ತಿ.ನರಸೀಪುರ: ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಅವರು ಸ್ವ ಕ್ಷೇತ್ರ ತಿ.ನರಸೀಪುರ ಮೀಸಲು ವಿಧಾನಸಭಾ ಕ್ಷೇತ್ರದಲ್ಲಿ ಶನಿವಾರ ಮಿಂಚಿನ ಸಂಚಾರವನ್ನು ಕೈಗೊಂಡು ಅಭಿವೃದ್ಧಿ ಕಾಮಗಾರಿಗೆ ಚಾಲನೆ ನೀಡಿ, ಪ್ರಗತಿಯಲ್ಲಿರುವ ನಾಲೆ ಆಧುನಿಕರಣ ಕಾಮಗಾರಿಯನ್ನು ಪರಿಶೀಲಿಸಿ, ಸಾರ್ವಜನಿಕರ ಅಹವಾಲು ಸ್ವೀಕಾರ ಮಾಡಿದರು.
ತಾಲ್ಲೂಕಿನ ವ್ಯಾಸರಾಜಪುರ ಗ್ರಾಮದಲ್ಲಿ ಮಾದರಿ ವಿದ್ಯುತ್ ಗ್ರಾಮಕ್ಕೆ ಭೂಮಿ ಪೂಜೆ ಸಲ್ಲಿಸಿದ ಬಳಿಕ ಬನ್ನೂರು ಹೋಬಳಿಯ ಬಿ.ಸೀಹಳ್ಳಿ ಗ್ರಾಮದ ಮಾರ್ಗದ ಉದ್ದಕ್ಕೂ ಅಲ್ಲಲ್ಲಿ ಕಾದು ನಿಂತಿದ್ದ ಕಾರ್ಯಕರ್ತರು, ಮುಖಂಡರು ಹಾಗೂ ಸಾರ್ವಜನಿಕರ ಕುಂದು ಕೊರತೆಗಳನ್ನು ಆಲಿಸಿದರು.
ಸಿದ್ದನಹುಂಡಿ, ಸೋಮನಾಥಪುರ, ಕೇತುಪುರ, ಬೇವಿನಹಳ್ಳಿ, ಅತ್ತಹಳ್ಳಿ, ಬನ್ನೂರು ಸಂತೇಮಾಳ, ಎಸ್ ಆರ್ ಪಿ ರಸ್ತೆ, ಮಾಕನಹಳ್ಳಿ, ಮಾದಿಗಹಳ್ಳಿ, ಗಾಡಿಜೋಗಿ ಹುಂಡಿ ಹಾಗೂ ಹುಣಸಗಹಳ್ಳಿ ಗ್ರಾಮಗಳಲ್ಲಿ ಜನರ ಅಹವಾಲು ಆಲಿಸಿ, ಸಮಸ್ಯೆಗಳನ್ನು ಪರಿಹರಿಸುವಂತೆ ಸ್ಥಳದಲ್ಲಿಯೇ ಇದ್ದ ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದ ಅಧಿಕಾರಿಗಳಿಗೆ ಸೂಚನೆ ನೀಡಿದರು.