ಮೈಸೂರು: ನೌಕರರಿಗೆ ವೃತ್ತಿಯಿಂದ ಮಾತ್ರ ನಿವೃತ್ತಿ ಆಗುತ್ತದೆ ಹೊರತು ಜ್ಞಾನ ಮತ್ತು ಅನುಭವಕ್ಕೆ ಎಂದಿಗೂ ನಿವೃತ್ತಿಯಾಗುವುದಿಲ್ಲ ಎಂದು ಮಾಜಿ ಶಾಸಕ ಎಂ.ಕೆ ಸೋಮಶೇಖರ್ ಅಭಿಪ್ರಾಯಪಟ್ಟರು.
ಕುವೆಂಪು ನಗರದ ಚಿಕ್ಕಮ್ಮಾನಿಕೇತನ ಕಲ್ಯಾಣ ಮಂಟಪದಲ್ಲಿ ಶುಕ್ರವಾರ ನಡೆದ ವಿಶ್ರಾಂತ ಉದ್ಯೋಗಿಗಳ ಸಂಘ(ರಿ.) ಹಾಗೂ ಕರ್ನಾಟಕ ರಾಜ್ಯ ಸರ್ಕಾರಿ ನಿವೃತ್ತ ನೌಕರರ ಸಂಘ (ರಿ.) ದ 2023-24ನೇ ಸಾಲಿನ ವಾರ್ಷಿಕ ಮಹಾಸಭೆಯನ್ನು ಜ್ಯೋತಿ ಬೆಳಗುವ ಮೂಲಕ ವಿದ್ಯುಕ್ತವಾಗಿ ಚಾಲನೆ ನೀಡಿ ಅವರು ಮಾತನಾಡಿದರು.
ನಿವೃತ್ತ ಸರ್ಕಾರಿ ನೌಕರರು ಎಂದರೆ ಹಲವಾರು ವರ್ಷಗಳ ಸುಧೀರ್ಘ ಸೇವೆ ಸಲ್ಲಿಸಿದ ಅನುಭವಿಗಳು. ನಿವೃತ್ತರ ಅನುಭವಗಳು ಇವತ್ತಿನ ನೌಕರರ ಕೆಲಸ ಕಾರ್ಯಗಳಿಗೆ ತಳಹದಿಯಾಗುತ್ತದೆ. ಇವರ ನೌಕರಿಗೆ ವೃತ್ತಿಯಷ್ಟೆ ಹೊರತು ಅವರ ಅನುಭವಕ್ಕಲ್ಲ. ಅವರ ಅನುಭವಗಳನ್ನು ಇತರ ನೌಕರರಿಗೆ ಧಾರೆಯೆರಯ ಬೇಕು ಎಂದರು.
ಸರ್ಕಾರಿ ನೌಕರರು ತಮ್ಮ ವೃತ್ತಿಯುದ್ದಕ್ಕೂ ಇಡೀ ರಾಜ್ಯದ ವಿವಿಧ ಇಲಾಖೆಗಳಲ್ಲಿ, ವಿವಿಧ ಶ್ರೇಣಿಯಲ್ಲಿ ಕರ್ತವ್ಯ ನಿರ್ವಹಿಸಿ ರಾಜ್ಯದ ಸರ್ವತೋಮುಖ ಅಭಿವೃದ್ಧಿಗೆ ಕೊಡುಗೆ ನೀಡಿರುತ್ತಾರೆ. ಈ ಮೂಲಕ ಅವರು ಸಾಕಷ್ಟು ಅನುಭವ ಮತ್ತು ಅರಿವು ಸಂಪಾದಿಸಿರುತ್ತಾರೆ. ನಿವೃತ್ತರ ಸೇವೆ ಒಂದಲ್ಲ ಒಂದು ರೀತಿ ಸಮಾಜಕ್ಕೆ ಸಿಗುತ್ತಿರುತ್ತದೆ ಎಂದು ಹೇಳಿದರು.
ನೌಕರರು ನಿವೃತ್ತಿಯ ನಂತರವೂ ದೈಹಿಕ ಚಟುವಟಿಕೆಗಳನ್ನು ಮಾಡಿಕೊಂಡು ಸಧೃಡ ಆರೋಗ್ಯವನ್ನು ಕಾಯ್ದುಕೊಳ್ಳಬೇಕು ಎಂದು ಸಲಹೆ ನೀಡಿದ ಅವರು ನಿವೃತ್ತರ ಯಾವುದೇ ಸಮಸ್ಯೆಗಳಿಗೆ ದನಿಯಾಗುತ್ತೇನೆ ಎಂದು ಅಭಯ ನೀಡಿದರು.
ಕಾರ್ಯಕ್ರಮದಲ್ಲಿ ಸರ್ಕಾರಿ ನೌಕರರ ಸಂಘದ ಜಿಲ್ಲಾ ಅಧ್ಯಕ್ಷ ಗೋವಿಂದರಾಜು, ವಿಶ್ರಾಂತ ಉದ್ಯೋಗಿಗಳ ಸಂಘದ ಅಧ್ಯಕ್ಷ ಉಮಾಕಾಂತ್.ಬಿ.ಆರ್, ತಾಲೂಕು ಅಧ್ಯಕ್ಷರುಗಳಾದ ಸಣ್ಣಲಿಂಗಪ್ಪ , ಬಾಲಕೃಷ್ಣ, ಜೋಸೆಫ್ ಆರೋಕ್ಯ, ಎಂ.ಮಹದೇವಯ್ಯ, ಶಿವನಂಜೇಗೌಡ, ಗೋವಿಂದೇಗೌಡ ಸೇರಿದಂತೆ ಇನ್ನಿತರರು ಇದ್ದರು.