Mysore
21
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ಸಾರ್ವಜನಿಕರ ಶೌಚಾಲಯಕ್ಕೆ ಬೇಕಿದೆ ಚಿಕಿತ್ಸೆ!

ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿನ ಶೌಚಾಲಯದಲ್ಲಿ ಅಶುಚಿತ್ವ ತಾಂಡವ

ಮೈಸೂರು: ವಾಯುವಿಹಾರಿಗಳು ಹಾಗೂ ಕ್ರೀಡಾಸಕ್ತರ ನೆಚ್ಚಿನ ತಾಣವಾಗಿರುವ ಪಂ.ಪುಟ್ಟರಾಜ ಗವಾಯಿ ಕ್ರೀಡಾಂಗಣದಲ್ಲಿ ನಿರ್ಮಿಸಿರುವ ಶೌಚಾಲಯ ನಿರ್ವಹಣೆ ಇಲ್ಲದೆ ಬಳಕೆಗೆ ಯೋಗ್ಯವಿಲ್ಲದಂತಾಗಿದೆ.

ಬೆಳಿಗ್ಗೆ ಮತ್ತು ಸಂಜೆ ವೇಳೆ ಇಲ್ಲಿ ವಾಯು ವಿಹಾರಕ್ಕಾಗಿ ಬರುವ ಮಹಿಳೆಯರು ಹಾಗೂ ಪುರುಷರು ಶೌಚಾಲಯದಲ್ಲಿ ಶುಚಿತ್ವ ಇಲ್ಲದ್ದನ್ನು ಕಂಡು ಬೇಸರ ವ್ಯಕ್ತಪಡಿಸುತ್ತಿದ್ದಾರೆ. ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಜೆ.ಪಿ.ನಗರ ದಲ್ಲಿ ನಿರ್ಮಿಸಿರುವ ಪಂಡಿತ್ ಪುಟ್ಟರಾಜ ಗವಾಯಿ ಕ್ರೀಡಾಂಗಣ ಒಂದು ಕಾಲದಲ್ಲಿ ದೊಡ್ಡ ಮಟ್ಟದ ಹೆಸರುಗಳಿಸಿತ್ತು. ಮೈಸೂರು ಮಹಾ ನಗರಪಾಲಿಕೆ ಅನುದಾನ, ವಿಧಾನಪರಿಷತ್, ಲೋಕಸಭಾ ಸದಸ್ಯರ ಅನುದಾನದಿಂದ ವಿಶಾಲವಾದ ವಾಕಿಂಗ್ ಪಥ ನಿರ್ಮಾಣ, ಈಜುಕೊಳ, ಬಯಲು ರಂಗಮಂದಿರ, ಟೆನ್ನಿಸ್, -ಟ್‌ಬಾಲ್ ಅಂಗಣಗಳನ್ನು ನಿರ್ಮಾಣ ಮಾಡಲಾಗಿದೆ.

ಇದಲ್ಲದೆ, ಕ್ರಿಕೆಟ್ ತರಬೇತಿಗೆ ಪ್ರತ್ಯೇಕ ಮೈದಾನವಿದೆ. ಖಾಸಗಿ ಸಂಸ್ಥೆಯಿಂದ ಯೋಗಾಸನ ತರಗತಿಗಳನ್ನು ನಡೆಸುವುದಕ್ಕೂ ಪ್ರತ್ಯೇಕವಾದ ವ್ಯವಸ್ಥೆ ಇದೆ. ಈ ಮೈದಾನದಲ್ಲಿ ನಿತ್ಯ ಒಂದಲ್ಲ ಒಂದು ಕಾರ್ಯಕ್ರಮ, ರಜಾ ದಿನವಾದ ಭಾನುವಾರ ಕ್ರಿಕೆಟ್ ಪಂದ್ಯಾವಳಿ ನಡೆಯುವುದು ಸಾಮಾನ್ಯವಾಗಿದೆ. ಮುಂಜಾನೆ ೫ ರಿಂದ ಬೆಳಿಗ್ಗೆ ೯ ಗಂಟೆಯವರೆಗೆ, ಸಂಜೆ ೫ ರಿಂದ ೧೦ ಗಂಟೆಯವರೆಗೆ ಜೆ.ಪಿ.ನಗರದ ಎ ಬ್ಲಾಕ್, ಬಿ-ಬ್ಲಾಕ್, ಸಿ -ಬ್ಲಾಕ್, ಡಿ-ಬ್ಲಾಕ್, ಇ-ಬ್ಲಾಕ್, ನಾಚನಹಳ್ಳಿಪಾಳ್ಯ, ಕುಪ್ಪಲೂರು, ರಮಾಬಾಯಿ ನಗರ, ಮುನಿಸ್ವಾಮಿ ನಗರ, ಮಹದೇವಪುರ ಸೇರಿದಂತೆ ಇನ್ನಿತರ ಕಡೆಗಳಿಂದ ನೂರಾರು ಮಂದಿ ವಾಯುವಿಹಾರಕ್ಕೆ ಬರುತ್ತಾರೆ.

ಹಾಗಾಗಿ, ಮಹಿಳೆಯರು ಮತ್ತು ಪುರುಷರಿಗಾಗಿ ಪ್ರತ್ಯೇಕವಾಗಿ ಶೌಚಾಲಯಗಳನ್ನು ನಿರ್ಮಾಣ ಮಾಡಲಾಗಿದೆ. ಆದರೆ, ಕಾಲಕ್ರಮೇಣ ನಿರ್ವಹಣೆ ಮಾಡುವಲ್ಲಿ ನಿರಾಸಕ್ತಿ ತೋರಿದ ಪರಿಣಾಮವಾಗಿ ಶೌಚಾಲಯಗಳಲ್ಲಿ ನಲ್ಲಿಗಳು, ಕಬೋರ್ಡ್‌ಗಳು ಹಾಳಾಗಿವೆ. ಫೀಡ್‌ಬ್ಯಾಕ್ ಯಂತ್ರ ಕೆಟ್ಟು ನಿಂತಿದೆ. ಫ್ರೆಷರ್ ಪೈಪ್‌ಗಳು ಹಾಳಾಗಿವೆ. ಮೂತ್ರ ವಿಸರ್ಜನೆ ಮಾಡುವುದಕ್ಕೆ ಅಳವಡಿಸಿರುವ ಕ್ಯಾಪ್ಸ್ಗಳು ಕಳಚಿವೆ. ಬಾತ್‌ರೂಮ್‌ನಲ್ಲಿ ಅಳವಡಿಸಿರುವ ಪರಿಕರಗಳು ಕೂಡ ಹಾಳಾಗಿದ್ದು ಇಲಿ, ಹೆಗ್ಗಣಗಳ ತಾಣವಾಗಿದೆ. ಈ ಬಗ್ಗೆ ವಾಯುವಿಹಾರಿಗಳು ಅನೇಕ ಬಾರಿ ಸಂಬಂಽಸಿದ ಪಾಲಿಕೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ.

ಮೊದಲು ಸ್ಥಳೀಯ ನಗರಪಾಲಿಕೆ ಸದಸ್ಯರು ಬಂದು ವೀಕ್ಷಣೆ ಮಾಡಿ ಏನಾದರೂ ಹಾಳಾಗಿದ್ದರೆ ದುರಸ್ತಿ ಮಾಡಿಸುತ್ತಿದ್ದರು.ಈಗ ಚುನಾಯಿತ ಪ್ರತಿನಿಧಿಗಳಿಲ್ಲದ ಕಾರಣ, ಪಾಲಿಕೆ ಅಧಿಕಾರಿಗಳು ದುರಸ್ತಿಗೆ ಮುಂದಾಗುತ್ತಿಲ್ಲ ಎಂದು ಸ್ಥಳೀಯ ನಿವಾಸಿಯೊಬ್ಬರು ಅಸಮಾಧಾನ ವ್ಯಕ್ತಪಡಿಸಿದರು.

” ನಿತ್ಯ ನೂರಾರು ಜನರು ವಾಯುವಿಹಾರ ಮಾಡುವ ಕ್ರೀಡಾಂಗಣದಲ್ಲಿ ಶೌಚಾಲಯ ಹಾಳಾಗಿದ್ದರೂ ರಿಪೇರಿ ಮಾಡಿಸಲು ಆಗಿಲ್ಲ. ಮಧುಮೇಹಿಗಳು, ಹಿರಿಯ ನಾಗರಿಕರು ವಾಯುವಿಹಾರಕ್ಕೆ ಬರುತ್ತಾರೆ. ಒಂದು ವೇಳೆ ಮೂತ್ರವಿಸರ್ಜನೆ ಮಾಡಬೇಕೆಂದರೆ ಮನೆಗೇ ಹೋಗಬೇಕಾಗುತ್ತದೆ. ಅಧಿಕಾರಿಗಳು ಪರಿಶೀಲಿಸಿ ರಿಪೇರಿ ಮಾಡಿಸಿ ಅನುಕೂಲ ಮಾಡಿಕೊಡಬೇಕಿದೆ.

ಬಿ.ಎಲ್.ಭೈರಪ್ಪ, ಮಾಜಿ ಮಹಾಪೌರ

” ವಾಯುವಿಹಾರಿಗಳಿಗೆ ಶೌಚಾಲಯ ಅಗತ್ಯವಿದೆ. ಶನಿವಾರ, ಭಾನುವಾರ ಹಲವಾರು ಕ್ರೀಡಾ ಚಟುವಟಿಕೆಗಳು ನಡೆಯುವ ಕಾರಣ ಹಾಳಾಗಿರುವ ಶೌಚಾಲಯವನ್ನು ರಿಪೇರಿ ಮಾಡಿಸಿ, ಬಳಕೆಗೆ ವ್ಯವಸ್ಥೆ ಮಾಡಿಕೊಡಬೇಕು.”

ಶಿವಸ್ವಾಮಿ, ಜೆ.ಪಿ.ನಗರ

 

 

Tags:
error: Content is protected !!