ನಂಜನಗೂಡು: ಈಜಲು ಹೋದ ಯುವಕ ನೀರಿನಲ್ಲಿ ಮುಳುಗಿ ಜಲಸಮಾಧಿಯಾಗಿರುವ ಘಟನೆ ನಂಜನಗೂಡು ತಾಲ್ಲೂಕಿನ ಹುಲ್ಲಹಳ್ಳಿ ಗ್ರಾಮದ ಸಮೀಪದಲ್ಲಿರುವ ಕಬಿನಿ ಹತ್ವಾಳ್ ಕಟ್ಟೆಯಲ್ಲಿ ಜರುಗಿದೆ.
ಮೃತ ಯುವಕ ಅಭಿಷೇಕ್(23) ನಂಜನಗೂಡಿನ ರಾಮಸ್ವಾಮಿ ಲೇಔಟ್‌ನ ನಿವಾಸಿಯಾಗಿದ್ದಾನೆ. ಪಟ್ಟಣದಿಂದ ಮೂವರು ಸ್ನೇಹಿತರ ಜೊತೆ ಈಜಲು ಬಂದಿದ್ದ ವೇಳೆ ಅಭಿಷೇಕ್ ಸುಳಿಗೆ ಸಿಲುಕಿ ಸಾವನಪ್ಪಿದ್ದಾನೆ. ಇನ್ನುಳಿದ ಮೂವರು ಬದುಕುಳಿದಿದ್ದಾರೆ. ಘಟನೆ ಸ್ಥಳದಲ್ಲಿ ಈ ಹಿಂದೆಯೂ ಮೈಸೂರಿನ ಯುವಕನೊಬ್ಬ ಕಾಲು ಜಾರಿ ಬಿದ್ದು ಮೃತಪಟ್ಟಿದ್ದ.
ಕಬಿನಿ ಜಲಾಶಯದ ಅಧಿಕಾರಿಗಳ ಬೇಜವಾಬ್ದಾರಿಯಿಂದ ಇಂತಹ ಸಾವು ನೋವುಗಳು ಸಂಭವಿಸುತ್ತಿದೆ. ಯಾವುದೇ ನಾಮಫಲಕಗಳನ್ನು ಹಾಕದೆ ಅಧಿಕಾರಿಗಳು ಬೇಜವಾಬ್ದಾರಿ ಮೆರೆದಿದ್ದಾರೆ. ಇಂತಹ ಸೂಕ್ಷ್ಮ ಪ್ರದೇಶದಲ್ಲಿ ನಾಮ ಫಲಕ ಹಾಕಿ ಸಾರ್ವಜನಿಕರು ಬಾರದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ.
ಘಟನೆ ಸ್ಥಳಕ್ಕೆ ಹುಲ್ಲಹಳ್ಳಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಮೃತ ದೇಹವನ್ನು ಹೊರ ತೆಗೆದು ಮರಣೋತ್ತರ ಪರೀಕ್ಷೆಗಾಗಿ ನಂಜನಗೂಡಿನ ಸಾರ್ವಜನಿಕ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಸಂಬಂಧ ಹುಲ್ಲಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರ ದಾಖಲಾಗಿದೆ.