ಹೊಸದಿಲ್ಲಿ: ಉತ್ತರಾಖಂಡದ ಹಲ್ದ್ವಾನಿಯಲ್ಲಿ ತಾವು ಭಾಷಣ ಮಾಡಿದ್ದ ರಾಮಲೀಲಾ ಮೈದಾನದ ವೇದಿಕೆಯಲ್ಲಿ ‘ಶ್ರೀರಾಮ ಸೇನಾ’ ಸಂಘಟನೆಯು ಶುದ್ಧೀಕರಣ (ಹವನ) ನಡೆಸಿದ್ದಕ್ಕೆ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
‘ಈ ರೀತಿಯ ಕೃತ್ಯವು ಹಿಂದೂ ಧರ್ಮಕ್ಕೇ ವಿರುದ್ಧವಾದದ್ದು. ಈ ದೇಶದಲ್ಲಿ ದಲಿತರಿಗೆ ಸ್ಥಾನ ಇಲ್ಲ ಎಂಬುದನ್ನು ತೋರಿಸುತ್ತದೆ’ ಎಂದು ಅವರು ಕಿಡಿಕಾರಿದ್ದಾರೆ. ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಮಲ್ಲಿಕಾರ್ಜುನ ಖರ್ಗೆ ಅವರು ‘ವಿಜಯ ಶಂಖನಾದ’ ರ‍್ಯಾಲಿಯನ್ನು ಉದ್ದೇಶಿಸಿ ಭಾಷಣ ಮಾಡಿದ್ದರು. ಅದಾದ ಎರಡು ದಿನಗಳ ನಂತರ ‘ಶ್ರೀರಾಮ ಸೇನಾ’ ಸಂಘಟನೆಯ ಸದಸ್ಯರು ಆ ವೇದಿಕೆಯಲ್ಲಿ ‘ಶುದ್ಧೀಕರಣ’ ಹವನ ನಡೆಸಿದ್ದರು.
ವಿಪಕ್ಷ ನಾಯಕರಾಗಿರುವ ಮಲ್ಲಿಕಾರ್ಜುನ ಖರ್ಗೆ ಅವರು ಸಂಸತ್ತಿನ ಮುಂಗಾರು ಅಧಿವೇಶನದ ಕೊನೆಯ ದಿನವಾದ ಗುರುವಾರ ರಾಜ್ಯಸಭೆಯಲ್ಲಿ ಈ ವಿಚಾರ ಪ್ರಸ್ತಾಪಿಸಿದರು. ‘ನಾನೊಬ್ಬ ವಿಪಕ್ಷ ನಾಯಕ. ಇದು ನನ್ನ ವಿರುದ್ಧ ತೋರಿದ ಅಸ್ಪೃಶ್ಯತೆ ’ಎಂದು ಖರ್ಗೆ ಕೆಂಡಕಾರಿದರು.




