Mysore
28
overcast clouds

Social Media

ಶುಕ್ರವಾರ, 10 ಜುಲೈ 2026
Light
Dark

ಮೈಸೂರು | ಬೆಳ್ಳಂಬೆಳಗ್ಗೆ ಜೆಸಿಬಿ ಘರ್ಜನೆ ; ಫುಟ್‌ಪಾತ್ ಆಕ್ರಮಿಸಿದ್ದ 30 ಅಂಗಡಿಗಳಿಗೆ ಶಾಕ್‌

ಮೈಸೂರು : ಫುಟ್‌ಪಾತ್‌ಗಳನ್ನು ಅತಿಕ್ರಮಿಸಿದ್ದ ಅನಧಿಕೃತ ವ್ಯಾಪಾರಿಗಳ ವಿರುದ್ಧ ಮೈಸೂರು ಮಹಾನಗರ ಪಾಲಿಕೆ ಶುಕ್ರವಾರ ಖಡಕ್ಕಾಗಿ ಕಾರ್ಯಾಚರಣೆ ನಡೆಸಿತು. ವಲಯ-5 ವ್ಯಾಪ್ತಿಯ ಮೇಟಗಳ್ಳಿ ಕೆ.ಆರ್.ಎಸ್. ಮುಖ್ಯ ರಸ್ತೆಯಲ್ಲಿ ಜೆಸಿಬಿ ಬಳಸಿ ಭರ್ಜರಿ ತೆರವು ಕಾರ್ಯ ನಡೆಯಿತು.

ಬೆಳಿಗ್ಗೆಯಿಂದ ಆರಂಭವಾದ ಕಾರ್ಯಾಚರಣೆಯಲ್ಲಿ ಪಾಲಿಕೆ ಸಿಬ್ಬಂದಿ ಫುಟ್‌ಪಾತ್ ಹಾಗೂ ಸಾರ್ವಜನಿಕ ಸ್ಥಳಗಳಲ್ಲಿ ವರ್ಷಗಳಿಂದ ಇದ್ದ ಪೆಟ್ಟಿಗೆ ಅಂಗಡಿ, ಶೆಡ್, ತಳ್ಳುವ ಗಾಡಿ ಮತ್ತು ಅನಧಿಕೃತ ಜಾಹೀರಾತು ಫಲಕಗಳನ್ನು ತೆರವುಗೊಳಿಸಿದರು. ಅಂದಾಜು 30ಕ್ಕೂ ಹೆಚ್ಚು ಅಂಗಡಿಗಳನ್ನು ಜೆಸಿಬಿ ಮೂಲಕ ಕೆಡವಲಾಯಿತು.

ಒಂದೆಡೆ ಸಾರ್ವಜನಿಕರು “ಈಗಾದರೂ ಫುಟ್‌ಪಾತ್‌ನಲ್ಲಿ ನಡೆದಾಡಲು ಜಾಗ ಸಿಕ್ಕಿತು” ಎಂದು ಸಮಾಧಾನ ವ್ಯಕ್ತಪಡಿಸಿದರೆ, ಇನ್ನೊಂದೆಡೆ ಹಠಾತ್ ತೆರವಿನಿಂದ ಜೀವನೋಪಾಯ ಕಳೆದುಕೊಂಡ ವ್ಯಾಪಾರಿಗಳಲ್ಲಿ ಆತಂಕ ಮನೆಮಾಡಿದೆ.

ಆಯುಕ್ತೆ ಸವಿತಾ ಸೂಚನೆ ಮೇರೆಗೆ ಕಾರ್ಯಾಚರಣೆ
ಪಾಲಿಕೆಯ ನೂತನ ಆಯುಕ್ತೆ ಎಂ.ಕೆ. ಸವಿತಾ ಅವರ ನಿರ್ದೇಶನದಂತೆ ವಲಯ-5ರ ಎ.ಇ.ಇ ಯತೀಂದ್ರ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಯಿತು. ವರ್ಕ್ ಇನ್ಸ್‌ಪೆಕ್ಟರ್ ನಾಗರಾಜು, ಹೆಲ್ತ್ ಇನ್ಸ್‌ಪೆಕ್ಟರ್ ಗೀತಾ ಹಾಗೂ ಮೇಟಗಳ್ಳಿ ಪೊಲೀಸ್ ಠಾಣೆ ಇನ್ಸ್‌ಪೆಕ್ಟರ್ ಅರುಣ್ ನೇತೃತ್ವದ ಪೊಲೀಸ್ ತಂಡ ಭದ್ರತೆ ಒದಗಿಸಿತು.

ಇನ್ನೂ ಮುಂದುವರಿಯಲಿದೆ
“ನಗರದ ಎಲ್ಲಾ ವಲಯಗಳಲ್ಲೂ ಫುಟ್‌ಪಾತ್‌ಗಳನ್ನು ಸಂಚಾರ ಮುಕ್ತಗೊಳಿಸುವವರೆಗೆ ಈ ಕಾರ್ಯಾಚರಣೆ ನಿಲ್ಲುವುದಿಲ್ಲ” ಎಂದು ಪಾಲಿಕೆ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ. ಮುಂದಿನ ದಿನಗಳಲ್ಲಿ ಸಯ್ಯಾಜಿರಾವ್ ರಸ್ತೆ, ದೇವರಾಜ ಮಾರುಕಟ್ಟೆ, ನಜರ್‌ಬಾದ್ ಸೇರಿದಂತೆ ಇತರೆ ಒತ್ತುವರಿ ಪ್ರದೇಶಗಳಲ್ಲೂ ಇದೇ ರೀತಿ ಕಾರ್ಯಾಚರಣೆ ನಡೆಸುವುದಾಗಿ ಅವರು ತಿಳಿಸಿದರು.

Tags:
error: Content is protected !!