Mysore
22
overcast clouds

Social Media

ಶುಕ್ರವಾರ, 31 ಜುಲೈ 2026
Light
Dark

ಬಾ.ನಾ.ಸುಬ್ರಹ್ಮಣ್ಯ ಅವರ ವಾರದ ಅಂಕಣ: ಕನ್ನಡ ಚಿತ್ರರಂಗದ ಕಾಯಕಲ್ಪವೂ, ಅವರಿವರ ಭಾವವೂ

ಎಲ್ಲ ಕಡೆ ಈಗ ಕನ್ನಡ ಚಿತ್ರರಂಗವನ್ನು ಉಳಿಸುವ ಚರ್ಚೆಗಳು. ಏಕಪರದೆಯ ಚಿತ್ರಮಂದಿರಗಳು ಮುಚ್ಚದ ಹಾಗೆ ಮಾಡಲು ಏನು ಮಾಡಬೇಕು, ಜನರನ್ನು ಚಿತ್ರಮಂದಿರದತ್ತ ಕರೆ ತರಲು ಏನು ಮಾಡಬೇಕು ಇವೇ ಮುಂತಾದ ಚರ್ಚೆಗಳು ನಡೆದಿವೆ. ಒಂದು ಚಿತ್ರ ನಿರ್ಮಿಸಿ ಕೈಸುಟ್ಟುಕೊಂಡವರಿಂದ ಮೊದಲ್ಗೊಂಡು ಚರ್ಚೆ, ಜಿeಸೆ ನಡೆದಿದೆ ಸಾಮಾಜಿಕ ತಾಣಗಳಲ್ಲಿ, ಮಾಧ್ಯಮಗಳಲ್ಲಿ.

‘ಕರಾವಳಿ’ ಚಿತ್ರದ ಬೆಳವಣಿಗೆಯೊಂದು ಚಿತ್ರೋದ್ಯಮದ ಕೆಲವು ಸಮಸ್ಯೆಗಳಿಗೆ ಕನ್ನಡಿ ಹಿಡಿದಿದೆ. ಮುಖ್ಯಕಲಾವಿದನ ಧ್ವನಿಯ ಬದಲು ಬೇರೊಬ್ಬರಿಂದ ಕಂಠದಾನ ಮಾಡಿಸಿದ್ದು, ಒಪ್ಪಿದ ಸಂಭಾವನೆ ನೀಡದ ಕಾರಣ ಹೀಗಾಯಿತು ಎನ್ನುವುದು ಈಗಾಗಲೇ ಚರ್ಚೆಯಾಗಿದೆ. ಬಿಡುಗಡೆಪೂರ್ವ ಸಮಾರಂಭದಲ್ಲಿ ಬಹಿರಂಗವಾದ ವಿಷಯ, ವಿವಾದಗಳ ನಂತರ, ನಿರ್ಮಾಪಕರು ಸಂಭಾವನೆಯನ್ನು ಚುಕ್ತಾ ಮಾಡಿ, ಚಿತ್ರದ ಪ್ರಚಾರಕ್ಕೆ ಅವರು ಬರುವ ಅಗತ್ಯ ಇಲ್ಲ ಎಂದು ಷರಾ ಹೇಳಿದರು. ಚಿತ್ರವೊಂದರ ಪ್ರಚಾರಕ್ಕೆ ಅದರ ಕೇಂದ್ರ ಪಾತ್ರಧಾರಿ ಬಾರದೇ ಇದ್ದರೂ ನಡೆಯುತ್ತದೆ ಎನ್ನುವುದು ಎಷ್ಟು ಸರಿ ಎನ್ನುವುದನ್ನು ಸಂಬಂಧಪಟ್ಟವರೇ ಹೇಳಬೇಕು. ಅಥವಾ ಅದರ ಹಿಂದೆ ಬೇರೇನು ಲೆಕ್ಕಾಚಾರವಿತ್ತು, ಚಿತ್ರದ ಚಿತ್ರೀಕರಣದ ಹಂತದ ಬೇರೇನಾದರೂ ನಡೆದಿತ್ತೇ ಎನ್ನುವುದು ಗೊತ್ತಿಲ್ಲ. ಈ ಚಿತ್ರಕ್ಕಾಗಿ ತಾವು ಮೂರು ವರ್ಷ ಬೇರೆ ಚಿತ್ರಗಳನ್ನು ಒಪ್ಪಿಕೊಂಡಿಲ್ಲ ಎಂದು ನಟ ಪ್ರಜ್ವಲ, ತಮ್ಮ ಸಂಭಾವನೆಯ ಕುರಿತಂತೆ ಮಾತನಾಡುವಾಗ ಹೇಳುತ್ತಾರೆ.

ಇದು ಮೊದಲ ಪ್ರಸಂಗವೇನೂ ಅಲ್ಲ. ಸಂಜು ವೆಡ್ಸ್ ಗೀತಾ ೨, ಮಾರ್ಟಿನ್, ಕನಕಪುರ ಶ್ರೀನಿವಾಸ್ ವರ್ಸಸ್ ಪ್ರೇಮ್ ಮತ್ತು ಎ.ಪಿ. ಅರ್ಜುನ್ ಸೇರಿದಂತೆ ಕೆಲವು ಚಿತ್ರಗಳ ಸಮಸ್ಯೆಗಳು ನಿರ್ಮಾಪಕರ ಸಂಘ ಮತ್ತು ವಾಣಿಜ್ಯ ಮಂಡಳಿಯವರೆಗೂ ಹೋದವು. ಇನ್ನೂ ಕೆಲವು ಪ್ರಕರಣಗಳು ಅದನ್ನು ಮೀರಿ ನ್ಯಾಯಾಲಯದ ಮೆಟ್ಟಿಲೇರಿದವು. ಸೂಕ್ತ ಪುರಾವೆಗಳಿಲ್ಲದೆ, ಕೆಲವು ಪ್ರಕರಣಗಳು ವಿವಾದಗಳಾಗಿಯೇ ಮುಗಿದವೇ ಹೊರತು, ಒಂದು ತಾರ್ಕಿಕ ಅಂತ್ಯ ಸಿಗಲೇ ಇಲ್ಲ.

ಬಹುಶಃ ಚಿತ್ರತಂಡದವರ ನಡುವೆ ಒಂದು ಲಿಖಿತ ಒಪ್ಪಂದ ಇದ್ದರೆ, ಇವೆ ಆಗುತ್ತಲೇ ಇರಲಿಲ್ಲವೇನೋ. ನಟ-ನಿರ್ಮಾಪಕರ ನಡುವೆ ಕೆಲಸದ ವಿಷಯವಾಗಿ ಯಾವುದೇ ಒಪ್ಪಂದ ಇರಲಿಲ್ಲ. ಎಲ್ಲ ಲೆಕ್ಕಾಚಾರಗಳೂ ಬಾಯ್ಮಾತಿನಲ್ಲೇ ಆಗಿದ್ದು. ವಿವಾದ, ಗೊಂದಲ, ಗದ್ದಲಗಳಿಂದ ಚಿತ್ರಕ್ಕೆ ನೆಗೆಟಿವ್ ಪ್ರಚಾರ ಸಿಗುತ್ತದೆಯೇ ಹೊರತು ಚಿತ್ರಕ್ಕೆ ಒಳ್ಳೆಯದಾಗುತ್ತದೆ ಎಂದು ನಿರೀಕ್ಷಿಸುವುದು ಕಷ್ಟ. ಈ ಹಿಂದೆ ನಿರ್ಮಾಪಕರ ಸಂಘದಲ್ಲಿ ಇಂತಹದೊಂದು ಯೋಚನೆ ಇತ್ತು. ಅದಕ್ಕಾಗಿ ಹಲವು ಕರಡುಗಳನ್ನು ಸಿದ್ಧಪಡಿಸಿಕೊಂಡಿದ್ದರು. ಮುಂದೇನಾಯಿತೋ ಗೊತ್ತಿಲ್ಲ. ಕೆಲವು ನಿರ್ಮಾಪಕರು, ಕೆಲವು ಕಲಾವಿದರು, ಇಂತಹ ಒಪ್ಪಂದ ಬೇಕು ಅನ್ನುವವರಿದ್ದಾರೆ. ನಟ ಧನ್ವೀರ್ ಅಭಿನಯದ ಮೊದಲ ಚಿತ್ರ ‘ ಬಜರ್’ ನ ಎಲ್ಲ ಕಲಾವಿದರು, ತಂತ್ರಜ್ಞರು ಒಪ್ಪಂದಕ್ಕೆ ಸಹಿ ಹಾಕಿದ್ದಿದೆ. ಅಗ್ರೀಮೆಂಟ, ಕಾಂಟ್ರಾಕ್ಟ್‌ಗಳೆಲ್ಲ ಇಲ್ಲಿ ಬಹಳ ಅಪರೂಪ. ನಾನಂತೂ ಒಂದು ಅಗ್ರೀಮೆಂಟ್ ಮಾಡಿಕೊಳ್ಳೋಣ ಎಂದು ಪ್ರತಿಯೊಬ್ಬ ನಿರ್ಮಾಪಕರಿಗೂ ಕೇಳಿಕೊಳ್ಳುತ್ತೇನೆ. ಇವತ್ತು, ನಾಳೆ ಎಂದು ಮುಂದೆ ಹಾಕುತ್ತಲೇ ಇರುತ್ತಾರೆ. ಶೇ. ೯೯ರಷ್ಟು ಭಾಗ ಇಲ್ಲಿ ಅಗ್ರೀಮೆಂಟ್‌ಗಳಿರುವುದಿಲ್ಲ. ಎಲ್ಲವೂ ಬಾಯ್ಮಾತಿನ ನಡೆಯುತ್ತದೆ’ ಎಂದು ಮೊನ್ನೆ ಅಜೇಯ್ ರಾವ್ ಪತ್ರಿಕಾಗೋಷ್ಠಿಯಲ್ಲಿ ಹೇಳಿಕೊಂಡಿದ್ದಾರೆ. ಈ ಅಗ್ರೀಮೆಂಟ್ ವ್ಯವಸ್ಥೆ ಬೇರೆಲ್ಲ ಚಿತ್ರರಂಗಗಳಲ್ಲೂ ಸಕ್ರಿಯವಾಗಿದೆ. ಕೆಲವು ಚಿತ್ರರಂಗಗಳಲ್ಲಿ ಅಗ್ರೀಮೆಂಟ್ ಇಲ್ಲದೆ, ಒಂದು ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲ.

ಈ ನಿಟ್ಟಿನಲ್ಲಿ ಮಲಯಾಳ ಚಲನಚಿತ್ರ ಕಲಾವಿದರ ಸಂಘ ತಮ್ಮ ಕಲಾವಿದರಿಗಾಗಿ ಒಂದಿಷ್ಟು ನೀತಿ-ನಿಯಮಗಳನ್ನು ರೂಪಿಸಿದೆ. ಮಲಯಾಳ ಚಿತ್ರರಂಗದ ಉದಾಹರಣೆ ಕೊಟ್ಟರೆ, ಕೆಲವರಿಗೆ ಬೇಸರವಾಗಬಹುದು. ಈ ತರಹದ ಹೋಲಿಕೆಗಳು ಸರಿಯಲ್ಲ ಎಂದನಿಸಬಹುದು. ಆದರೆ, ನಮ್ಮ ಅಕ್ಕಪಕ್ಕದ ಚಿತ್ರರಂಗಗಳು ಎಷ್ಟು ವ್ಯವಸ್ಥಿತವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ. ಅಲ್ಲಿ ಪ್ರತಿ ಚಿತ್ರಕ್ಕೂ ಮುನ್ನ ನಟರ ಮತ್ತು ನಿರ್ಮಾಪಕರ ನಡುವೆ ಒಪ್ಪಂದವಾಗುತ್ತದೆ. ಅದಕ್ಕೆ ಎಲ್ಲರೂ ಬದ್ಧರಾಗಿರಬೇಕು. ಅದರಂತೆ ಎಲ್ಲರೂ ನಡೆದುಕೊಳ್ಳಬೇಕು. ಅದು ತಪ್ಪಿದರೆ ಬೇರೆ ಸಂಘಟನೆಗಳ ಮಧ್ಯಸ್ಥಿಕೆ, ನ್ಯಾಯ, ಪಂಚಾಯ್ತಿ ಎಲ್ಲವೂ ಇದ್ದೇ ಇದೆ. ಆದರೆ, ಮಾಡಿಕೊಂಡ ಕರಾರನ್ನು ಮುರಿಯುವಂತಿಲ್ಲ. ಎಲ್ಲರೂ ಅದಕ್ಕೆ ತಲೆಬಾಗುವುದರಿಂದಲೇ ಸಿನಿಮಾಗಳು ಸುಸೂತ್ರವಾಗಿ ತಯಾರಾಗುತ್ತಿವೆ ಮತ್ತು ಬಿಡುಗಡೆಯಾಗುತ್ತಿವೆ.

ಜಪ್ರಿಯ ನಟರು ಅಲ್ಲಿ ಮನಸೋ ಇಚ್ಛೆ ಸಂಭಾವನೆ ಕೇಳುವಂತಿಲ್ಲ. ಒಪ್ಪಿಕೊಂಡಿರುವ ತಮ್ಮ ಸಂಭಾವನೆಯ ಪ್ರತಿಶತ ೨೦ರಷ್ಟನ್ನು ಮೊದಲು ಮುಂಗಡವಾಗಿ ಪಡೆಯಬೇಕು. ಚಿತ್ರೀಕರಣ ಮುಗಿದ ಮೇಲೆ ಪ್ರತಿಶತ. ೨೫ರಷ್ಟು, ಡಬ್ಬಿಂಗ್ ನಂತರ ಪ್ರತಿಶತ ೨೫ ಮತ್ತು ಬಿಡುಗಡೆಗೆ ಮುನ್ನ ಬಾಕಿ ಹಣವನ್ನು ನಿರ್ಮಾಪಕರಿಂದ ಪಡೆಯಬೇಕು. ಕಲಾವಿದರು ಒಪ್ಪಿಕೊಂಡ ಡೇಟ್‌ಗಳ ಜೊತೆಗೆ ರೀಶೂಟ್, ಪ್ಯಾಚ್‌ವರ್ಕ್‌ಗೆಂದು ಐದು ದಿನಗಳನ್ನು ಹೆಚ್ಚುವರಿಯಾಗಿ ಮೀಸಲಿಡಬೇಕು.

ಅನಾರೋಗ್ಯ ಮುಂತಾದ ಅನಿವಾರ್ಯ ಕಾರಣಗಳನ್ನು ಹೊರತುಪಡಿಸಿದರೆ, ಮಿಕ್ಕಂತೆ ಒಪ್ಪಿಕೊಂಡ ಸಮಯದಲ್ಲಿ ಚಿತ್ರೀಕರಣ ಮುಗಿಸಿಕೊಡಬೇಕು. ಚಿತ್ರದ ಪ್ರಚಾರಕ್ಕೆ ಸಹಕರಿಸಬೇಕು. ನಟರಿಗೆ ತಮ್ಮ ವಾಸ್ತವ್ಯದಿಂದ ಚಿತ್ರೀಕರಣ ಸ್ಥಳದವರೆಗೂ ಹೋಗುವುದಕ್ಕೆ ಒಂದು ಕಡೆ ಸಂಚಾರ ಭತ್ಯೆ ಮಾತ್ರ ಕೊಡಲಾಗುವುದು. ಇನ್ನೊಂದನ್ನು ನಟರೇ ಭರಿಸಬೇಕು. ನಟರಿಗೆಯಾವ ರೂಮು ಕೊಡಬೇಕು, ಎಲ್ಲಿ ವಾಸ್ತವ್ಯಕ್ಕೆ ಅನುವು ಮಾಡಿಕೊಡಬೇಕು ಎಂಬುದು ನಿರ್ಮಾಪಕರ ವಿವೇಚನೆಗೆ ಬಿಟ್ಟಿದ್ದು. ಸಿಗರೇಟ, ಮದ್ಯ ಸೇರಿದಂತೆ ಕಲಾವಿದರ ವೈಯಕ್ತಿಕ ಖರ್ಚಿಗೂ ನಿರ್ಮಾಪಕರಿಗೂ ಯಾವುದೇ ಸಂಬಂಧವಿಲ್ಲ. ಅದನ್ನು ಕಲಾವಿದರೇ ಭರಿಸಬೇಕು. ನಟಿಯರ ಜೊತೆಗೆ ಯಾರಾದರೂ ಸಂಬಂಧಿಕರು ಅಥವಾ ಸಹಾಯಕರು ಬಂದರೆ, ಅವರ ವಾಸ್ತವ್ಯ ಮತ್ತು ಊಟದ ಜವಾಬ್ದಾರಿ ಮಾತ್ರ ನಿರ್ಮಾಪಕರದ್ದು.

ನಟರ ಕಾಸ್ಟ್ಯೂಮ್ ಮತ್ತು ಮೇಕಪ್‌ಗೆ ನಿರ್ಮಾಪಕರು ವ್ಯವಸ್ಥೆ ಮಾಡಿಕೊಡಬೇಕು. ಒಂದು ಪಕ್ಷ ನಟರೇ ತಮಗೆ ಬೇಕಾದವರನ್ನು ಕರೆದುಕೊಂಡು ಬಂದರೆ, ಅವರಿಗೆ ಊಟದ ವ್ಯವಸ್ಥೆಯನ್ನು ಮಾತ್ರನಿರ್ಮಾಪಕರು ಮಾಡಬೇಕು. ಮಿಕ್ಕಂತೆ ಎಲ್ಲ ಖರ್ಚುಗಳನ್ನು ನಟರೇ ನೋಡಿಕೊಳ್ಳಬೇಕು. ಒಂದು ಪಕ್ಷ ನಟರಿಂದ ನಿರ್ಮಾಪಕರಿಗೆ ಯಾವುದೇ ನಷ್ಟವಾದರೂ ಅಥವಾ ಕಲಾವಿದರ ಅಸಹಕಾರದಿಂದ ಚಿತ್ರ ವಿಳಂಬವಾದರೆ, ಆ ನಷ್ಟವನ್ನು ಕಲಾವಿದರೇ ಭರಿಸಿಕೊಡಬೇಕು. ಕರಾರಿನಲ್ಲಿರುವ ಸಂಭಾವನೆಯನ್ನು ಹೊರತುಪಡಿಸಿ ಕಲಾವಿದರು, ನಿರ್ಮಾಪಕರಿಂದ ಬೇರೇನು ಸೌಲಭ್ಯಗಳನ್ನೂ ನಿರೀಕ್ಷಿಸುವಂತಿಲ್ಲ. ನಟರಿಗೆ ಚಿತ್ರದ ಬೇರೆ ರಾಜ್ಯಗಳ, ಓವರ್ಸೀಸ್ ಅಥವಾ ಡಬ್ಬಿಂಗ್ ಮತ್ತು ಸ್ಯಾಟಿಲೈಟ್ ಹಕ್ಕುಗಳನ್ನು ಪಡೆಯುವ ಹಕ್ಕಿಲ್ಲ. ನಟರು ಬೇರೆ ಕಲಾವಿದರ ಆಯ್ಕೆಯಲ್ಲಿ ತಲೆತೂರಿಸುವಂತಿಲ್ಲ.

ದೂರದರ್ಶನ ಬಂದ ಹೊಸದರಲ್ಲಿ, ಜನಪ್ರಿಯ ನಟರು ಸರಣಿಗಳಲ್ಲಿ ಮತ್ತು ರಿಯಾಲಿಟಿ ಶೋಗಳಲ್ಲಿ ಪಾಲ್ಗೊಳ್ಳಕೂಡದು ಎಂದು ಆ ಸಂಘ ಆದೇಶಿಸುತ್ತದೆ. ಈ ಪಟ್ಟಿಯಲ್ಲಿ ಯಾರು ಯಾರು ಇzರೆ ಎನ್ನುವುದನ್ನು ಕೂಡಾ ಹೇಳಲಾಗಿತ್ತು. ಅವರ ಪೈಕಿ, ನಟ, ನಿರ್ದೇಶಕ ಶ್ರೀನಿವಾಸ್ ಆ ನಿರ್ಧಾರದಿಂದ ಹೊರಬಂದು ಸರಣಿಯೊಂದರಲ್ಲಿ ಕಾಣಿಸಿಕೊಂಡರು. ಅವರನ್ನು ಒಂದು ವರ್ಷ ಚಿತ್ರಗಳಲ್ಲಿ ನಟಿಸದಂತೆ ಬ್ಯಾನ್ ಮಾಡಲಾಗಿತ್ತು. ಆ ದಿನಗಳನ್ನು ಚಿತ್ರಕಥೆ ಬರೆದು ಕಳೆದೆ ಎಂದು ಅವರು ನಂತರ ಸಂದರ್ಶನವೊಂದರಲ್ಲಿ ಹೇಳಿದ್ದನ್ನು ಓದಿದ ನೆನಪು. ನಮ್ಮಲ್ಲಿ ಕಲಾವಿದರ ಸಂಘ ಅಂತಹದೊಂದು ನಿರ್ಧಾರವಾಗಲಿ, ಒಪ್ಪಂದವಾಗಲಿ ಮಾಡಲಿ ಎನ್ನೋಣ ಎಂದರೆ, ಕಲಾವಿದರ ಸಂಘದ ಚಟುವಟಿವಿಕೆಗಳು ಏನೂ ನಡೆಯುತ್ತಿಲ್ಲ. ಅಂಬರೀಶ್ ನಿಧನಾನಂತರ, ಆಡಳಿತ ಮಂಡಳಿಯ ಆಯ್ಕೆಯೋ ಚುನಾವಣೆಯೋ ಆಗಿಲ್ಲ. ಇತ್ತೀಚೆಗೆ ಆ ನಿಟ್ಟಿನಲ್ಲಿ ಒಂದೆರಡು ಸಭೆಗಳು ನಡೆದಿದ್ದವು. ಆದರೆ ಮುಂದೆ ಅದಕ್ಕೆ ಅಡಚಣೆಯಾಗಿ ಮತ್ತೆ ಸ್ಥಗಿತಗೊಂಡಂತಿದೆ.

ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಈಗ ತನ್ನದೇ ಕಟ್ಟಡ ಹೊಂದಿರುವ ನಿರ್ಮಾಪಕರ ಸಂಘ ಈ ನಿಟ್ಟಿನಲ್ಲಿ ಯೋಚಿಸಿ ಕಾರ್ಯಪ್ರವೃತ್ತವಾಗಬೇಕು. ಚಿತ್ರೋದ್ಯಮ ಕಾರ್ಪೊರೇಟ್ ಜಗತ್ತಿಗೆ ತೆರೆದುಕೊಂಡಿದೆ. ಡಿಜಿಟಲ್ ಕ್ರಾಂತಿಯ ನಂತರ, ಹಿಂದಿನಂತೆ ಸಾಂಪ್ರದಾಯಿಕ ವಿಧಾನಗಳು, ಬಾಯಿಮಾತಿನ ಒಪ್ಪಂದ ಸರಿಯಾದ ಮಾರ್ಗವಲ್ಲ. ಕನ್ನಡ ಚಿತ್ರೋದ್ಯಮದ ಮಾರುಕಟ್ಟೆಯ ವ್ಯಾಪ್ತಿ ಹಿಗ್ಗಿದೆ ಎನ್ನುವುದೇನೋ ನಿಜ. ಆದರೆ ಮನರಂಜನೋದ್ಯಮದ ಕವಲುಗಳು, ಟಿಸಿಲುಗಳನ್ನು ಗ್ರಹಿಸುವ, ಅವುಗಳಲ್ಲಿ ತೊಡಗಿಸಿಕೊಳ್ಳುವ ಮಂದಿ ವ್ಯಾವಹಾರಿಕವಾಗಿ ಇಂದಿನ ದಿನಮಾನಕ್ಕೆ ಸರಿಯಾದ ರೀತಿಯಲ್ಲಿ ವ್ಯವಹರಿಸುವುದೂ ಅಷ್ಟೇ ಮುಖ್ಯ. ಅಂದು ಇಂದು ಉದಾಹರಣೆಗಳನ್ನು ಹೊರತುಪಡಿಸಿದರೆ, ಚಿತ್ರ ನಿರ್ಮಾಪಕರು ಕಥೆಗೆ ಬೇಕಾದ ನಟರ ಬದಲು, ನಟರಿಗಾಗಿ ಕಥೆಯನ್ನು ಹುಡುಕುವ ಪ್ರಸಂಗ ಬಂದಿರುವುದು, ಇಂದಿನ ಬಹುತೇಕ ಸಮಸ್ಯೆಗಳ ಮೂಲ ಎನ್ನುವುದು ಹಿರಿಯ ಸಿನಿಮಾ ಮಂದಿಯ ಅಂಬೋಣ. ಅದು ನಿಜವೂ ಹೌದು. ನಿರ್ದೇಶಕ ನಟನ ಮರ್ಜಿಗನುಸರಿಸಿ, ಅವರ ವರ್ಚಸ್ಸನ್ನು ಬೆಳೆಸಲು ಚಿತ್ರಗಳನ್ನು ನಿರೂಪಿಸಬೇಕಾದ ಪರಿಸ್ಥಿತಿ ಬದಲಾಗಬೇಕು. ಗೊಂದಲ ಮತ್ತು ವಿವಾದಗಳನ್ನು ತಪ್ಪಿಸುವುದಕ್ಕೆ ಒಪ್ಪಂದಗಳಂತಹ ಕ್ರಮಗಳ ಜೊತೆಜೊತೆಯ, ನಿರ್ಮಾಪಕರಿಗೆ ತಾವು ಹೂಡುವ ಬಂಡವಾಳ, ವ್ಯವಹಾರಗಳ ಕುರಿತ ಮಾರ್ಗದರ್ಶನದ ಅಗತ್ಯವೂ ಇದೆ. ಆ ನಿಟ್ಟಿನಲ್ಲಿ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ನಿರ್ಮಾಪಕರ ಸಂಘ ಗಂಭೀರವಾಗಿ ಯೋಚಿಸಿ ಹೆಜ್ಜೆ ಇಡಬೇಕಾದ ಅಗತ್ಯ ಇದೆ.

” ಮಲಯಾಳ ಚಲನಚಿತ್ರ ಕಲಾವಿದರ ಸಂಘ ತಮ್ಮ ಕಲಾವಿದರಿಗಾಗಿ ಒಂದಿಷ್ಟು ನೀತಿ-ನಿಯಮಗಳನ್ನುರೂಪಿಸಿದೆ. ಮಲಯಾಳ ಚಿತ್ರರಂಗದ ಉದಾಹರಣೆಕೊಟ್ಟರೆ, ಕೆಲವರಿಗೆ ಬೇಸರವಾಗಬಹುದು. ಈ ತರಹದ ಹೋಲಿಕೆಗಳು ಸರಿಯಲ್ಲ ಎಂದನಿಸಬಹುದು. ಆದರೆ, ನಮ್ಮ ಅಕ್ಕಪಕ್ಕದ ಚಿತ್ರರಂಗಗಳು ಎಷ್ಟು ವ್ಯವಸ್ಥಿತವಾಗಿ ಮತ್ತು ವೃತ್ತಿಪರವಾಗಿ ಕೆಲಸ ಮಾಡುತ್ತವೆ ಎಂಬುದಕ್ಕೆ ಇದೊಂದು ಉದಾಹರಣೆ ಅಷ್ಟೇ.”

 

 

Tags:
error: Content is protected !!