ಮಂಡ್ಯ: ಶಿಕ್ಷಕರು ವಿದ್ಯಾರ್ಥಿಗಳಿಗೆ ತರಗತಿ ಮಾಡುವುದು ಎಷ್ಟು ಮುಖ್ಯವೋ, ವಿದ್ಯಾರ್ಥಿಗಳು ಕೂಡ ನಿರಂತರ ಓದಿ ಸಾಧನೆ ಮಾಡುವುದು ಅಷ್ಟೇ ಮುಖ್ಯ ಎಂದು ಜಿಲ್ಲಾಧಿಕಾರಿ ಡಾ.ಕುಮಾರ ಅಭಿಪ್ರಾಯಪಟ್ಟರು.
ಜಿಲ್ಲಾ ರೈತ ಸಭಾಂಗಣದಲ್ಲಿ ಗುರುವಾರ ಆಯೋಜಿಸಿದ್ದ ಕ್ಷೇತ್ರ ಶಿಕ್ಷಣಾಧಿಕಾರಿ ಮತ್ತು ಕ್ಷೇತ್ರ ಸಮನ್ವಯಾಧಿಕಾರಿ ಹಾಗೂ ಪ್ರೌಢಶಾಲಾ ಮುಖ್ಯ ಶಿಕ್ಷಕರ ಮತ್ತು ಸಹ ಶಿಕ್ಷಕರ ಸಂಯುಕ್ತಾಶ್ರಯದಲ್ಲಿ 2024-25 ನೇ ಸಾಲಿನ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಪರೀಕ್ಷಾ ಸಿದ್ಧತೆ ಬಗ್ಗೆ ಪ್ರೇರಣಾತ್ಮಕ ಕಾರ್ಯಾಗಾರ ಕಾರ್ಯಕ್ರಮದ ಉದ್ಘಾಟನೆಯನ್ನು ನೆರವೇರಿಸಿ ಅವರು ಮಾತನಾಡಿದರು.
ಕಳೆದ ಬಾರಿ ಜಿಲ್ಲೆಯಲ್ಲಿ ಎಸ್.ಎಸ್.ಎಲ್.ಸಿ ಪರೀಕ್ಷಾ ಫಲಿತಾಂಶದಲ್ಲಿ ಹೇಳಿಕೊಳ್ಳುವಷ್ಟು ಪ್ರಗತಿ ಸಾಧಿಸಿಲ್ಲ. ನಿಜಕ್ಕೂ ಇದು ಬೇಸರದ ಸಂಗತಿ. ಆದ್ದರಿಂದ ವಿದ್ಯಾರ್ಥಿಗಳು ಶ್ರಮವಹಿಸಿ ಗಮನವಿಟ್ಟು ಓದಬೇಕು ಶಿಕ್ಷಕರು ಅವರ ಕರ್ತವ್ಯವನ್ನು ಹೇಗೆ ನಿಭಾಯಿಸುತ್ತಾರೋ ಅದೇ ರೀತಿ ವಿದ್ಯಾರ್ಥಿಗಳು ಕೂಡ ಜವಬ್ದಾರಿಯನ್ನು ನಿಭಾಯಿಸಿ ಸಾಧನೆ ಮಾಡಬೇಕು ಎಂದು ಹೇಳಿದರು.
ಶಿಕ್ಷಣ ಇಲಾಖೆ ಅಧಿಕಾರಿಗಳು, ಶಿಕ್ಷಕರು, ಉಪನ್ಯಾಸಕರುಗಳೆಲ್ಲ ಜಿಲ್ಲೆಯಲ್ಲಿ ಈ ಭಾರಿ ಉತ್ತಮ ಫಲಿತಾಂಶವನ್ನು ನೀಡಬೇಕೆಂದು ವಿನೂತನ ಯೋಜನೆಗಳನ್ನು ಕೈಗೊಂಡಿದ್ದಾರೆ, ಅವರ ಪರಿಶ್ರಮಕ್ಕೆ ತಕ್ಕಂತೆ ವಿದ್ಯಾರ್ಥಿಗಳು ಓದಿ ಉತ್ತಮ ಫಲಿತಾಂಶವನ್ನು ನೀಡಬೇಕು ಎಂದರು.
ವಿದ್ಯಾರ್ಥಿಗಳು ನಾವು ಕನ್ನಡ ಮಾದ್ಯಮ, ಹಳ್ಳಿಯಲ್ಲಿ ಇದ್ದೀನಿ, ನಮ್ಮ ಅಪ್ಪ ಅಮ್ಮ ವಿದ್ಯಾವಂತರಲ್ಲ ಈಗೆ ಋಣಾತ್ಮಕವಾಗಿ ಯೋಚಿಸದೆ ನಾವು ಸಾಧನೆ ಮಾಡಬೇಕು ಚೆನ್ನಾಗಿ ಓದಬೇಕು ಎಂಬ ಆಲೋಚನೆಯನ್ನು ವಿದ್ಯಾರ್ಥಿ ದೆಸೆಯಲ್ಲಿ ಬೆಳೆಸಿಕೊಳ್ಳಿ ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತನ್ನು ಹೇಳಿದರು.
ಪರೀಕ್ಷೆಗೆ ಭಯ ಪಡದೆ ಹಬ್ಬದ ರೀತಿಯಲ್ಲಿ ಪರೀಕ್ಷೆಯನ್ನು ಎದುರಿಸಬೇಕು ಮನೆಗಳಲ್ಲಿ ಓದುವ ಮೊಬೈಲ್ ಬಳಸುವ ಅಭ್ಯಾಸ ಬಿಟ್ಟು, ಪರೀಕ್ಷೆಯಲ್ಲಿ ಉತ್ತಮ ಅಂಕ ಬರುವವರೆಗೂ ಮೊಬೈಲ್ ಮುಟ್ಟಬಾರದು ಎಂಬ ಹಠವನ್ನು ವಿದ್ಯಾರ್ಥಿಗಳು ಬೆಳೆಸಿಕೊಳ್ಳಿ, ಅನಗತ್ಯ ಯೋಚನೆಗಳನ್ನು ಬಿಟ್ಟು ಮನಸ್ಸನ್ನು ಓದಿನತ್ತ ಕೇಂದ್ರೀಕರಿಸಬೇಕು ಎಂದು ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಪರೀಕ್ಷೆ ಹಿಂದಿನ ದಿನ ಮಾತ್ರ ಓದುವ ಅಭ್ಯಾಸವನ್ನು ರೂಢಿಸಿಕೊಳ್ಳದೇ ಅಂದಿನ ಪಾಠವನ್ನು ಅಂದೇ ಓದಿ ಮುಗಿಸಿ ಆಗ ಮಾತ್ರ ಪರೀಕ್ಷೆ ಎಂಬ ಯುದ್ಧವನ್ನು ಎದುರಿಸಲು ಸಾಧ್ಯ ಎಂದು ತಿಳಿಸಿದರು.
ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶೇಖ್ ತನ್ವೀರ್ ಆಸಿಫ್ ಮಾತನಾಡಿ, ನಿಮ್ಮ ಭವಿಷ್ಯದ ಬಗ್ಗೆ ತಂದೆ ತಾಯಿಯನ್ನು ಬಿಟ್ಟು ಬೇರೆ ಯಾರೂ ಕೂಡ ಯೋಚಿಸುವುದಿಲ್ಲ, ಆಗಾಗಿ ನೀವು ನಿಮ್ಮ ಭವಿಷ್ಯದ ಬಗ್ಗೆ ಯೋಚಿಸಿ ಚನ್ನಾಗಿ ಓದಿ ಸಾಧನೆ ಮಾಡಬೇಕು ತಂದೆ ತಾಯಿಗೆ ಒಳ್ಳೆಯ ಹೆಸರು ಗಳಿಸಿಕೊಡಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಶಾಲಾ ಶಿಕ್ಷಣ ಇಲಾಖೆ ಉಪ ನಿರ್ದೇಶಕ ಹೆಚ್.ಶಿವರಾಮೇಗೌಡ, ಉತ್ತರ ವಲಯ ಕ್ಷೇತ್ರ ಶಿಕ್ಷಣಾಧಿಕಾರಿ ಕೆ.ಟಿ ಸೌಭಾಗ್ಯ, ಡಯಟ್ ಅಭಿವೃದ್ಧಿ ಉಪನಿರ್ದೇಶಕ ಪುರುಷೋತ್ತಮ್, ಕರ್ನಾಟಕ ಸರ್ಕಾರಿ ನೌಕರರ ಸಂಘದ ಅಧ್ಯಕ್ಷರು ಹಾಗೂ ಬೆಂಗಳೂರು ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಣ ಸಂಘದ ಕೆ.ನಾಗೇಶ್, ರಾಣಿ ಬೆನ್ನೂರು ರಾಜ್ಯ ಸಂಪನ್ಮೂಲ ವ್ಯಕ್ತಿ ನಂದೀಶ್ ಬಿ ಶೆಟ್ಟರ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಹಾಗೂ ಶಾಲಾ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.