ಮಂಡ್ಯ: ಹೊಸ ವರ್ಷಾಚರಣೆ ಸಂಭ್ರಮದಲ್ಲಿದ್ದ ಪ್ರವಾಸಿಗರಿಗೆ ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಅವರು ಬಿಗ್ ಶಾಕ್ ನೀಡಿದ್ದಾರೆ.
ಹೊಸ ವರ್ಷಾಚರಣೆಯ ಹಿನ್ನೆಲೆಯಲ್ಲಿ ಕಾವೇರಿ ನದಿ ತೀರಕ್ಕೆ ಎರಡು ದಿನಗಳ ಕಾಲ ಸಂಪೂರ್ಣ ನಿರ್ಬಂಧ ವಿಧಿಸಲಾಗಿದ್ದು, ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣ ತಾಲ್ಲೂಕಿನ ಕೆಆರ್‌ಎಸ್ ಹಿನ್ನೀರು ಸೇರಿದಂತೆ ಬಲಮುರಿ, ಎಡಮುರಿ, ಕಾವೇರಿ ನದಿ ತೀರದಲ್ಲಿ ಮೋಜು ಮಸ್ತಿ ಮಾಡದಂತೆ ಜನತೆಗೆ ಕಟ್ಟಾಜ್ಞೆ ಹೊರಡಿಸಿದ್ದಾರೆ.
ನಾಳೆ ಬೆಳಗ್ಗೆ 6 ಗಂಟೆಯಿಂದ ಜನವರಿ.1ರ ರಾತ್ರಿ 8 ಗಂಟೆವರೆಗೆ ಸಂಪೂರ್ಣ ನಿರ್ಬಂಧ ವಿಧಿಸಲಾಗಿದೆ. ಇದರ ಜೊತೆಗೆ ಮಳವಳ್ಳಿ ತಾಲ್ಲೂಕಿನ ಮುತ್ತತ್ತಿ ಕಾವೇರಿ ತೀರದಲ್ಲೂ ನಿಷೇಧಾಜ್ಞೆ ವಿಧಿಸಲಾಗಿದ್ದು, ನಿಯಮ ಮೀರಿ ಕಾವೇರಿ ತೀರದಲ್ಲಿ ಮೋಜು ಮಸ್ತಿಗೆ ಹೋದ್ರೆ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದ್ದಾರೆ.
ಆ ಸ್ಥಳಗಳಲ್ಲಿ ಹೊಸ ವರ್ಷದ ಸಂಭ್ರಮಾಚರಣೆ ನೆಪದಲ್ಲಿ ಮದ್ಯಪಾನ, ಗಾಂಜಾ ಸೇರಿದಂತೆ ಮೋಜು ಮಸ್ತಿ ಮಾಡಲಾಗುತ್ತದೆ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಮಂಡ್ಯ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ಮಾಹಿತಿ ನೀಡಿದ್ದಾರೆ.