ನಂಜನಗೂಡು : ವರುಣನ ಆರ್ಭಟಕ್ಕೆ ನಾಟಿ ಮಾಡಿದ್ದ ಗದ್ದೆಗಳು ಹಾಗೂ ಗ್ರಾಮದ ಮುಖ್ಯ ರಸ್ತೆ ಸಂಪೂರ್ಣವಾಗಿ ಮುಳುಗಡೆಯಾಗಿರುವುದು ತಾಲ್ಲೂಕಿನ ಹೊಸಹಳ್ಳಿ ಗ್ರಾಮದಲ್ಲಿ ನಡೆದಿದೆ.
ಶುಕ್ರವಾರ ರಾತ್ರಿ ಸುರಿದ ಧಾರಾಕಾರ ಮಳೆಯಿಂದಾಗಿ ಗುಂಡ್ಲುಪೇಟೆ-ಊಟಿ ಮುಖ್ಯರಸ್ತೆಯ ಬದಿಯಲ್ಲಿದ್ದ ಸುಮಾರು 15 ಎಕರೆ ಪ್ರದೇಶದಲ್ಲಿ ಬೆಳೆದಿದ್ದ ಭತ್ತದ ಫಸಲು ಹಾನಿಯಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿರುವ ಹೊಸಹಳ್ಳಿ ಗ್ರಾಮದ ಬಳಿ ಮೇಲ್ಸೇತುವೆ ಕಾಮಗಾರಿ ನಡೆಸಲಾಗುತ್ತಿದ್ದು, ಇದರಿಂದ ಕಬಿನಿ ಬಲದಂಡೆ ನಾಲೆಯ 24ನೇ ಗೇಟ್ ಇಂದ ಬರುತ್ತಿರುವ ನೀರು ಮತ್ತು ಮಳೆ ನೀರು ಜೊತೆಗೂಡಿ ಇಷ್ಟೆಲ್ಲ ಅವಾಂತರಗಳಿಗೆ ಕಾರಣವಾಗಿದೆ ಎಂದು ಗ್ರಾಮಸ್ಥರು ದೂರಿದ್ದಾರೆ.
ಇದನ್ನು ಓದಿ : ರಾಜ್ಯದಲ್ಲಿ ನಾಳೆಯೂ ವರುಣನ ಅಬ್ಬರ, ಮೈಸೂರಿಗೆ ಯೆಲ್ಲೋ ಅಲರ್ಟ್
ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಮುಖ್ಯರಸ್ತೆಯಲ್ಲಿ ನೀರು ಹರಿಯುತ್ತಿದ್ದು ಇದರಿಂದ ಸಂಚಾರಕ್ಕೆ ಅಡಚಣೆಯಾಗಿದೆ. ರಸ್ತೆಯು ಜಲಾವೃತವಾಗಿರುವುದರಿಂದ ಗ್ರಾಮಸ್ಥರು ಸಂಚರಿಸಲು ತುಂಬಾ ತೊಂದರೆಯಾಗಿದೆ. ಕೂಡಲೇ ಸಂಬಂಧಪಟ್ಟ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿ ರೈತರಿಗೆ ಸೂಕ್ತ ಪರಿಹಾರ ನೀಡಬೇಕು. ನೀರು ಸರಾಗವಾಗಿ ಹರಿದು ಹೋಗುವಂತೆ ಕಾಮಗಾರಿಯನ್ನು ಮಾಡಬೇಕು ಇಲ್ಲವಾದಲ್ಲಿ ಉಗ್ರ ಹೋರಾಟ ಮಾಡಲಾಗುತ್ತದೆ ಎಂದು ಗ್ರಾಮದ ರೈತರಾದ ಮೂರ್ತಿ, ಗಿರೀಶ್, ಚೆನ್ನಯ್ಯ, ಸಿದ್ದು, ಆಟೋ ರವಿ ಎಚ್ಚರಿಕೆ ನೀಡಿದ್ದಾರೆ.





