- ಮುತ್ತತ್ತಿಯಲ್ಲಿ ನೀರಿಗಿಳಿದ ಯುವಕ ಸಾವು
ಹಲಗೂರು: ಇಲ್ಲಿಗೆ ಸಮೀಪದ ಮುತ್ತತ್ತಿಯ ಕಾವೇರಿ ನದಿಯಲ್ಲಿ ಈಜಾಡುತ್ತಿದ್ದ ವೇಳೆ ನೀರಿನ ತೀವ್ರ ಸೆಳೆತಕ್ಕೆ ಸಿಲುಕಿ ಯುವಕನೊಬ್ಬ ಮೃತಪಟ್ಟ ದುರ್ಘಟನೆ ಸೋಮವಾರ ಮಧ್ಯಾಹ್ನ ಸಂಭವಿಸಿದೆ.
ಮೃತ ಯುವಕನು ಬೆಂಗಳೂರಿನ ಬೊಮ್ಮನಹಳ್ಳಿ ವಾರ್ಡ್ ನಿವಾಸಿ ನಿಂಗೇಗೌಡ ಅವರ ಪುತ್ರ ಎನ್. ಶ್ರೇಯಸ್(೧೯) ಎಂದು ಗುರುತಿಸಲಾಗಿದೆ.
ಈತ ಜಯನಗರದ ಎಸ್‌ಎಸ್‌ಆರ್‌ಎಂವಿ ಕಾಲೇಜಿನಲ್ಲಿ ಪ್ರಥಮ ವರ್ಷದ ಬಿ.ಕಾಂ. ವ್ಯಾಸಂಗ ಮಾಡುತ್ತಿದ್ದನು. ಐವರು ಸ್ನೇಹಿತರೊಂದಿಗೆ ಹಲಗೂರು ಸಮೀಪದ ಬೆನಮನಹಳ್ಳಿ ಗ್ರಾಮದ ಚೇತನ್ ಅವರ ಗೃಹ ಪ್ರವೇಶ ಕಾರ್ಯಕ್ರಮಕ್ಕೆ ಬಂದಿದ್ದನು.
ಕಾರ್ಯಕ್ರಮ ಮುಗಿದ ನಂತರ ಮುತ್ತತ್ತಿ ಪ್ರವಾಸಿ ತಾಣಕ್ಕೆ ತೆರಳಿದ ವೇಳೆ ಕಾವೇರಿ ನದಿಯಲ್ಲಿ ಈಜಲು ಇಳಿದಿದ್ದಾನೆ. ಈ ಸಂದರ್ಭದಲ್ಲಿ ನೀರಿನ ಸುಳಿಗೆ ಸಿಲುಕಿ ಮುಳುಗಿ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.
ಈ ಸಂಬಂಧ ಹಲಗೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.




