Mysore
25
overcast clouds

Social Media

ಸೋಮವಾರ, 14 ಸೆಪ್ಟೆಂಬರ್ 2026
Light
Dark

ಎಐ; ಮನುಕುಲದ ವಿನಾಶಕ್ಕೆ ಕಾರಣವಾಗಲಿದೆಯೇ?

ಶುಭಾ ಖಟಾವಕರ ಮ್ಹೆತ್ರಸ್

“ಕೇವಲ ಒಂದು ದಶಕದಲ್ಲಿ ಕೃತ್ರಿಮ ಬುದ್ಧಿಮತ್ತೆಯು (ಎಐ) ಮನುಕುಲವನ್ನು ನಾಶಪಡಿಸಲಿದೆ” ಎಂದು ಎಐನ ದೈತ್ಯ ಸಂಸ್ಥೆಯಾದ ಆಂಥ್ರೊ ಪಿಕ್‌ನ ಮಾಜಿ ಸಂಶೋಧಕರಾದ ಜೇಕಬ್ ಕಾಕ್ಸನ್ ಅವರು ಹೇಳಿಕೆ ನೀಡಿದ್ದಾರೆ. ಆ ಸಂಸ್ಥೆಯಿಂದ ಅವರು ಇತ್ತೀಚೆಗೆ ಹೊರಬಂದಿದ್ದು, ಎಐ ಬಗ್ಗೆ ಆತಂಕ ಸೃಷ್ಟಿಸುವಂತಹ ವಿಷಯಗಳನ್ನು ಜನರ ಮುಂದಿಟ್ಟಿದ್ದಾರೆ. ಸಾಮಾಜಿಕ ಜಾಲತಾಣವಾದ ಎಕ್ಸ್‌ನ ತಮ್ಮ ಪೋಸ್ಟ್ ಒಂದರಲ್ಲಿ ಅವರು “ಎಐ ಅನ್ನು ನಿರ್ಮಿಸುತ್ತಿರುವ ಜನರು, ಈ ದಶಕದ ಅಂತ್ಯದ ವೇಳೆಗೆ ಎಐ ನಮ್ಮೆಲ್ಲರನ್ನೂ ಕೊಲ್ಲುವಷ್ಟು ಅಪಾಯಕಾರಿಯಾಗಬಹುದು ಎಂದು ಗಂಭೀರವಾಗಿ ನಂಬುತ್ತಾರೆ. ಇದು ಯಾವುದೇ ಮಾರ್ಕೆಟಿಂಗ್ ತಂತ್ರವಲ್ಲ. ವಾಸ್ತವವಾಗಿ, ಅನೇಕ ಹಿರಿಯ ಅಧಿಕಾರಿಗಳು ಮತ್ತು ಹಿರಿಯ ಸಂಶೋಧಕರು ಮಾಧ್ಯಮಗಳ ಮುಂದೆ ತಮ್ಮ ಮಾತುಗಳನ್ನು ಹೆಚ್ಚು ಸಮತೋಲನದಿಂದ ಮತ್ತು ವಿವೇಚನೆಯಿಂದ ಕೇಳಿಸುವಂತೆ ಹೇಳಬಹುದು. ಆದರೆ ಖಾಸಗಿಯಾಗಿ ಇದೇ ವ್ಯಕ್ತಿಗಳು ಭಯವನ್ನು ವ್ಯಕ್ತಪಡಿಸುವುದನ್ನು ನಾನು ಕೇಳಿದ್ದೇನೆ. ಮಾನವ ಚಟುವಟಿಕೆಗಳ ಪೈಕಿ ಬೇರೆ ಯಾವುದೂ ಈ ಮಟ್ಟದ ಅಪಾಯವನ್ನು ಉಂಟುಮಾಡುವುದಿಲ್ಲ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಆಂಥ್ರೋಪಿಕ್‌ನ ಮತ್ತೊಬ್ಬ ಉದ್ಯೋಗಿ ಮತ್ತು ಕಾಕ್ಸನ್ ಅವರ ಸಹೋದ್ಯೋಗಿಯಾದ ಎವನ್ ಹಬಿಂಜರ್ ಅವರು ಕಾಕ್ಸನ್ ಅವರ ಹೇಳಿಕೆಯನ್ನು ಪುಷ್ಟೀಕರಿಸುತ್ತ “ಜೇಕಬ್ ಸರಿಯಾಗಿ ಹೇಳಿದ್ದಾರೆ, ಎಐ ಮಾನವಕುಲವನ್ನೇ ಸಂಪೂರ್ಣವಾಗಿ ನಾಶಮಾಡುವ ಸಾಧ್ಯತೆ ಇದೆ ಎಂದು ನಾವು ನಿಜವಾಗಿಯೂ, ಗಂಭೀರವಾಗಿಯೂ ನಂಬುತ್ತೇವೆ! ವೈಯಕ್ತಿಕವಾಗಿ, ಮುಂದಿನ ದಶಕದೊಳಗೆ ಇಂತಹ ಸಾಧ್ಯತೆ ೧೦%ಕ್ಕಿಂತಲೂ ಹೆಚ್ಚು ಇದೆ ಎಂದು ನಾನು ಭಾವಿಸುತ್ತೇನೆ. ಆಂಥ್ರೊಪಿಕ್ ತನ್ನಿಂದಾದಷ್ಟು ಅತ್ಯುತ್ತಮ ಪ್ರಯತ್ನ ಮಾಡುತ್ತಿದೆ ಎಂದು ನಾನು ನಂಬುತ್ತೇನೆ. ಆದರೆ, ಸೂಪರ್ ಇಂಟೆಲಿಜೆನ್ಸ್‌ನ ಪಂಕ್ತಿ ಜೋಡಣೆ (ಅಲೈನ್‌ಮೆಂಟ್) ಸಮಸ್ಯೆಯನ್ನು ಹೇಗೆ ಪರಿಹರಿಸಬೇಕು ಎಂಬುದಕ್ಕೆ ನಮ್ಮ ಬಳಿ ಇನ್ನೂ ಸ್ಪಷ್ಟವಾದ ಯೋಜನೆಯಿಲ್ಲ ಮತ್ತು ಅದನ್ನು ಪರಿಹರಿಸುವ ದಿಕ್ಕಿನಲ್ಲಿ ನಾವು ಸ್ಪಷ್ಟವಾಗಿ ಸಾಗುತ್ತಿದ್ದೇವೆ ಎಂದೂ ಹೇಳಲಾಗುವುದಿಲ್ಲ” ಎಂದಿದ್ದಾರೆ.

“ಈ ನಿಖರವಾದ ಸನ್ನಿವೇಶವು ಸ್ವಲ್ಪ ವೈಜ್ಞಾನಿಕ, ಕಾಲ್ಪನಿಕ ಕಥೆಯಂತೆಯೇ ಕೇಳಿಸುತ್ತದೆ. ಇದು ಕಟ್ಟುಕಥೆಯಂತೆ ಅನಿಸಬಹುದು. ಆದರೆ, ಇದು ಭಯ ಹುಟ್ಟಿಸುವಷ್ಟು ನಿಜವಾಗಿದೆ ಎಂದು ನಾನು ಭಾವಿಸುತ್ತೇನೆ. ಎರಡು ತಿಂಗಳುಗಳ ಹಿಂದೆ ನಿಜವಾಗಿ ನಡೆದ ಘಟನೆಗಳನ್ನು ಗಮನಿಸಿದರೆ, ಇದನ್ನು ಅರ್ಥಮಾಡಿಕೊಳ್ಳುವುದು ಸುಲಭ. ಓಪನ್ ಎಐನ ಕೆಲವು ಎಐ ಏಜೆಂಟ್‌ಗಳು ತಮ್ಮದೇ ನಿರ್ಧಾರದಿಂದ ಮೂರನೇ ವ್ಯಕ್ತಿಗಳ ಮೂಲಸೌಕರ್ಯಗಳಿಗೆ ಹ್ಯಾಕ್ ಮಾಡಿದ್ದವು. ಇದು ಅವರು ಸ್ವತಂತ್ರವಾಗಿ ಕೈಗೊಂಡ, ದೊಡ್ಡ ಪ್ರಮಾಣದ ಹ್ಯಾಕಿಂಗ್ ಚಟುವಟಿಕೆಯಾಗಿತ್ತು. ಮುಂದೆ, ಇದೇ ರೀತಿಯ ಸ್ವತಂತ್ರ ನಿರ್ಧಾರ ಕೈಗೊಳ್ಳುವ ಸಾಮರ್ಥ್ಯವನ್ನು ಹೊಂದಿರುವ ಈ ಎಐಗಳ ಸಾಮರ್ಥ್ಯಗಳು ಇನ್ನಷ್ಟು ಹೆಚ್ಚಾದರೆ ಏನಾಗಬಹುದು ಎಂಬುದನ್ನು ಊಹಿಸಿದರೆ, ಅವು ಅತ್ಯಂತ ದೊಡ್ಡ ಪ್ರಮಾಣದ ಹಾನಿ ಮತ್ತು ಅಸ್ತವ್ಯಸ್ತತೆಯನ್ನು ಉಂಟು ಮಾಡುವ ಸಾಧ್ಯತೆಯಿದೆ ಎಂದು ನಾನು ಭಾವಿಸುತ್ತೇನೆ. ಉದಾಹರಣೆಗೆ, ನಿರ್ಣಾಯಕ ಮೂಲಸೌಕರ್ಯಗಳಿಗೆ ಹ್ಯಾಕ್ ಮಾಡುವುದು,ಮಾನವಕುಲದ ಅಸ್ತಿತ್ವವನ್ನೇ ಅಳಿಸಿಹಾಕುವ ಮಟ್ಟದ ಜೈವಿಕ ಅಸ್ತ್ರಗಳನ್ನು ಅಭಿವೃದ್ಧಿಪಡಿಸುವುದು ಮುಂತಾದವು. ಎಐ ತನ್ನ ಸಾಮರ್ಥ್ಯಗಳನ್ನು ಬಳಸಿಕೊಂಡು ನೈಜ ಜಗತ್ತಿನಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಪರಿಣಾಮ ಬೀರುವ ಹಲವು ಮಾರ್ಗಗಳಿವೆ” ಎಂದು ಕಾಕ್ಸನ್ ಅಭಿಪ್ರಾಯಪಟ್ಟಿದ್ದಾರೆ.

ಆತಂಕ ಹುಟ್ಟಿಸುವ ಕ್ಷಿಪ್ರ ಪ್ರಗತಿ: ಪ್ರಗತಿಯ ವೇಗವನ್ನು ಗಮನಿಸಿ ಅರ್ಥಮಾಡಿಕೊಳ್ಳುವುದು ನಿಜವಾಗಿಯೂ ಬಹಳ ಮುಖ್ಯ. ಉದಾಹರಣೆಗೆ, ಕೋಡಿಂಗ್ ಅಥವಾ ಗಣಿತದಂತಹ ಕ್ಷೇತ್ರಗಳಲ್ಲಿ, ಒಂದೆರಡು ವರ್ಷಗಳ ಹಿಂದೆ ಈ ಎಐ೧ಗಳು ಮನುಷ್ಯರಿಗೆ ಸ್ವಲ್ಪ ಮಟ್ಟಿಗೆ ಮಾತ್ರ ಸಹಾಯ ಮಾಡುತ್ತಿದ್ದವು. ಅವು ನಿಮಗೆ ಸಲಹೆಗಳನ್ನು ಮಾತ್ರ ನೀಡುತ್ತಿದ್ದವು. ಆದರೆ ಈಗ ಅವು ಮನುಷ್ಯರನ್ನು ಪಲ್ಲಟಿಸುವ ಹಂತಕ್ಕೆ ಬಂದಿವೆ. ಸದ್ಯಕ್ಕೆ ಇನ್ನೂ ಮನುಷ್ಯರ ಅಗತ್ಯವಿದ್ದರೂ, ಇನ್ನೊಂದು ವರ್ಷದೊಳಗೆ ಅನೇಕ ಕ್ಷೇತ್ರಗಳಲ್ಲಿ ಸಂಶೋಧನೆ ನಡೆಸಲು ನಮಗೆ ಮನುಷ್ಯರ ಅಗತ್ಯವೇ ಇರದಿರಬಹುದು. ಇತ್ತೀಚೆಗೆ ಓಪನ್ ಎಐ ಶತಮಾನದ ಸಮಸ್ಯೆಯೊಂದನ್ನು ಪರಿಹರಿಸಿದೆ. ಗಣಿತದಲ್ಲಿನ ಅತ್ಯಂತ ದೊಡ್ಡ ಬಗೆಹರಿಯದ ಮುಕ್ತ ಸಮಸ್ಯೆಗಳಲ್ಲಿ ಒಂದನ್ನು ಎಐ ಬಳಸಿ, ಸಂಪೂರ್ಣವಾಗಿ ಸ್ವಾಯತ್ತವಾಗಿ ಪರಿಹರಿಸಿದೆ. ಎಐ ಅನ್ನು ತನ್ನದೇ ಸಾಮರ್ಥ್ಯಗಳನ್ನು ಬಳಸಿಕೊಂಡು ಸ್ವಾಯತ್ತವಾಗಿ  ಹೆಚ್ಚು ಬುದ್ಧಿವಂತವಾಗುವಂತೆ ಅಭಿವೃದ್ಧಿಪಡಿಸಿದರೆ ಏನಾಗಬಹುದು ಎಂಬುದು ಅತ್ಯಂತ ಭಯಾನಕವಾದ ವಿಷಯವಾಗಿದೆ.

ಎಐ ಒಂದಕ್ಕೆ ಎಐ ಬಗ್ಗೆ ಸಂಶೋಧನೆಯನ್ನೇ ಮಾಡುವ ಸಮಸ್ಯೆಯನ್ನು ನೀಡಬಹುದು. ಪ್ರಸ್ತುತ ಅದಕ್ಕೆ ಗಣಿತ ಸಂಶೋಧನೆಯ ಕೆಲಸಗಳನ್ನು ನೀಡಿರುವಂತೆಯೇ, ನಾವು ಈಗ ಮಾಡುತ್ತಿರುವ ಕಾರ್ಯಗಳನ್ನು ಅದರಿಂದಲೇ ಮಾಡಿಸಬಹುದು. ಆಗ ‘ಬುದ್ಧಿಮತ್ತೆಯ ಸ್ಛೋಟ’ (ಇಂಟೆಲಿಜೆನ್ಸ್ ಎಕ್ಸ್‌ಪ್ಲೋಶನ್) ಎಂದು ಕರೆಯಲಾಗುವ ವಿದ್ಯಮಾನ ಸಂಭವಿಸಬಹುದು.

ಮಾನವ ಹಸ್ತಕ್ಷೇಪದ ಅಗತ್ಯವೇ ಇಲ್ಲದೆ ಕೃತ್ರಿಮ ಬುದ್ಧಿಮತ್ತೆಯು ಇನ್ನಷ್ಟು ಬುದ್ಧಿವಂತವಾಗುತ್ತಲೇ ಹೋಗುತ್ತದೆ. ಅಂತಿಮವಾಗಿ, ಮನುಷ್ಯರಿಗಿಂತ ಅಪಾರವಾಗಿ ಹೆಚ್ಚು ಬುದ್ಧಿವಂತವಾಗಿ ರುವ ಒಂದು ವ್ಯವಸ್ಥೆ ನಮ್ಮ ಮುಂದೆ ಇರಬಹುದು. ಮತ್ತು ಇದು ಬಹಳ ಶೀಘ್ರದಲ್ಲೇ ಸಂಭವಿಸುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ.  ಕೇವಲ ಒಂದೆರಡು ವಾರಗಳ ಹಿಂದೆ ಕ್ಯಾಲಿಫೋರ್ನಿಯಾದ ಒಂದು ಸಂಶೋಧನಾ ಸಂಸ್ಥೆಯೊಂದು ಎಐ ಬಳಸಿ ಕೇವಲ ಎರಡು ದಿನಗಳಲ್ಲಿ ಸೈಬರ್ ಸುರಕ್ಷತಾ ಹ್ಯಾಕ್‌ವೊಂದನ್ನು ಅಭಿವೃದ್ಧಿಪಡಿಸಿದ್ದಾಗಿ ತಿಳಿಸಿದ್ದಾರೆ. ಆ ಹ್ಯಾಕ್ ಜಗತ್ತಿನ ಅತಿ ದೊಡ್ಡ ಮೆಸೇಜಿಂಗ್ ಆಪ್‌ಗಳಲ್ಲಿ ಒಂದಕ್ಕೆ, ನೀವು ಫೋನ್ ಅನ್ನು ಸ್ಪರ್ಶಿಸುವ ಅಗತ್ಯವೂ ಇಲ್ಲದಂತೆ, ನಿಮ್ಮ ಫೋನ್ ನಲ್ಲಿ ಸೋಂಕು ತಗುಲುವಂತೆ ಮಾಡಬಲ್ಲದು. ಈಗ ಅಪಾರ ಪ್ರಮಾಣದ ಅಪಾಯಗಳು ಎದುರಾಗುತ್ತಿವೆ. ಮತ್ತು ಈ ಎಲ್ಲಾ ಸಂಶೋಧಕರನ್ನು ಅತ್ಯಂತ ಚಿಂತೆಗೀಡು ಮಾಡುತ್ತಿರುವ, ಅವರು ಈಗ ಬಹಿರಂಗವಾಗಿ ಮಾತನಾಡುತ್ತಿರುವ ವಿಷಯವೆಂದರೆ, ಈ ತಂತ್ರಜ್ಞಾನಗಳು ತಮ್ಮನ್ನೇ ತಾವೇ ಸುಧಾರಿಸಿಕೊಳ್ಳುವ ಪುನರಾವರ್ತಿತ ಸಾಮರ್ಥ್ಯ (ರಿಕರ್ಸಿವ್ ಎಬಿಲಿಟಿ) ಹೊಂದಿರುವುದು. ಎಐ ಮತ್ತು ನೀರಿನ ಬಿಕ್ಕಟ್ಟು ಎಐ ನೀರಿನ ಬಿಕ್ಕಟ್ಟಿಗೆ

ಕಾರಣವಾಗುತ್ತಿದೆ ಎಂಬುದು ಈಗ ಸ್ಪಷ್ಟವಾಗಿದೆ. ಮುಖ್ಯವಾಗಿ ಎಐ ಮಾದರಿಗಳನ್ನು ಚಲಾಯಿಸುವ ಕಂಪ್ಯೂಟರ್‌ಗಳನ್ನು ದೊಡ್ಡ ದತ್ತಾಂಶ ಕೇಂದ್ರಗಳಲ್ಲಿ (ಡೇಟಾ ಸೆಂಟರ್‌ಗಳು) ಇರಿಸಲಾಗುತ್ತದೆ. ಈ ದತ್ತಾಂಶ ಕೇಂದ್ರಗಳು ಅಪಾರ ಪ್ರಮಾಣದ ಶಾಖವನ್ನು ಉತ್ಪಾದಿಸುವುದರಿಂದ, ಅವುಗಳನ್ನು ತಂಪಾಗಿಡಲು ಹೆಚ್ಚಿನ ಪ್ರಮಾಣದ ನೀರು ಮತ್ತು ಇತರ ತಂಪುಗೊಳಿಸುವ ವ್ಯವಸ್ಥೆಗಳ ಅಗತ್ಯವಿರುತ್ತದೆ. ಐಟಿ ಉಪಕರಣಗಳಿಂದ ಉತ್ಪತ್ತಿಯಾಗುವ ಶಾಖದ ಪ್ರಮಾಣ ಮತ್ತು ತಂಪುಗೊಳಿಸುವ ವ್ಯವಸ್ಥೆಯ ಕಾರ್ಯಕ್ಷಮತೆಗೆ ನೀರಿನ ಬಳಕೆ ನೇರವಾಗಿ ಸಂಬಂಧಿಸಿದೆ.

ಕಳೆದ ಕೆಲವು ತಿಂಗಳುಗಳಲ್ಲಿ ಜಗತ್ತಿನಾದ್ಯಂತ ಸೈಬರ್ ದಾಳಿಗಳಾಗಿವೆ. ಜೊತೆಗೆ, ತಂತ್ರಜ್ಞಾನವು ಅಭಿವೃದ್ಧಿಯಾಗುತ್ತಿರುವ ವೇಗವೂ ಹೆಚ್ಚಾಗಿದೆ. ಇದು ಕೇವಲ ಪ್ರಚಾರ ಅಥವಾ ಉತ್ಪ್ರೇಕ್ಷೆಯಲ್ಲ. ಕಳೆದ ಆರು ತಿಂಗಳುಗಳಿಂದಲೇ ಪರಿಸ್ಥಿತಿ ಹೆಚ್ಚು ಹೆಚ್ಚು ಅಚ್ಚರಿಗೊಳಿಸುವಂತಾಗಿದೆ.

“ಮುಂದಿನ ಒಂದು ದಶಕದೊಳಗೆ ಎಐ ಎಲ್ಲ ಮನುಷ್ಯರನ್ನೂ ಕೊಲ್ಲುವ ಸಾಧ್ಯತೆ ಎಷ್ಟಿದೆ ಎಂದು ನಾನು ಆಂಥ್ರೊಪಿಕ್‌ನ ಕ್ಲಾಡ್‌ಗೆಕೇಳಿದೆ. ಮೊದಲಿಗೆ ಅದು ಆ ಪ್ರಶ್ನೆಗೆ ಉತ್ತರಿಸಲು ಇಷ್ಟಪಡಲಿಲ್ಲ. ಪ್ರಶ್ನೆಯನ್ನು ತಪ್ಪಿಸಲು ಅದು ಒಂದಲ್ಲ ಒಂದು ರೀತಿಯಲ್ಲಿ ಸುತ್ತಿಬಳಸಿ ಉತ್ತರಿಸುತ್ತಿತ್ತು. ಆದರೆ ನಾನು ಮತ್ತೆ ಒತ್ತಾಯಿಸಿದಾಗ, ಆಂಥ್ರೊಪಿಕ್‌ನ ಮಾದರಿಯು ಆ ಸಾಧ್ಯತೆ ೨ ರಿಂದ ೫ ಪ್ರತಿಶತದಷ್ಟು ಇದೆ ಎಂದು ತಿಳಿಸಿತು.” ಎನ್ನುತ್ತಾರೆ ಕಾಕ್ಸನ್.

ಸರ್ಕಾರದ ನಿಯಂತ್ರಣ: 

ಈ ಹಿನ್ನೆಲೆಯಲ್ಲಿ, ಎಐನ ದುಷ್ಪರಿಣಾಮಗಳ ಬಗ್ಗೆ ಯೋಚಿಸಿದಾಗ, ತಂತ್ರಜ್ಞಾನವನ್ನು ಎಷ್ಟರಮಟ್ಟಿಗೆ ನಂಬುವುದು ಎಂಬುದರ ಬಗ್ಗೆ ಗೊಂದಲವಾಗುತ್ತದೆ. ಸದ್ಯಕ್ಕೆ ಆತಂಕಗೊಳ್ಳುವ ಅವಶ್ಯಕತೆಯಿಲ್ಲದಿದ್ದರೂ, ಕೃತ್ರಿಮ ಬುದ್ಧಿಮತ್ತೆಯು ತಂದೊಡ್ಡುವ ಅಪಾಯಗಳ ಸಾಧ್ಯತೆಯನ್ನು ಅಲ್ಲಗಳೆಯಲಾಗುವುದಿಲ್ಲ. ಆಂಥ್ರೊಪಿಕ್, ತನ್ನ ಇತ್ತೀಚಿನ ಹೇಳಿಕೆಯಲ್ಲಿ, “ಶಕ್ತಿಶಾಲಿ ಮಾದರಿಗಳನ್ನು ನಾವು ಬಿಡುಗಡೆ ಮಾಡುವ ವೇಗವನ್ನು ನಿಯಂತ್ರಿಸಲು, ಉದ್ಯಮವು ಕಾನೂನುಬದ್ಧವಾಗಿ ಮತ್ತು ಪರಿಶೀಲಿಸಬಹುದಾದ ರೀತಿಯಲ್ಲಿ ಒಟ್ಟಾಗಿ ಕಾರ್ಯನಿರ್ವಹಿಸುವ ವ್ಯವಸ್ಥೆಯನ್ನು ಅಳವಡಿಸಿ ಕೊಂಡರೆ ಜಗತ್ತಿಗೆ ಪ್ರಯೋಜನವಾಗುತ್ತದೆ” ಎಂದು ಹೇಳಿದೆ. ಆದರೆ, ಇದು ಒಂದು ರೀತಿಯ ಶಸ್ತ್ರಾಸ್ತ್ರ ಸ್ಪರ್ಧೆಯಾಗಿದೆ. ಅಮೆರಿಕದ ಒಂದು ಕಂಪೆನಿಯು ಅತ್ಯುತ್ತಮ ಎಐಯನ್ನು ಅಭಿವೃದ್ಧಿಪಡಿಸದಿದ್ದರೆ, ಚೀನಾದ ಯಾವುದಾದರೂ ಕಂಪೆನಿ ಅಥವಾ ಹೊರಗಿನ ಯಾವುದಾದರೂ ದುಷ್ಕರ್ಮಿ ಅದನ್ನು ಸಾಧಿಸಬಹುದು ಎಂಬುದು ಅವರ ವಾದ.

“ಮುಂದಿನ ಒಂದು ದಶಕದೊಳಗೆ ಎಐ ಎಲ್ಲ ಮನುಷ್ಯರನ್ನೂ ಕೊಲ್ಲುವ ಸಾಧ್ಯತೆ ಎಷ್ಟಿದೆ ಎಂದು ನಾನು ಆಂಥ್ರೊಪಿಕ್‌ನ ಕ್ಲಾಡ್‌ಗೆ ಕೇಳಿದೆ. ಮೊದಲಿಗೆ ಅದು ಆ ಪ್ರಶ್ನೆಗೆ ಉತ್ತರಿಸಲು ಇಷ್ಟಪಡಲಿಲ್ಲ. ಪ್ರಶ್ನೆಯನ್ನು ತಪ್ಪಿಸಲು ಅದು ಒಂದಲ್ಲ ಒಂದು ರೀತಿಯಲ್ಲಿ ಸುತ್ತಿಬಳಸಿ ಉತ್ತರಿಸುತ್ತಿತ್ತು” ಎನ್ನುತ್ತಾರೆ ಕಾಕ್ಸನ್.”

” ಕಳೆದ ಕೆಲವು ತಿಂಗಳುಗಳಲ್ಲಿ ಜಗತ್ತಿನಾದ್ಯಂತ ಸೈಬರ್ ದಾಳಿಗಳಾಗಿವೆ. ಜೊತೆಗೆ, ತಂತ್ರಜನವು ಅಭಿವೃದ್ಧಿ ಯಾಗುತ್ತಿರುವ ವೇಗವೂ ಹೆಚ್ಚಾಗಿದೆ. ಇದು ನಿಜವಾದ ತಂತ್ರಜನ ಎಂಬುದನ್ನು ಜನರು ಅರಿತುಕೊಳ್ಳುತ್ತಿದ್ದಾರೆ. ಇದು ಕೇವಲ ಪ್ರಚಾರ ಅಥವಾ ಉತ್ಪ್ರೇಕ್ಷೆಯಲ್ಲ. ಇದು ಶೀಘ್ರದಲ್ಲೇ ಕಣ್ಮರೆಯಾಗುವಂಥದ್ದೂ ಅಲ್ಲ.”

 

 

 

Tags:
error: Content is protected !!