ತಮಿಳುನಾಡು: ಇಲ್ಲಿನ ಕಡಲೂರು ಜಿಲ್ಲೆಯಲ್ಲಿ ಹಕ್ಕಿಜ್ವರ ದೃಢಪಟ್ಟಿರುವುದಾಗಿ ವರದಿಯಾಗಿದೆ. ಅಕ್ಟೋಬರ್ 30ರಿಂದ ನವೆಂಬರ್ 13ರವರೆಗೆ ಒಟ್ಟು 35,647 ಕೋಳಿಗಳು ಸಾವನ್ನಪ್ಪಿವೆ ಎಂದು ಜಿಲ್ಲಾಧಿಕಾರಿ ತಿಳಿಸಿದ್ದಾರೆ.
ಕತ್ತಿಯಾಂಕುಪ್ಪಂ ಗ್ರಾಮದ ಕೋಳಿ ಫಾರಂನಿಂದ ಸಂಗ್ರಹಿಸಿದ್ದ ಮಾದರಿಗಳಲ್ಲಿ ಹೆಚ್5ಎನ್1 ವೈರಸ್ ಇರುವುದನ್ನು ಭೋಪಾಲ್ನ ಪ್ರಯೋಗಾಲಯ ದೃಢಪಡಿಸಿದೆ ಎಂದು ವರದಿ ತಿಳಿಸಿದೆ.
ಪೀಡಿತ ಪ್ರದೇಶದ 15 ಫಾರಂಗಳ ಪೈಕಿ 10ರಲ್ಲಿ ಕೋಳಿಗಳು ಈಗಾಗಲೇ ಸಾವನ್ನಪ್ಪಿದ್ದು, ಉಳಿದ ಐದು ಫಾರಂಗಳಲ್ಲಿನ ಕೋಳಿಗಳನ್ನು ರೋಗ ನಿಯಂತ್ರಣಕ್ಕಾಗಿ ಹತ್ಯೆ ಮಾಡಲು ಜಿಲ್ಲಾಡಳಿತ ನಿರ್ಧರಿಸಿದೆ. ಇದಕ್ಕಾಗಿ ಒಂಬತ್ತು ತಂಡಗಳನ್ನು ನಿಯೋಜಿಸಲಾಗಿದೆ.




