ನಂಜನಗೂಡು: ಮೈಸೂರು ಜಿಲ್ಲೆ ನಂಜನಗೂಡು ತಾಲ್ಲೂಕಿನ ತೊರವಳ್ಳಿ ಗ್ರಾಮದಲ್ಲಿ ಕಳೆದ ಕೆಲ ದಿನಗಳಿಂದ ತೀವ್ರ ಉಪಟಳ ನೀಡುತ್ತಿದ್ದ ಚಿರತೆಯೊಂದು ಬೋನಿಗೆ ಸೆರೆಯಾಗಿದ್ದು, ಗ್ರಾಮಸ್ಥರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.
ಗ್ರಾಮದ ಅಕ್ಕಪಕ್ಕ ಕಳೆದ ಕೆಲ ದಿನಗಳಿಂದ ಚಿರತೆ ಉಪಟಳ ನೀಡುತ್ತಾ ಸಾಕು ಪ್ರಾಣಿಗಳ ಮೇಲೆ ನಿರಂತರ ದಾಳಿ ನಡೆಸುತ್ತಾ ಬಂದಿತ್ತು. ಇದರಿಂದ ಭಯಭೀತರಾಗಿದ್ದ ಗ್ರಾಮಸ್ಥರು ಅರಣ್ಯ ಇಲಾಖೆಗೆ ಬೋನು ಅಳವಡಿಸುವಂತೆ ಮನವಿ ಮಾಡಿದ್ದರು. ಗ್ರಾಮಸ್ಥರ ಮನವಿಗೆ ಸ್ಪಂದಿಸಿದ ಅರಣ್ಯಾಧಿಕಾರಿಗಳು ಗ್ರಾಮದ ಹೊರವಲಯದಲ್ಲಿ ಬೋನು ಅಳವಡಿಸಿದ್ದರು. ಬೋನಿಗೆ ಒಳಗೆ ನಾಯಿಯನ್ನು ಇಟ್ಟಿದ್ದ ಪರಿಣಾಮ ಇಂದು ಚಿರತೆ ಬೋನಿಗೆ ಬಿದ್ದಿದೆ.
ಚಿರತೆ ಸೆರೆಯಾಗುತ್ತಿದ್ದಂತೆ ನೆಮ್ಮದಿಯ ನಿಟ್ಟುಸಿರು ಬಿಟ್ಟ ಗ್ರಾಮಸ್ಥರು, ಈ ಭಾಗದಲ್ಲಿ ಇನ್ನೂ ಅನೇಕ ಚಿರತೆಗಳಿದ್ದು, ಅವುಗಳನ್ನು ಕೂಡ ಸೆರೆಹಿಡಿಯುವಂತೆ ಆಗ್ರಹಿಸಿದ್ದಾರೆ.
ಇನ್ನು ಕಳೆದ ಕೆಲವು ದಿನಗಳ ಹಿಂದೆಯಷ್ಟೇ ಪಕ್ಕದ ದಾಸನೂರು ಎಂಬ ಗ್ರಾಮದಲ್ಲಿ ಎರಡು ಚಿರತೆಗಳು ಬೋನಿಗೆ ಬಿದ್ದಿದ್ದವು. ಈಗ ಮತ್ತೊಂದು ಚಿರತೆ ಬೋನಿಗೆ ಬಿದ್ದು ಲಾಕ್ ಆಗಿದ್ದು, ಇದನ್ನು ದೂರದ ಅರಣ್ಯಕ್ಕೆ ಬಿಡಲಾಗಿದೆ.