Mysore
25
overcast clouds

Social Media

ಶನಿವಾರ, 01 ಆಗಸ್ಟ್ 2026
Light
Dark

ಗಾಂಧಿ ಅಭಿಯಾನ ಅರಿವಿನ ಯಾನ : ಚಾಮರಾಜನಗರ ಸೀಮೆಯಲ್ಲಿ ಗಾಂಧಿಯ ಪ್ರಭಾವ

ಚಾಮರಾಜನಗರ ಮೈಸೂರು ಜಿಯ ಒಂದು ಸಣ್ಣ ತಾಲ್ಲೂಕು ಕೇಂದ್ರವಾಗಿತ್ತು. ಸುಮಾರು ೯೦ ವರ್ಷಗಳ ಹಿಂದೆ ಸಣ್ಣ ಪಟ್ಟಣ. ೧೯೨೬ರಿಂದ ಇಲ್ಲಿಗೆ ರೈಲು ಓಡಾಡಲು ಶುರುವಾಯಿತು. ಈ ವೇಳೆಗೆ ಆಸ್ಪತ್ರೆಯೂ ಸ್ಥಾಪನೆಯಾಯಿತು. ಪ್ರಾಯಶಃ ಮಧ್ಯಾಹ್ನದ ವೇಳೆಗೆ ಮೈಸೂರಿಂದಲೋ ಬೆಂಗಳೂರಿಂದಲೋ ಒಂದು ಹತ್ತಿಪ್ಪತ್ತು ಪ್ರತಿಪತ್ರಿಕೆ ಬರುತ್ತಿದ್ದಿರಬಹುದು. ಚಾಮರಾಜನಗರಕ್ಕೆ ವಿದ್ಯುತ್ ಸಂಪರ್ಕ ಬಂದದ್ದೇ ಬಹುಶಃ ೧೯೩೮ರಲ್ಲಿ ಇರಬೇಕು. ಆ ನಂತರವಷ್ಟೇ ಲಕ್ಸುರಿಯಾಗಿದ್ದ ರೇಡಿಯೋ ಸೆಟ್ ಕಾಣಿಸಿಕೊಂಡಿದ್ದು. ಚಾಮರಾಜನಗರವೇ ಹೀಗಾದರೆ ಮಲೆಯೂರು, ದೊಡ್ಡರಾಯಪೇಟೆ, ಪುಣಜನೂರಿನಂತಹ ಗ್ರಾಮಗಳ ಪರಿಸ್ಥಿತಿಯನ್ನು ಕಲ್ಪಿಸಿಕೊಳ್ಳಬಹುದು.

ಈ ಸನ್ನಿವೇಶಗಳಲ್ಲಿ ಇಲ್ಲಿಯ ಪರಿಸರಕ್ಕೂ ಗಾಂಧಿ ತಲುಪಿ ಪ್ರಭಾವ ಬೀರಿದ್ದು ಇಂದು ಕಲ್ಪಿಸಿಕೊಳ್ಳಲಾರದ ಅಚ್ಚರಿ… ಸುಮಾರು ೧೯೩೦ನೆಯ ಇಸವಿ ವೇಳೆಗಾಗಲೇ ಇಲ್ಲಿ ಗಾಂಧಿ ಪ್ರಭಾವ ಬೀರಿದ್ದು ಅನೇಕರಲ್ಲಿ ಕಿಚ್ಚು ತುಂಬಿತ್ತು. ಹಿಂದೀ ಕಲಿಯುವುದೇ ರಾಷ್ಟ್ರ ದ್ರೋಹ ಎನಿಸಿದ್ದ ಆ ಕಾಲದಲ್ಲಿ ೧೯೨೯ರ ವೇಳೆಗೆ ಚಕ್ರವರ್ತಿ ಗೋಪಾಲಾಚಾರ್ಯರು ಹಿಂದೀ ಪ್ರಸಾರ ಸಭಾ ಪ್ರಾರಂಭ ಮಾಡಿದ್ದರು. ಮೂಲತಃ ಸಂಸ್ಕೃತ ವಿದ್ವಾಂಸರೂ ಇಲ್ಲಿಯ ಲಕ್ಷ್ಮೀಕಾಂತಸ್ವಾಮಿಯ ಗುಡಿಯ ಅರ್ಚಕರೂ ಆಗಿದ್ದ ಇವರು ಮೈಸೂರಲ್ಲಿ ಉತ್ತರ ಭಾರತದ ಗೋಸಾಯಿಗಳಿಂದ ಹಿಂದೀ ಕಲಿತಿದ್ದರು. ಇಂದಿನ ಪ್ರಯಾಗ್ ರಾಜ್ ( ಹಿಂದಿನ ಅಲಹಾಬಾದ್) ನ ಯಾವುದೋ ಹಿಂದೀ ಪ್ರಸಾರ ಮಾಡುತ್ತಿದ್ದ ಸಂಸ್ಥೆ ನಡೆಸುತ್ತಿದ್ದ ಹಿಂದೀ ಕೋವಿದ ಪರಿಕ್ಷೆಗೆ ತಾವೂ ಕುಳಿತು ಪಾಸ್ ಮಾಡಿದರು. ವಿದ್ಯಾರ್ಥಿಗಳನ್ನು ಪರೀಕ್ಷೆಗೆ ಕೂಡಿಸಿದ್ದರು. ಜವಾಹರಲಾಲ್ ನೆಹರೂ ತಮ್ಮ ಕುಟುಂಬದೊಡನೆ ದಕ್ಷಿಣ ಭಾರತದ ಪ್ರವಾಸಕ್ಕೆ ಬಂದಿದ್ದಾಗ ತಮ್ಮ ಬೆರಳೆಣಿಕೆ ಆರಂಭದ ಶಿಷ್ಯರನ್ನು ಕರೆದುಕೊಂಡು ನಂಜನಗೂಡಿಗೆ ನೆಹರೂ ನೋಡಲು ಹೊರಟರು.

ನಂಜನಗೂಡಿನ ಐ. ಬಿ. ಯಲ್ಲಿ ಪತ್ನಿ ಕಮಲಾ ಮತ್ತು ಪುತ್ರಿ ಇಂದಿರಾ ಅವರ ಜತೆ ಹಿಂದಿಯಲ್ಲಿಯೇ ಮಾತನಾಡಿದ್ದರು! ! ಅಂದು ಅಲ್ಲಿ ನಡೆದ ಸಮಾರಂಭದಲ್ಲಿ ‘ ಏ ಮಾತೃಭೂಮಿ ತೇರೆ ಚರಣೋ ಮೆ ಸಿರ್ ನಮಾವೂ’ ಹಾಡನ್ನೂ ಈ ಶಿಷ್ಯರು ಹಾಡಿದರು. ಟೈಲರಿಂಗ್ ವೃತ್ತಿಯನ್ನು ಮುಂಬಯಿಗೆ ಹೋಗಿ ಕಲಿತು ಬಂದಿದ್ದ ಸಿ. ಸಿ. ರಂಗಸ್ವಾಮಿ, ಮತ್ತೊಬ್ಬ ಟೈಲರ್ ವೆಂಕಟರಾವ್, ದೊಡ್ಡರಾಯ ಪೇಟೆ ಗ್ರಾಮದ ಡಿ.

ಜೆ. ಶಂಕರಪ್ಪ ಚಾಮರಾಜ ನಗರದಲ್ಲಿ ಸಣ್ಣ ಪುಟ್ಟ ವೃತ್ತಿ ಮಾಡಿಕೊಂಡಿದ್ದ ಸಿ. ಗೋಪಾಲರಾವ್, ಮಲೆಯೂರಿನ ಸ್ವಲ್ಪ ಸ್ಥಿತಿವಂತರಾಗಿದ್ದ ಎಂ. ಚಿಕ್ಕಲಿಂಗಪ್ಪನವರು, ಆಲೂರು ರಂಗರಾಮಯ್ಯನವರು, ಸಿ. ಯತಿ ರಾಜು, ಚಾಮರಾಜನಗರದ ಹೆಚ್. ಕೆ. ಕುಮಾರ ಸ್ವಾಮಿಗಳು ಮತ್ತು ಕೊಚ್ಚಿ ಕಿಟ್ಟಪ್ಪನವರು (ಕೆ. ವಿ. ಕೃಷ್ಣ ಮೂರ್ತಿ) ಇವರು ಹೋರಾಟಗಳ ಜತೆ ಗುರುತಿಸಿಕೊಂಡರು. ಆಗ ಹವಾ ಹೇಗಿತ್ತು ಎಂದರೆ ಅನೇಕರು ಉದಾ: ಎ. ವಾಸುದೇವರಾವ್ ಡೋಂಗರೆ, (ವಾಸಪ್ಪ), ಹೆಚ್. ಕೆ. ಕುಮಾರಸ್ವಾಮಿ ಯವರ ತಂದೆ ಹೆಚ್. ಕೆ. ಕೃಷ್ಣಪ್ಪ ಎಲ್ಲ ಖಾದಿ ಧಾರಿಗಳು. ಇವರೆಲ್ಲರ ಬಳಿ ಬಾಕ್ಸ್ ಚರಕ ಇತ್ತು! ! ಇವರ ಬೆಂಬಲಿಗರಾಗಿ ಬಿ. ನಾರಾಯಣ್ (ನಾಣಿ ಯವರು) ಸಿ. ಜಿ. ರಾಜಶೇಖರ್, ಎಸ್. ನಾಗರಾಜು ಬ್ರದರ್ಸ್, ಎಂ. ನಾಗೇಶರಾವ್, ಮಾದಾಪುರದ ಪುಟ್ಟನಂಜಪ್ಪ, ಕೆ. ಎಸ್. ಕುಮಾರಸ್ವಾಮಿ, ಪಣ್ಯದ ಸಿದ್ದಪ್ಪ ಇದ್ದರು.

ಡಿ. ಜೆ. ಶಂಕರಪ್ಪನವರು ತಮಿಳುನಾಡಿನ ತಾಳ ವಾಡಿಗೆ ಕಾಂಗ್ರೆಸ್ ಅಭ್ಯರ್ಥಿಯ ಏಜೆಂಟರಾಗಿ ಕೆಲಸ ಮಾಡಿ ಬಂದಿದ್ದೂ ಅಲ್ಲದೇ ಅಲ್ಲಿಂದ ರಸೀತಿ ಪುಸ್ತಕ ತಂದು ಇಲ್ಲಿ ತಮ್ಮ ಊರಿನ ಹಾಗೂ ತಾಲ್ಲೂಕಿನ ಅನೇಕರನ್ನು ನಾಲ್ಕಾಣೆ ಸದಸ್ಯರನ್ನಾಗಿಸಿ ದ್ದರಂತೆ. ಮೈಸೂರಿನ ಹಿರಿಯ ಹೋರಾಟಗಾರ ರಾದ ತಗಡೂರು ರಾಮಚಂದ್ರ ರಾಯರು, ಎಂ. ಎನ್. ಜೋಯಿಸರು, ಸಾಹುಕಾರ್ ಚನ್ನಯ್ಯ, ಹೆಚ್. ಎಂ. ಚನ್ನಬಸಪ್ಪ, ಎ. ರಾಮಣ್ಣ ಮುಂತಾದ ಎಲ್ಲ ನಾಯಕರೂ ಸಿ. ಗೋಪಾಲ ರಾಯರ ನಶ್ಯದ ಅಂಗಡಿಗೆ ಬರುತ್ತಿದ್ದರು. ಇಲ್ಲಿಯ ಮಾರಿಗುಡಿಯ ಬಳಿ ಇದ್ದ ಬ್ಯಾಡ್ಮಿಂಟನ್ ಕೋರ್ಟ್‌ನ ಕಲ್ಲು ಬೆಂಚನ್ನೇ ವೇದಿಕೆ ಮಾಡಿಕೊಂಡು ಬಹಿರಂಗ ಸಭೆ ನಡೆಸುತ್ತಿದ್ದರಂತೆ! !

೧೯೪೨ರ ವೇಳೆಗೆ ಇವರಲ್ಲಿ ಅನೇಕರು ಅರೆ ಆದರು. ೧೯೪೭ರ ಮೈಸೂರು ಚಲೋ ಸಂದರ್ಭದಲ್ಲಿ ಮಹಿಳೆಯರನ್ನೂ ಒಳಗೊಂಡು ಅರೆಸ್ಟ್ ಆಗಿದ್ದರು. ಗಾಂಧಿಯನ್ನು ಆಗ ಜನಸಾಮಾನ್ಯರು ಎಷ್ಟು ತಮ್ಮ ಒಳಗೆ ತೆಗೆದುಕೊಂಡಿದ್ದರು ಎಂದರೆ, ಮಹಾಲಯ ಅಮಾವಾಸ್ಯೆಯ ದಿನ ತಮ್ಮ ಪಿತೃಗಳಿಗೆ ಎಡೆ ಇಟ್ಟು ತರ್ಪಣ ಬಿಡುವ ಸಮಯದಲ್ಲಿ ಟೈಲರ್ ರಂಗಸ್ವಾಮಿಯವರು ಗಾಂಧಿ ಮತ್ತು ಇತರ ಹೋರಾಟಗಾರರಿಗೂ ತರ್ಪಣ ಬಿಡುತ್ತಿದ್ದರಂತೆ! !

Tags:
error: Content is protected !!