ಜಿ.ಕೃಷ್ಣ ಪ್ರಸಾದ್
‘ಇಂದು ನಿಮ್ಮನ್ನು ಬಿದಿರಿನ ಲೋಕಕ್ಕೆ ಕರೆದೊಯ್ಯುತ್ತೇನೆ’. ಬೆಳಿಗ್ಗೆ ಕಾಫಿ ಕುಡಿಯುತ್ತಿದ್ದಾಗ ಗೆಳೆಯ ಮೈಕೆಲ್ ಕಾಮನ್ಸ್ ಹೇಳಿದ ಈ ಮಾತು ನನ್ನಲ್ಲಿ ಕುತೂಹಲ ಹುಟ್ಟಿಸಿತು. ಕೃಷಿ ಸಮಾವೇಶಕ್ಕೆಂದು ಥಾಯ್ಲೆಂಡಿಗೆ ಬಂದಿದ್ದ ನನಗೆ, ಅಪರೂಪದ ಅನುಭವ ಕಾದಿದೆ ಎನ್ನುವ ಕಲ್ಪನೆಯೇ ಇರಲಿಲ್ಲ.
ಬ್ಯಾಂಕಾಕ್‌ನಿಂದ ಸುಮಾರು ಮೂರು ಗಂಟೆಗಳ ಪ್ರಯಾಣ. ಹಸಿರು ಬೆಟ್ಟಗಳು, ತಿರುವು ತಿರುವಾದ ರಸ್ತೆಗಳು, ಕಾಫಿ ತೋಟಗಳನ್ನು ನೆನಪಿಸುವ ಭೂದೃಶ್ಯ ಗಳು. ಕಾಂಬೋಡಿಯಾ ಗಡಿಯ ಸಮೀಪದ “Bamboo Forest Schoo ಎಂಬ ಫಲಕದ ಬಳಿ ವಾಹನ ತಿರುಗುತ್ತಿದ್ದಂತೆ ಮತ್ತೊಂದು ಲೋಕವೇ ತೆರೆದುಕೊಂಡಿತು. ತಿರುಗಿದ ಕಡೆಯೆಲ್ಲ ಬಿದಿರು ಬಿದಿರಿನ ಮೆಳೆಗಳು, ಬಿದಿರಿನ ಮನೆಗಳು, ಬಿದಿರಿನ ಸೇತುವೆಗಳು, ಕುರ್ಚಿಗಳು, ಮೇಜುಗಳು, ತಡಿಕೆಗಳು, ಕಲಾಕೃತಿಗಳು, ಅತಿಥಿಗೃಹಗಳು… ಎಲ್ಲೆಲ್ಲೂ ಬಿದಿರು; ಎಲ್ಲವೂ ಬಿದಿರು. ಇಷ್ಟು ದಿನಗಳಿಂದ ಮನಸ್ಸಿನಲ್ಲಿ ಕಟ್ಟಿಕೊಂಡಿದ್ದ ಬಿದಿರಿನ ಕನಸಿನ ಲೋಕ ನನ್ನ ಕಣ್ಣೆದುರೇ ಸಾಕಾರಗೊಂಡಿತ್ತು.
ಕಳೆದ ಒಂದು ವರ್ಷದಿಂದ ದಾವಣಗೆರೆಯ ಗೆಳೆಯ ಜಬೀವುಲ್ಲಾ ಜೊತೆ ಸೇರಿ ‘ಬಿದಿರು ಬಳಗ’ ಆರಂಭಿಸಿದ್ದೇವೆ. ಕರ್ನಾಟಕದಲ್ಲಿ ಬಿದಿರಿನ ಬಗ್ಗೆ ಹೊಸ ಆಸಕ್ತಿ ಮೂಡಿಸುವ ಪ್ರಯತ್ನ ನಡೆಯುತ್ತಿದೆ. ಆದರೆ ಎಲ್ಲೆಡೆ ರೈತರು ಕೇಳುವ ಪ್ರಶ್ನೆ ಒಂದೇ- ‘ಬಿದಿರು ಬೆಳೆದರೆ ಯಾರು ಖರೀದಿಸುತ್ತಾರೆ? ಬೆಲೆ ಸಿಗುತ್ತದೆಯೇ?’ ಅದು ಕೇವಲ ರೈತರ ಪ್ರಶ್ನೆಯಲ್ಲ; ನನ್ನ ಪ್ರಶ್ನೆಯೂ ಆಗಿತ್ತು. ಬಿದಿರಿನ ಭವಿಷ್ಯ ಅದರ ಉತ್ಪಾದನೆಯಲ್ಲಲ್ಲ, ಬಳಕೆ ಮತ್ತು ಮೌಲ್ಯವರ್ಧನೆಯಲ್ಲಿ ಇದೆ ಎಂಬ ನಂಬಿಕೆ ನನ್ನದು. ಆ ನಂಬಿಕೆಗೆ ಒಂದು ಜೀವಂತ ಮಾದರಿಯನ್ನು ಹುಡುಕುತ್ತಿದ್ದೆ. ಉತ್ತರವಾಗಿ ನನ್ನ ಮುಂದೆ ನಿಂತಿದ್ದವರು ಲೂಂಗ್ ಚೋಕ್-ಎಲ್ಲರ ಪ್ರೀತಿಯ ‘ಅಂಕಲ್ ಚೋಕ್’. ಮೊದಲ ನೋಟದಲ್ಲೇ ಅವರು ನನಗೆ ಜಪಾನಿನ ಸಹಜ ಕೃಷಿ ಹರಿಕಾರ ಮಸನೊಬು ಫುಕುವೊಕ ಅವರನ್ನು ನೆನಪಿಸಿದರು. ಬಿಳಿ ಕೂದಲು, ಶಾಂತ ಮುಖ, ಮಗುವಿನಂತಹ ನಗು, ಆತುರವಿಲ್ಲದ ನಡೆ. ಅವರ ಮಾತುಗಳಲ್ಲಿ ಪ್ರದರ್ಶನವಿರಲಿಲ್ಲ; ಅನುಭವದ ಆತ್ಮವಿಶ್ವಾಸ ಮಾತ್ರ ಇತ್ತು.
ಮೂಲತಃ ಅಂಕಲ್ ಚೋಕ್ ಕೃಷಿ ಶಿಕ್ಷಕರು. ಥಾಯ್ಲೆಂಡಿನ ಪ್ರಸಿದ್ಧ ಕಾಡು ಕೃಷಿ ತರಬೇತಿ ಕೇಂದ್ರ ‘ವನಕಸೆಟ್’ನಲ್ಲಿ ಶಿಕ್ಷಕರಾಗಿದ್ದರು. ಹಲವು ವರ್ಷಗಳ ಕಾಲ ಪರಿಸರ ಸ್ನೇಹಿ ಕೃಷಿಯನ್ನು ಕಲಿಸುತ್ತಿದ್ದರು. ಸುಮಾರು ಇಪ್ಪತ್ತೈದು ವರ್ಷಗಳ ಹಿಂದೆ ತಮ್ಮ ಊರಿಗೆ ಮರಳಿದ ಅವರು, ತಾಯಿಯ ಕಡೆಯಿಂದ ಬಂದ ಜಮೀನಿನಲ್ಲಿ ವಿವಿಧ ಬೆಳೆಗಳ ಪ್ರಯೋಗ ಆರಂಭಿಸಿದರು. ಹಣ್ಣಿನ ಮರಗಳು, ಕಾಡು ಸಸ್ಯಗಳು,ಮರಗಿಡಗಳು-ಎಲ್ಲವೂ ಬೆಳೆದವು. ಆದರೆ ಒಂದೇ ಒಂದು ಸಸ್ಯ ಉಳಿದ ಎಲ್ಲಕ್ಕಿಂತ ಹೆಚ್ಚು ಹುಲುಸಾಗಿ ಬೆಳೆಯುತ್ತಿತ್ತು; ಅದು ಬಿದಿರು. ‘ನಾನು ಬಿದಿರನ್ನು ಆಯ್ಕೆ ಮಾಡಲಿಲ್ಲ; ಈ ಭೂಮಿಯೇ ಬಿದಿರನ್ನು ಆಯ್ಕೆ ಮಾಡಿತು’ ಎಂದು ಅಂಕಲ್ ಚೋಕ್ ನಗುತ್ತ ಹೇಳುತ್ತಾರೆ.
ಆ ಒಂದು ಅನುಭವ ಅವರ ಬದುಕಿನ ದಿಕ್ಕನ್ನೇ ಬದಲಿಸಿತು. ಥಾಯ್ಲೆಂಡಿನ ಮೂಲೆಮೂಲೆ ಸುತ್ತಿ ಬಿದಿರಿನ ತಳಿಗಳನ್ನು ಸಂಗ್ರಹಿಸಲು ಆರಂಭಿಸಿದರು. ಕೆಲವು ತಳಿಗಳನ್ನು ದೂರದ ಕಾಡುಗಳಿಂದ ತಂದರು.ಕೆಲವು ರೈತರಿಂದ ವಿನಿಮಯ ಮಾಡಿಕೊಂಡರು. ಕೆಲವು ಅಪರೂಪದ ತಳಿಗಳನ್ನು ವರ್ಷಗಟ್ಟಲೆ ಹುಡುಕಿದರು. ಇಂದು ಅವರ ನಲವತ್ತು ಎಕರೆ ಜಮೀನಿನಲ್ಲಿ ನೂರಕ್ಕೂ ಹೆಚ್ಚು ಬಿದಿರಿನ ತಳಿಗಳು ಬೆಳೆದು ನಿಂತಿವೆ. ಅದು ಕೇವಲ ತೋಟವಲ್ಲ; ಬಿದಿರಿನ ಜೀವಂತ ಜೀನ್ ಬ್ಯಾಂಕ್. ‘ಜನರು ಬಿದಿರನ್ನು ಕೇವಲ ಕಡ್ಡಿಯಾಗಿ ನೋಡುತ್ತಾರೆ. ಆದರೆ ಅದು ಮನೆ ಕಟ್ಟಲು, ಆಹಾರವಾಗಿ, ಪೀಠೋಪಕರಣವಾಗಿ, ಬಟ್ಟೆಯಾಗಿ, ಬುಟ್ಟಿಯಾಗಿ, ಕೈಗಾರಿಕೆಗಳ ಕಚ್ಚಾವಸ್ತುವಾಗಿ ಪರಿಸರವನ್ನು ಉಳಿಸುತ್ತದೆ, ರೈತನಿಗೆ ಆದಾಯವನ್ನೂ ತರುತ್ತದೆ’ ಎಂದು ಅಂಕಲ್ ಚೋಕ್ ಹೇಳುತ್ತಾರೆ. ಅವರ ಮಾತಿಗೆ, ಅವರ ತೋಟವೇ ಸಾಕ್ಷಿ. ಸಭಾಂಗಣ ಬಿದಿರಿನದು. ಅತಿಥಿಗೃಹ. ಚಹ ಕುಡಿಯುವ ಟ್ರೇ ಬಿದಿರಿನದು. ಕುರ್ಚಿ, ಮೇಜು, ಸೇತುವೆ, ಬೇಲಿ, ಅಲಂಕಾರಿಕ ವಸ್ತುಗಳು-ಎಲ್ಲವೂ ಬಿದಿರಿನದೇ. ಅವರು ಧರಿಸಿದ್ದ ಕೋಟೂ ಬಿದಿರಿನ ನಾರಿನಿಂದ ತಯಾರಾಗಿತ್ತು. ಒಂದು ಬೆಳೆ ಹೇಗೆ ಬದುಕಿನ ಭಾಗವಾಗಬಹುದು ಎಂಬುದಕ್ಕೆ ಇದಕ್ಕಿಂತ ದೊಡ್ಡ ಉದಾಹರಣೆ ಬೇಕಿಲ್ಲ. ಇಲ್ಲಿ ಬಿದಿರನ್ನು ಕೇವಲ ಬೆಳೆಸುವುದಿಲ್ಲ; ಅರ್ಥ ಮಾಡಿಕೊಳ್ಳುತ್ತಾರೆ.
ಯಾವ ತಳಿ ಮನೆ ಕಟ್ಟಲು ಸೂಕ್ತ, ಯಾವುದು ಪೀಠೋಪಕರಣಕ್ಕೆ? ಯಾವುದು ತಿನ್ನುವ ಕಳಲೆಗಾಗಿ, ಯಾವುದು ಅಲಂಕಾರಕ್ಕೆ? ಯಾವುದು ವೇಗವಾಗಿ ಬೆಳೆಯುತ್ತದೆ, ಯಾವುದು ಬರವನ್ನು ಹೆಚ್ಚು ತಡೆದುಕೊಳ್ಳುತ್ತದೆ? ಪ್ರತಿಯೊಂದು ತಳಿಯ ಹಿಂದೆಯೂ ಒಂದು ಕಥೆ, ಒಂದು ಅನುಭವ. ಅಂಕಲ್ ಚೋಕ್ ಅವರ ಯಶಸ್ಸಿನ ಮತ್ತೊಂದು ರಹಸ್ಯ ಗುಣಮಟ್ಟ. ಅವರು ಬಿದಿರನ್ನು ಕತ್ತರಿಸಿದ ತಕ್ಷಣ ಮಾರಾಟ ಮಾಡುವುದಿಲ್ಲ. ಸರಿಯಾದ ವಯಸ್ಸಿನಲ್ಲಿ ಕೊಯ್ಲು, ವೈಜ್ಞಾನಿಕ ಸಂಸ್ಕರಣೆ, ಬೋರಾಕ್ಸ್ ದ್ರಾವಣದಲ್ಲಿ ಸಂರಕ್ಷಣೆ, ನಂತರ ಒಣಗಿಸುವುದು-ಈ ಎಲ್ಲ ಕ್ರಮಗಳ ನಂತರವೇ ಅದು ಮಾರುಕಟ್ಟೆಗೆ ಹೋಗುತ್ತದೆ. ಆದ್ದರಿಂದಲೇ ಅವರ ಬಿದಿರಿಗೆ ಬೇಡಿಕೆ ಹೆಚ್ಚು.
ಅವರ Bamboo Forest Schoo ಇಂದು ವಿಶ್ವದ ವಿವಿಧ ದೇಶಗಳ ರೈತರು, ವಿದ್ಯಾರ್ಥಿಗಳು, ವಾಸ್ತುಶಿಲ್ಪಿಗಳು ಮತ್ತು ಪರಿಸರ ಪ್ರೇಮಿಗಳ ಕಲಿಕೆಯ ಕೇಂದ್ರವಾಗಿದೆ. ಇಲ್ಲಿ ಬಿದಿರು ಸಸಿ ಉತ್ಪಾದನೆಯಿಂದ ಹಿಡಿದು ಮನೆ ನಿರ್ಮಾಣ, ಸಂಸ್ಕರಣೆ, ಮೌಲ್ಯವಽತ ಉತ್ಪನ್ನಗಳು ಮತ್ತು ಮಾರುಕಟ್ಟೆಯವರೆಗೆ ಪ್ರಾಯೋಗಿಕ ತರಬೇತಿ ನೀಡಲಾಗುತ್ತದೆ. ರೈತನಿಗೆ ಬೆಳೆ ಬೆಳೆಸುವುದಷ್ಟೇ ಸಾಕಾಗುವುದಿಲ್ಲ; ಅದನ್ನು ಮೌಲ್ಯವರ್ಧನೆ ಮಾಡಿ ಉದ್ಯಮವನ್ನಾಗಿ ರೂಪಿಸುವ ಕೌಶಲವೂ ಬೇಕು ಎಂಬುದು ಅವರ ನಂಬಿಕೆ. ರೈತನಿಗೆ ಕೇವಲ ಹೊಸ ಬೆಳೆ ಸಾಕಾಗುವುದಿಲ್ಲ. ಆ ಬೆಳೆಯ ಸುತ್ತ ಹೊಸ ಮಾರುಕಟ್ಟೆ, ಹೊಸ ಕೌಶಲ ಮತ್ತು ಹೊಸ ಆರ್ಥಿಕತೆಯನ್ನು ಕಟ್ಟಬೇಕು. ಅಂಕಲ್ ಚೋಕ್ ನನಗೆ ಕಲಿಸಿದ ದೊಡ್ಡ ಪಾಠ ಇದೇ.
(ಸೆಪ್ಟೆಂಬರ್ ಮೊದಲ ವಾರ ಅಂಕಲ್ ಚೋಕ್‌ರ ತೋಟಕ್ಕೆ ಪ್ರವಾಸ ಏರ್ಪಡಿಸಲಾಗಿದೆ. ಆಸಕ್ತರು ೯೮೮೦೯ ೦೮೬೦೮ ಸಂಪರ್ಕಿಸಿ.)
” ಥಾಯ್ಲೆಂಡಿನ ಈ ಬಿದಿರು ಸಂತ ಕೇವಲ ಬಿದಿರಿನ ತೋಟವನ್ನು ನಿರ್ಮಿಸಿಲ್ಲ; ಬದಲಾಗಿ ಬಿದಿರಿನ ಸುತ್ತ ಒಂದು ಸಂಪೂರ್ಣ ಆರ್ಥಿಕ ವ್ಯವಸ್ಥೆಯನ್ನೇ ಕಟ್ಟಿದ್ದಾರೆ.”




