ಮೈಸೂರು : ವೇಶ್ಯಾವಾಟಿಕೆ ಅಡ್ಡೆ ಮೇಲೆ ದಾಳಿ ನಡೆಸಿರುವ ಜಿಲ್ಲಾ ಪೊಲೀಸರು, ಅನೈತಿಕ ಚಟುವಟಿಕೆಯಲ್ಲಿ ತೊಡಗಿದ್ದ 6 ಮಂದಿ ಪುರುಷರು ಹಾಗೂ ದಂಧೆ ನಡೆಸುತ್ತಿದ್ದ ಇಬ್ಬರನ್ನು ಬಂಧಿಸಿದ್ದು, ಇಬ್ಬರು ಯುವತಿಯರನ್ನು ರಕ್ಷಿಸಲಾಗಿದೆ.
ತಾಲ್ಲೂಕಿನ ಜಯಪುರ ಪೊಲೀಸ್ ಠಾಣೆ ವ್ಯಾಪ್ತಿಗೆ ಬರುವ ದಾಸನಕೊಪ್ಪಲು ಎಂಬ ಸ್ಥಳದ ಮನೆಯೊಂದರಲ್ಲಿ ಅನೈತಿಕ ಚಟುವಟಿಕೆಗಳು ನಡೆಯುತ್ತಿದೆ ಎಂಬ ಮಾಹಿತಿ ಮೇರೆಗೆ ಈ ದಾಳಿ ನಡೆದಿದೆ. ಅಮಾಯಕ ಹೆಣ್ಣು ಮಕ್ಕಳನ್ನು ಹಣದ ಆಮಿಷಹೊಡ್ದಿ ಕರೆತಂದು ವೇಶ್ಯಾವಾಟಿಕೆ ದಂಧೆಯನ್ನು ನಡೆಸಲಾಗುತ್ತಿತ್ತು. ಈ ವೇಶ್ಯವಾಟಿಕೆ ದಂಧೆಯನ್ನು ನಡೆಸುತ್ತಿದ್ದ ಮುಖ್ಯ ಆರೋಪಿ ಮಂಜು ಎಂಬಾತನನ್ನು ಹಾಗೂ ಮತೋರ್ವ ಪುರುಷ ಆರೋಪಿಯನ್ನು ಬಂಧಿಸಲಾಗಿದೆ. ಇದೇ ವೇಳೆ ಸ್ಥಳದಲ್ಲಿ ಇದ್ದ ಇಬ್ಬರು ಹೆಣ್ಣು ಮಕ್ಕಳನ್ನು ರಕ್ಷಣೆ ಮಾಡಲಾಗಿದೆ. ಅಲ್ಲದೆ ಈ ದಾಳಿ ಯಲ್ಲಿ 6 ಜನ ವಿಟಪುರುಷರುಗಳನ್ನು ಸಹ ಪೋಲೀಸರು ವಶಕ್ಕೆ ಪಡೆದಿದ್ದಾರೆ.
ದಂಧೆಯನ್ನು ನಡೆಸುತ್ತಿದ ಬಗ್ಗೆ ಮಾಹಿತಿಯನ್ನು ಪಡೆದ ಒಡನಾಡಿ ಸಂಸ್ಥೆಯು ತಕ್ಷಣ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ನೀಡಿದ್ದು, ಅವರು ಸೈಬರ್ ಕ್ರೈ ಠಾಣೆಯ ಇನ್ಸಪೆಕ್ಟರ್ ಸುನೀಲ್ ಅವರಿಗೆ ತಿಳಿಸಿ ತಂಡವನ್ನು ರಚನೆ ಮಾಡಿದ್ದಾರೆ.
ಸುನಿಲ್ ನೇತೃತ್ವದಲ್ಲಿ ಒಡನಾಡಿ ತಂಡವು ವೇಶ್ಯಾವಾಟಿಕೆ ನಡೆಯುತ್ತಿದ್ದ ದಂಧೆಯ ಮನೆಯ ಮೇಲೆ ಶನಿವಾರ ರಾತ್ರಿ ದಾಳಿ ನಡೆಸಲಾಗಿದೆ. ದಾಳಿಯ ವೇಳೆ 6 ವಿಟಪುರುಷರನ್ನು ವಶಕ್ಕೆ ಪಡೆದಿದ್ದು, ಇಬ್ಬರು ಯುವತಿಯರನ್ನು ರಕ್ಷಣೆ ಮಾಡಲಾಗಿದೆ. ಮುಖ್ಯ ಆರೋಪಿಯಾದ ಮಂಜು ಎಂಬಾತನು ಹಲವು ವರ್ಷಗಳಿಂದ ಬೇರೆ ಬೇರೆ ಮೂಲಗಳಿಂದ ಅಮಾಯಕ ಹೆಣ್ಣು ಮಕ್ಕಳನ್ನು ಕರೆಯಿಸಿ ವೇಶ್ಯಾವಾಟಿಕೆ ದಂಧೆಯನ್ನು ನಡೆಸುತ್ತಿದ್ದು, ಈ ದಂಧೆಯನ್ನು ನಡೆಸಲು ಈತ ನಗರ ಪ್ರದೇಶದಿಂದ ದೂರವಿರುವ ಬಡಾವಣೆಗಳನ್ನು ಆಯ್ಕೆ ಮಾಡಿಕೊಳ್ಳುತ್ತಿದ್ದ. ಅಲ್ಲದೆ 20 ದಿನ ಅಥವಾ 30 ದಿನಗಳಲ್ಲಿ ಮನೆಯನ್ನು ಬದಲಾಯಿಸುತ್ತಿದ್ದ, ಈ ರೀತಿಯಾಗಿ ಆರೋಪಿಯು ತನ್ನ ತಂತ್ರಗಾರಿಕೆಯನ್ನು ಬಳಸಿಕೊಂಡು ತುಂಬಾ ಚಾಣಾಕ್ಷತನದಿಂದ ದಂದೆಯನ್ನು ನಡೆಸುತ್ತಿದ್ದ ಎಂಬುದು ತನಿಖೆಯಿಂದ ಗೊತ್ತಾಗಿದೆ.
ಆರೋಪಿಗಳ ವಿರುದ್ದ ಮಾನವ ಕಳ್ಳ ಸಾಗಾಣಿಕೆ ಕಾಯ್ದೆ-1956 ಹಾಗೂ ಭಾರತೀಯ ನ್ಯಾಯ ಸಂಹಿತೆ-2023 ಕಾಯ್ದೆಯಡಿ ದೂರು ದಾಖಲಾಗಿದೆ. ದಾಳಿಯ ವೇಳೆ ಪೋಲಿಸ್ ಸಿಬ್ಬಂದಿಗಳು, ಒಡನಾಡಿ ಸಂಸ್ಥೆಯ ನಿರ್ದೇಶಕರಾದ ಸ್ಟ್ಯಾನ್ಲಿ ಪರಶು ಹಾಗೂ ಒಡನಾಡಿ ಸಂಸ್ಥೆಯ ಸಿಬ್ಬಂದಿಗಳಾದ ಕೆ.ಪ್ರದೀಪ್, ಬಾಲುಕುಮಾರ್, ಸಚಿನ್, ಮಣಿ, ಸುಮಾ, ಶಶಾಂಕ್, ನಾಝಿಯಾ ಬಾನು ಇದ್ದರು.