ಮೈಸೂರು : ಮಾದಕ ವಸ್ತು ಸೇವನೆ ಪರೀಕ್ಷೆಗೆ ಒಳಪಟ್ಟವರಲ್ಲಿ 189 ಮಂದಿ ಸೇವನೆ ಮಾಡಿದ್ದಾರೆ ಎಂದು ದೃಢಪಟ್ಟು ಪ್ರಕರಣ ದಾಖಲಿಸಲಾಗಿದೆ ಎಂದು ನಗರ ಪೊಲೀಸ್ ಆಯುಕ್ತರಾದ ಸೀಮಾ ಲಾಟ್ಕರ್ ಹೇಳಿದರು.
ಮಾದಕ ವಸ್ತು ಕಾರ್ಯಾಚರಣೆ ಸಂಬಂಧ ಮೈಸೂರು ನಗರದಲ್ಲಿ 541 ಮಂದಿ ಮಾದಕ ವಸ್ತು ಸೇವನೆ ಶಂಕಿತರನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, 189 ಮಂದಿ ಸೇವನೆ ಮಾಡಿದ್ದಾರೆ ಎಂಬುದು ದೃಢ ಪಟ್ಟ ಹಿನ್ನೆಲೆಯಲ್ಲಿ ಅವರ ವಿರುದ್ದ ಪ್ರಕರಣ ದಾಖಲಾಗಿದೆ ಎಂದು ವಿವರಿಸಿದರು.
ನಗರದ ಮಂಡಿ, ಉದಯಗಿರಿ, ಕೆ.ಆರ್, ನಜರ್ ಬಾದ್ ಸೇರಿದಂತೆ ವಿವಿಧ ಪೊಲೀಸ್ ಠಾಣೆಗಳ ವ್ಯಾಪ್ತಿಯಿಂದ ಶಂಕಿತರನ್ನು ಕರೆತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ. ಕೆ.ಆರ್.ಆಸ್ಪತ್ರೆಯ ವೈದ್ಯರ ತಂಡ ತಪಾಸಣಾ ಕಾರ್ಯ ನಡೆಸುತ್ತಿದ್ದಾರೆ ಎಂದು ಹೇಳಿದರು.
ಶನಿವಾರ ನಡೆಸಿದ ಕಾರ್ಯಾಚರಣೆ ವೇಳೆ 259 ಮಂದಿ ಶಂಕಿತರನ್ನು ಕರೆ ತಂದು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಯಿತು. ಇದುವರೆವಿಗೂ 189 ಮಂದಿ ಗಾಂಜಾ ಸೇವನೆ ಮಾಡಿರುವುದು ಪತ್ತೆಯಾಗಿದೆ. ಎಂಡಿಎಂಎ ಸೇವನೆ ಮಾಡಿರುವುದು ಕಂಡು ಬಂದಿಲ್ಲ ಎಂದು ಮಾಹಿತಿ ನೀಡಿದರು.





