಹಾಗೂ ಗ್ರಾಮೀಣ ಬಿ.ಪಿ.ಎಲ್ ಪಡಿತರದಾರರಿಗೆ ಸೀಮೆಎಣ್ಣೆ ಹಂಚಿಕೆ ಹೆಚ್ಚಿಸಬೇಕು ಎಂದು ಕರ್ನಾಟಕ ದಲಿತ ಸಂಘರ್ಷ ಸಮಿತಿ ಮೈಸೂರು ವಿಭಾಗೀಯ ಸಂಚಾಲಕ ದೊಡ್ಡಿಂದುವಾಡಿ ಸಿದ್ದರಾಜು ರಾಜ್ಯ ಸರ್ಕಾರವನ್ನು ಆಗ್ರಹಿಸಿದರು.
ಬಿ.ಜೆ.ಪಿ. ನೇತೃತ್ವದ ಸರ್ಕಾರ ಅಧಿಕಾರ ಹಿಡಿದ ಬಳಿಕ ೨೦೧೬ರ ಸೆಪ್ಟೆಂಬರ್‌ನಿoದ ಪಟ್ಟಣ ಮತ್ತು ಗ್ರಾಮಾಂತರ ಪ್ರದೇಶಗಳ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ವಿತರಿಸುತ್ತಿದ್ದ ೫ ಲೀ.ಸೀಮೆಎಣ್ಣೆಯನ್ನು 2 ಲೀ.ಗೆ ಕಡಿತಗೊಳಿಸದೆ. ಪಟ್ಟಣ ಪ್ರದೇಶಗಳ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಣೆಯನ್ನೇ ನಿಲ್ಲಿಸಿದೆ ಎಂದು ಸುದ್ದಿಗೋಷ್ಠಿಯಲ್ಲಿ ದೂರಿದರು.
೨೦೨೦ರ ಅಕ್ಟೋಬರ್‌ನಿಂದ ಗ್ರಾಮಾಂತರ ಪ್ರದೇಶಗಳ ಬಿ.ಪಿ.ಎಲ್ ಪಡಿತರ ಚೀಟಿದಾರರಿಗೆ ಸೀಮೆಎಣ್ಣೆ ವಿತರಿಸುವ ಪ್ರಮಾಣವನ್ನು ೨ ಲೀಟರ್‌ಗೆ ಕಡಿತ ಮಾಡಿದೆ. ಇದನ್ನು ಪ್ರಶ್ನಿಸಿ ಬಿ.ಪಿ.ಎಲ್ ಪಡಿತರ ಚೀಟಿದಾರರು ಹೈಕೋರ್ಟ್ನಲ್ಲಿ ಪಿ.ಐ.ಎಲ್ ಹಾಕಲಾಗಿತ್ತು. ಗ್ರಾಮಾಂತರ ಪಡಿತರ ಚೀಟಿದಾರರಿಗೆ ಹಿಂದಿನ ಆದೇಶದ ಪ್ರಕಾರ ೩ ಲೀ. ಸೀಮೆಣ್ಣೆ ವಿತರಿಸುವಂತೆ ಹೈಕೋರ್ಟ್ ಆದೇಶಿಸಿದ್ದರೂ ರಾಜ್ಯ ಸರ್ಕಾರ ಉಲ್ಲಂಘಿಸಿದೆ. ೨೦೨೨ರ ಏಪ್ರಿಲ್‌ನಿಂದ ವಿತರಣೆ ಪ್ರಮಾಣವನ್ನು ಕಡಿತಗೊಳಿಸಿ ೧.೫ ಲೀ.ನಂತೆ ವಿತರಿಸುತ್ತಿದೆ ಎಂದು ದೂರಿದರು.
ನಿರಂತರ ವಿದ್ಯುತ್ ಕಡಿತದ ಸಮಸ್ಯೆಯನ್ನು ಎದುರಿಸುತ್ತಿರುವ ಗ್ರಾಮೀಣ ಜನರಿಗೆ ದೀಪ ಉರಿಸಲು ಸೀಮೆಣ್ಣೆ ಇಲ್ಲದಾಗಿದೆ. ವಿದ್ಯಾರ್ಥಿಗಳ ಶೈಕ್ಷಣಿಕ ಜೀವನದ ಮೇಲೆ ಪರಿಣಾಮ ಬೀರಲಿದೆ. ಜಿಲ್ಲೆಯನ್ನು ಬೆಟ್ಟಗುಡ್ಡ ಪ್ರದೇಶವೆಂದು ಪರಿಗಣಿಸಿ ಪ್ರತಿ ತಿಂಗಳು ೫ ಲೀ.ನಂತೆ ಸೀಮೆಎಣ್ಣೆ ವಿತರಿಸಬೇಕೆಂದು ಆಗ್ರಹಿಸಿದರು.
ಸಗಟು ಸೀಮೆಎಣ್ಣೆ ವಿತರಕರಿಗೆ ಆಯಿಲ್ ಕಂಪನಿಯವರು ಪ್ರತಿ ೧೨ ಸಾವಿರ ಲೀ.ಲೋಡಿಗೆ ಹೆಚ್ಚುವರಿಯಾಗಿ ೬ ಲಕ್ಷ ರೂ ಪಡೆಯುತ್ತಾರೆ. ೧-೨ ತಿಂಗಳ ಬಳಿಕ ಅವರಿಗೆ ರಾಜ್ಯ ಸರ್ಕಾರದಿಂದ ಹಣ ಪಾವತಿಯಾಗುತ್ತಿದೆ. ಆದ್ದರಿಂದ ಅವರು ಪ್ರತಿ ತಿಂಗಳು ಸೀಮೆಎಣ್ಣೆ ಎತ್ತುವಳಿ ಮಾಡಿ ವಿತರಿಸುತ್ತಿಲ್ಲ. ಈ ಸಮಸ್ಯೆಯನ್ನು ಪರಿಹರಿಸುವಂತೆ ಮುಖ್ಯಮಂತ್ರಿಗೆ ಮನವಿ ಸಲ್ಲಿಸಲಾಗಿದೆ ಎಂದರು.
ಗೋಷ್ಠಿಯಲ್ಲಿ ಮುಖಂಡರಾದ ಸಿ.ಎಂ.ಕೃಷ್ಣಮೂರ್ತಿ, ಮಹದೇವಸ್ವಾಮಿ, ಕೆ.ನಾಗರಾಜು, ಧನಂಜಯ್, ಹಿಂಡಯ್ಯ ಹಾಜರಿದ್ದರು.