ಕೆ.ಎಂ ದೊಡ್ಡಿ : ವಿಶ್ವೇಶ್ವರಯ್ಯ ನಾಲೆಯ ಕೊನೆಭಾಗದ ಒಂದರಿಂದ 6ನೇಯ ಕೊನೆಯ ಭಾಗದ ಜಮೀನುಗಳಿಗೆ ನೀರು ಹರಿಸಲು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘದ ಕಾರ್ಯಕರ್ತರು ಅಧಿಕಾರಿಗಳ ವಿರುದ್ಧ ಪ್ರತಿಭಟನೆ ನಡೆಸಿದರು.
ಕೆ.ಎಂ ದೊಡ್ಡಿಯ ಸರ್.ಎಂ. ವಿಶ್ವೇಶ್ವರಯ್ಯ ವೃತ್ತದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ನೂರಾರು ಕಾರ್ಯಕರ್ತರು ರಸ್ತೆ ತಡೆ ನಡೆಸಿ ಮಾನವ ಸರಪಳಿ ರಚಿಸಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳ ವಿರುದ್ಧ ಧಿಕ್ಕಾರ ಕೂಗಿ ಪ್ರತಿಭಟನೆ ನಡೆಸಿದರು.
ಸುಮಾರು ಅರ್ಧಗಂಟೆಗಳ ಕಾಲ ರಸ್ತೆ ತಡೆ ನಡೆಸಿದ ಪರಿಣಾಮ ಸಂಚಾರ ಅಸ್ತವ್ಯಸ್ತವಾಯಿತು.
ಪ್ರತಿಭಟನೆಯನ್ನ ಉದ್ದೇಶಿಸಿ ಮಾತನಾಡಿದ ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯವಿಭಾಗದ ಉಪಾಧ್ಯಕ್ಷ ಬೋರಾಪುರ ಶಂಕರೇಗೌಡ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ವಿ.ಸಿ.ನಾಲೆ ಮತ್ತು ಲೋಕಸರ ನಾಲೇಯ ಆಧುನೀಕರಣ ಕಾಮಗಾರಿ ನೆಪದಲ್ಲಿ ಕೊನೆಭಾಗದ ರೈತರಿಗೆ ನೀರನ್ನ ನೀಡದೆ ವಂಚಿಸಿದ್ದಾರೆ, ರೈತರಿಗೆ ಮುಂಗಾರು ಆರಂಭವಾಗಿದ್ದು ಕೃಷಿ ಚಟುವಟಿಕೆಗಳು ತೊಡಗಿಸಲು ನೀರಿಲ್ಲದೆ ಪರದಾಡುವಂತಾಗಿದೆ,ಈಗಾಗಲೇ ಬೆಳದಿರುವ ಕಬ್ಬಿಗೆ ನಿರಲ್ಲದೆ ಒಣಗುತ್ತಿದ್ದು ಕೂಡಲೇ ಅಧಿಕಾರಿಗಳು ನೀರನ್ನು ಬಿಡಬೇಕು ಎಂದು ಆಗ್ರಹಿಸಿದರು.
ರೈತಸಂಘದ ಜಿಲ್ಲಾ ಖಜಾಂಚಿ ಕೆ.ಶೆಟ್ಟಹಳ್ಳಿ ರವಿಕುಮಾರ್ ಮಾತನಾಡಿ ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಕೊನೆಭಾಗಕ್ಕೆ ನೀರು ನೀಡದೆ ಕೃತಕ ಬರಗಾಲ ಸೃಷ್ಟಿಸಿದ್ದಾರೆ.ಕಾಮಗಾರಿ ಹೆಸರಿನಲ್ಲಿ ರೈತರಿಗೆ ನೀರು ನೀಡದೆ ಅನ್ಯಾಯವೇಸಾಗುತ್ತಿದ್ದರೆ ಕೂಡಲೇ ವಿ.ಸಿ ನಾಲೆ ಹಾಗೂ ಲೋಕಸರ ನಾಲೆಗಳ ಮೂಲಕ ಕೊನೆಭಾಗಕ್ಕೆ ನೀರುಣಿಸುವ ಕಾರ್ಯಕ್ಕೆ ಚಾಲನೆ ನೀಡಬೇಕು ಇಲ್ಲವಾದರೆ ಅಧಿಕಾರಿಗಳ ವಿರುದ್ಧ ಉಗ್ರ ಹೋರಾಟ ಕೈಗೊಳ್ಳಲಾಗುತ್ತದೆ ಎಂದು ಎಚ್ಚರಿಸಿದರು.
ಪ್ರತಿಭಟನಾ ವೇಳೆಯಲ್ಲಿ ಕೆ.ಎಂ ದೊಡ್ಡಿಯ ಪೊಲೀಸ್ ಇನ್ಸ್ಪೆಕ್ಟರ್ ಆನಂದ್ ರವರು ನೀರಾವರಿಯ ಇಲಾಖೆಯ ಅಭಿಯಂತರಿಗೆ ದೂರವಾಣಿ ಕರೆ ಮೂಲಕ ಮಾತನಾಡಿ ನೀರು ಹರಿಸಲು ಸಮ್ಮತಿಸಿದ ಸಂದರ್ಭದಲ್ಲಿ ಪ್ರತಿಭಟನಾಕಾರರು ಪ್ರತಿಭಟನೆ ಕೈ ಬಿಟ್ಟರು.
ಇದೆ ಸಂದರ್ಭದಲ್ಲಿ ಕರ್ನಾಟಕದ ರಾಜ್ಯ ರೈತ ಸಂಘದ ತಾಲೋಕು ಅಧ್ಯಕ್ಷ ವರಗೆರೆಹಳ್ಳಿ ಉಮೇಶ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಎಸ್.ಲಿಂಗಾಪ್ಪಾಜಿ, ಕಾರ್ಯದರ್ಶಿ ವಿನೋದ್ ಬಾಬು, ಕಳ್ಳಿಮೆಳ್ಳೆದೊಡ್ಡಿ ಸಿದ್ದರಾಜು,ಬನ್ನಹಳ್ಳಿ ರಮೇಶ್, ಮುಟ್ಟನಹಳ್ಳಿ ವೆಂಕಟೇಶ್,ಪಟೇಲ್ ಬೋರೇಗೌಡ, ದೇಶಿಗೌಡ,ಸಾವಿತ್ರಮ್ಮ,ನಾಗರತ್ನಮ್ಮ, ಸೇರಿದಂತೆ ಹಲವರು ಉಪಸ್ಥಿತರಿದ್ದರು.





