Mysore
24
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಪ್ರತಿಭಟನೆಗೆ ಸೀಮಿತವಾದ ಕರ್ನಾಟಕ ಬಂದ್ ; ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ

ಬೆಂಗಳೂರು: ತಮಿಳುನಾಡಿಗೆ ಕಾವೇರಿ ನೀರು ಹರಿಸುವಂತೆ ಕಾವೇರಿ ನೀರು ಹರಿಸಬೇಕು ಎಂಬ ನೀರು ನಿರ್ವಹಣಾ ಪ್ರಾಧಿಕಾರದ ಆದೇಶ ಖಂಡಿಸಿ ಹಾಗೂ ರಾಜ್ಯದಲ್ಲಿ ನನೆಗುದಿಗೆ ಬಿದ್ದಿರುವ ವಿವಿಧ ನೀರಾವರಿ ಯೋಜನೆಗಳ ಜಾರಿಗೆ ಆಗ್ರಹಿಸಿ ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಕರೆ ನೀಡಿದ್ದ ಅಖಂಡ ಕರ್ನಾಟಕ ಬಂದ್‌ಗೆ ಮೈಸೂರು, ಮಂಡ್ಯ, ಚಾಮರಾಜನಗರ, ಕೊಡಗು, ಹಾಸನ, ರಾಮನಗರ, ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.

ಕನ್ನಡಿಗರ ಹಿತರಕ್ಷಣೆಯ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬಂದ್‌ಗೆ ಕರೆ ನೀಡಲಾಗಿದ್ದರೂ, ಸಾರ್ವಜನಿಕರು ಹಾಗೂ ಪ್ರಮುಖ ಸಂಘಟನೆಗಳು ಸಂಪೂರ್ಣ ಬೆಂಬಲ ನೀಡದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ರಾಜ್ಯದ ಬಹುತೇಕ ಕಡೆಗಳಲ್ಲಿ ಜನಜೀವನ ಎಂದಿನಂತೆ ಸಹಜವಾಗಿತ್ತು.

ಮೈಸೂರು, ಬೆಂಗಳೂರು ಸೇರಿದಂತೆ ಜಿಲ್ಲಾ ಕೇಂದ್ರಗಳಲ್ಲಿ ಸಾರ್ವಜನಿಕ ಸಾರಿಗೆ ವಾಹನಗಳು ಎಂದಿನಂತೆ ಸಂಚರಿಸಿದವು. ಸಾರ್ವಜನಿಕ ಸೇವೆಯ ಖಾಸಗಿ ವಾಹನಗಳು ಕೂಡ ಲಭ್ಯವಿದ್ದವು. ಶಾಲಾ- ಕಾಲೇಜುಗಳು, ಸರ್ಕಾರಿ ಕಚೇರಿಗಳು ಕಾರ್ಯ ನಿರ್ವಹಿಸಿದವು. ಬಂದ್‌ಗೆ ಕನ್ನಡ ಸಂಘಟನೆಗಳ ಒಕ್ಕೂಟ, ಕರ್ನಾಟಕ ರಾಜ್ಯ ರೈತ ಹಿತರಕ್ಷಣಾ ಸಂಘ ಹಾಗೂ ಕರುನಾಡ ಸೇನೆ ಸೇರಿದಂತೆ ಕೆಲವು ಒಕ್ಕೂಟಗಳು ನೇರ ಬೆಂಬಲ ಸೂಚಿಸಿದ್ದವು. ಆದರೆ, ಕರವೇ ನಾರಾಯಣ ಗೌಡ ಬಣ, ಪ್ರವೀಣ್ ಶೆಟ್ಟಿ ಬಣ, ಅಖಿಲ ಕರ್ನಾಟಕ ರಾಜ್‌ಕುಮಾರ್ ಅಭಿಮಾನಿಗಳ ಸಂಘ, ರಾಜ್ಯ ರೈತ ಸಂಘಟನೆಗಳ ಒಕ್ಕೂಟ, ಖಾಸಗಿ ಸಾರಿಗೆ ಒಕ್ಕೂಟ ಹಾಗೂ ಖಾಸಗಿ ಶಾಲೆಗಳ ಒಕ್ಕೂಟಗಳು ಬಂದ್‌ನಿಂದ ದೂರ ಉಳಿದಿದ್ದವು. ಇನ್ನು ಓಲಾ – ಊಬರ್ ಅಸೋಸಿಯೇಷನ್, ಬೆಂಗಳೂರು ಹೋಟೆಲ್ ಮಾಲೀಕರ ಸಂಘ, ಫಿಲಂ ಚೇಂಬರ್ ಸೇರಿದಂತೆ ಹಲವು ಸಂಸ್ಥೆಗಳು ಬಂದ್‌ಗೆ ಕೇವಲ ನೈತಿಕ ಬೆಂಬಲವನ್ನಷ್ಟೇ ವ್ಯಕ್ತಪಡಿಸಿ, ತಮ್ಮ ಕಾರ್ಯಚಟುವಟಿಕೆಗಳನ್ನು ಮುಂದುವರಿಸಿದ್ದವು.

ಮೈಸೂರು, ಮಂಡ್ಯದಲ್ಲೂ ಹೋರಾಟಕ್ಕೆ ಸೀಮಿತ
ಕಾವೇರಿ ನದಿಯೇ ಜೀವನಾಡಿಯಾಗಿರುವ ಮೈಸೂರಿನಲ್ಲಿ ಕರ್ನಾಟಕ ಬಂದ್‌ಗೆ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆದರೆ ಹೋರಾಟಗಳು ನಡೆದವು. ಮಂಡ್ಯದಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಯಿತು. ಒಗ್ಗಟ್ಟಿನ ಕೊರತೆಯಿಂದ ಕಾವೇರಿ ಚಳವಳಿ ಹೇಳಿಕೊಳ್ಳುವಂತಹ ಮಟ್ಟದಲ್ಲಿ ಇರಲಿಲ್ಲ. ಮೈಸೂರಿಂದ ಬೇರೆ ಬೇರೆ ಊರುಗಳಿಗೆ ಸಂಪರ್ಕ ಕಲ್ಪಿಸುವ ಮೈಸೂರು ಗ್ರಾಮಾಂತರ ಬಸ್ ನಿಲ್ದಾಣದ ಬಳಿ ಪ್ರತಿಭಟನೆಗಳು ನಡೆದವು. ಆದರೆ ಬಸ್‌ಗಳ ಸಂಚಾರ ಎಂದಿನಂತೆ ಇತ್ತು. ಮಳೆ ಬಂದು ಜಲಾಶಯದಲ್ಲಿ ನೀರು ತುಂಬಿದ್ದರಿಂದ ಅನೇಕ ಸಂಘಟನೆಗಳು ಬಂದ್‌ನಿಂದ ಹಿಂದೆ ಸರಿದಿದ್ದವು. ಪೊಲೀಸರು ಮುಂಜಾಗ್ರತಾ ಕ್ರಮವಾಗಿ ಬಿಗಿ ಬಂದೋಬಸ್ತ್ ವಹಿಸಿದ್ದರು. ರಾಜ್ಯ ರೈತ ಸಂಘ ಹಾಗೂ ಕನ್ನಡಪರ ಸಂಘಟನೆಗಳು ಪ್ರತಿಭಟನೆ ನಡೆಸಿದವು. ಆದರೆ ಹೋಟೆಲ್, ವರ್ತಕರ ಸಂಘ ಹಾಗೂ ಕಾರ್ಮಿಕರು, ಆಟೋ-ಕ್ಯಾಬ್ ಚಾಲಕರ ಸಂಘದಿಂದ ನೈತಿಕ ಬೆಂಬಲ ಮಾತ್ರ ಕೊಡಲಾಗಿತ್ತು.

Tags:
error: Content is protected !!