ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಆರೋಪಿಗೆ ಗುಂಡೇಟು
ಮಂಡ್ಯ : ಕಳ್ಳತನ ಹಾಗು ವೃದ್ಧನ ಕೊಲೆ ಪ್ರಕರಣದಲ್ಲಿ ಭಾಗಿಯಾಗಿದ್ದ ಆರೋಪಿಯನ್ನು ಬಂಧಿಸಲು ತೆರಳಿದ್ದ ಸಂದರ್ಭ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದಾಗ ಪೊಲೀಸರು ಆತ್ಮರಕ್ಷಣೆಗಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿ ಐವರನ್ನು ಬಂಧಿಸಿರುವ ಘಟನೆ ಶುಕ್ರವಾರ ಮುಂಜಾನೆ ನಡೆದಿದೆ.
ಮಂಡ್ಯ ತಾಲ್ಲೂಕಿನ ಈಚಗೆರೆ ಗ್ರಾಮದ ಕಿರಣ್ (೨೪), ಕೊತ್ತತ್ತಿ ಗ್ರಾಮದ ಆನಂದ್, ಶರತ್, ಶ್ರೀನಿವಾಸ, ಕೃಷ್ಣಾಚಾರಿ ಬಂಧಿತ ಆರೋಪಿಗಳಾಗಿದ್ದಾರೆ.
ಆರೋಪಿಗಳು ಮಳವಳ್ಳಿ ತಾಲ್ಲೂಕು ಭೀಮನಹಳ್ಳಿ ಗ್ರಾಮದಲ್ಲಿದ್ದಾರೆ ಎಂಬ ಖಚಿತ ಮಾಹಿತಿ ಮೇರೆಗೆ ವೃತ್ತ ನಿರೀಕ್ಷಕ ಶ್ರೀಧರ್ ಹಾಗೂ ಸಿಬ್ಬಂದಿ ಬಂಽಸಲು ತೆರಳಿದಾಗ ಆರೋಪಿ ಈಚಗೆರೆ ಗ್ರಾಮದ ಕಿರಣ್ ಎಂಬಾತ ಪೊಲೀಸ್ ಪೇದೆ ಮೇಲೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗಲು ಯತ್ನಿಸಿದ್ದಾನೆ. ಈ ವೇಳೆ ವೃತ್ತ ನಿರೀಕ್ಷಕ ಶ್ರೀಧರ್ ಅವರು ಆರೋಪಿ ಕಿರಣ್ ಕಾಲಿಗೆ ಗುಂಡು ಹಾರಿಸಿ ಪೇದೆಯನ್ನು ರಕ್ಷಿಸಿದ್ದಾರೆ.
ಎಲ್ಲ ಐವರು ಆರೋಪಿಗಳನ್ನು ಬಂಧಿಸಿದ ಪೊಲೀಸರು, ಗುಂಡೇಟಿನಿಂದ ಗಾಯಗೊಂಡ ಆರೋಪಿ ಕಿರಣ್‌ನನ್ನು ಚಿಕಿತ್ಸೆಗಾಗಿ ಮಿಮ್ಸ್‌ಗೆ ದಾಖಲಿಸಿದ್ದಾರೆ.
ಘಟನೆ ಹಿನ್ನೆಲೆ:
ಕಳೆದ ಆ.೧೬ರ ಶನಿವಾರ ತಡರಾತ್ರಿ ಈ ಮೇಲ್ಕಂಡ ಆರೋಪಿಗಳು ಮಳವಳ್ಳಿ ತಾಲ್ಲೂಕಿನ ಕಿರುಗಾವಲು ಗ್ರಾಮದಲ್ಲಿರುವ ಮಹಾಲಕ್ಷಿ ಜ್ಯುವೆಲರಿ ಅಂಗಡಿಯಲ್ಲಿ ಕಳ್ಳತನ ನಡೆಸಲು ತೆರಳಿದ್ದು, ಅಂಗಡಿಯ ಶೆಟರ್‌ನ್ನು ಗ್ಯಾಸ್ ಕಟರ್ ಮೂಲಕ ತುಂಡರಿಸಿ, ೧೧೦ ಗ್ರಾಂ ಚಿನ್ನ, ೨ ಕೆಜಿ ಬೆಳ್ಳಿ ಪದಾರ್ಥಗಳನ್ನು ದೋಚಿದ್ದಾರೆ.
ಜ್ಯುವೆಲರಿ ಅಂಗಡಿಯ ಪಕ್ಕದಲ್ಲೇ ಇದ್ದ ಹೋಟೆಲ್ ಮಾಲೀಕ ಮಹದೇವಪ್ಪ (೬೫) ಅವರು ಹೋಟೆಲ್‌ನಿಂದ ಹೊರಬಂದು ನೋಡಲಾಗಿ ಕಳ್ಳತನ ನಡೆಸುತ್ತಿರುವುದನ್ನು ನೋಡಿ ತಕ್ಷಣ ಕೂಗಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕಳ್ಳರ ಗ್ಯಾಂಗ್ ಮಾದಪ್ಪನ ಕತ್ತು ಹಿಸುಕಿ ಕೊಲೆ ಮಾಡಿ, ಜ್ಯುವೆಲರಿ ಅಂಗಡಿಯಲ್ಲಿದ್ದ ಚಿನ್ನಾಭರಣ, ನಗದನ್ನು ದೋಚಿ ಪರಾರಿಯಾಗಿದ್ದರು.
ಈ ಸಂಬಂಧ ಪ್ರಕರಣ ದಾಖಲಿಸಿಕೊಂಡ ಕಿರುಗಾವಲು ಪೊಲೀಸರು ಆರೋಪಿಗಳ ಪತ್ತೆಗಾಗಿ ಶೋಧ ನಡೆಸುತ್ತಿದ್ದರು. ಆರೋಪಿಗಳ ಪತ್ತೆ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದ ವೃತ್ತ ನಿರೀಕ್ಷಕ ಶ್ರೀಧರ್ ಹಾಗೂ ಸಿಬ್ಬಂದಿ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದರು.
ಆರೋಪಿಗಳು ಮಳವಳ್ಳಿ ತಾಲ್ಲೂಕು ಭೀಮನಹಳ್ಳಿ ಗ್ರಾಮದಲ್ಲಿರುವ ಬಗ್ಗೆ ಖಚಿತ ಮಾಹಿತಿ ತಿಳಿದು ದಾಳಿ ಮಾಡಿ, ಎಲ್ಲ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.





