ಮಂಡ್ಯ : ಮಂಡ್ಯ ತಾಲ್ಲೂಕಿನ ಯಲಿಯೂರು ಮತ್ತು ಶ್ರೀರಂಗಪಟ್ಟಣ ತಾಲ್ಲೂಕಿನ ಕೆ.ಶೆಟ್ಟಹಳ್ಳಿ ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಭೇಟಿ ನೀಡಿ ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಜಿ.ಪಂ. ಸಿಇಓ ನಂದಿನಿ ಕೆ.ಆರ್. ಅವರು ಪರಿಶೀಲನೆ ನಡೆಸಿದರು.
ಬುಧವಾರ ಆಯುಷ್ಮಾನ್ ಆರೋಗ್ಯ ಕೇಂದ್ರಗಳಿಗೆ ಅನಿರೀಕ್ಷಿತ ಭೇಟಿ ನೀಡಿ, ವೈದ್ಯರ ಹಾಜರಾತಿ, ಶೌಚಾಲಯ, ಕುಡಿಯುವ ನೀರು, ಹಾಸಿಗೆ ವ್ಯವಸ್ಥೆ, ಸ್ವಚ್ಛತೆ, ತ್ಯಾಜ್ಯ ನಿರ್ವಹಣೆ, ಔಷದಗಳ ಲಭ್ಯತೆ, ಲ್ಯಾಬ್ ಗಳ ಕಾರ್ಯನಿರ್ವಹಣೆ, ತುರ್ತು ಸೇವಾ ಸೌಲಭ್ಯಗಳು, ಲಸಿಕೆ ಕಾರ್ಯಕ್ರಮಗಳು ಹಾಗೂ ವಹಿಗಳ ಪರಿಶೀಲನೆ ನಡೆಸಿದರು.
ಈ ಸಂದರ್ಭದಲ್ಲಿ ಆಸ್ಪತ್ರೆಯಲ್ಲಿದ್ದ ಸಾರ್ವಜನಿಕರೊಂದಿಗೆ ಚರ್ಚಿಸಿ, ಸಿಬ್ಬಂದಿಗಳ ಕಾರ್ಯವೈಖರಿ ಹಾಗೂ ಆಸ್ಪತ್ರೆಯಿಂದ ದೊರೆಯುತ್ತಿರುವ ಚಿಕಿತ್ಸಾ ಸೌಲಭ್ಯಗಳ ಬಗ್ಗೆ ಮಾಹಿತಿ ಪಡೆದರು.
ರೋಗಿಗಳಿಗೆ ಸೂಕ್ತ ಚಿಕಿತ್ಸೆಗಳು ಸೂಕ್ತ ಸಂದರ್ಭದಲ್ಲಿ ದೊರೆಯಬೇಕು ಎಂದು ಆಸ್ಪತ್ರೆಯ ವೈದ್ಯಾಧಿಕಾರಿಗಳಿಗೆ ಸೂಚಿಸಿದ ಅವರು ಆಸ್ಪತ್ರೆಯ ಸ್ವಚ್ಛತೆ ಹಾಗೂ ಆಸ್ಪತ್ರೆಯಲ್ಲಿನ ದಾಖಲಾತಿ ನಿರ್ವಹಣೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಆಯುಷ್ಮಾನ್ ಭಾರತ್ – ಆರೋಗ್ಯ ಕರ್ನಾಟಕ ಯೋಜನೆಯಡಿ ಆಸ್ಪತ್ರೆ ಉನ್ನತೀಕರಣ: ಯಲಿಯೂರು ಗ್ರಾಮದ ಆಯುಷ್ಮಾನ್ ಆರೋಗ್ಯ ಕೇಂದ್ರವನ್ನು ಎ.ಬಿ.ಎ.ಆರ್.ಕೆ ಯೋಜನೆಯಡಿ ನವೀಕರಣಗೊಳಿಸಲಾಗಿದ್ದು, ಎನ್.ಕ್ಯೂ.ಎ.ಎಸ್. ಮತ್ತು ಕಾಯಕಲ್ಪ ಮಾನದಂಡವನ್ನು ಆಧರಿಸಿ ಆಸ್ಪತ್ರೆಯನ್ನು ಉನ್ನತೀಕರಣಗೊಳಿಸಲಾಗಿದ್ದು, ಆಸ್ಪತ್ರೆಯಲ್ಲಿನ ಸೌಲಭ್ಯಗಳ ಬಗ್ಗೆ ಸಿಇಓ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂಧರ್ಭದಲ್ಲಿ ಯಲಿಯೂರು ಆಸ್ಪತ್ರೆಯ ವೈದ್ಯರಾದ ಎಸ್ ಡಿ ಚಂದ್ರಶೇಖರ್, ಕೆ.ಶೆಟ್ಟಹಳ್ಳಿ ಆಸ್ಪತ್ರೆಯ ವೈದ್ಯರಾದ ಉಷಾ, ಯಲಿಯೂರು ಆಸ್ಪತ್ರೆಯ ಫಾರ್ಮಸಿ ಅಧಿಕಾರಿ ವಿಜಯ್ ಕುಮಾರ್ ವಿ ಎನ್ ಹಾಗೂ ಯಲಿಯೂರು ಗ್ರಾಮ ಪಂಚಾಯತ್ ಅಭಿವೃದ್ಧಿ ಅಧಿಕಾರಿ ಪ್ರಸನ್ನ ಸೇರಿದಂತೆ ಇತರರು ಹಾಜರಿದ್ದರು.





