Mysore
21
scattered clouds
Light
Dark

ಸಾಹಿತ್ಯ ಸಮ್ಮೇಳನ: ವಿವಿಧ ಸಮಿತಿಗಳು ವ್ಯವಸ್ಥಿತವಾಗಿ ಕರ್ತವ್ಯ ನಿರ್ವಹಿಸಲಿ: ಡಿಸಿ. ಕುಮಾರ

ಮಂಡ್ಯ: 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – 2024 ಕ್ಕೆ ಸಂಬಂಧಿಸಿದಂತೆ ಕಳೆದ ಮೂರು ದಿನಗಳಿಂದ ಸಮಿತಿಗಳ ಸಭೆ ನಡೆಸುತ್ತಿದ್ದು, ಪ್ರತಿ ಸಮಿತಿಗಳು ಕೂಡ ತಮ್ಮ ಕರ್ತವ್ಯ ಹಾಗೂ ಜವಾಬ್ದಾರಿಗಳನ್ನು ವ್ಯವಸ್ಥಿತವಾಗಿ ನಿರ್ವಹಿಸುವ ಮೂಲಕ ಸಮ್ಮೇಳನಕ್ಕೆ ಕೈಜೋಡಿಸಿ ಎಂದು ಡಾ ಕುಮಾರ ಅವರು ತಿಳಿಸಿದರು.

ಅವರು ಶುಕ್ರವಾರ(ಆ.24) ಜಿಲ್ಲಾ ಪಂಚಾಯತ್ ನ ಕಾವೇರಿ ಸಭಾಂಗಣದಲ್ಲಿ ನಡೆದ 87 ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ – 2024 ಕ್ಕೆ ಸಂಬಂಧಿಸಿದಂತೆ ವಿವಿಧ ಸಮಿತಿಗಳ ಸಭೆ ನಡೆಸಿ ಮಾತನಾಡಿದರು.

ವಸತಿ ಸಮಿತಿ
ವಸತಿ ಸಮಿತಿಯು ಸಮ್ಮೇಳನಕ್ಕೆ ಬರುವ ಗಣ್ಯರಿಗೆ, ಘೋಷ್ಠಿಗೆ ಬರುವವರಿಗೆ, ನೋಂದಣಿ ಸಮಿತಿಯಲ್ಲಿ ನೋಂದಣಿ ಮಾಡಿಸುವವರಿಗೆ ವಸತಿ ವ್ಯವಸ್ಥೆ ಕಲ್ಪಿಸಬೇಕು. ಆದಕಾರಣ ಜಿಲ್ಲೆಯಲ್ಲಿರುವ ಹೋಟೆಲ್, ಸಮುದಾಯ ಭವನ, ವಿಶ್ವವಿದ್ಯಾನಿಲಯ, ಹಾಸ್ಟೆಲ್, ಹೋಮ್ ಸ್ಟೇ, ರೆಸಾರ್ಟ್, ವಸತಿ ಕಲ್ಪಿಸಲು ಪತ್ರ ವ್ಯವಹಾರ ನಡೆಸಿ ಈಗಲೇ ಬುಕ್ ಮಾಡುವ ಕಾರ್ಯವಾಗಬೇಕು. ಮದ್ದೂರು, ಶ್ರೀರಂಗಪಟ್ಟಣ ತಾಲ್ಲೂಕು ಹಾಗೂ ಮೈಸೂರು ಜಿಲ್ಲೆಯಲ್ಲಿ ಇರುವ ಹೋಟೆಲ್, ರೆಸಾರ್ಟ್ ಗಳಲ್ಲಿ ಕೊಠಡಿಗಳನ್ನು ಕಾಯ್ದಿರಿಸಿ ವಸತಿ ವ್ಯವಸ್ಥೆಯನ್ನು ಕಾಯ್ದಿರಿಸುವ ಕೆಲಸವಾಗಬೇಕು. ಜೊತೆಗೆ ಅಲ್ಲಿ ಮೂಲಭೂತ ವ್ಯವಸ್ಥೆಗಳ ಬಗ್ಗೆಯೂ ಗಮನಹರಿಸಬೇಕು ಎಂದರು.

ವಸತಿ ವ್ಯವಸ್ಥೆ ಇರುವ ಸ್ಥಳದಿಂದ ಕಾರ್ಯಕ್ರಮಕ್ಕೆ ಕರೆದುಕೊಂಡು ಬರಲು ವಾಹನದ ವ್ಯವಸ್ಥೆಯನ್ನು ಮಾಡಲಾಗುವುದು. ವಸತಿ ಸಮಿತಿಯು ನಿಮ್ಮ ಹಂತದಲ್ಲಿ ಕೂಡಲೇ ಸಭೆ ನಡೆಸಿ ಕ್ರಿಯಾಯೋಜನೆಯನ್ನು ಸಲ್ಲಿಸಬೇಕು ಎಂದರು.

ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿ
ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿಯು ಎಲ್ಲಾ ರಸ್ತೆಗಳು ಹಾಗೂ ಮುಖ್ಯ ದ್ವಾರಗಳಿಗೂ ವಿದ್ಯುತ್ ಅಲಂಕಾರ ಮಾಡಬೇಕು. ಅದಕ್ಕೆ ಸಂಬಂಧಿಸಿದ ಯೋಜನೆಗಳನ್ನು ರಚಿಸಿ ಎಂದರು.

ಸ್ವಚ್ಛತಾ ಸಮಿತಿ ಹಾಗೂ ನಗರ ಅಲಂಕಾರ ಸಮಿತಿಯನ್ನು ಒಳಗೊಂಡಂತೆ ಒಂದು ಉಪ ಸಮಿತಿಯನ್ನು ರಚಿಸಲಾಗುವುದು. 2 ಸಮಿತಿಯು ಸಹ ಪ್ಲಾಸ್ಟಿಕ್ ನಿಷೇಧಕ್ಕೆ ಸಂಬಂಧಿಸಿದಂತೆ ಜಾಗೃತಿ ಮೂಡಿಸುವ ಕೆಲಸವಾಗಬೇಕು ಎಂದರು.

ವಸ್ತು ಪ್ರದರ್ಶನ ಸಮಿತಿ
ವಸ್ತು ಪ್ರದರ್ಶನ ಸಮಿತಿಗೆ ಸಂಬಂಧಿಸಿದಂತೆ ಎಷ್ಟು ಮಳಿಗೆ ಹಾಕಬಹುದು ಎಂದು ಯೋಜನೆ ರೂಪಿಸಿಕೊಳ್ಳಿ. ಒಂದೇ ರೀತಿಯ ಮಳಿಗೆಗಳನ್ನು ಹಾಕುವ ಬದಲು ವಿವಿಧ ರೀತಿಯ ವೈವಿಧ್ಯಮಯ ಮಳಿಗೆಗಳನ್ನು ಏರ್ಪಡಿಸಿ. ಆಹಾರ ಮಳಿಗೆ ಜೊತೆಗೆ ಇಲಾಖೆಗಳಿಂದ ಸಂಬಂಧಿಸಿದ ಮಳಿಗೆಗಳನ್ನು ತೆರೆದು ಜಾಗೃತಿ ಮೂಡಿಸುವ ಕೆಲಸವಾಗಬೇಕು. ಬೇರೆ ಬೇರೆ ಜಿಲ್ಲೆಗಳಿಗೂ ಮಳಿಗೆ ನೀಡಲು ಅವಕಾಶ ಕಲ್ಪಿಸಲಾಗುವುದು. ಮಳಿಗೆಗಳನ್ನು ವಿನೂತನ ಹಾಗೂ ಪರಿಣಾಮಕಾರಿಯಾಗಿ ಏರ್ಪಡಿಸುವ ಸಂಬಂಧ ಈಗಿನಿಂದಲೇ ಚರ್ಚಿಸಿ ಎಂದರು.

ಮಹಿಳಾ ಸಮಿತಿ
ಸಮ್ಮೇಳನಕ್ಕೆ ಬರುವ ಮಹಿಳಾ ಗಣ್ಯರನ್ನು ಸೇರಿದಂತೆ ಪ್ರತಿಯೊಬ್ಬ ಮಹಿಳೆಯರಿಗೂ ವಿಶೇಷ ಕಾಳಜಿ ವಹಿಸಿ ಅವರಿಗೆ ಬೇಕಾದಂತಹ ಮೂಲಭೂತ ವ್ಯವಸ್ಥೆ ಕಲ್ಪಿಸುವ ವ್ಯವಸ್ಥೆ ಮಾಡಲಾಗುವುದು. ಮಹಿಳೆಯರಿಗೆ ಗೌರವ ಹಾಗೂ ರಕ್ಷಣೆಯನ್ನು ನೀಡುವಲ್ಲಿ ಹೆಚ್ಚು ಕಾಳಜಿ ವಹಿಸಿ ಸೂಕ್ತ ವ್ಯವಸ್ಥೆ ನೀಡಲಾಗುವುದು ಎಂದರು.

ಸಭೆಯಲ್ಲಿ ಕನ್ನಡ ಸಾಹಿತ್ಯ ಸಮ್ಮೇಳನದ ಸಮನ್ವಯ ಸಮಿತಿ ಅಧ್ಯಕ್ಷೆ ಡಾ: ಮೀರಾ ಶಿವಲಿಂಗಯ್ಯ, ಆಹಾರ ಸಮಿತಿಯ ಉಪಾಧ್ಯಕ್ಷ ಸಿ ಡಿ ಗಂಗಾಧರ್, ಮಹಿಳಾ ಸಮಿತಿಯ ಅಧ್ಯಕ್ಷೆ ಸುನಂದಾ ಜಯರಾಮ್, ಉಪಾಧ್ಯಕ್ಷೆ ಸೌಭಾಗ್ಯ ಮಹದೇವು, ಕನ್ನಡ ಸಾಹಿತ್ಯ ಸಮ್ಮೇಳನದ ಗೌರವ ಕಾರ್ಯದರ್ಶಿ ಹರ್ಷ, ವಸತಿ ಸಮಿತಿ ಹಾಗೂ ನಗರ ಅಲಂಕಾರ ಮತ್ತು ವಿದ್ಯುತ್ ವ್ಯವಸ್ಥೆ ಸಮಿತಿಯ ಎಂ ಟಿ ರಾಜೇಂದ್ರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.