ಮೈಸೂರು: ಎರಡು ಸಾವಿರ ವರ್ಷಕ್ಕೂ ಹೆಚ್ಚಿನ ಇತಿಹಾಸವಿರುವ ತಿಗಳ ಸಮುದಾಯದ ಬಗ್ಗೆ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆ ಅಗತ್ಯ ಎಂದು ಸಂಶೋಧಕ ಕೆ.ಆರ್.ಮಧುಸೂದನ್ ಅಭಿಪ್ರಾಯಪಟ್ಟರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಕಲಾಮಂದಿರದ ಆವರಣದಲ್ಲಿರುವ ಕಿರು ರಂಗಮಂದಿರದಲ್ಲಿ ಶುಕ್ರವಾರ ಏರ್ಪಡಿಸಿದ್ದ ಶ್ರೀ ಅಗ್ನಿಬನ್ನಿರಾಯರ ಜಯಂತಿ ಕಾರ್ಯಕ್ರಮದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ಅಗ್ನಿ ಬನ್ನಿರಾಯ ಸ್ವಾಮಿಗೆ ಪೌರಾಣಿಕ ಮತ್ತು ಐತಿಹಾಸಿಕ ದಾಖಲೆಗಳ ಆಧಾರದ ಮೇಲೆ ೨೦೦೦ ವರ್ಷಕ್ಕೂ ಹೆಚ್ಚಿನ ಇತಿಹಾಸ ಇದೆ. ಮಹಾಭಾರತ, ರನ್ನನ ಗದಾಯುದ್ಧ ಸೇರಿದಂತೆ ಅನೇಕ ಸಾಹಿತ್ಯ ಕೃತಿಗಳು ಮತ್ತು ೩೦ಕ್ಕೂ ಹೆಚ್ಚು ಶಾಸನಗಳಲ್ಲಿ ತಿಗುಳ ಸಮಾಜದ ಉಲ್ಲೇಖವಿದೆ. ಅಗ್ನಿ ಬನ್ನಿರಾಯ ಸ್ವಾಮಿ ಮತ್ತು ತಿಗುಳ ಸಮುದಾಯದ ಮೇಲೆ ಇನ್ನೂ ಹೆಚ್ಚಿನ ಅಧ್ಯಯನ ಮತ್ತು ಸಂಶೋಧನೆಗಳು ನಡೆಯಬೇಕಿದೆ ಎಂದು ತಿಳಿಸಿದರು.
ಅಗ್ನಿಬನ್ನಿರಾಯ ಸ್ವಾಮಿಯ ಆರಾಧಕರು ಬನ್ನಿಮರವನ್ನು ಪೂಜಿಸುವ ಪದ್ಧತಿ ಸಾವಿರಾರು ವರ್ಷಗಳ ಹಿಂದಿನಿಂದಲೂ ಆಚರಣೆಯಲ್ಲಿದೆ. ನಮ್ಮ ದೇಶದ ಮಹಾಕಾವ್ಯಗಳಲ್ಲಿ ಒಂದಾದ ಮಹಾಭಾರತ ಕಾವ್ಯದಲ್ಲಿ ಪಾಂಡವರು ವನವಾಸಕ್ಕೆ ಹೋಗುವ ಸಂದರ್ಭದಲ್ಲಿ ಬನ್ನಿ ಮರದಲ್ಲಿ ತಮ್ಮ ಆಯುಧಗಳನ್ನು ಬಚ್ಚಿಟ್ಟು ಹೋಗುತ್ತಾರೆ. ಅಂದರೆ ಅಗ್ನಿ ಬನ್ನಿರಾಯಸ್ವಾಮಿಯನ್ನು ಆರಾಧಿಸುವ ಪದ್ಧತಿ ಮಹಾಭಾರತ ಕಾಲದಲ್ಲಿಯೂ ಕಾಣಬಹುದಾಗಿದೆ ಎಂದು ಹೇಳಿದರು.
ಕನ್ನಡ ಮತ್ತು ಸಂಸ್ಕ ತಿ ಇಲಾಖೆ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನಸ್ವಾಮಿ ಮಾತನಾಡಿ, ತಿಗುಳ ಸಮಾಜ ಕೃಷಿ ಪ್ರಧಾನ ಸಮಾಜವಾಗಿದೆ. ಭೂಮಿಯನ್ನು ನಂಬಿಕೊಂಡು, ಕೃಷಿ ಪದ್ಧತಿಯನ್ನು ಜೀವನದ ಮೂಲ ಉದ್ಯೋಗವಾಗಿ ಆಧರಿಸಿ ಬದುಕುತ್ತಿರುವ ಸಮಾಜವಾಗಿದೆ. ಜೊತೆಗೆ ತಿಗುಳ ಸಮುದಾಯ ಯತೇಚ್ಛವಾಗಿ ಆಹಾರ ಧಾನ್ಯಗಳನ್ನು ಬೆಳೆದು ಇಡೀ ಸಮಾಜಕ್ಕೆ ನೀಡುತ್ತಾ ಬಂದಿದೆ ಎಂದು ತಿಳಿಸಿದರು.
ಮಣ್ಣನ್ನು ನಂಬಿ ಕೆಟ್ಟವರಿಲ್ಲ, ವ್ಯವಸಾಯವನ್ನು ನಂಬಿದವರು ಯಾರೂ ಸಹಾ ಹಾಳಾಗುವುದಿಲ್ಲ ಎಂಬ ಮಾತಿಗೆ ಅರ್ಥ ಬರುವ ರೀತಿಯಲ್ಲಿ ತಿಗುಳ ಸಮುದಾಯ ಕೃಷಿಯಲ್ಲಿ ತೊಡಗಿಸಿಕೊಂಡಿದೆ. ಸಣ್ಣಭೂಮಿ ಇದ್ದರೂ ಯಾರ ಬಳಿಯೂ ಕೈಚಾಚದೆ ಸ್ವಾಭಿಮಾನದಿಂದ ಬದುಕುವ ಸಮುದಾಯವಾಗಿದೆ. ಲಾಲ್‌ಬಾಗ್, ಬೃಂದಾವನ ಗಾರ್ಡನ್ ನಿರ್ಮಾಣದಲ್ಲಿ ತಿಗುಳ ಸಮುದಾಯದವರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಬಣ್ಣಿಸಿದರು.
ಅಗ್ನಿವಂಶಸ್ಥರಾದ ತಿಗುಳ ಸಮುದಾಯಕ್ಕೆ ಐತಿಹಾಸಿಕವಾಗಿಯೂ ಸಾವಿರಾರು ವರ್ಷಗಳ ಇತಿಹಾಸವಿದೆ. ಪಂಚ ಪಾಂಡವರ ಪತ್ನಿ ದ್ರೌಪದಿಯೂ ಅಗ್ನಿ ವಂಶಸ್ಥಳಾಗಿದ್ದಳು. ಪಾಂಡವರು ಅಸಹಾಯಕರಾಗಿ ಕೈಚೆಲ್ಲಿ ಕೂತಾಗಲೆಲ್ಲಾ ದ್ರೌಪದಿ ಶಕ್ತಿಯಾಗಿ ನಿಲ್ಲುತ್ತಿದ್ದಳು ಎಂದು ಹೇಳಿದರು.
ತಿಗಳ ಸಮುದಾಯ ಆರ್ಥಿಕ, ಶೈಕ್ಷಣಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಅಭಿವೃದ್ಧಿಯಾಗಬೇಕಿದೆ ಎಂದು ಮೈಸೂರು ವಿಶ್ವವಿದ್ಯಾನಿಲಯದ ಸಂಜೆ ವಿವಿ ಕಾಲೇಜಿನ ಕನ್ನಡ ಉಪನ್ಯಾಸಕ ಡಾ.ಎಚ್.ಎನ್.ರಮೇಶ್ ತಿಳಿಸಿದರು.
ತಿಗುಳ ಸಮುದಾಯ ಅತ್ಯಂತ ಸಣ್ಣ ಸಮಾಜವಾಗಿದ್ದು, ಆರ್ಥಿಕ, ರಾಜಕೀಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಅತ್ಯಂತ ಹಿಂದೆ ಉಳಿದಿದೆ. ತಿಗುಳ ಸಮುದಾಯದವರು ಶಿಕ್ಷಣಕ್ಕೆ ಹೆಚ್ಚಿನ ಆದ್ಯತೆ ನೀಡಿದಾಗ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನಕ್ಕೆ ಬರಲು ಸಾಧ್ಯ ಎಂದು ಸಲಹೆ ನೀಡಿದರು.
ತುಮಕೂರು, ಬೆಂಗಳೂರು, ರಾಮನಗರ, ಚಿಕ್ಕ ಬಳ್ಳಾಪುರ, ಮಂಡ್ಯ, ಹಾಸನ ಜಿಲ್ಲೆಗಳಲ್ಲಿ ತಿಗಳ ಸಮುದಾಯದ ಜನಾಂಗದವರು ವಾಸಿಸುತ್ತಿದ್ದಾರೆ. ತಿಗುಳ ಸಮುದಾಯ ಯಾರಮೇಲೂ ಅವಲಂಬಿತರಾಗುತ್ತಿರಲಿಲ್ಲ. ಸಂಪೂರ್ಣವಾಗಿ ಸ್ವಾವಲಂಬಿಯಾದ ಸಮುದಾಯವಾಗಿತ್ತು. ಸ್ವಾವಲಂಬಿ, ಸ್ವ-ಉದ್ಯೋಗ ಮತ್ತು ಸ್ವಾಭಿಮಾನದಿಂದ ಬದುಕುವ ಸಮುದಾಯವಾಗಿದೆ. ತಿಗುಳರು ಶುದ್ಧ ಕನ್ನಡ ಮಾತನಾಡುವ ಅಪ್ಪಟ ಕನ್ನಡಿಗರಾಗಿದ್ದಾರೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಡಾ.ಎಂ.ಡಿ.ಸುದರ್ಶನ್, ಮುಖಂಡರಾದ ರಾಮೇಗೌಡ, ಮುರುಳಿಧರ, ಶಿವಣ್ಣ ಹರವೆ, ಪಾಲಹಳ್ಳಿ ಮಹಾದೇವಣ್ಣ, ಪುಟ್ಟಸ್ವಾಮಿ, ಶಂಕರ್ ಮುದ್ದನಹಳ್ಳಿ ಮತ್ತಿತರರು ಉಪಸ್ಥಿತರಿದ್ದರು.