ಶ್ರೀರಂಗಪಟ್ಟಣ : ಶ್ರೀ ನಿಮಿಷಾಂಬ ದೇವಸ್ಥಾನದಲ್ಲಿ ಫೆಬ್ರವರಿ 11 ಮತ್ತು 12 ರಂದು ನಡೆಯಲಿರುವ ಮಾಘ ಶುದ್ಧ ಹುಣ್ಣಿಮೆಯಲ್ಲಿ ಸುಮಾರು ಒಂದು ಲಕ್ಷ ಜನರು ಭಾಗವಹಿಸುವ ಸಾಧ್ಯತೆ ಇದೆ. ಯಾವುದೇ ಲೋಪವಾಗದಂತೆ ಸಿದ್ಧತೆ ಮಾಡಿಕೊಳ್ಳಿ ಎಂದು ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಶಾಸಕ ರಮೇಶ್ ಬಾಬು ಬಂಡಿಸಿದ್ದೇಗೌಡ ಹೇಳಿದರು.
ಜಿಲ್ಲಾಧಿಕಾರಿಗಳ ಕಚೇರಿಯಲ್ಲಿ ಗುರುವಾರ ಮಾಘ ಶುದ್ಧ ಹುಣ್ಣಿಮೆ ಆಚರಣೆಯ ಪೂರ್ವಭಾವಿ ಸಿದ್ಧತಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಮಾಘ ಹುಣ್ಣಿಮೆಯ ಪ್ರಯುಕ್ತ ದೇವಾಲಯಕ್ಕೆ ಬರುವ ಭಕ್ತರಿಗಳ ಪುಣ್ಯ ಸ್ನಾನಕ್ಕೆ ಅನುಕೂಲವಾಗುವಂತೆ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮಾಘ ಹುಣ್ಣಿಮೆ ಪ್ರಯುಕ್ತ ನಿಮಿಷಾಂಬ ದೇವಸ್ಥಾನಕ್ಕೆ ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಬರುವುದರಿಂದ ಅನಗತ್ಯ ನೂಕು ನುಗ್ಗಲು ತಡೆಯಲು ಬ್ಯಾರಿಕೇಡಿಂಗ್ ವ್ಯವಸ್ಥೆ, ಸೂಕ್ತ ಸ್ಥಳಗಳಲ್ಲಿ ಆರಕ್ಷಕ ಸಿಬ್ಬಂದಿಗಳನ್ನು ನಿಯೋಜಿಸುವಂತೆ ತಿಳಿಸಿದರು.
ಮಹಿಳೆಯರು ಬಟ್ಟೆ ಬದಲಾಯಿಸುವ ತಾತ್ಕಲಿಕ ಶೆಡ್ ಗಳ ನಿರ್ಮಾಣವಾಗಬೇಕು. ಸದರಿ ಸ್ಥಳಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸುವಂತೆ ತಿಳಿಸಿದರು.
ದೇವಸ್ಥಾನದ ಬಳಿ ಅಗ್ನಿಶಾಮಕ ಸಿಬ್ಬಂದಿಗಳು ನುರಿತ ಈಜುಗಾರರು, ನದಿ ತೀರದಲ್ಲಿ ಜೀವ ರಕ್ಷಕ ಜಾಕೆಟ್ ಮತ್ತು ಇತರ ರಕ್ಷಣಾ ಸಾಮಗ್ರಿಗಳೊಂದಿಗೆ ಸದಾ ಸಿಬ್ಬಂದಿಗಳು ಸನ್ನದ್ಧರಾಗಿರಬೇಕು. ಎಂದರಯ
ಸಂಚಾರ ಮತ್ತು ಪಾರ್ಕಿಂಗ್ ವ್ಯವಸ್ಥೆ
ಫೆಬ್ರವರಿ 11 ಮತ್ತು 12ರಂದು ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಸೇರುವುದರಿಂದ ಸಂಚಾರ ದಟ್ಟಣೆ ಹೆಚ್ಚಾಗುವುದರಿಂದ ಸುಗಮ ಸಂಚಾರಕ್ಕಾಗಿ ಶ್ರೀರಂಗಪಟ್ಟಣ ಕಡೆಯಿಂದ ಏಕಮುಖ ಸಂಚಾರ ಮಾಡುವ ವ್ಯವಸ್ಥೆಯಾಗಬೇಕು ಎಂದರು.
ಮೈಸೂರು ಮಂಡ್ಯ ಮತ್ತು ಸುತ್ತಮುತ್ತಲಿನ ಗ್ರಾಮಗಳಿಂದ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಬರುವ ನಿರೀಕ್ಷೆಯಿದ್ದು ಮೈಸೂರು ಮತ್ತು ಶ್ರೀರಂಗಪಟ್ಟಣದಿಂದ ದೇವಾಲಯದ ಕಡೆ ಹೆಚ್ಚುವರಿ ಸಾರಿಗೆ ವ್ಯವಸ್ಥೆಯನ್ನು ಕಲ್ಪಿಸಲಾಗುವುದು ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯಕ್ರಮಗಳು ಫೆಬ್ರವರಿ 11ರ ರಾತ್ರಿ 10:00 ಯಿಂದ ಬೆಳಿಗ್ಗೆ 8 ಗಂಟೆಯವರೆಗೂ ಸ್ಥಳೀಯ ಕಲಾವಿದರಿಗೆ ಹೆಚ್ಚು ಆದ್ಯತೆ ನೀಡಿ, ಭಜನೆ, ಹರಿಕಥೆ, ಭಾರತನಾಟ್ಯ ಹಾಗೂ ಮುಂತಾದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಆಯೋಜನೆ ಮಾಡಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಕುಮಾರ ಮಾತನಾಡಿ, ವಾಹನಗಳನ್ನು ದೇವಸ್ಥಾನದ ಹತ್ತಿರಕ್ಕೆ ಬಿಡದೆ ನಿಗದಿತ ದೂರದ 2 ಸ್ಥಳಗಳನ್ನು ಗುರುತಿಸಿ ವಾಹನಗಳಿಗೆ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗುವುದು. ಪಾರ್ಕಿಂಗ್ ಸ್ಥಳದಲ್ಲಿ ಸೂಕ್ತ ವಿದ್ಯುತ್ ದೀಪದ ವ್ಯವಸ್ಥೆಗಳನ್ನು ಮಾಡಲಾಗುವುದು. ಶ್ರೀರಂಗಪಟ್ಟಣದಿಂದ ಗಂಜಾಂಗೆ ವಿಶೇಷ ಬಸ್ ಗಳನ್ನು ನಿಯೋಜಿಸಲಾಗುವುದು ಎಂದು ತಿಳಿಸಿದರು.
ಆಗಮಿಸುವ ಭಕ್ತಾದಿಗಳಿಗೆ ಪ್ರಸಾದ ವ್ಯವಸ್ಥೆ ಮಾಘ ಶುದ್ಧ ಹುಣ್ಣಿಮೆಗೆ ಆಗಮಿಸುವ ಭಕ್ತಾದಿಗಳಿಗೆ ಕೊರತೆ ಉಂಟಾಗದ ರೀತಿಯಲ್ಲಿ ಪ್ರಸಾದ ವಿನಿಯೋಗ ನಡೆಯಲಿದೆ.ಪ್ರಸಾದ ತಯಾರಿಸುವ ಸ್ಥಳದಲ್ಲಿ ಸಿ.ಸಿ. ಕ್ಯಾಮರಾ ಅಳವಡಿಕೆ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳನ್ನು ನಿಯೋಜಿಸಿ ಆಹಾರ ಪರೀಕ್ಷೆ ಮಾಡುವ ವ್ಯವಸ್ಥೆಯಾಗಬೇಕು ಎಂದರು.
ಸ್ವಚ್ಛತ್ಯೆಗೆ ಆದ್ಯತೆ
ಸಾರ್ವಜನಿಕರ ಸಂಖ್ಯೆ ಹೆಚ್ಚು ಸೇರುವುದರಿಂದ ಸ್ವಚ್ಛತೆ ಕಡೆ ಹೆಚ್ಚು ಗಮನ ಹರಿಸಬೇಕಾಗಿದೆ, ನದಿ ತೀರದಲ್ಲಿ ಎಲ್ಲಾ ಕಸ ಕಡ್ಡಿಗಳನ್ನು ತೆರವುಗೊಳಿಸಿ ಸ್ವಚ್ಛವಾಗಿ ಕಾಯ್ದಿಟ್ಟುಕೊಳ್ಳಬೇಕು ಎಂದರು.
ನದಿಯಲ್ಲಿ ಸ್ನಾನ ಮಾಡುವ ಭಕ್ತಾದಿಗಳು ಯಾವುದೇ ಶಾಂಪು ಸೋಪು ಬಳಸದಂತೆ ಕ್ರಮ ವಹಿಸುವುದು. ಹೆಚ್ಚಿನ ಸ್ಥಳಗಳಲ್ಲಿ ಸೂಚನಾ ಫಲಕಗಳನ್ನು ದೇವಸ್ಥಾನದ ಆವರಣದಲ್ಲಿ ಅಳವಡಿಸುವುದು. ನದಿಯ ಬಳಿ ಧ್ವನಿವರ್ಧಕ ಅಳವಡಿಸಿ ಎಚ್ಚರಿಕೆ ಸಂದೇಶಗಳನ್ನು ನೀಡಬೇಕು ಎಂದರು.
ತುರ್ತು ಸೇವೆ
ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವುದರಿಂದ ಅವರಿಗೆ ತುರ್ತು ಆರೋಗ್ಯ ಸೇವೆ ಒದಗಿಸಲು ಅಗತ್ಯವಿರುವ ಹೆಚ್ಚುವರಿ ಆರೋಗ್ಯ ಸಿಬ್ಬಂದಿ, ಔಷಧಿಗಳು, ಆಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಿ ಮುಂಜಾಗ್ರತೆ ಕ್ರಮ ಕೈಗೊಳ್ಳಲಾಗಿದೆ.
ಮಾಘ ಶುದ್ಧ ಪೌರ್ಣಮಿಯ ಅಂಗವಾಗಿ ದೇವಸ್ಥಾನಕ್ಕೆ ಆಗಮಿಸುವ ಭಕ್ತಾದಿಗಳಿಗೆ ಸೂಕ್ತ ಶುದ್ಧ ಕುಡಿಯುವ ನೀರಿನ ವ್ಯವಸ್ಥೆಯನ್ನು ಜನ ಸೇರುವ ಸ್ಥಳಗಳಲ್ಲಿ ಮಾಡಲಾಗುವುದು ಎಂದರು.
ಸಭೆಯಲ್ಲಿ ಅಪರ ಜಿಲ್ಲಾಧಿಕಾರಿ ಬಿ.ಸಿ ಶಿವಾನಂದ ಮೂರ್ತಿ, ನಿಮಿಷಾಂಬ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಮುಜರಾಯಿ ತಹಶಿಲ್ದಾರ್ ತಮ್ಮೇಗೌಡ ಸೇರಿದಂತೆ ಇನ್ನಿತರೆ ಅಧಿಕಾರಿಗಳು ಉಪಸ್ಥಿತರಿದ್ದರು.