ಮಹಾದೇಶ್ ಎಂ ಗೌಡ: ಹನೂರು ತಾಲ್ಲೂಕು ವರದಿಗಾರರು
ಹನೂರು: ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್‌ಗೆ ಕಾರೊಂದು ಡಿಕ್ಕಿ ಹೊಡೆದ ಪರಿಣಾಮ ಓರ್ವ ಮೃತಪಟ್ಟು 10ಕ್ಕೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ರಾಮಪುರ ಪೊಲೀಸ್ ಠಾಣೆ ವ್ಯಾಪ್ತಿಯ ಕೆಂಪಯ್ಯನಹಟ್ಟಿ ಗ್ರಾಮದ ಸಮೀಪ ಜರುಗಿದೆ.
ಹನೂರು ತಾಲ್ಲೂಕಿನ ಒಡೆಯರಪಾಳ್ಯ ಸಮೀಪದ ಗುಳ್ಯದ ಬಯಲು ಗ್ರಾಮದ ಸಂತೋಷ (30) ಮೃತಪಟ್ಟ ದುರ್ದೈವಿ. ಇನ್ನು ಗ್ರಾಮದ ಮಂಜುಳಾ(16 ), ಮುರುಗನ್(35), ಶಿಲ್ಪಾ(20), ಮುನಿಯಮ್ಮ(45), ಗೋವಿಂದ(40), ನಂದಿನಿ(25), ಸೂರ್ಯ(4), ಕನಕವೇಲು(4), ರತ್ನಮ್ಮ(50) ಗಾಯಗೊಂಡವರಾಗಿದ್ದಾರೆ
ಘಟನೆಯ ವಿವರ: ಹನೂರು ತಾಲ್ಲೂಕಿನ ಒಡೆಯರ ಪಾಳ್ಯ ಹಾಗೂ ಪಳನಿ ಮೇಡು ಗ್ರಾಮದ ಸಂಬಂಧಿಕರ ಜೊತೆ ಮೇಟೂರು ಸಮೀಪದ ಮನೆ ದೇವರಾದ ಅಂಕಾಳಮ್ಮ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿ ನಂತರ ಮಲೆ ಮಹದೇಶ್ವರ ಬೆಟ್ಟಕ್ಕೆ ತೆರಳಿ ಪೂಜೆ ಸಲ್ಲಿಸಿ ವಾಪಸ್ ಗ್ರಾಮಕ್ಕೆ ತೆರಳುತ್ತಿದ್ದ ವೇಳೆ ಚಾಲಕನ ನಿಯಂತ್ರಣ ತಪ್ಪಿ, ಕೆಂಪಯ್ಯನಹಟ್ಟಿ ಗ್ರಾಮದ ಸಮೀಪ ಮುಖ್ಯ ರಸ್ತೆಯಲ್ಲಿ ನಿರ್ಮಾಣ ಮಾಡಿದ್ದ ತಡೆಗೋಡೆಗೆ ಡಿಕ್ಕಿ ಹೊಡೆದಿದ್ದಾನೆ. ಈ ವೇಳೆ ವಾಹನದಲ್ಲಿದ್ದ ಎಲ್ಲರೂ ಗಾಯಗೊಂಡಿದ್ದಾರೆ.
ತಕ್ಷಣ ಸ್ಥಳೀಯರು ರಾಮಾಪುರ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲು ಮಾಡಿದ್ದಾರೆ. ಆದರೆ ವೈದ್ಯಾಧಿಕಾರಿಗಳು ಇಲ್ಲದಿದ್ದರಿಂದ ಕೊಳ್ಳೇಗಾಲ ಸೂಪರ್ ವಿಭಾಗ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಅಲ್ಲಿ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿನ ಕೆ.ಆರ್.ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ವಿಚಾರ ತಿಳಿಯುತ್ತಿದ್ದಂತೆ ರಾಮಾಪುರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಚಿಕ್ಕರಾಜ್ ಶೆಟ್ಟಿ ಹಾಗೂ ಸಿಬ್ಬಂದಿ ವರ್ಗದವರು ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.




