ಶತಮಾನದ ಹಿಂದೆ ಮೈಸೂರು ಸಂಸ್ಥಾನದ ಮಹಾರಾಣಿಯವರಾಗಿದ್ದ ಕೆಂಪನಂಜಮ್ಮಣ್ಣಿ ಅವರು ಮೈಸೂರಿನ ಹೆಣ್ಣುಮಕ್ಕಳಿಗಾಗಿ ಸ್ಥಾಪಿಸಿದ್ದ ‘ಮಹಾರಾಣಿಯವರ ಹೊಸ ಮಾದರಿ (ಎನ್‌ಟಿಎಂ) ಶಾಲೆ’ ಇತಿಹಾಸದ ಪುಟಗಳನ್ನು ಸೇರಿಹೋಗಿದೆ. ಈ ಶಾಲೆಯಿದ್ದ ಸ್ಥಳದಲ್ಲಿ ಈಗ ಶ್ರೀ ರಾಮಕೃಷ್ಣ ಆಶ್ರಮದ ವತಿಯಿಂದ ವಿವೇಕ ಸ್ಮಾರಕ- ವಿವೇಕಾನಂದ ಸಾಂಸ್ಕೃತಿಕ ಯುವ ಕೇಂದ್ರವನ್ನು ನಿರ್ಮಿಸಲಾಗಿದೆ. ಇದರೊಂದಿಗೆ ಒಂದು ಕನ್ನಡ ಮಾಧ್ಯಮದ ಸರ್ಕಾರಿ ಶಾಲೆ ತೆರೆಮರೆಗೆ ಸರಿದಂತಾಗಿದೆ.
ಶಾಲೆಯನ್ನು ಉಳಿಸಿ, ಬಾಕಿ ಜಾಗದಲ್ಲಿ ಸ್ಮಾರಕ ನಿರ್ಮಿಸಲು ಅಂದರೆ ೫೦:೫೦ ಅನುಪಾತದಲ್ಲಿ ಜಾಗವನ್ನು ಉಪಯೋಗಿಸಲು ಆಶ್ರಮದವರೇ ಒಪ್ಪಿದ್ದರೂ, ಅಂತಿಮವಾಗಿ ಮಾತನ್ನು ಉಳಿಸಿಕೊಳ್ಳುವಲ್ಲಿ ತಪ್ಪಿದ್ದಾರೆ ಎಂಬುದು ಶಾಲೆ ಪರ ಹೋರಾಟಗಾರರ ಆಕ್ರೋಶಕ್ಕೆ ಕಾರಣವಾಗಿದೆ. ಈ ಶಾಲೆಯ ಉಳಿವಿಗಾಗಿ ನಡೆದ ಹೋರಾಟಗಳು ಅವಿಸ್ಮರಣೀಯ. ಶಾಲೆಯ ವಿದ್ಯಾರ್ಥಿಗಳು, ಪೋಷಕರು, ಸಾಹಿತಿಗಳು, ಕನ್ನಡ ಪರ ಹೋರಾmಗಾರರು, ರೈತ ಸಂಘ, ಪ್ರಗತಿಪರರು, ಚಿಂತಕರು ವರ್ಷಾನುಗಟ್ಟಲೆ ನಡೆಸಿದ ಚಳವಳಿ ಅಧಿಕಾರಶಾಹಿ, ಪ್ರಭಾವಿಗಳ ಎದುರು ಮೌನವಾಗಬೇಕಾದದ್ದು ವಿಪರ್ಯಾಸ.
ಈ ಶಾಲೆಗೆ ಹೊಂದಿಕೊಂಡಂತೆ ನಿರಂಜನ ಮಠ ಇತ್ತು. ಅಲ್ಲಿಗೆ ಸ್ವಾಮಿ ವಿವೇಕಾನಂದರು ಭೇಟಿ ನೀಡಿದ್ದರು. ಹಾಗಾಗಿ ಅಲ್ಲಿ ವಿವೇಕ ಸ್ಮಾರಕ ನಿರ್ಮಿಸಲು ಅವಕಾಶ ನೀಡಬೇಕು. ಅಲ್ಲದೆ, ನಿರಂಜನ ಮಠದ ಜಾಗ ಸಾಕಾಗುವುದಿಲ್ಲ, ಅದರ ಪಕ್ಕದಲ್ಲೇ ಇರುವ ಎನ್‌ಟಿಎಂ ಶಾಲೆಯನ್ನು ಸ್ಥಳಾಂತರಿಸಿ, ಆ ಜಾಗವನ್ನೂ ನಮಗೆ ಹಸ್ತಾಂತರ ಮಾಡಬೇಕು ಎಂದು ಕೊಲ್ಕತ್ತಾದಲ್ಲಿರುವ ಶ್ರೀ ರಾಮಕೃಷ್ಣ ಮಠ ಮತ್ತು ರಾಮಕೃಷ್ಣ ಮಿಷನ್ ವತಿಯಿಂದ ೨೦೧೩ರಲ್ಲಿ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿತ್ತು. ಇದಕ್ಕೆ ಸ್ಪಂದಿಸಿದ ಸರ್ಕಾರ, ಆಶ್ರಮದವರ ಬೇಡಿಕೆಗೆ ಪೂರಕವಾಗಿ ಕ್ರಮಕೈಗೊಳ್ಳುವಂತೆ ಮೈಸೂರು ಜಿಲ್ಲಾಡಳಿತಕ್ಕೆ ಸೂಚನೆ ನೀಡಿತ್ತು. ಮುಂದಿನ ಕ್ರಮ ಕೈಗೊಳ್ಳುವಷ್ಟರಲ್ಲಿ ಸರ್ಕಾರ ಬದಲಾವಣೆಯಾಗಿ ೨೦೧೩ರ ಮೇ ವೇಳೆಗೆ ಕಾಂಗ್ರೆಸ್ ಪಕ್ಷದ ಸರ್ಕಾರ ಅಧಿಕಾರಕ್ಕೆ ಬಂತು.
೨೦೧೪ರಲ್ಲಿ ಶ್ರೀ ರಾಮಕೃಷ್ಣ ಆಶ್ರಮದವರು ಹಿಂದಿನ ಸರ್ಕಾರದ ಆದೇಶದಂತೆ ಎನ್ಟಿಎಂ ಶಾಲೆಯ ಜಾಗವನ್ನು ಹಸ್ತಾಂತರಿಸಲು ಮನವಿ ಸಲ್ಲಿಸಿದರು. ಈ ವಿಷಯ ಬಹಿರಂಗವಾಗುತ್ತಿದ್ದಂತೆ ಕನ್ನಡ ಪರ ಹೋರಾಟಗಾರರು, ಚಿಂತಕರು, ರೈತರು, ವಿದ್ಯಾರ್ಥಿಗಳ ಪೋಷಕರು ‘ಎನ್‌ಟಿಎಂ ಶಾಲೆಯ ಉಳಿಸಲು ಹೋರಾಟ ಸಮಿತಿ ಒಕ್ಕೂಟ’ದ ವತಿಯಿಂದ ಪ್ರತಿಭಟನೆಗೆ ಮುಂದಾದರು. ಆಶ್ರಮದವರು ಶಾಲೆಯಲ್ಲಿ ಮಕ್ಕಳ ಸಂಖ್ಯೆ ಕಡಿಮೆ ಇದೆ. ಹಾಗಾಗಿ ಶಾಲೆಯನ್ನು ಸ್ಥಳಾಂತರಿಸಿ, ನಮಗೆ ಜಾಗ ಹಸ್ತಾಂತರಿಸಬೇಕು ಎಂದು ಒತ್ತಡ ಹಾಕಿದ್ದರು. ಈ ಸುಳಿವನ್ನು ಅರಿತ ಒಕ್ಕೂಟದವರು ಶಾಲೆಯ ಪರವಾಗಿ ಬೀದಿಗಿಳಿದು ಪ್ರತಿಭಟನೆನಡೆಸಿದರು. ಮೊಂಬತ್ತಿ ಮೆರವಣಿಗೆ ಕೂಡ ನಡೆಸಿದರು. ಆಶ್ರಮದವರು ತಮ್ಮ ಪಟ್ಟು ಸಡಿಲಿಸಲಿಲ್ಲ. ರಾಜ್ಯ ಸರ್ಕಾರ ಇಕ್ಕಟ್ಟಿಗೆ ಸಿಲುಕಿತ್ತು. ಇನ್ನೊಂದಷ್ಟು ಮಂದಿ ಆಶ್ರಮದ ಪರ ಅಂದರೆ ಶಾಲೆಯ ವಿರುದ್ಧ ಹೋರಾಟಕ್ಕಿಳಿದರು. ಇದಕ್ಕೆ ಎದಿರೇಟು ನೀಡಲು ಚಿಂತಿಸಿದ ಶಾಲಾ ಪರ ಹೋರಾಟಗಾರರು, ಗಣ್ಯರ ಹುಟ್ಟುಹಬ್ಬ ಆಚರಣೆ, ಮಕ್ಕಳಿಗೆ ಹಲವು ಸ್ಪರ್ಧೆ ಇತ್ಯಾದಿ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಶಾಲೆಗೆ ವಿದ್ಯಾರ್ಥಿಗಳ ದಾಖಲಾತಿಗೆ ಸಹಕಾರ ನೀಡಿದರು. ಪರಿಣಾಮವಾಗಿ ಮಕ್ಕಳ ಸಂಖ್ಯೆಯಲ್ಲಿ ಹೆಚ್ಚಳವಾಯಿತು. ಒಂದು ಹಂತದಲ್ಲಿ ಮಕ್ಕಳನ್ನು ಮನೆಯಿಂದ ಶಾಲೆಗೆ ಕರೆತರಲು ವಾಹನಗಳ ವ್ಯವಸ್ಥೆ ಕೂಡ ಮಾಡಲಾಗಿತ್ತು. ಆಗ ತಾತ್ಕಾಲಿಕವಾಗಿ ಶಾಲೆಯ ಜಾಗ ಹಸ್ತಾಂತರ ವಿಷಯ ನನೆಗುದಿಗೆ ಬಿದ್ದಿತ್ತು. ಒಂದು ಹಂತದಲ್ಲಿ ನಿರಂಜನ ಮಠವನ್ನೂ ಉಳಿಸಬೇಕು ಎಂಬ ಹೋರಾಟ ಕೂಡ ನಡೆದಿತ್ತು.
ಏತನ್ಮಧ್ಯೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉಭಯ ಬಣಗಳ ಸಭೆ ನಡೆಸಿ, ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ ನೀಡುತ್ತಾರೆ. ೨೦೧೮ರಲ್ಲಿ ಬಿಜೆಪಿ ಸರ್ಕಾರ ಅಽಕಾರಕ್ಕೆ ಬಂದಾಗ ಮತ್ತೆ ಈ ವಿಷಯವನ್ನು ಶ್ರೀ ರಾಮಕೃಷ್ಣ ಆಶ್ರಮದವರು ಮುನ್ನೆಲೆಗೆ ತರುತ್ತಾರೆ. ಇದಲ್ಲದೆ, ಸಂಸದರಾಗಿದ್ದ ವಿ.ಶ್ರೀನಿವಾಸ ಪ್ರಸಾದ್ ಅವರು ಕೂಡ ಆಶ್ರಮದವರು ಮತ್ತು ಹೋರಾಟಗಾರರ ಸಭೆ ನಡೆಸಿ, ಶಾಲೆಯ ಕಟ್ಟಡವನ್ನು ಉಳಿಸಿಕೊಂಡು, ೫೦:೫೦ ಅನುಪಾತದಲ್ಲಿ ವಿವೇಕ ಸ್ಮಾರಕ ನಿರ್ಮಿಸಿ ಎಂದು ಸಲಹೆ ನೀಡಿದ್ದರು. ಅದಕ್ಕೆ ಆಶ್ರಮದವರೂ ಒಪ್ಪಿದ್ದರು. ಈ ಹಿನ್ನೆಲೆಯಲ್ಲಿ ಶತಮಾನದ ಶಾಲೆ ಉಳಿಯುವ ಆಶಯ ಇತ್ತು.
ಆದರೆ, ಶ್ರೀ ರಾಮಕೃಷ್ಣ ಆಶ್ರಮದವರ ಪ್ರಭಾವದ ಹಿನ್ನೆಲೆಯಲ್ಲಿ ಶಾಲೆಯನ್ನು ಸಮೀಪದ ಮಹಾರಾಣಿ ಶಿಕ್ಷಕ ತರಬೇತಿ ಸಂಸ್ಥೆಗೆ ಬಲವಂತವಾಗಿ ಸ್ಥಳಾಂತರಿಸಲಾಯಿತು. ಈ ಸಂದರ್ಭದಲ್ಲಿ ಪ್ರತಿಭಟಿಸಿದವರನ್ನು ಬಂಧಿಸಲಾಗಿತ್ತು. ಅಂತಿಮವಾಗಿ ೨೦೨೨ರಲ್ಲಿ ಎನ್‌ಟಿಎಂ ಶಾಲೆಯ ಕಟ್ಟಡವನ್ನು ರಾತ್ರೋರಾತ್ರಿ ಪ್ರತಿಭಟನಾಕಾರರ ವಿರೋಧದ ನಡುವೆಯೇ ಕೆಡವಲಾಯಿತು. ೧೪೮ ವರ್ಷಗಳ ಇತಿಹಾಸದ ಶಾಲೆ ನಿರ್ನಾಮವಾಯಿತು. ಆ ಜಾಗದಲ್ಲಿ ತಲೆಯೆತ್ತಿದ ವಿವೇಕ ಸ್ಮಾರಕವನ್ನು ಇದೀಗ ಪ್ರಧಾನಿ ನರೇಂದ್ರ ಮೋದಿ ಅವರು ಉದ್ಘಾಟಿಸಿದ್ದಾರೆ.
ಎನ್‌ಟಿಎಂ ಶಾಲೆಯ ಶೇ.೫೦ ಜಾಗಕ್ಕೆ ಸಂಬಂಧಿಸಿದಂತೆ ಶ್ರೀ ರಾಮಕೃಷ್ಣ ಆಶ್ರಮದವರ ವಚನ ಭ್ರಷ್ಟತೆಯನ್ನು ಪ್ರಶ್ನಿಸುವವರೇ ಇಲ್ಲ ಎಂಬುದು ಶಾಲೆಯ ಪರ ಹೋರಾಟಗಾರರ ಆಕ್ರೋಶವಾಗಿದೆ. ಶಿಕ್ಷಣವು ಮಕ್ಕಳಿಗೆ ಕಲಿಕೆಯ ಮೇಲಿನ ಪ್ರೀತಿ, ಓದುವ ರುಚಿ ಮತ್ತು ಜೀವನ ಮೌಲ್ಯಗಳನ್ನು ಕಲಿಸಿಕೊಡುತ್ತದೆ- ಸ್ವಾಮಿ ವಿವೇಕಾನಂದರ ವಾಣಿ. ಈ ಮಾತಿನ ಹಿನ್ನೆಲೆಯಲ್ಲಿ ಕನ್ನಡ ಮಾಧ್ಯಮ ಸರ್ಕಾರಿ ಶಾಲೆಯ ಸಮಾಧಿ ಮೇಲೆ ವಿವೇಕ ಸ್ಮಾರಕ ನಿರ್ಮಾಣವನ್ನು ವಿವೇಕಾನಂದರೇ ಒಪ್ಪುತ್ತಿರಲಿಲ್ಲ.
” ಏತನ್ಮಧ್ಯೆ, ಸುತ್ತೂರು ಮಠದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ ಅವರು ಉಭಯ ಬಣಗಳ ಸಭೆ ನಡೆಸಿ, ವಿವಾದವನ್ನು ಮಾತುಕತೆ ಮೂಲಕ ಬಗೆಹರಿಸಿಕೊಳ್ಳಲು ಸಲಹೆ ನೀಡುತ್ತಾರೆ. ೨೦೧೮ರಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದಾಗ ಮತ್ತೆ ಈವಿಷಯವನ್ನು ಶ್ರೀ ರಾಮಕೃಷ್ಣ ಆಶ್ರಮದವರು ಮುನ್ನೆಲೆಗೆ ತರುತ್ತಾರೆ.”




