ಮೈಸೂರು : ರಾಜ್ಯದಲ್ಲಿ ಆಡಳಿತ ಯಂತ್ರ ಸಂಪೂರ್ಣ ಕುಸಿದಿದ್ದು, ದಿನ ಬೆಳಗಾದರೆ ಕಚ್ಚಾಟ, ತಮ್ಮ ಕಷ್ಟಸುಖಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿರುವ ಕಾರಣ ರೈತರ ಸಮಸ್ಯೆ ಆಲಿಸಲು ಸಾಧ್ಯವಿಲ್ಲದಂತಾಗಿದೆ ಎಂದು ಹುಣಸೂರು ಕ್ಷೇತ್ರದ ಶಾಸಕ ಜಿ.ಡಿ.ಹರೀಶ್ ಗೌಡ ಆರೋಪಿಸಿದರು.
ಮೈಸೂರಿನಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ರಾಜ್ಯದಲ್ಲಿ ಮಳೆ ಬಂದು ರೈತರ ಬೆಳೆಗಳು ನಷ್ಟವಾಗಿದೆ. ರೈತರಿಗೆ ಯಾವ ಪ್ರಮಾಣದಲ್ಲಿ ಬೆಳೆ ಪರಿಹಾರ ಕೊಡಬೇಕೆಂದು ಚಿಂತನೆಯನ್ನೇ ಮಾಡಿಲ್ಲ. ಎಷ್ಟುಕೊಡಬೇಕೆಂದು ಚರ್ಚೆಯನ್ನೇ ಮಾಡದೆ ಸರ್ಕಾರ ಕಾಲಾಹರಣ ಮಾಡುತ್ತಿದೆ ಎಂದು ಕಿಡಿಕಾರಿದರು.
ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಆಂತರಿಕ ಕಚ್ಚಾಟವಿದೆ ತಮ್ಮ ಕಷ್ಟ ಸುಖಗಳನ್ನು ಪರಿಹರಿಸಿಕೊಳ್ಳಲು ಮುಂದಾಗಿದ್ದಾರೆ. ಜನರ ಸಮಸ್ಯೆ ಪರಿಹಾರಕ್ಕಿಂತ ತಮ್ಮ ಸಮಸ್ಯೆ ಹೆಚ್ಚಾಗಿದೆ ಎಂದು ಹೇಳಿದರು.
ಉತ್ತರಕರ್ನಾಟಕದ ಭಾಗಗಳಲ್ಲಿ ರೈತರು ಕಣ್ಣೀರು ಹಾಕುತ್ತಿದ್ದಾರೆ. ಮಳೆಯಿಂದಾಗಿ ಆಗಿರುವ ಅನಾಹುತಗಳ ಕುರಿತು ಸರ್ವೆ ಮಾಡಿಲ್ಲ. ಸಚಿವರು ಯಾವುದೇ ಗಮನಹರಿಸಿಲ್ಲ ಎಂದು ಟೀಕಿಸಿದರು.
ಕಾನೂನು ಸುವ್ಯವಸ್ಥೆ ಬಗ್ಗೆ ಹೇಳುವುದೇ ಬೇಡ. ಮೈಸೂರಿನಲ್ಲಿ ಅಮಾಯಕ ಬಾಲಕಿ ಮೇಲೆ ಅತ್ಯಾಚಾರ,ಕೊಲೆ ನಡೆದಿರುವಘಟನೆ ಮನಸ್ಸಿಗೆ ತುಂಬಾ ನೋವಾಗಿದೆ. ಪೊಲೀಸ್ ಇಲಾಖೆ ನಿಯಂತ್ರಣ ತಪ್ಪಿದೆ ಎಂದರು.
ಇದನ್ನೂ ಓದಿ:-ವರುಣನ ಆರ್ಭಟಕ್ಕೆ ನಾಟಿ ಗದ್ದೆಗಳು ಮುಳುಗಡೆ ; ಗ್ರಾಮದ ಮುಖ್ಯರಸ್ತೆಯೂ ಜಲಾವೃತ
ಸಹಕಾರ ಕ್ಷೇತ್ರದಲ್ಲಿ ಮೀಸಲಾತಿ ಜಾರಿಗೆ ತರಲು ಯಾವುದೇವಿರೋಧವಿಲ್ಲ. ಆದರೆ, ಸಹಕಾರ ಕ್ಷೇತ್ರದಲ್ಲಿ ಸರ್ಕಾರದ ಹಸ್ತಕ್ಷೇಪ ಇರಕೂಡದೆಂದು ನಮ್ಮ ಆಗ್ರಹವಾಗಿದೆ. ಎಂಸಿಡಿಸಿಸಿ ಆಡಳಿತ ಮಂಡಳಿ ಚುನಾವಣೆಯಲ್ಲಿ ಯಾವ ರೀತಿ ನಡೆದಿದೆ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರ. ಖುದ್ದು ಸಹಕಾರ ಸಚಿವರಾಗಿದ್ದ ಕೆ.ಎನ್.ರಾಜಣ್ಣ ಅವರೇ ಚುನಾವಣೆಯನ್ನು ಯಾವ ರೀತಿ ನಡೆಸಿದ್ದೇವೆಂದು ಹೇಳಿರುವುದಕ್ಕಿಂತಲೂ ಬೇರೆ ಸಾಕ್ಷಿ ಬೇಕಾಗಿಲ್ಲ ಎಂದು ನುಡಿದರು.
ಎಂಸಿಡಿಸಿಸಿ ಚುನಾವಣೆಯಲ್ಲಿ ನಾವು ಯಾವ ರೀತಿ ಉತ್ತರ ಕೊಟ್ಟಿದ್ದೇವೆಂದು ಯಾರ‍್ಯಾರಿಗೆ ತಲುಪಬೇಕಿತ್ತೋ ಅದು ತಲುಪಿದೆ. ಕಾಣದ ಕೈಗಳ ಪ್ರಭಾವಯಾವ ರೀತಿ ಕೆಲಸ ಮಾಡಿತ್ತು ಎಂಬುದು ಗೊತ್ತಿದೆ. ಎಂಸಿಡಿಸಿಸಿ ಬ್ಯಾಂಕ್ ಚುನಾವಣೆಗೂ-ಜಿಲ್ಲಾ ಸಹಕಾರ ಒಕ್ಕೂಟದ ಆಡಳಿತ ಮಂಡಳಿ ಚುನಾವಣೆಗೂ ಹೋಲಿಸಲ್ಲ ಎಂದರು. ಸಹಕಾರ ಸಂಘಗಳಿಗೆ ಕಾಲಕಾಲಕ್ಕೆ ಚುನಾವಣೆ ನಡೆಸಬೇಕು ಎಂಬುದು ನಮ್ಮ ನಿಲುವು.ಅದಕ್ಕಾಗಿಯೇ ಚುನಾವಣೆ ನಡೆಸುವಂತೆ ನ್ಯಾಯಾಲಯದ ಮೊರೆ ಹೋಗಿದ್ದೇವೆ. ಸರ್ಕಾರದ ಹಸ್ತಕ್ಷೇಪದ ಪರಿಣಾಮ ಮೂರು ಕ್ಷೇತ್ರಗಳ ಚುನಾವಣೆ ವಿಚಾರ ನ್ಯಾಯಾಲಯದಲ್ಲಿದೆ. ಮೂರು ಕ್ಷೇತ್ರಗಳಿಗೆ ಚುನಾವಣೆಯನ್ನೇ ನಡೆಸಲು ಸಾಧ್ಯವಾಗಿಲ್ಲ ಎಂದು ಬೇಸರಿಸಿದರು.
ಸಹಕಾರ ಸಂಘಗಳಿಂದ ರೈತರಿಗೆ ಸಾಕಷ್ಟು ಅನುಕೂಲವಾಗಲಿದೆ. ಸಹಕಾರಿಗಳೇ ನಡೆಸುವಂತಹ ಸಂಸ್ಥೆಗಳು ಉಳಿಯಬೇಕು. ಸರ್ಕಾರ ನಾನಾ ಕಾರಣಕ್ಕಾಗಿ ಸ್ವಾಯತ್ತ ಸಂಸ್ಥೆಗಳ ಮೇಲೆ ಹಿಡಿತ ಸಾಧಿಸಲು ಮುಂದಾಗುತ್ತಿದೆ ಎಂದು ಅತೃಪ್ತಿವ್ಯಕ್ತಪಡಿಸಿದರು.





