ಮೈಸೂರು : ಸೋಮವಾರ ಪಬ್‌ನಲ್ಲಿ ಸಂಭವಿಸಿದ್ದ ಬೆಂಕಿ ಅವಘಡದಲ್ಲಿ ಇಬ್ಬರು ಮೃತಪಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಕರ್ತವ್ಯ ಲೋಪದ ಕಾರಣಕ್ಕಾಗಿ ಅಬಕಾರಿ ಡಿಸಿ ಅಮಾನತಿಗೆ ನಗರಾಭಿವೃದ್ದಿ ಸಚಿವ ಯತೀಂದ್ರ ಸಿದ್ದರಾಮಯ್ಯ ಶಿಫಾರಸ್ಸು ಮಾಡುವಂತೆ ಸೂಚಿಸಿದ್ದಾರೆ.
ಈ ಸಂಬಂಧಿಸಿದಂತೆ ವರದಿಯನ್ನು ನೀಡಲು ಮೈಸೂರು ಜಿಲ್ಲಾಧಿಕಾರಿಗೆ ತಿಳಿಸಿದ್ದಾರೆ. ಮಂಗಳವಾರ ಮೈಸೂರಿನಲ್ಲಿ ಈ ಕುರಿತಾಗಿ ಮಾತನಾಡಿದ ಅವರು, ಪಬ್ ಮಾಲೀಕನ ವಿರುದ್ಧ ದೂರು ದಾಖಲು ಮಾಡಲಾಗಿದೆ ಎಂದು ತಿಳಿಸಿದರು.
ಮಾಲೀಕ ಪ್ರೀತಂ ಪುನೀತ್ ಅವರು ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದಾರೆ. ವ್ಯವಸ್ಥಾಪಕ ಅವಿನಾಶ್ ಹಾಗೂ ಸಿಬ್ಬಂದಿ ಯೋಗೇಶ್ ಅವರಿಗೆ ಜೆಎಸ್‌ಎಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಉಳಿದವರು ಸುಯೋಗ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಯತೀಂದ್ರ ಭೇಟಿ
ಈ ನಡುವೆ ಮಂಗಳವಾರ ಬೆಳಿಗ್ಗೆ ನಗರಾಭಿವೃದ್ಧಿ ಸಚಿವ ಯತೀಂದ್ರ ಅವರು ನಗರದ ಕೆಆರ್ ಆಸ್ಪತ್ರೆಯ ಶವಾಗಾರಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಮೃತರ ಕುಟುಂಬಸ್ಥರನ್ನು ಭೇಟಿ ಮಾಡಿ ಸಾಂತ್ವಾನ ಹೇಳಿದರು.
ನಂತರ ಜೆಎಸ್‌ಎಸ್ ಆಸ್ಪತ್ರೆಯ ಸುಟ್ಟ ಗಾಯಗಳ ವಿಭಾಗಕ್ಕೆ ತೆರಳಿ ಮ್ಯಾನೇಜರ್ ಅವಿನಾಶ್ ಹಾಗೂ ಇತರನ್ನು ಭೇಟಿ ಮಾಡಿ ಅವರಿಗೆ ಹಾಗೂ ಅವರ ಕುಟುಂಬದವರಿಗೆ ದೈರ್ಯ ತುಂಬುವ ಕೆಲಸ ಮಾಡಿದರು.
ಪಬ್‌ಗೆ ಭೇಟಿ
ನಂತರ ಯತೀಂದ್ರ ಅವರು ದಟ್ಟಗಳ್ಳಿ ಬಳಿ ಇರುವ ಮಾರ ಪಬ್ ಹಾಗೂ ರೆಸ್ಟೋರೆಂಟ್‌ಗೆ ಭೇಟಿ ನೀಡಿದರು. ಅವರೊಂದಿಗೆ ಶಾಸಕ ಕೆ.ಹರೀಶ್‌ಗೌಡ ಹಾಗೂ ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯಕುಮಾರ್ ಹಾಜರಿದ್ದರು.
ದೂರು ದಾಖಲು
ಇದೇ ವೇಳೆ ರೆಸ್ಟೋರೆಂಟ್ ನಡೆಸುವ ಸಂಬಂದ ಯಾವುದೇ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳದಿರುವ ಸಂಬಂದ ಪಬ್‌ನ ಮಾಲೀಕ ಪ್ರೀತಂ ಪುನೀತ್ ವಿರುದ್ಧ ಕುವೆಂಪುನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಈ ಸಂಬಂಧ ಪೊಲೀಸರು ಸಂಪೂರ್ಣ ತನಿಖೆ ನಡೆಸುತ್ತಿದ್ದಾರೆ.
ಶವ ರವಾನೆ
ಪಶ್ಚಿಮ ಬಂಗಾಳದ ಡಾರ್ಜಿಲಿಂಗ್ ಮೂಲದ ಮೃತ ಸಾಹಿನ್ ಶವವನ್ನು ಮಂಗಳವಾರ ಸಂಜೆ ಕುಟುಂಬಸ್ಥರಿಗೆ ಹಸ್ತಾಂತರಿಸಲಾಯಿತು ಮೃತರ ಸಹೋದರಿ ಅನಾಮಿಕ ಹಾಗೂ ಸ್ನೇಹಿತರು ಶವವನ್ನು ವಿಮಾನದ ಮೂಲಕ ಹುಟ್ಟೂರಿಗೆ ಕೊಂಡೊಯ್ದರು. ಜಿಲ್ಲಾಡಳಿತ ಅವರಿಗೆ ಎಲ್ಲಾ ರೀತಿಯ ವ್ಯವಸ್ಥೆ ಮಾಡಿಕೊಟ್ಟಿದೆ.
ಪ್ರಕಾಶ್ ಕುಟುಂಬಸ್ಥರ ಬಗ್ಗೆ ಇಲ್ಲ ಮಾಹಿತಿ
ಈ ನಡುವೆ ಬೆಂಕಿ ಅವಘಡದಲ್ಲಿ ಸಾವೀಗೀಡಾದ ನೇಪಾಳ ಮೂಲದ ಮತ್ತೊಬ್ಬ ಯುವಕ ಪ್ರಕಾಶ್ ಕುಟುಂಬಸ್ಥರ ಬಗ್ಗೆ ಇದುವರೆವಿಗೂ ಯಾವುದೇ ಮಾಹಿತಿ ಲಭ್ಯವಾಗಿಲ್ಲ.




