ಮೈಸೂರು: ನಗರದ ಊಟಿ ರಸ್ತೆಯ ಜೆಎಸ್‌ಎಸ್ ಕಾಲೇಜು ಬಳಿ ಕೆ.ಆರ್. ಸಂಚಾರ ವಿಭಾಗದ ಪೊಲೀಸರು ಶನಿವಾರ ರಾತ್ರಿ ಡ್ರಂಕನ್ ಅಂಡ್ ಡ್ರೈವ್ ತಪಾಸಣೆ ವೇಳೆ ಬೀದಿದೀಪ ನಂದಿಸಿ ಕಾರ್ಯಾಚರಣೆ ನಡೆಸಿರುವ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನಾಗರಿಕರೊಬ್ಬರು ಪೊಲೀಸರು ಆರಿಸಿದ್ದ ಬೀದಿದೀಪಗಳನ್ನು ಪುನಃ ಹೊತ್ತಿಸಿದರೂ ಮೂರೇ ನಿಮಿಷಗಳಲ್ಲೇ ಮತ್ತೆ ನಂದಿಸಿ ತಪಾಸಣೆ ನಡೆಸಿದುದ್ದಕ್ಕೆ ಆಕ್ರೋಶ ವ್ಯಕ್ತವಾಗಿದೆ.
ಜೆಎಸ್‌ಎಸ್ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಕಾಲೇಜಿನಿಂದ ಮಧುವನ ಕಾಮತ್ ಹೋಟೆಲ್ ತನಕ ಬೀದಿ ದೀಪ ಆಫ್ ಮಾಡಿ ಕತ್ತಲೆಯಲ್ಲಿ ನಿಂತು ಡ್ರಂಕನ್ ಅಂಡ್ ಡ್ರೈವ್ ತಪಾಸಣೆ ಮಾಡಿದ್ದಾರೆ. ತಾವು ತಪಾಸಣೆ ಮಾಡುವುದು ವಾಹನ ಸಂಚಾರಿಗಳಿಗೆ ಗೊತ್ತಾಗಬಾರದೆಂಬ ಉದ್ದೇಶ ಈ ರೀತಿ ಮಾಡಿದ್ದಾರೆ ಎಂಬುದಾಗಿ ಬೀದಿದೀಪ ಹೊತ್ತಿಸಿ ಸ್ಥಳದಲ್ಲಿಯೇ ನಿಂತು ನೋಡಿದ ನಾಗರಿಕ ತಾವು ಚಿತ್ರೀಕರಿಸಿರುವ ವೀಡಿಯೋದಲ್ಲಿ ಹೇಳಿಕೊಂಡಿದ್ದಾರೆ.
ಕಳೆದ ಜೂನ್ ತಿಂಗಳಲ್ಲಿ ಮೈಸೂರಿನಲ್ಲಿ ನಡೆದಿದ್ದ ವಿಶ್ವ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗವಹಿಸಲು ಆಗಮಿಸಿದ್ದ ವೇಳೆ ಊಟಿ ರಸ್ತೆಯುದ್ದಕ್ಕೂ ಹೊಸದಾಗಿ ಬೀದಿದೀಪಗಳನ್ನು ಅಳವಡಿಸಲಾಗಿತು. ಶನಿವಾರ ಡಿಡಿ ಕೇಸ್ ಹಾಕುವಾಗ ಈ ಬೀದಿ ದೀಪಗಳ ಸೌಲಭ್ಯವಿಲ್ಲದೆ ವಾಹನ ಸಂಚಾರಿಗಳು ಕತ್ತಲೆಯಲ್ಲೇ ಓಡಾಡುವಂತಾಯಿತು. ರಾತ್ರಿ ೯ ಗಂಟೆಗೆ ಆರಂಭವಾದ ಡಿಡಿ ತಪಾಸಣೆಯು ಮಧ್ಯರಾತ್ರಿ ೧೨ ಗಂಟೆಯ ತನಕವೂ ನಡೆದಿದೆ. ಅಷ್ಟೂ ಸಮಯ ಬೀದಿದೀಪ ನಂದಿಸಲಾಗಿತ್ತು ಎಂದು ವೀಡಿಯೋ ಮಾಡಿದ ನಾಗರಿಕರು ‘ಆಂದೋಲನ’ಕ್ಕೆ ತಿಳಿಸಿದ್ದಾರೆ.