ಮಂಡ್ಯ: ಉನ್ನತ ಶಿಕ್ಷಣದಲ್ಲಿ ವಿದ್ಯಾರ್ಥಿಗಳಿಗೆ ಗುಣಾತ್ಮಕ ಶಿಕ್ಷಣ ನೀಡುವ ನಿಟ್ಟಿನಲ್ಲಿ ನೂತನವಾಗಿ ಪ್ರಾರಂಭಿಸಿರುವ ಮಂಡ್ಯ, ಚಾಮರಾಜನಗರ ಮತ್ತು ಹಾಸನ ವಿವಿ ಗಳನ್ನು ಮೈಸೂರು ವಿಶ್ವವಿದ್ಯಾನಿಲಯ ಜೊತೆ ವಿಲೀನ ಮಾಡುವುದು ಸೂಕ್ತ ಎಂದು ವಿಧಾನ ಪರಿಷತ್ ಮಾಜಿ ಉಪಸಭಾಪತಿ ಮರಿತಿಬ್ಬೇಗೌಡ ಪ್ರತಿಪಾದಿಸಿದರು.
ಮಂಡ್ಯದ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಮಂಡ್ಯ ಚಾಮರಾಜನಗರ ಹಾಸನಗಳಲ್ಲಿರುವ ಸ್ನಾತಕೋತ್ತರ ಕೇಂದ್ರಗಳನ್ನು ಉಳಿಸಿಕೊಂಡು ಮೈಸೂರು ವಿವಿಯಿಂದಲೇ ಪದವಿ, ಸ್ನಾತಕೋತ್ತರ ಪದವಿ ಹಾಗೂ ಸಂಶೋಧನೆ ಕೈಗೊಳ್ಳಲು ಅವಕಾಶ ಕಲ್ಪಿಸಿಕೊಡಬೇಕು ಹಾಗೂ ಬೋಧಕ ಹುದ್ದೆ ಮತ್ತು ಬ್ಯಾಕ್‌ಲಾಗ್ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಬೇಕೆಂದು ಸರ್ಕಾರಕ್ಕೆ ಮನವಿ ಮಾಡಿದರು.
ಮಂಡ್ಯ ವಿವಿಯನ್ನು ಮೈಸೂರು ವಿವಿಯಲ್ಲಿ ವಿಲೀನ ಮಾಡುವುದರಿಂದ ಯಾವುದೇ ವಿದ್ಯಾರ್ಥಿಗಳು, ಪ್ರೊಫೆಸರ್‌ಗಳು ಅಥವಾ ಯಾವುದೇ ಕೋರ್ಸುಗಳು ಸ್ಥಾನಪಲ್ಲಟವಾಗುವುದಿಲ್ಲ. ಈಗಿರುವಂತೆಯೇ ಅವುಗಳ ಅಧ್ಯಯನವನ್ನು ಮುಂದುವರಿಸಬಹುದು. ಮೈಸೂರು ವಿವಿಗೆ ವಿಲೀನವಾದರೆ ಎಲ್ಲವೂ ಮೈಸೂರಿಗೆ ವರ್ಗಾವಣೆಯಾಗುತ್ತದೆ ಎಂದು ಕೆಲವರು ಮಾಡುತ್ತಿರುವ ಅಪಪ್ರಚಾರವನ್ನು ನಿಲ್ಲಿಸಬೇಕು ಎಂದು ಕರೆ ನೀಡಿದರು.
ವಿದ್ಯಾರ್ಥಿಗಳ ಹಾಗು ಸಮಾಜದ ಹಿತದೃಷ್ಟಿಯಿಂದ ಗುಣಾತ್ಮಕ ಶಿಕ್ಷಣ ಕೊಡುವ ಸಾಮರ್ಥ್ಯವಿರದ ಮಂಡ್ಯ ವಿವಿಯನ್ನು, ಗುಣಾತ್ಮಕ ಶಿಕ್ಷಣ ನೀಡುವ ಸಾಮರ್ಥ್ಯ ಹೊಂದಿರುವ ಮೈಸೂರು ವಿಶ್ವವಿದ್ಯಾನಿಲಯದಲ್ಲಿ ವಿಲೀನಗೊಳಿಸುವುದರಿಂದ ಈ ಮೂರು ಜಿಲ್ಲೆಯ ಗ್ರಾಮೀಣ ಹಾಗು ಬಡ ವಿದ್ಯಾರ್ಥಿಗಳಿಗೆ ಯಾವುದೇ ತೊಂದರೆಯಾಗುವುದಿಲ್ಲ, ಅವರ ಭವಿಷ್ಯ ಉಜ್ವಲವಾಗುತ್ತದೆ ಎಂದು ಪ್ರತಿಪಾದಿಸಿದರು.
ಸರ್ಕಾರ ವಿಶ್ವವಿದ್ಯಾನಿಲಯಗಳ ಬಗ್ಗೆ ಅಧ್ಯಯನ ಮಾಡದೇ ಮಂಡ್ಯ, ಚಾಮರಾಜನಗರ ಮತ್ತು ಹಾಸನಗಳಲ್ಲಿ ಕೇವಲ ಒಂದು ಕುಲಪತಿಯ ಮತ್ತು ಕುಲಸಚಿವರ ಹುದ್ದೆಗಾಗಿ ಸ್ಥಾಪಿತವಾದ ವಿಶ್ವವಿದ್ಯಾನಿಲಯಗಳಾಗಿವೆ ಎಂದು ಆರೋಪಿಸಿದರು.
ಮೈಸೂರು ವಿವಿಗೆ ತನ್ನದೇ ಆದ ಘನತೆಯಿದೆ
೧೦೮ ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ವಿವಿಯಿಂದ ಪ್ರಮಾಣ ಪತ್ರಗಳನ್ನು ಪಡೆದರೆ ಅಂತಾರಾಷ್ಟ್ರೀಯ, ರಾಷ್ಟ್ರೀಯ ಮಟ್ಟದಲ್ಲಿ ಒಂದು ಮೌಲ್ಯ ಇರುತ್ತದೆ. ರಾಷ್ಟಕವಿ ಕುವೆಂಪು ರಾಧಾಕೃಷ್ಣನ್ ರವರಂತಹ ಸಾವಿರಾರು ಮಹಾ ಮೇಧಾವಿಗಳು ಇದ್ದ, ಅಧ್ಯಯನ ನಡೆಸಿರುವ ಮೈಸೂರು ವಿವಿಗೆ ತನ್ನದೇ ಆದ ಘನತೆ ಇದೆ. ಇಂತಹ ವಿವಿಯಡಿಯಲ್ಲಿ ಕಲಿಯಬೇಕೆಂಬುದು ವಿದ್ಯಾರ್ಥಿಗಳ ಕನಸು ಆಗಿರುತ್ತದೆ ಎಂದರು.
ವಿವಿಧ ಸರ್ಕಾರಗಳು ಈಗಾಗಲೇ ತೆರೆದಿರುವ ಸಂಗೀತ ವಿವಿ, ಜಾನಪದ ವಿವಿ, ಸಂಸ್ಕೃತ ವಿವಿ ಹಾಗೂ ಹಂಪಿಯ ಕನ್ನಡ ವಿವಿ ಹಲವು ರೀತಿಯಲ್ಲಿ ಹಿನ್ನಡೆ ಅನುಭವಿಸುತ್ತಿವೆ. ಮತ್ತೆ ಹೊಸ ವಿವಿಗಳನ್ನು ಪ್ರಾರಂಭಿಸಿ ಸಾಧಿಸುವುದಾದರೂ ಏನು ಎಂದು ಪ್ರಶ್ನಿಸಿದರು.
ಮಂಡ್ಯ ವಿವಿ ಯಲ್ಲಿ ಪದವಿಗಳಿಸಿದ ವಿದ್ಯಾರ್ಥಿಗಳು ಬೇರೊಂದು ವಿವಿಯಲ್ಲಿ ಸ್ನಾತಕೋತ್ತರ ಪದವಿಗೆ ಪ್ರವೇಶ ಪಡೆಯುವುದು ಕನಸಿನ ಮಾತಾಗುತ್ತದೆ ಎಂದು ಎಚ್ಚರಿಸಿದರು.
ಅಂಕಿ-ಅಂಶ ಸಮೇತ ವಿವರ ಮಂಡನೆ
ಐದು ವರ್ಷಗಳ ಹಿಂದೆ ಅಸ್ತಿತ್ವಕ್ಕೆ ಬಂದ ಮಂಡ್ಯ ವಿವಿ ಯಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕಡಿಮೆಯಾಗಿ ಹಲವು ಕೋರ್ಸುಗಳು ಮುಚ್ಚುವಂತಾಗಿದೆ. ಇರುವ ಕೆಲವೇ ಕೆಲವು ಕಾಯಂ ಅಧ್ಯಾಪಕರಿಗೆ ಇಂದಿಗೂ ಕಾಲೇಜು ಶಿಕ್ಷಣ ಇಲಾಖೆಯೇ ವೇತನ ನೀಡುತ್ತಿದೆ. ಇಲ್ಲಿ ೧೨ ಕೋರ್ಸ್ಗಳು ಮಾತ್ರ ಇದ್ದರೆ, ಮೈಸೂರು ವಿವಿ ಯಲ್ಲಿ ೪೨ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಪಡೆಯಬಹುದು.ಮೈಸೂರು ವಿವಿ ವ್ಯಾಪ್ತಿಯ ಕಾಲೇಜುಗಳಿಗಿಂತ ಮಂಡ್ಯ ವಿವಿ ವ್ಯಾಪ್ತಿಯ ಕಾಲೇಜುಗಳಲ್ಲಿ ಅಧಿಕ ಶುಲ್ಕ ತೆರುವಂತಾಗಿದೆ ಎಂಬುದನ್ನು ಅಂಕಿಅಂಶಗಳ ಸಮೇತ ವಿವರಿಸಿದರು.
೨ ಕೋಟಿ ಅನುದಾನ ನಿಗದಿಪಡಿಸಿ ಕೇವಲ ೫೦ ಲಕ್ಷ ರೂ. ಮಾತ್ರ ನೀಡಲಾಗಿದೆ.ಇದುವರೆಗೆ ಒಬ್ಬರೇ ಒಬ್ಬರು ಅಧ್ಯಾಪಕರನ್ನು ನೇಮಕ ಮಾಡಲು ಸಾಧ್ಯವಾಗಿಲ್ಲ. ಇಂತಹ ಸನ್ನಿವೇಶದಲ್ಲಿ ಮಂಡ್ಯ ವಿವಿ ಯನ್ನು ಸಮರ್ಪಕವಾಗಿ ನಡೆಸಲು ಸಾಧ್ಯವೇ ಎಂದು ಪ್ರಶ್ನಿಸಿದರು.
ಸುದ್ದಿಗೋಷ್ಠಿಯಲ್ಲಿ ಕಾಲೇಜು ಶಿಕ್ಷಣ ಇಲಾಖೆ ನಿವೃತ್ತ ಜಂಟಿ ನಿರ್ದೇಶಕ ಡಾ.ಎಂ.ರಾಮೇಗೌಡ ವಿಶ್ರಾಂತ ಪ್ರಾಂಶುಪಾಲರುಗಳಾದ ಎಸ್.ರಾಮು, ನಾಗಾನಂದ, ಕೀಲಾರ ಜಯರಾಮು, ನಿವೃತ್ತ ಪ್ರಾಧ್ಯಾಪಕ ಶಂಕರೇಗೌಡ ಹಾಜರಿದ್ದರು.