ಆಧಾರ್ ಕಾರ್ಡ್ ಪರಿಶೀಲನೆ ನಂತರ ಶಂಕೆ ನಿವಾರಣೆ
ಮೈಸೂರು : ಪಶ್ಚಿಮ ಬಂಗಾಳದಿಂದ ಬಂದವರನ್ನು ಬಾಂಗ್ಲಾ ದೇಶದ ನಿವಾಸಿಗಳೆಂದು ತಿಳಿದ ಹಿಂದೂ ಜಾಗರಣಾ ವೇದಿಕೆ ಸದಸ್ಯರು ಅವರುಗಳನ್ನು ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದು, ವಿಚಾರಣೆ ನಂತರ ಅವರುಗಳು ಬಾಂಗ್ಲಾ ವಲಸಿಗರಲ್ಲ ಎಂಬುದು ದೃಡಪಟ್ಟಿದೆ.
ಭಾನುವಾರ ಬೆಳಿಗ್ಗೆ ಔರಾ ಎಕ್ಸಪ್ರೆಸ್ ರೈಲಿನ ಮೂಲಕ ಸುಮಾರು 34 ಮಂದಿ ಪ್ರಯಾಣಿಕರು ಬಂದಿದ್ದಾರೆ. ಮೈಸೂರು ನಿಲ್ದಾಣದಲ್ಲಿ ಇಳಿಯುತ್ತಿದ್ದಂತೆ ಅವರನ್ನು ಸುತ್ತುವರೆದ ಹಿಂದೂ ಜಾಗರಣ ವೇದಿಕೆ ಸದಸ್ಯರು ಅವರುಗಳನ್ನು ಪ್ರಶ್ನಿಸಿದ್ದಾರೆ. ನಂತರ ಅವರುಗಳು ಬಾಂಗ್ಲಾ ದೇಶದ ಪ್ರಜೆಗಳು ಎಂಬ ಅನುಮಾನ ಮೂಡಿದೆ. ತಕ್ಷಣವೇ ಎಲ್ಲ 34 ಮಂದಿಯನ್ನು ರೈಲ್ವೇ ಪೊಲೀಸರಿಗೆ ಒಪ್ಪಿಸಿದ್ದಾರೆ. ಈ ಸಂಬಂದ ರೈಲ್ವೇ ಪೊಲೀಸರು ಅವರುಗಳ ಆಧಾರ್ ಕಾರ್ಡ್‌ಗಳನ್ನು ಪರಿಶೀಲನೆ ನಡೆಸಿದ್ದಾರೆ.
ಅದರಲ್ಲಿ ಅವರುಗಳು ಪಶ್ಚಿಮ ಬಂಗಾಳ ಮೂಲದವರು ಎಂಬುದು ಗೊತ್ತಾಗಿದೆ. ಆದರೂ, ಆಧಾರ್ ಕಾರ್ಡ್‌ನ ಪರಿಶೀಲನೆಗಾಗಿ ಗ್ರೇಡ್ 2 ತಹಸೀಲ್ದಾರ ಅವರನ್ನು ಸ್ಥಳಕ್ಕೆ ಕರೆಸಿದ್ದಾರೆ. ಸ್ಥಳಕ್ಕೆ ಬಂದ ಅವರು ಆಧಾರ್ ಕಾರ್ಡ್ ಪರಿಶೀಲನೆ ನಡೆಸಿದ್ದಾರೆ.
ನಂತರ ಅವರುಗಳು ಪಶ್ಚಿಮ ಬಂಗಾಳದ ನಿವಾಸಿಗಳು ಎಂಬದು ಸಾಬೀತಾಗಿದೆ. ಈ ಸಂಬಂದ ಅವರುಗಳ ಆಧಾರ್ ಕಾರ್ಡ್ ನಕಲನ್ನು ಪಡೆದು, ಅವರ ವಿಳಾಸ ಹಾಗೂ ದೂರವಾಣಿ ಸಂಖ್ಯೆಯನ್ನು ಪಡೆದುಕೊಂಡ ಪೊಲೀಸರು ಅವರುಗಳನ್ನು ಕಳುಹಿಸಿಕೊಟ್ಟಿದ್ದಾರೆ.
ಕೆಲಸಕ್ಕಾಗಿ ಬಂದವರು
ಇಂದು ಮೈಸೂರು, ಮಂಡ್ಯ, ಕೊಡಗು ಸೇರಿದಂತೆ ಅನೇಕ ಸ್ಥಳಗಳಲ್ಲಿ ಪಶ್ಚಿಮ ಬಂಗಾಳದ ವಲಸಿಗರು ಕಟ್ಟಡ, ವಿದ್ಯುತ್, ಪೇಯಿಂಟಿಂಗ್ ಸೇರಿದಂತೆ ಹಲವು ಕೆಲಸಗಳನ್ನು ನಿರ್ವಹಿಸುತ್ತಿದ್ದಾರೆ. ಹೀಗಾಗಿ ಅವರುಗಳು ವಾರಕ್ಕೆ ಒಮ್ಮೆ ಕೋಲ್ಕತ್ತಾದಿಂದ ಬರುವ ಔರಾ ರೈಲಿನಲ್ಲಿ ಮೈಸೂರಿಗೆ ಬರುತ್ತಾರೆ. ನಂತರ ಮೈಸೂರು ಮೂಲಕ ಮಂಡ್ಯ, ಕೇರಳ, ಮಡಿಕೇರಿ ಭಾಗಗಳಿಗೆ ತೆರಳುವುದು ಮಾಮೂಲು. ನೋಡಲು ಬಾಂಗ್ಲಾ ದೇಶದವರಂತೆ ಕಾಣುವುದರಿಂದ ಅವರುಗಳ ಮೇಲೆ ಅನುಮಾನ ಮೂಡಿರುವುದು ಘಟನೆಗೆ ಕಾರಣ ಎಂದು ಪೊಲೀಸ್ ಮೂಲಗಳು ತಿಳಿಸಿವೆ.




