Mysore
25
scattered clouds

Social Media

ಮಂಗಳವಾರ, 27 ಜನವರಿ 2026
Light
Dark

ಮಂಡ್ಯ : ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ರೈತರ ಆಗ್ರಹ

Highway

ಮಂಡ್ಯ : ಶ್ರೀರಂಗಪಟ್ಟಣ-ಕುಶಾಲನಗರ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ೨೭೫ರ ನಿರ್ಮಾಣದಲ್ಲಿ ರೈತರು, ಜನಸಾಮಾನ್ಯರು ಹಾಗೂ ಪ್ರವಾಸಿಗರ ಹಿತ ಕಡೆಗಣಿಸಿ ಸರ್ವಿಸ್ ರಸ್ತೆಗೆ ಅನುವು ಮಾಡಿಕೊಡದ ಎನ್‌ಎಚ್ ಅಧಿಕಾರಿಗಳ ಕರ್ತವ್ಯಲೋಪ ಖಂಡಿಸಿ ನೂರಾರು ರೈತರು ಅಧಿಕಾರಿಗಳ ಕಾರ್ಯವೈಖರಿ ವಿರುದ್ಧ ಸಿಡಿದೆದ್ದಿದ್ದಾರೆ.

೨೦೧೯ರಲ್ಲಿ ಶ್ರೀರಂಗಪಟ್ಟಣ- ಕುಶಾಲನಗರ ನಡುವಿನ ರಾಷ್ಟ್ರೀಯ ಹೆದ್ದಾರಿ-೨೭೫ರ ನಿರ್ಮಾಣಕ್ಕೆ ಅಗತ್ಯ ಭೂ ಸ್ವಾಧಿನಕ್ಕೆ ಮುಂದಾದ ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳು ಸ್ಥಳೀಯ ರೈತರಿಗೆ ವಾಣಿಜ್ಯ ಉದ್ದೇಶದ ಆಮಿಷವೊಡ್ಡಿ ಕೃಷಿ ಭೂಮಿಯನ್ನು ಸ್ವಾಧೀನಪಡಿಸಿಕೊಂಡು ಸ್ಥಳೀಯರು ಹಾಗೂ ರೈತರಿಗೆ ಅಗತ್ಯವಿರುವ ಸರ್ವಿಸ್ ರಸ್ತೆ ನಿರ್ಮಾಣಕ್ಕೆ ಕ್ರಿಯಾಯೋಜನೆ ರೂಪಿಸದಿರುವುದು ಸರಿಯಲ್ಲ ಎಂದು ಆಕ್ರೋಶ ಹೊರ ಹಾಕಿದರು.

ನೂರಾರು ಮಂದಿ ರೈತರು, ರೈತ ಮಹಿಳೆಯರು ಶ್ರೀರಂಗಪಟ್ಟಣ ತಾಲ್ಲೂಕಿನ ಬೊಮ್ಮೂರು ಅಗ್ರಹಾರ ಬಳಿ ನಿರ್ಮಾಣವಾಗುತ್ತಿರುವ ರಾಷ್ಟ್ರೀಯ ಹೆದ್ದಾರಿ ಬಳಿ ಜಮಾವಣೆಗೊಂಡು ಸ್ಥಳೀಯ ಶಾಸಕ ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಡಳಿತದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.

ಸರಿ ಸುಮಾರು ೬೫೦೦ ಕೋಟಿ ರೂ. ವೆಚ್ಚದಲ್ಲಿ ೧೦೦ ಕಿ.ಮೀ. ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿ ನಿರ್ಮಾಣಕ್ಕೆ ಅಧಿಸೂಚನೆ ಹೊರಡಿಸಿ ಭೂ ಸ್ವಾಧೀನ ಮಾಡಿಕೊಂಡಿರುವ ಹೆದ್ದಾರಿ ಪ್ರಾಧಿಕಾರ ಸ್ಥಳೀಯ ರೈತರಿಗೆ ವಂಚನೆ ಮಾಡಿದರೆ ಸಹಿಸಲಾಸಾಧ್ಯ ಹಾಗೂ ಕಾಮಗಾರಿಗೆ ತಡೆವೊಡ್ಡುವ ಆಕ್ರೋಶ ರೈತರಿಂದ ವ್ಯಕ್ತವಾಯಿತು.

ಸ್ಥಳಕ್ಕೆ ಆಗಮಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಅವರ ಬಳಿ ಸರ್ವಿಸ್ ರಸ್ತೆಯ ಅಗತ್ಯತೆ ಬಗ್ಗೆ ಮನವಿ ಮಾಡಿದ ರೈತರು, ಶಾಸಕರು ಹಾಗೂ ಅಧಿಕಾರಿಗಳ ಬೇಜಾವಾಬ್ದಾರಿ ನಡವಳಿಕೆ ವಿರುದ್ದ ಆಕ್ರೋಶ ಹೊರ ಹಾಕಿದರು.
ರಸ್ತೆ ನಿರ್ಮಾಣದ ಕಾಮಗಾರಿ ಪರಿಶೀಲಿಸಿದ ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಸಮಸ್ಯೆಯ ಗಂಭೀರತೆ ನನಗೆ ಅರ್ಥವಾಗಿದೆ. ಕೇಂದ್ರ ಸಚಿವರಾದ ಎಚ್.ಡಿ.ಕುಮಾರಸ್ವಾಮಿ ಹಾಗೂ ನಿತಿನ್ ಗಡ್ಕರಿ ಅವರ ಬಳಿಗೆ ಮುಂದಿನ ವಾರದಲ್ಲಿ ೨೦ ಮಂದಿ ರೈತರ ನಿಯೋಗ ಕರೆದೊಯ್ದು ಅಗತ್ಯ ಸರ್ವಿಸ್ ರಸ್ತೆ ಮಂಜೂರು ಮಾಡಿಸುವ ಭರವಸೆ ವ್ಯಕ್ತಪಡಿಸಿದರು.

ಈ ಸಂದರ್ಭದಲ್ಲಿ ಮುಖಂಡರಾದ ಬೆಳಗೊಳ ಲೋಕೇಶ್, ತಾಲ್ಲೂಕು ಜಾ.ದಳ ಅಧ್ಯಕ್ಷ ದಶರಥ, ಯುವ ಘಟಕದ ಅಧ್ಯಕ್ಷ ಸಂಜಯ್, ಪಾಲಹಳ್ಳಿ ರಮೇಶ್, ಭರತ್ ಕುಮಾರ್, ಸುನೀಲ್ ಬೆಳಗೊಳ, ರಾಕೇಶ್ ಇತರರಿದ್ದರು.

Tags:
error: Content is protected !!