ಮಂಡ್ಯ: 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನವು ಡಿಸೆಂಬರ್ 20, 21, 22 ರಂದು ಮೂರು ದಿನಗಳ ಕಾಲ ಜಿಲ್ಲೆಯಲ್ಲಿ ನಡೆಯಲಿದ್ದು, ಸಮ್ಮೇಳನವನ್ನು ಸ್ಯಾಂಜೋ ಆಸ್ಪತ್ರೆ ಹಿಂಭಾಗವಿರುವ 60 ಎಕರೆ ಪ್ರದೇಶದಲ್ಲಿ ನಡೆಸಲು ಸಜ್ಜುಗೊಳಿಸಲಾಗುತ್ತಿದೆ ಎಂದು ಮಳವಳ್ಳಿ ವಿಧಾನಸಭಾ ಶಾಸಕ ಹಾಗೂ ವೇದಿಕೆ ಸಮಿತಿಯ ಅಧ್ಯಕ್ಷ ಪಿ ಎಂ ನರೇಂದ್ರಸ್ವಾಮಿ ಹೇಳಿದರು.
ಅವರುಶುಕ್ರವಾರ ಸಂಜೆ ಸ್ಯಾಂಜೋ ಆಸ್ಪತ್ರೆಯ ಹಿಂಭಾಗ ಕನ್ನಡ ಸಾಹಿತ್ಯ ಸಮ್ಮೇಳನದ ಬಗ್ಗೆ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು.
ನಗರದ ಅಮರಾವತಿ ಹೋಟೆಲ್ ಹಾಗೂ ಸ್ಯಾಂಜೋ ಆಸ್ಪತ್ರೆ ಹಿಂಭಾಗ ಕನ್ನಡ ಸಾಹಿತ್ಯ ಸಮ್ಮೇಳನವು ಸುಮಾರು 60 ಎಕರೆ ಪ್ರದೇಶದಲ್ಲಿ ನಡೆಯಲಿದ್ದು, ಮುಖ್ಯ ಪ್ರವೇಶ ದ್ವಾರದಿಂದ ವೇದಿಕೆಯವರೆಗೂ ಸಿದ್ಧತೆ ನಡೆದಿದೆ. ಮುಖ್ಯದ್ವಾರದ ಬಳಿ ನೋಂದಣಿ ಕೌಂಟರ್ ಅನ್ನು ತೆರೆಯಲಾಗುವುದು ಎಂದರು.
ಸರ್ಕಾರ, ಜಿಲ್ಲಾಡಳಿತ ಹಾಗೂ ಜಿಲ್ಲೆಯಲ್ಲಿ ಎಲ್ಲಾ ಜನರೊಡಗೂಡಿ ಕನ್ನಡ ಸಾಹಿತ್ಯ ಸಮ್ಮೇಳನದ ಮೆರಗನ್ನು ಹೆಚ್ಚಿಸುವ ಸಲುವಾಗಿ ಯಾವುದೇ ಉದಾಸೀನ ತೋರದೆ ಜವಾಬ್ದಾರಿಯಿಂದ ಎಲ್ಲರೂ ಒಗ್ಗೂಡಿ ಕನ್ನಡದ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸಲಾಗುವುದು ಎಂದರು.
ಸಮ್ಮೇಳನದ ವೇದಿಕೆ ಸಮ್ಮೇಳನದಲ್ಲಿ 600 ಅಡಿ ಉದ್ದ ಹಾಗೂ 300 ಅಡಿ ಅಗಲದಲ್ಲಿ ಮುಖ್ಯ ವೇದಿಕೆ ನಿರ್ಮಾಣಗೊಳ್ಳುತ್ತಿದೆ. ಸುಮಾರು 35, 000 ರಿಂದ 40,000 ಜನ ಸಭಿಕರು ಕೂರಲು ವ್ಯವಸ್ಥೆ ಮಾಡಲಾಗಿದೆ. ಅದಲ್ಲದೆ 2 ಸಮಾನಂತರ ವೇದಿಕೆಯನ್ನು 11,000 ಚದರ ಅಡಿ ಸ್ಥಳದಲ್ಲಿ ನಿರ್ಮಿಸಲಾಗುವುದು.
ಮಳಿಗೆ: ಮುಖ್ಯ ವೇದಿಕೆಯ ಬಲಭಾಗ ಕನ್ನಡ ಆಸಕ್ತರಿಗಾಗಿ ಪುಸ್ತಕ ಮಳಿಗೆಯನ್ನು ತೆರೆಯಲಾಗುವುದು. ಎಡಭಾಗಕ್ಕೆ ಇಲಾಖೆಯ ವಸ್ತು ಪ್ರದರ್ಶನ ಮಳಿಗೆಗಳನ್ನು ಇಡಲಾಗುವುದು. ಒಟ್ಟು 1000 ಕ್ಕೂ ಹೆಚ್ಚು ಮಳಿಗೆಗಳಿಗೆ ಅವಕಾಶ ನೀಡಲಾಗಿದ್ದು, 450 ವಾಣಿಜ್ಯ ಮಳಿಗೆ ತೆರೆಯಲು ಅವಕಾಶ ನೀಡಲಾಗಿದೆ ಎಂದರು.
ಊಟದ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಪ್ರತಿಯೊಬ್ಬರಿಗೂ ಅಚ್ಚುಕಟ್ಟಾದ ಊಟದ ವ್ಯವಸ್ಥೆ ಕಲ್ಪಿಸಲಾಗಿದ್ದು, ಊಟದ ವ್ಯವಸ್ಥೆಯನ್ನು ವೇದಿಕೆಯ ಬಲಭಾಗದಲ್ಲಿ ಮಾಡಲಾಗುವುದು. ಡೈನಿಂಗ್ ಮತ್ತು ಅಡುಗೆಗೆ ಸುಮಾರು 2,64,000 ಅದರ ಅಡಿ ವ್ಯಾಪ್ತಿಯ ಪ್ರದೇಶವನ್ನು ಮೀಸಲಿಡಲಾಗಿದೆ. ಕುಡಿಯುವ ನೀರಿಗೆ ಈಗಾಗಲೇ ಪೈಪ್ಲೈನ್ ವ್ಯವಸ್ಥೆ ಅಳವಡಿಸಲು ಸಿದ್ಧತೆ ನಡೆಯುತ್ತಿದ್ದು, ಯಾವುದೇ ತೊಂದರೆಯಾಗುವುದಿಲ್ಲ ಎಂದರು.
ಸಮ್ಮೇಳನದ ಪೂರ್ಣ ಚಿತ್ರಣ ಪ್ರಕಟ ಡಿಸೆಂಬರ್ 2 ರಂದು ಕನ್ನಡ ಸಾಹಿತ್ಯ ಸಮ್ಮೇಳನದ ಸಂಪೂರ್ಣ ಚಿತ್ರಣವನ್ನು ಅಧಿಕೃತವಾಗಿ ಪ್ರಕಟ ಮಾಡಲಾಗುವುದು ಎಂದರು.
ಪಾರ್ಕಿಂಗ್ ವ್ಯವಸ್ಥೆ: ಸಮ್ಮೇಳನಕ್ಕೆ ಆಗಮಿಸುವ ಸಾರ್ವಜನಿಕ ವಾಹನ ನಿಲುಗಡೆಗೆ ಪ್ರತ್ಯೇಕವಾಗಿ ಸುಮಾರು 20 ಎಕರೆ ಪ್ರದೇಶವನ್ನು ಮೀಸಲಿಡಲಾಗಿದೆ. ಸಮ್ಮೇಳನಕ್ಕೆ ಆಗಮಿಸುವ ಗಣ್ಯರಿಗೆ ವೇದಿಕೆಯ ಬಲಭಾಗ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ಎಂದರು.
ಶೌಚಾಲಯ ವ್ಯವಸ್ಥೆ: ಸಮ್ಮೇಳನದಲ್ಲಿ ಭಾಗವಹಿಸುವವರಿಗೆ ಸುಮಾರು 9 ಕಡೆ ಪುರುಷ ಹಾಗೂ ಮಹಿಳೆಯರಿಗೆ ಪ್ರತ್ಯೇಕವಾದ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು. ಜನರಿಗೆ ಎಲ್ಲಾ ಮಾಹಿತಿ ಒದಗಿಸಲು ಸೂಚನಾ ಪಲಕಗಳನ್ನು ಅಳವಡಿಸಲಾಗುವುದು ಎಂದರು.
ಸಮ್ಮೇಳನದ ಯಶಸ್ವಿಗೆ ಎಲ್ಲರ ಸಹಕಾರ ಮುಖ್ಯವಾಗಿದ್ದು, ಯಾವುದೇ ಕೊರತೆ ಉಂಟಾಗದ ರೀತಿಯಲ್ಲಿ ಸಕಲ ಸಿದ್ಧತೆಯ ಮೂಲಕ ಕನ್ನಡ ಹಬ್ಬವನ್ನು ನೆರವೇರಿಸೋಣ ಎಂದರು.
ಪತ್ರಿಕಾ ಗೋಷ್ಠಿಯಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಸಹಾಯಕ ನಿರ್ದೇಶಕಿ ನಿರ್ಮಲ ಎಸ್.ಹೆಚ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು