ರಾಜ್ಯಾದ್ಯಂತ ಎನ್ ಐಎ ದಾಳಿ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಸಹಿತ ಹಲವರು ವಶಕ್ಕೆ
ಮೈಸೂರು: ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸೇರಿದಂತೆ ಕೋಮು ದ್ವೇಷದ ಹಿನ್ನೆಲೆಯ ಪ್ರಕರಣಗಳ ವಿಚಾರಣೆ ನಡೆಸುತ್ತಿರುವ ಎನ್ ಐಎ ರಾಜ್ಯದ ಹಲವು ಭಾಗಗಳಲ್ಲಿ ಇಂದು ದಾಳಿ ನಡೆಸಿ ಹಲವರನ್ನು ಬಂಧಿಸಿದೆ.
ಪ್ರವಾಸಿ ನಗರಿ ಮೈಸೂರಿನಲ್ಲಿ ಪಿಎಫ್ಐ ಮಾಜಿ ಕಾರ್ಯದರ್ಶಿಯನ್ನು ವಶಕ್ಕೆ ಪಡೆಯಲಾಗಿದೆ.
ಸುಲೈಮಾನ್ ಬಂಧಿತ ಆರೋಪಿಯಾಗಿದ್ದು, ಮೈಸೂರಿನ ಮಂಡಿಮೊಹಲ್ಲಾದಲ್ಲಿರುವ ಸುಲೈಮಾನ್ ಮನೆ ಮೇಲೆ ದಾಳಿ ಮಾಡಿ ವಶಕ್ಕೆ ಪಡೆಯಲಾಗಿದೆ.
ಇಂದು ಮುಂಜಾನೆ ದಿಢೀರ್ ದಾಳಿ ಮಾಡಿ ಸುಲೈಮಾನ್ ವಶಕ್ಕೆ ಪಡೆದ ಎಎನ್ಐ ಅಧಿಕಾರಿಗಳು, ಮೈಸೂರಿನ ಅಜ್ಞಾತ ಸ್ಥಳದಲ್ಲಿ ವಿಚಾರಣೆ ನಡೆಸುತ್ತಿದ್ದಾರೆ.
ಇವನ್ನಲ್ಲದೆ ಪ್ರವೀಣ್ ನೆಟ್ಟಾರು ಹತ್ಯೆ ಪ್ರಕರಣ ಸಂಬಂಧ ಮತ್ತೆ ಮೂವರನ್ನು ಬಂಧಿಸಿದ ಎನ್ಐಎ ತನಿಖೆ ಚುರುಕುಗೊಳಿಸಿದೆ.
ಬೆಳ್ಳಾರೆ ಗ್ರಾ.ಪಂಚಾಯತ್ ಸದಸ್ಯ ಇಕ್ಬಾಲ್ ಬೆಳ್ಳಾರೆ, ಎಸ್‌ಡಿಪಿಐ ರಾಜ್ಯ ಕಾರ್ಯದರ್ಶಿ ಶಾಫಿ ಬೆಳ್ಳಾರೆ, ಸುಳ್ಯದ ಇಬ್ರಾಹಿಂ ಶಾರನ್ನು ಬಂಧಿಸಿದ ಎನ್ಐಎ ಉಪ್ಪಿನಂಗಡಿ,ಸುಳ್ಯದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.
ಹುಬ್ಬಳ್ಳಿ- ಹುಬ್ಬಳ್ಳಿಯಲ್ಲೂ ಎನ್ಐಎ ದಾಳಿ ಮಾಡಿದ್ದು, ಎಸ್ ಡಿಪಿಐ ಮುಖಂಡ ಇಸ್ಮಾಯಿಲ್ ನಾಲಾಬಂದ್ ವಿಚಾರಣೆ ನಡೆಸಿದ್ದಾರೆ.
ಹಳೇ ಹುಬ್ಬಳ್ಳಿಯ ನೂರಾನಿ ಪ್ಲಾಟ್ ನಲ್ಲಿರುವ ಮನೆ ದಾಳಿ ಮಾಡಿದ್ದು, ಕಸಬಾಪೇಟ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿರುವ ಕಚೇರಿಯ ಮೇಲೂ ದಾಳಿ, ಪರಿಶೀಲನೆ ನಡೆಸಿದ್ದಾರೆ.
ಬೆಳಗಿನ ಜಾವ ನಾಲ್ಕು ಗಂಟೆಗೆ ರಾಜ್ಯದ ನಾನಾ ಭಾಗಗಳಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದಾರೆ.





