ಹನೂರು: ಪ್ರಧಾನಿ ನರೇಂದ್ರ ಮೋದಿ ಅವರು ಹಲವು ಜನಪರ ಕಾರ್ಯಕ್ರಮಗಳನ್ನು ಜಾರಿಗೊಳಿಸುವುದರ ಮೂಲಕ ಉತ್ತಮ ಆಡಳಿತ ನೀಡಿ ಜನತೆಯ ಮೆಚ್ಚುಗೆ ಪಾತ್ರರಾಗಿದ್ದಾರೆಯಲ್ಲದೇ ವಿಶ್ವ ನಾಯಕರೆನಿಸಿದ್ದಾರೆ ಎಂದು ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಡಾ. ದತ್ತೇಶ್‍ಕುಮಾರ್ ಬಣ್ಣಿಸಿದರು.
ತಾಲೂಕಿನ ರಾಮಾಪುರ ಗ್ರಾಮದ ಮಹದೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ 72ನೇ ಹುಟ್ಟು ಹಬ್ಬದ ಅಂಗವಾಗಿ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಅವರು ಮಾತನಾಡಿದರು.
ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟು ಹಬ್ಬದ ಹಿನ್ನಲೆ ಬಿಜೆಪಿ ವತಿಯಿಂದ ಇಡೀ ದೇಶಾದ್ಯಂತ ಸೆ.17 ರಿಂದ ಅ.2ರವರೆಗೆ ಸೇವಾ ಪ್ರಾಕ್ಷಿಕೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಜನಧನ್ ಯೋಜನೆ, ಕೃಷಿ ಸಮ್ಮಾನ್, ಉಜ್ವಲ ಯೋಜನೆ ಸೇರಿದಂತೆ ಇನ್ನಿತರೆ ಜನಪ್ರಿಯ ಯೋಜನೆಗಳನ್ನು ಅನುಷ್ಠಾನಗೊಳಿಸುವುದರ ಮೂಲಕ ದೇಶದ ಜನತೆಗೆ ಉತ್ತಮ ಆಡಳಿತವನ್ನು ನೀಡಿದ್ದಾರೆ. ಅಲ್ಲದೇ ಕೋವಿಡ್ ಸಮಯದಲ್ಲಿ ಹೆಚ್ಚಿನ ಜಾವಬ್ದಾರಿಯನ್ನು ಹೊತ್ತು ದೇಶದ ಜನರಿಗೆ ಸೋಂಕು ತಗುಲದಂತೆ ಅಗತ್ಯ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸಿ ಉತ್ತಮ ಆರೋಗ್ಯ ಸೇವೆಯನ್ನು ಒದಗಿಸಿದ್ದು, ಇದುವರೆಗೂ 200 ಕೋಟಿ ಜನರಿಗೆ ಉಚಿತ ಕೋವಿಡ್ ಲಸಿಕೆ ನೀಡಿರುವುದು ಇವರ ಆಡಳಿತದ ಕಾರ್ಯ ವೈಖರಿಗೆ ಹಿಡಿದ ಕೈಗನ್ನಡಿ. ಆಗಾಗಿ ದೇಶಕ್ಕೆ ಮಾತ್ರ ಪ್ರಧಾನಿಯಲ್ಲ ಇಡೀ ವಿಶ್ವಕ್ಕೆ ನಾಯಕರು ಎಂದು ತಿಳಿಸಿದರು.
ಇದೇ ವೇಳೆ ಸ್ವಯಂ ಪ್ರೇರಿತರಾಗಿ ರಕ್ತದಾನ ಮಾಡಿದವರಿಗೆ ಶಾಲು, ಹಾರ ಹಾಕಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿಗಳಾದ ಮಂಜುನಾಥ್, ನವೀನ್ ಒಬಿಸಿ ಮೋರ್ಚಾದ ಅಧ್ಯಕ್ಷ ರವಿ, ಮುಖಂಡರಾದ ಶಿವಪ್ಪ ಮಾಸ್ಟರ್, ಅಶ್ವಥ್, ಚಾಂದ್, ನಾಗೇಂದ್ರಪ್ರಭು, ಕೃಷ್ಣಮೂರ್ತಿ, ಶಿವಕುಮಾರ್ ಹಾಗೂ ಕಾಮಗೆರೆ ಹೋಲಿಕ್ರಾಸ್ ಆಸ್ಪತ್ರೆ, ರೆಡ್‍ಕ್ರಾಸ್ ಸಂಸ್ಥೆಯ ವೈದ್ಯರು, ಶ್ರುಷೂಶಿಕಿಯರು ಹಾಗೂ ಇನ್ನಿತರರು ಉಪಸ್ಥಿತರಿದ್ದರು.