ಮಂಡ್ಯ: ನಾಗಮಂಗಲದ ವಿವಿಧ ಸಮುದಾಯದ ಯುವಶಕ್ತಿ ಸಮಿತಿ ರಚಿಸಿಕೊಂಡು ಶಾಂತಿ ಹಾಗೂ ಸೌಹರ್ದತೆಗೆ ಆದ್ಯತೆ ನೀಡಿ ಕಾರ್ಯನಿರ್ವಹಿಸಲಿ ಎಂದು ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎನ್ ಚಲುವರಾಯಸ್ವಾಮಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶನಿವಾರ ನಾಗಮಂಗಲ ತಾಲ್ಲೂಕಿನ ಜಯಮ್ಮ ಕೃಷ್ಣಪ್ಪ ಸಮುದಾಯ ಭವನದಲ್ಲಿ ಜಿಲ್ಲಾಡಳಿತ ವತಿಯಿಂದ ಆಯೋಜಿಸಲಾಗಿದ್ದ ಶಾಂತಿ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ವಿವಿಧ ಸಮುದಾಯದ ಯುವಜನರು ಸಮಿತಿ ರಚಿಸಿಕೊಂಡು ಧಾರ್ಮಿಕ ಕಾರ್ಯಕ್ರಮಗಳು ಮೆರವಣಿಗೆ ನಡೆದ ಸಂದರ್ಭದಲ್ಲಿ ಯಾವುದೇ ಬೀದಿಯಲ್ಲಿ ಸಾಗಿದರೂ ಯಾವುದೇ ಗಲಭೆಯಾಗದಂತೆ ಸೌಹರ್ದತೆ ಮೆರೆಯಬೇಕು. ತಾಲ್ಲೂಕು ಇತರರಿಗೆ ಮಾದರಿಯಾಗಬೇಕು ಎಂದರು.
ನಾಗಮಂಗಲದಲ್ಲಿ ಸೆ.11 ರಂದು ಗಣಪತಿ ಮೆರವಣಿಗೆಯ ಸಂದರ್ಭದಲ್ಲಿ ಉಂಟಾಗ ಗಲಾಟೆ ವೈಯಕ್ತಿಕವಾಗಿ ಅತೀವ ನೋವು ಉಂಟು ಮಾಡಿದೆ. ಘಟನೆ ನಡೆದುಹೋಗಿದೆ ಅದನ್ನು ಪುನ: ಸ್ಮರಿಸುತ್ತ ಅದರ ಸುತ್ತ ಸುತ್ತುವುದು ಬೇಡ ಅದರ ಬದಲಿಗೆ ಶಾಂತ ಚಿತ್ತದಿಂದ ಒಂದಾಗಿ ಎಲ್ಲರೂ ಮುಂದೆ ಸಾಗೋಣ ಎಂದು ಸಲಹೆ ನೀಡಿದರು.
ಗಲಭೆ ಪೂರ್ವನಿಯೋಜಿತ ಅಥವಾ ಅನಿರೀಕ್ಷತವೂ ಎಂಬುದು ತನಿಖೆಯಿಂದ ತಿಳಿದು ಬರಲಿದೆ. ಕೆಲವು ಅಂಗಡಿ ಮುಂಗಟ್ಟುಗಳಿಗೆ ಹಾನಿಯಾಗಿದೆ ಇದರ ಬಗ್ಗೆ ಜಿಲ್ಲಾಧಿಕಾರಿಗಳಿಂದ ವರದಿ ಪಡೆದು ಸರ್ಕಾರದಿಂದ ಹಾಗೂ ವೈಯಕ್ತಿಕವಾಗಿಯೂ ಸಹ ಪರಿಹಾರ ಒದಗಿಸಿ ಜೀವನ ಕಟ್ಟಿಕೊಳ್ಳಲು ಸಹಕರಿಸಲಾಗುವುದು. ಇದಲ್ಲದೇ ತಾಲ್ಲೂಕಿಗೆ ಭೇಟಿ ನೀಡಿ ಅಂಗಡಿ ಮುಂಗಟ್ಟು ಹಾನಿಯದವರಿಗೆ ಕೆಲವರು ವೈಯಕ್ತಿಕವಾಗಿ ಸಹಾಯ ಮಾಡಿದ್ದಾರೆ ಅವರಿಗೂ ಸಹ ಧನ್ಯವಾದಗಳು ಎಂದು ಹೇಳಿದರು.
ಸೋಮವಾರ ಈದ ಮಿಲಾದ್ ಹಬ್ಬವಿದ್ದು, ಅಂದು ಗಣೇಶ ವಿಸರ್ಜನೆ ಮೆರವಣಿಗೆ ಮಾಡುವುದು ಬೇಡ ಎಂದು ಸಚಿವರು ಮನವಿ ಮಾಡಿದರು.
ಗಲಭೆ ಸೃಷ್ಟಿಸಿದರಿಗೆ ಕಾನೂನು ರೀತಿ ಶಿಕ್ಷೆಯಾಗಲಿದೆ: ಡಿಸಿ ಕುಮಾರ
ಜಿಲ್ಲಾಧಿಕಾರಿ ಡಾ: ಕುಮಾರ ಮಾತನಾಡಿ ಗಲಭೆ ಉಂಟುಮಾಡಿದವರಿಗೆ ಕಾನೂನು ರೀತಿ ಶಿಕ್ಷೆಯಾಗಲಿದೆ. ಆದರೆ ಈ ಸಣ್ಣ ಪ್ರಕರಣದಿಂದ 25 ಕ್ಕೂ ಹೆಚ್ಚು ಅಂಗಡಿ ಮುಂಗಟ್ಟಿಗೆ ಹಾನಿಯಾಗಿದೆ. ಇವರು ಜೀವನ ಕಟ್ಟಿಕಟ್ಟುಕೊಳ್ಳುವ ರೀತಿ ಹಾಗೂ ಮಾನಸಿಕ ಒತ್ತಡದ ಬಗ್ಗೆ ಚಿಂತಿಸಬೇಕಿದೆ ಎಂದರು.
ಮಾನವೀಯ ಮೌಲ್ಯ ಮತ್ತು ಹೃದಯ ಶ್ರೀಮಂತಿಕೆಯನ್ನು ಭಾವನೆ ಬೆಳೆದರೆ ಇಂತಹ ಘಟನೆಗಳು ಘಟಿಸುವುದಿಲ್ಲ. ಸಹಬಾಳ್ವೆ ಹಾಗೂ ಭಾವೈಕ್ಯತೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕು. ಧಾರ್ಮಿಕ ಭಾವನೆಗಳಿಗೆ ದಕ್ಕೆಯಾಗದಂತೆ ಕಾರ್ಯಕ್ರಮಗಳನ್ನು ಆಯೋಜಿಸಿಕೊಳ್ಳಬೇಕು. ಸರ್ಕಾರದಿಂದ ನೀಡಲಾಗುವ ಮಾರ್ಗಸೂಚಿಗಳನ್ನು ಪಾಲಿಸಬೇಕು ಎಂದು ಹೇಳಿದರು.
ಯುವ ಸಮುದಾಯ ಹಾಗೂ ಜನರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು. ಅವುಗಳನ್ನು ನಂಬಿ ಸಮಾಜದಲ್ಲಿ ಶಾಂತಿ ಕದಡುವ ಕೆಲಸಗಳಿಗೆ ಕೈ ಹಾಕಬಾರದು ಎಂದು ಕಿವಿಮಾತು ಹೇಳಿದರು.
ಇದೇ ಸಂದರ್ಭದಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಉಪವಿಭಾಗಾಧಿಕಾರಿ ಶಿವಮೂರ್ತಿ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.
ನಾಗಮಂಗಲದಲ್ಲಿ ನಡೆದ ಗಲಭೆ ಆಕಸ್ಮಿಕ ಇದನ್ನು ಹತೋಟಿಗೆ ತಂದ ಪೊಲೀಸ್ ಇಲಾಖೆ ಧನ್ಯವಾದಗಳು. ಮೆರವಣಿಗೆ ಅಥವಾ ಯಾವುದೇ ಕಾರ್ಯಕ್ರಮ ನಡೆಯುವಾಗ ಬೇರೆಯವರನ್ನು ಪ್ರಚೋದಿಸಬಾರದು ಹಾಗೂ ಪ್ರಚೋದನೆಗೆ ಒಳಗಾಗಬಾರದು. ಆಗ ಯಾವುದೇ ಗಲಾಟೆ ನಡೆಯುವುದಿಲ್ಲ. ಗೌರಿ, ಗಣೇಶ, ಈದ್ ಮಿಲಾದ್ ಯಾವುದೇ ಹಬ್ಬವಾಗಲಿ ಎಲ್ಲರೂ ಸೇರಿ ಆಚರಿಸೋಣ ಎಲ್ಲಾ ಜನಾಂಗದ ಹಿರಿಯರು ಸೇರಿ ಸಮಿತಿ ರಚಿಸಿಕೊಂಡು ಮಾರ್ಗಸೂಚಿಗಳನ್ನು ರಚಿಸಿಕೊಂಡು ಸಂತೋಷದಿಂದ ಹಬ್ಬಗಳನ್ನು ಆಚರಿಸೋಣ ಎಂದು ಸಲಹೆ ನೀಡಿದರು.
ಗಣಪತಿ ಹಬ್ಬದಲ್ಲಿ 3, 5 ಹಾಗೂ 9 ದಿನಗಳಲ್ಲಿ ವಿಸರ್ಜನೆ ಮಾಡುವುದು ವಾಡಿಕೆ. ಇದಕ್ಕೆ ರೂಟ್ ಮ್ಯಾಪ್ ಮೊದಲೇ ಸಿದ್ಧಪಡಿಸಿಕೊಂಡು ಪೊಲೀಸ್ ಇಲಾಖೆ ಅನುಮತಿ ಪಡೆದುಕೊಳ್ಳಬೇಕು. ಇಲಾಖೆಗಳು ಮಾರ್ಗಸೂಚಿ ಹೊರಡಿಸಿ ಹೆಚ್ಚು ಪ್ರಚಾರ ಕೈಗೊಳ್ಳಬೇಕು.ಇಂತಹ ಅಹಿತಕರ ಘಟನೆ ಕಿಡಿಗೇಡಿಗಳಿಂದ ನಡೆಯುತ್ತದೆ.ಕಿಡಿಗೇಡಿಗಳು ಒಂದು ಜನಾಂಗಕ್ಕೆ ಮಾತ್ರ ಸೀಮಿತವಾಗಿಲ್ಲ. ಮನೆಯಲ್ಲಿ ಪೋಷಕರು ಮಕ್ಕಳಿಗೆ ಚಿಕ್ಕಂದಿನಿಂದಲೇ ನೈತಿಕ ಶಿಕ್ಷಣವನ್ನು ನೀಡಿ ಎಲ್ಲರನ್ನೂ ಸತ್ಪ್ರಜೆಯನ್ನಾಗಿ ಮಾಡುವಂತೆ ಸಲಹೆ ನೀಡಿದರು.