ಮಂಡ್ಯ : ಜಿಲ್ಲೆಯ ವಿವಿಧೆಡೆ ನಡೆದ 21 ಕಳ್ಳತನ ಪ್ರಕರಣಗಳನ್ನು ಭೇದಿಸಿರುವ ಪೊಲೀಸರು ಐವರು ಆರೋಪಿಗಳನ್ನು ಬಂಧಿಸಿ 553 ಗ್ರಾಂ ಚಿನ್ನ, 1.3 ಕೆ.ಜಿ ಬೆಳ್ಳಿ, ಪ್ಯಾಸೆಂಜರ್ ಆಟೋ, ಒಂದು ಬೈಕ್, 20 ಸಾವಿರ ನಗದು ಸೇರಿ 86 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ವಿ.ಜೆ.ಶೋಭಾರಾಣಿ ತಿಳಿಸಿದರು.
ಶುಕ್ರವಾರ ತಮ್ಮ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮೈಸೂರು ತಾಲ್ಲೂಕು ಹಾರೋಹಳ್ಳಿಯಲ್ಲಿ ಹಂದಿ ಸಾಕಣೆ ಮಾಡುತ್ತಿದ್ದ ಪಿ.ಗಣೇಶ (30), ಟಿ.ನರಸೀಪುರ ತಾಲೂಕು ಚಾಮನಹಳ್ಳಿಯ ಸಿ.ಎನ್.ಮಂಜುನಾಥ ಉ. ಮಂಜ, ಮೈಸೂರು ತಾಲ್ಲೂಕು ರಮ್ಮನಹಳ್ಳಿಯ ಸಾಗರ್, ದರ್ಶನ್, ಬೆಂಗಳೂರು ಸುಂಕದ ಕಟ್ಟೆ ಚಂದನ ಬಡಾವಣೆ ನಿವಾಸಿ ಕಾಂತರಾಜು ಅಲಿಯಾಸ್ ಮೋರಿ ಕಾಂತ ಬಂಽತ ಆರೋಪಿಗಳು ಎಂದು ಮಾಹಿತಿ ನೀಡಿದರು.
ಪಾಂಡವಪುರ ತಾಲ್ಲೂಕಿನ ಶಂಭೂನಹಳ್ಳಿ ರಸ್ತೆಯ ಅರಣ್ಯ ಇಲಾಖೆ ಕಚೇರಿ ಬಳಿ ಪಿ.ಗಣೇಶ ದ್ವಿಚಕ್ರವಾಹನವನ್ನು ನಿಲ್ಲಿಸಿಕೊಂಡು ಅನುಮಾನಾಸ್ಪದವಾಗಿ ನಿಂತಿದ್ದಾಗ ಆತನನ್ನು ವಶಕ್ಕೆ ತೆಗೆದುಕೊಂಡು ವಿಚಾರಿಸಿದಾಗ ಶ್ರೀರಂಗಪಟ್ಟಣ ತಾಲ್ಲೂಕು ಅರಕೆರೆ, ಕಗ್ಗಲೀಪುರ, ಗ್ರಾಮಾಂತರ ಪೊಲೀಸ್ ಠಾಣೆ, ಜಯಪುರ ಪೊಲೀಸ್ ಠಾಣೆ ಹಾಗೂ ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದ 9 ಪ್ರಕರಣಗಳಲ್ಲಿ 274.08 ಗ್ರಾಂ ತೂಕದ ಚಿನ್ನದ ಒಡವೆಗಳು, 842 ಬೆಳ್ಳಿ ಸಾಮಾನುಗಳು, 20 ಸಾವಿರ ರೂ. ನಗದು, 1 ಆಟೋರಿಕ್ಷಾ, ಒಂದು ಬೈಕ್ ಸೇರಿ 44.85 ಲಕ್ಷ ರೂ.. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.
ಮೈಸೂರು ತಾಲ್ಲೂಕು ಹಾರೋಹಳ್ಳಿಯ ಪಿ.ಗಣೇಶ ತನ್ನ ಸ್ನೇಹಿತರಾದ ಮಂಜುನಾಥ, ಸಾಗರ, ದರ್ಶನ್ ಜೊತೆ ಸೇರಿಕೊಂಡು ಅರಕೆರೆ, ಮದ್ದೂರು, ಶ್ರೀರಂಗಪಟ್ಟಣ, ಕಿರುಗಾವಲು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನ ಮಾಡಿದ್ದ ಒಟ್ಟು 212 ಗ್ರಾಂ ತೂಕದ ಚಿನ್ನದ ಆಭರಣಗಳು, 78 ಗ್ರಾಂ ತೂಕದ ಬೆಳ್ಳಿಯ ಪದಾರ್ಥಗಳು ಸೇರಿ 31.13 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಅದೇ ರೀತಿ ಮೇಲುಕೋಟೆ, ಮದ್ದೂರು, ಪಾಂಡವಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳ್ಳತನವೆಸಗಿದ್ದ ಕಾಂತರಾಜು ಅಲಿಯಾಸ್ ಮೋರಿ ಕಾಂತ (50) ಎಂಬಾತನನ್ನು ಬಂಧಿಸಿ 65.8 ಗ್ರಾಂ ತೂಕದ ಚಿನ್ನದ ಒಡವೆಗಳು ಮತ್ತು 379.6 ಗ್ರಾಂ ಬೆಳ್ಳಿ ಸಾಮಗ್ರಿಗಳು9.95 ಲಕ್ಷ ರೂ. ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಂಡಿರುವುದಾಗಿ ಹೇಳಿದರು.
ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಸಿ.ಇ.ತಿಮ್ಮಯ್ಯ, ಶ್ರೀರಂಗಪಟ್ಟಣ ಉಪವಿಭಾಗದ ಡಿವೈಎಸ್ಪಿ ಯು.ಡಿ.ಕೃಷ್ಣಕುಮಾರ್, ಉಪವಿಭಾಗದ ಅಪರಾಧ ಪತ್ತೆ ದಳದ ಉಸ್ತುವಾರಿ ಅಜ್ಞಕಾರಿ ಹೆಚ್.ಪಿ.ಶರತ್‌ಕುಮಾರ್, ಪಿಎಸ್‌ಐ ಆರ್.ಬಿ.ಉಮೇಶ್ ಸುದ್ದಿಗೋಷ್ಠಿಯಲ್ಲಿ ಹಾಜರಿದ್ದರು.




